ಶನಿವಾರ, ಅಕ್ಟೋಬರ್ 8, 2022
21 °C
ಸರ್ಕಾರದಿಂದ ನೆರವಿನ ನಿರೀಕ್ಷೆಯಲ್ಲಿ ಸಮೂಹ

ಜ್ಞಾನ ಹಂಚುವ ಪತ್ರಿಕಾ ವಿತರಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮಳೆ, ಚಳಿ, ಗಾಳಿ ಹೀಗೆ... ಪ್ರತಿಕೂಲ ಪರಿಸ್ಥಿತಿಯನ್ನು ಲೆಕ್ಕಿಸದೆ ಕರ್ತವ್ಯ ಪ್ರಜ್ಞೆ ಮೆರೆಯುತ್ತಿರುವ ಪತ್ರಿಕಾ ವಿತರಕರು ಸರ್ಕಾರದಿಂದ ಆರ್ಥಿಕ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ಮನೆ–ಮನೆಗಳಿಗೆ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್‌’ ಸೇರಿದಂತೆ ಹಲವು ದಿನಪತ್ರಿಕೆಗಳನ್ನು ತಲುಪಿಸುವ ಮೂಲಕ ಓದುಗರ ಜ್ಞಾನಾಭಿವೃದ್ಧಿಗೆ ಕೊಡುಗೆ ನೀಡುತ್ತಿರುವ ಮಹತ್ವದ ಕಾರ್ಯದಲ್ಲೂ ಅವರ ಪಾಲಿದೆ. ‘ಸುದ್ದಿ ಹಂಚುವ’ ಮೂಲಕ ‘ಜ್ಞಾನ ದಾಸೋಹ’ದಂತಹ ಕೆಲಸ ಮುಂದುವರಿಸಿದ್ದಾರೆ.

ಬಹುತೇಕರು, ಸೊಂಪಾದ ನಿದ್ರೆಗೆ ಜಾರಿರುವ ಸಮಯದಲ್ಲಿ ಅದನ್ನು ತ್ಯಜಿಸಿ, ಕ್ಷೇತ್ರ ಕಾರ್ಯಕ್ಕಿಳಿಯುತ್ತಾರೆ. ಇದೇ ವೃತ್ತಿಯಲ್ಲಿ ಮುಂದುವರಿದು ತಮ್ಮ ಬದುಕು ಕಟ್ಟಿಕೊಂಡವರು, ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿದವರೂ ಇದ್ದಾರೆ. ಜೀವನ ರೂಪಿಸಿಕೊಳ್ಳಲು ಹೆಣಗಾಡುತ್ತಿರುವವರು ಬಹಳಷ್ಟು ಮಂದಿ ಇದ್ದಾರೆ.

ನಗರವೊಂದರಲ್ಲೇ ಸಾವಿರಕ್ಕೂ ಹೆಚ್ಚು ಪತ್ರಿಕಾ ವಿತರಕರು ಇದ್ದಾರೆ. ತಮ್ಮ ಶ್ರಮವನ್ನು ಸರ್ಕಾರ ಗುರುತಿಸದಿರುವ ಕೊರಗು ಅವರದಾಗಿದೆ. ‘ನಮ್ಮನ್ನೂ ಅಸಂಘಟಿತ ಕಾರ್ಮಿಕರೆಂದು ಪರಿಗಣಿಸಿ, ಅವರಿಗೆ ದೊರೆಯುವ ಸೌಲಭ್ಯಗಳನ್ನು ನಮಗೂ ಕಲ್ಪಿಸಬೇಕು’ ಎನ್ನುವ ಅವರ ಬಹಳ ವರ್ಷಗಳ ಬೇಡಿಕೆ ಇಂದಿಗೂ ಸಮರ್ಪಕವಾಗಿ ಈಡೇರಿಲ್ಲ.

ದಿನಪತ್ರಿಕೆ ತಲುಪಿಸಿದ ನಂತರವೇ ನೆಮ್ಮದಿ ಕಾಣುವ ಕಾಯಕ ಜೀವಿಗಳನ್ನು ಗೌರವಿಸುವುದಕ್ಕಾಗಿಯೇ ಸೆ.4ರಂದು ‘ಪತ್ರಿಕಾ ವಿತರಕರ ದಿನ’ ಆಚರಿಸಲಾಗುತ್ತದೆ.

ನಸುಕಿನಲ್ಲಿ ಪತ್ರಿಕೆಗಳ ಬಂಡಲ್‌ಗಳನ್ನು ಇಳಿಸಿಕೊಂಡು, ಜೋಡಿಸಿಕೊಂಡು ಸೈಕಲ್‌, ದ್ವಿಚಕ್ರವಾಹನಗಳ ಮೂಲಕ ಮನೆ-ಮನೆಗೆ ತಲುಪಿಸುತ್ತಾರೆ. ಬೆಳಿಗ್ಗೆ ಕಾಫಿ/ ಚಹಾದೊಂದಿಗೆ ದಿನಪತ್ರಿಕೆ ಓದದಿದ್ದರೆ ಸಾವಿರಾರು ಮಂದಿಗೆ ಏನೋ ಕಳೆದುಕೊಂಡ ಅನುಭವ. ದಿನಪತ್ರಿಕೆ ಮನೆಗೆ ತಲುಪುವುದು ಸ್ವಲ್ಪ ತಡವಾದರೂ ಚಡಪಡಿಸುವ ಸಹಸ್ರಾರು ಓದುಗರಿದ್ದಾರೆ. ಅವರಿಗೆ ನಿತ್ಯವೂ ‘ಓದಿನ ಸಂಗಾತಿ’ ಪತ್ರಿಕೆಗಳನ್ನು ತಲುಪಿಸುವ ಕೆಲಸವನ್ನು ವಿತರಕರು ಶ್ರದ್ಧೆಯಿಂದ ಮಾಡುತ್ತಿದ್ದಾರೆ. ಕೆಲವೆಡೆ, ಮಹಿಳೆಯರೂ ಈ ಕಾಯಕದಲ್ಲಿ ತೊಡಗಿರುವುದು ಉಂಟು.

‘ಅಸಂಘಟಿತ ವಲಯಕ್ಕೆ ಸೇರಿಸಿ’

‘ನಮ್ಮನ್ನು ಅಸಂಘಟಿತ ವಲಯಕ್ಕೆ ಸೇರಿಸಿ, ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಶ್ರಮಿಕರಾದ ನಮ್ಮ ಹಿತವನ್ನೂ ಕಾಯಬೇಕು’ ಎಂದು ಮೈಸೂರು ನಗರ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಬಿ.ಸುರೇಶ್ ಒತ್ತಾಯಿಸಿದರು.

‘ಅಸಂಘಟಿತ ವಲಯಕ್ಕೆ ಸೇರಿಸುವಂತೆ ಕೋರಿ ಶಾಸಕ ಎಸ್.ಎ.ರಾಮದಾಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದ್ದೆವು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿಗಾಗಿ ನಿಧಿ ಸ್ಥಾಪಿಸಿ ₹ 2 ಕೋಟಿ ಇಟ್ಟಿದ್ದರು. ಅವರು ಅಧಿಕಾರ ಕಳೆದುಕೊಂಡ ಮೇಲೆ ಹಣ ಬಳಕೆಯಾಗಲಿಲ್ಲ. ನಂತರ ಬಂದ ಸರ್ಕಾರಗಳು ನಮಗೆ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಇ–ಶ್ರಮ್ ಯೋಜನೆಯಲ್ಲಿ 60 ವರ್ಷದವರನ್ನೂ ಸೇರಿಸಿಕೊಳ್ಳಬೇಕು. ಚಿಕಿತ್ಸಾ ವೆಚ್ಚ ಭರಿಸುವಂತಾಗಬೇಕು. ಗುರುತಿನ ಚೀಟಿಯನ್ನೂ ಕೊಡಬೇಕು’ ಎಂದು ಆಗ್ರಹಿಸಿದರು.

ದೊರೆಯುವಂತೆ ಮಾಡಿ

   ನಾನು 22 ವರ್ಷಗಳಿಂದ ಪತ್ರಿಕಾ ವಿತರಕನಾಗಿ ಕೆಲಸ ಮಾಡುತ್ತಿದ್ದೇನೆ. ಸರ್ಕಾರವು ನಮಗೂ ಆರೋಗ್ಯ ವಿಮೆ, ಕಾರ್ಮಿಕರಿಗೆ ಸಿಗುವಂತೆ ಉಚಿತ ಚಿಕಿತ್ಸೆ ದೊರೆಯುವಂತೆ ಮಾಡಬೇಕು.

–ಯೋಗೇಶ್ ಸಿ., ಹೂಟಗಳ್ಳಿ

ನಮ್ಮನ್ನೂ ಪರಿಗಣಿಸಿ

   ಪತ್ರಿಕಾ ವಿತರಕರ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು ಕಲ್ಪಿಸಬೇಕು. ಪಿಂಚಣಿ ಸೌಲಭ್ಯ ಕಲ್ಪಿಸಬೇಕು. ಹಲವು ವರ್ಗದವರಿಗೆ ವಿಶೇಷ ಪ್ಯಾಕೇಜ್ ಪ್ರಕಟಿಸುವ ಸರ್ಕಾರವು ನಮ್ಮನ್ನೂ ಪರಿಗಣಿಸಬೇಕು.

–ಹೋಮದೇವ ಜೆ.ಎಸ್., ಅಧ್ಯಕ್ಷ, ಮೈಸೂರು ನಗರ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು