ಬುಧವಾರ, ಜನವರಿ 22, 2020
24 °C
ಅಖಿಲ ಭಾರತ ವಕೀಲರ ಒಕ್ಕೂಟ 8ನೇ ರಾಜ್ಯ ಸಮ್ಮೇಳನ

ಶ್ರೀಮಂತಿಕೆ, ಅಧಿಕಾರ ಪೂಜಿಸುವ ಸಮಾಜ ಬೇಡ: ಸಂತೋಷ್ ಹೆಗ್ಡೆ ಅಭಿಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಶ್ರೀಮಂತಿಕೆ ಹಾಗೂ ಅಧಿಕಾರವನ್ನು ಪೂಜಿಸುವ ಸಮಾಜ ಈಗ ನಿರ್ಮಾಣವಾಗಿದೆ. ಇದನ್ನು ಬದಲಾಯಿಸಲು ಯುವಜನತೆಯಿಂದ ಮಾತ್ರ ಸಾಧ್ಯ’ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು) ಕಾವೇರಿ ಸಭಾಂಗಣದಲ್ಲಿ ಶನಿವಾರ ಆರಂಭವಾದ ಅಖಿಲ ಭಾರತ ವಕೀಲರ ಒಕ್ಕೂಟದ 8ನೇ ರಾಜ್ಯ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಮೌಲ್ಯದ ಆಧಾರದಲ್ಲಿ 50 ವರ್ಷಗಳ ಹಿಂದೆ ನಡೆಯುತ್ತಿದ್ದ ಸಮಾಜವನ್ನು ಮರು ಸೃಷ್ಟಿಸಬೇಕಿದೆ. ಸಮಾಜದಲ್ಲಿ ಬದಲಾವಣೆ ತರಲು ಯುವಜನತೆಯಿಂದ ಮಾತ್ರ ಎಂಬುದನ್ನು ಅರಿತು 1,098 ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ನನ್ನ ವಿಚಾರಗಳನ್ನು ಹಂಚಿಕೊಂಡು, ಸಮಾಜದಲ್ಲಿ ಬರಬೇಕಾದ ಬದಲಾವಣೆಯ ಬಗ್ಗೆ ತಿಳಿಸಿದ್ದೇನೆ. ಬದಲಾವಣೆಗಾಗಿ ಪ್ರಯತ್ನಿಸುವುದು ನಮ್ಮ ಕರ್ತವ್ಯ, ಪ್ರತಿಫಲ ನಮ್ಮದಲ್ಲ’ ಎಂದು ಹೇಳಿದರು.

‌‘ತೃಪ್ತಿ ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದರೆ ಸಮಾಜ ತಾನಾಗಿಯೇ ಬದಲಾಗುತ್ತದೆ’ ಎಂದರು.

ಸಮ್ಮೇಳನ ಉದ್ಘಾಟಿಸಿದ ಎಐಎಲ್‌ಯು ಅಧ್ಯಕ್ಷ ಬಿಕಾಸ್ ರಂಜನ್‌ ಭಟ್ಟಾಚಾರ್ಯ, ‘ಸಂವಿಧಾನದ ಮೌಲ್ಯವನ್ನು ಎತ್ತಿ ಹಿಡಿಯಬೇಕು. ಅದು ನಮಗೆ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸಮಾನತೆಯನ್ನು ನೀಡಿದೆ. ಇದನ್ನು ನಾವು ಗ್ರಾಮೀಣ ಪ್ರದೇಶಗಳಿಗೂ ಕೊಂಡೊಯ್ದು, ಸಾಮಾಜಿಕ ಎಂಜಿನಿಯರುಗಳಂತೆ ವಕೀಲರು ಕೆಲಸ ಮಾಡಬೇಕು’ ಎಂದು ಹೇಳಿದರು.

ಎಐಎಲ್‌ಯು ಕರ್ನಾಟಕದ ಅಧ್ಯಕ್ಷ ಎಸ್.ಶಂಕರಪ್ಪ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಬಾರ್‌ ಕೌನ್ಸಿಲ್ ಉಪಾಧ್ಯಕ್ಷ ಬಿ.ವಿ.ಶ್ರೀನಿವಾಸ್, ಸದಸ್ಯರಾದ ಜೆ.ಎಂ.ಅನಿಲ್‌ಕುಮಾರ್, ಎಸ್‌.ಬಸವರಾಜು, ಆಸೀಫ್‌ ಅಲಿ ಶೇಖ್ ಹುಸೇನ್, ವಿಶಾಲ್‌ ರಘು ಎಚ್‌.ಎಲ್., ಕೊಲ್ಲಿ ಸತ್ಯನಾರಾಯಣ, ಶ್ರೀನಿವಾಸ್‌ ಕುಮಾರ್ ಮಳವಳ್ಳಿ, ರಾಮಚಂದ್ರ ರೆಡ್ಡಿ ಉಪಸ್ಥಿತರಿದ್ದರು.

ಎಐಎಲ್‌ಯು 8ನೇ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ, ಹಿರಿಯ ವಕೀಲ ಸಿ.ಎಂ.ಜಗದೀಶ್ ಸ್ವಾಗತಿಸಿದರು. ಪಿ.ಪಿ.ಬಾಬುರಾಜ್ ಕಾರ್ಯಕ್ರಮ ನಿರೂಪಿಸಿದರು.

ದೇಶ, ವಿದೇಶಗಳಲ್ಲಿ ಮೃತಪಟ್ಟ ಎಲ್ಲ ಗಣ್ಯರು, ನೆರೆ ಹಾವಳಿಗೆ ತುತ್ತಾದವರ ಗೌರವಾರ್ಥ ಮೌನಾಚರಿಸಲಾಯಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು