ಶನಿವಾರ, ಮಾರ್ಚ್ 25, 2023
23 °C

ಮೈಸೂರು ಜಿಲ್ಲೆ: ₹ 21,980 ಕೋಟಿ ಸಾಲದ ಗುರಿ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಜಿಲ್ಲೆಯಲ್ಲಿ 2022–23ನೇ ಸಾಲಿನಲ್ಲಿ ₹ 21,980 ಕೋಟಿ ಸಾಲ ನೀಡುವ ಗುರಿಯನ್ನು ಬ್ಯಾಂಕ್‌ಗಳು ಹೊಂದಿವೆ.

ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ (ಎಸ್‌ಬಿಐ) ಸಿದ್ಧಪಡಿರುವ ಜಿಲ್ಲಾ ವಾರ್ಷಿಕ ಸಾಲ ಯೋಜನೆಯ ವರದಿಯನ್ನು ಸಂಸದ ಪ್ರತಾಪ ಸಿಂಹ ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಬಿಡುಗಡೆ ಮಾಡಿದರು.

ಕಳೆದ ವರ್ಷಕ್ಕಿಂತ ಶೇ 15ರಷ್ಟು ಹೆಚ್ಚಿನ ಸಾಲ ನೀಡುವ ಗುರಿ ಹೊಂದಲಾಗಿದೆ. ಹೋದ ಸಾಲಿನಲ್ಲಿ ₹ 19,112 ಕೋಟಿ ಗುರಿ ಇತ್ತು.

ಆದ್ಯತಾ ವಲಯಕ್ಕೆ ₹ 16,617 ಕೋಟಿ ನಿಗದಿಪಡಿಸಲಾಗಿದ್ದು, ಆದ್ಯತೇತರ ವಲಯದಲ್ಲಿ ₹ 5,363 ಕೋಟಿ ವಿತರಣೆ ಗುರಿ ನೀಡಲಾಗಿದೆ. ಆದ್ಯತಾ ವಲಯಕ್ಕೆ ಕಳೆದ ವರ್ಷಕ್ಕಿಂತ ಈ ಬಾರಿ ₹ 2,141 ಕೋಟಿಯನ್ನು ಹೆಚ್ಚಾಗಿ ನಿಗದಿಪಡಿಸಲಾಗಿದೆ. ಆದ್ಯತೇತರ ವಲಯದಲ್ಲಿ ₹ 727 ಕೋಟಿ ಏರಿಕೆಯಾಗಿದೆ. ಹಲವು ಸರ್ಕಾರಿ ಪ್ರಾಯೋಜಿತ ಯೋಜನೆಗಳಿಗೆ ₹ 1,400 ಕೋಟಿ ಕೊಡಲಾಗುವುದು ಎಂದು ತಿಳಿಸಲಾಗಿದೆ. ಇದರ ಪ್ರಮಾಣವನ್ನು ಹೋದ ಸಾಲಿಗಿಂತ ಶೇ 20ರಷ್ಟನ್ನು ಹೆಚ್ಚಿಸಲಾಗಿದೆ.

‘ಮೈಸೂರು ತಾಲ್ಲೂಕಿಗೆ ಅತಿ ಹೆಚ್ಚು ಅಂದರೆ ₹ 10,790 ಕೋಟಿ ಹಂಚಿಕೆಯ ಗುರಿ ಹೊಂದಲಾಗಿದೆ. ಪಿರಿಯಾಪಟ್ಟಣ ತಾಲ್ಲೂಕಿಗೆ ₹ 2,206 ಕೋಟಿ, ಕೆ.ಆರ್. ನಗರಕ್ಕೆ ₹ 1,495 ಕೋಟಿ, ಹುಣಸೂರಿಗೆ ₹ 2,300 ಕೋಟಿ, ಸರಗೂರಿಗೆ ₹ 379 ಕೋಟಿ, ಎಚ್‌.ಡಿ. ಕೋಟೆಗೆ ₹ 820 ಕೋಟಿ, ನಂಜನಗೂಡಿಗೆ ₹ 2,265 ಕೋಟಿ ಮತ್ತು ತಿ.ನರಸೀಪುರಕ್ಕೆ ₹ 1,725 ಕೋಟಿ ಸಾಲ ಕೊಡಲಾಗುತ್ತದೆ’ ಎಂದು ಯೋಜನೆಯಲ್ಲಿ ತಿಳಿಸಲಾಗಿದೆ.

ಬ್ಯಾಂಕ್‌ಗಳವರಿಗೆ ತರಾಟೆ:

ನಂತರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ‘ಸರ್ಕಾರದ ವಿವಿಧ ಯೋಜನೆಗಳಡಿ ಸಾಲ ಮಂಜೂರಾತಿಗೆ ಬರುವ ಅರ್ಜಿಗಳನ್ನು ಯಾವುದೇ ಬ್ಯಾಂಕ್‌ನ ಶಾಖೆಗಳವರು ಸಕಾರಣವಿಲ್ಲದೆ ತಿರಸ್ಕರಿಸುವಂತಿಲ್ಲ, ಆದರೆ, ಅಲ್ಲಲ್ಲಿ ತಿರಸ್ಕರಿಸುತ್ತಿರುವುದು ಕಂಡುಬರುತ್ತಿದೆ. ಹೀಗೆ ಮಾಡಿದರೆ, ಸರ್ಕಾರಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಹೇಗೆ?’ ಎಂದು ತರಾಟೆಗೆ ತೆಗೆದುಕೊಂಡರು.

‘ನೀವೇನು (ಬ್ಯಾಂಕ್‌ಗಳವರು) ಉಪಕಾರ ಮಾಡುತ್ತಿಲ್ಲ. ನಿಯಮಗಳ ಪ್ರಕಾರ ಸಾಲ ಕೊಡುತ್ತೀರಷ್ಟೆ. ಅದನ್ನು ನಿರ್ವಹಿಸಬೇಕು. ಸರ್ಕಾರದ ವಿವಿಧ ಇಲಾಖೆಗಳಿಂದ ಬರುವ ಅರ್ಜಿಗಳನ್ನು ತಿರಸ್ಕರಿಸುವುದು ಗಂಭೀರವಾದ ಲೋಪ. ಸಂಬಂಧಿಸಿದ ಬ್ಯಾಂಕ್‌ಗಳ ಶಾಖೆಗಳವರ ವಿರುದ್ಧ ಕ್ರಮಕ್ಕೆ ಹಿರಿಯ ಅಧಿಕಾರಿಗಳಿಗೆ ಬರೆಯಲಾಗುವುದು. ಇದಕ್ಕೆ ನನಗೆ ಯಾವ ಹಿಂಜರಿಕೆಯೂ ಇಲ್ಲ’ ಎಂದು ಗುಡುಗಿದರು.

‘ಬ್ಯಾಂಕ್‌ನಲ್ಲಿ ಠೇವಣಿ ಇಡದಿದ್ದಲ್ಲಿ ಹೊಸದಾಗಿ ಖಾತೆ ತೆರೆಯುವ ಅರ್ಜಿ ಪ್ರಕ್ರಿಯೆ ಮುಂದುವರಿಸುವುದಿಲ್ಲವೋ ಅಂತಹ ಶಾಖೆಗಳ ವಿರುದ್ಧ ಕ್ರಮಕ್ಕೆ ಬರೆಯಲಾಗುವುದು. ಸಾಲ ಮಂಜೂರು ಮಾಡುವಾಗ ವಿನಾಕಾರಣ ವಿಳಂಬ ಹಾಗೂ ಅಲೆದಾಡಿಸುವುದು ಸರಿಯಲ್ಲ’ ಎಂದು ಎಚ್ಚರಿಕೆ ನೀಡಿದರು.

ತಕ್ಷಣ ಪರಿಹರಿಸಬೇಕು:

‘ಸ್ವಸಹಾಯ ಗುಂಪುಗಳಿಗೆ ಬ್ಯಾಂಕ್‌ ಖಾತೆ ತೆರೆಯುವ ಸಂದರ್ಭದಲ್ಲೂ ಕೆಲವು ಶಾಖೆಗಳವರು ತೊಂದರೆ ಕೊಡುತ್ತಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಬಗಾದಿ, ‘ಬ್ಯಾಂಕ್‌ಗಳ ಧೋರಣೆ ಸರಿಯಲ್ಲ’ ಎಂದು ತಿಳಿಸಿದರು.

‘ಅಧಿಕಾರಿಗಳು ಸಮಸ್ಯೆಗಳಿದ್ದಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯವರೆಗೂ ಕಾಯಬಾರದು. ಸರ್ಕಾರ ಹಾಗೂ ಬ್ಯಾಂಕ್‌ಗಳ ನಡುವಿನ ಸಮನ್ವಯದ ಜವಾಬ್ದಾರಿ ಹೊತ್ತಿರುವ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ ವ್ಯವಸ್ಥಾಪಕರ ಗಮನಕ್ಕೆ ತರಬೇಕು. ಸಮಸ್ಯೆಗಳನ್ನು ಕೂಡಲೇ ಪರಿಹರಿಸಿಕೊಳ್ಳಬೇಕು. ಜನರಿಗೆ ಅನುಕೂಲ ಮಾಡಿಕೊಡಬೇಕು. ವಿವಧ ಇಲಾಖೆಗಳ ಫಲಾನುಭವಿಗಳ ಅರ್ಜಿಗಳ ತ್ವರಿತವಾಗಿ ವಿಲೇವಾರಿ ಆಗುವಂತೆ ನೋಡಿಕೊಳ್ಳಬೇಕು. ಸಮಸ್ಯೆಗಳು ಗಮನಕ್ಕೆ ಬರುತ್ತಿದ್ದಂತೆಯೇ ಪರಿಹರಿಸಲು ಮಾರ್ಗದರ್ಶಿ ಬ್ಯಾಂಕ್‌ನವರು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

ಎಸ್‌ಬಿಐ ಡಿಜಿಎಂ ರಾಜೇಶ್‌ಕುಮಾರ್‌ ಚೌಧರಿ, ಮಾರ್ಗದರ್ಶಿ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಪಿ.ದಿನೇಶ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪ್ರೇಮ್‌ಕುಮಾರ್‌ ಪಾಲ್ಗೊಂಡಿದ್ದರು.

ಆದ್ಯತಾ ವಲಯದಲ್ಲಿ ಯಾವ ಬ್ಯಾಂಕ್‌ಗಳಿಂದ ಎಷ್ಟು ಸಾಲ? (₹ ಕೋಟಿಗಳಲ್ಲಿ)

ಬ್ಯಾಂಕ್‌ಗಳು;ಮೊತ್ತ;ಹೋದ ಸಾಲಿಗಿಂತ ಹೆಚ್ಚಳ

ಸಾರ್ವಜನಿಕ ಕ್ಷೇತ್ರ;10,544;64

ಖಾಸಗಿ;2,475;15

ಪ್ರಾದೇಶಿಕ ಗ್ರಾಮೀಣ ಬ್ಯಾಂಕ್;2,035;12

ಡಿಸಿಸಿ ಬ್ಯಾಂಕ್;1,162;7

ಭೂ ಅಭಿವೃದ್ಧಿ ಬ್ಯಾಂಕ್;191;1

ಕೆಎಸ್ಎಫ್‌ಸಿ;210;1

ಆದ್ಯತಾ ವಲಯದಲ್ಲಿ ಯಾವ್ಯಾವುದಕ್ಕೆ ಎಷ್ಟೆಷ್ಟು?

(₹ ಕೋಟಿಗಳಲ್ಲಿ)

ಕೃಷಿ ಸಾಲ;4,422

ಅವಧಿ ಸಾಲ;3,698

ಎಸ್‌ಎಸ್‌ಐ/ಎಂಎಸ್‌ಎಂಇ;5,207

ವ್ಯಾಪಾರ ಮತ್ತು ಸೇವೆ;3,390

ವಲಯವಾರು ಹಂಚಿಕೆ

(₹ ಕೋಟಿಗಳಲ್ಲಿ)

ಕ್ಷೇತ್ರ;ಖಾತೆ;ಮೊತ್ತ

ಸಣ್ಣ ನೀರಾವರಿ;3,500;230

ಭೂ ಅಭಿವೃದ್ಧಿ;14,000;260

ಕೃಷಿ ಯಾಂತ್ರೀಕರಣ;3,200;260

ತೋಟಗಾರಿಕೆ;3,400;230

ಪಶುಸಂಗೋಪನೆ/ಹೈನುಗಾರಿಕೆ;23,750;605

ಕುರಿ, ಆಡು, ಕೋಳಿ ಸಾಕಣೆ;9,500;180

ಪಶುಸಂಗೋಪನೆ/ಇತರೆ;3,100;110

ಮೀನುಗಾರಿಕೆ;100;70

ಅರಣ್ಯ, ಜಂಬರು ಭೂಮಿ ಅಭಿವೃದ್ಧಿ;650;50

ಗೋದಾಮು, ಮಾರ್ಕೆಟ್ ಯಾರ್ಡ್ ನಿರ್ಮಾಣ;650;230

ಕೃಷಿ ಮೂಲಸೌಕರ್ಯ;1,000;150

ಇತರ ಕೃಷಿ ಅವಧಿ ಸಾಲ;8,500;350

ಪ್ರವಾಸೋದ್ಯಮ ಅಭಿವೃದ್ಧಿ;800;450

ಗೃಹ ಸಾಲ;7,000;2,830

ಶಿಕ್ಷಣ ಸಾಲ;1,500;290

ಕೃಷಿ ಸಾಲ;2,50,900;4,422

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು