ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಮತ್ತಿಬ್ಬರಿಗೆ ಕೊರೊನಾ ಸೋಂಕು, ಶತಕ ದಾಟಿದ ಪ್ರಕರಣ

ಮೈಸೂರಿನ ಇಟ್ಟಿಗೆಗೂಡು, ನಂಜನಗೂಡಿನ ನೀಲಕಂಠ ನಗರದ ಕೆಲ ರಸ್ತೆಗಳು ಸೀಲ್‌ಡೌನ್‌
Last Updated 9 ಜೂನ್ 2020, 14:10 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯಲ್ಲಿ ಮತ್ತಿಬ್ಬರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಇದುವರೆಗೆ ದಾಖಲಾದ ಒಟ್ಟು ಪ್ರಕರಣಗಳ ಸಂಖ್ಯೆ ಶತಕ ದಾಟಿದೆ.

ನವದೆಹಲಿ ಹಾಗೂ ತಮಿಳುನಾಡಿನಿಂದ ಬಂದ ಇಬ್ಬರು ವ್ಯಕ್ತಿಗಳಲ್ಲಿ ಸೋಂಕು (ಪಿ–5920, ಪಿ–5921) ಇರುವುದು ಗೊತ್ತಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌ ತಿಳಿಸಿದರು.

ತಮಿಳುನಾಡಿನ ತಿರುವಣ್ಣಾಮಲೈನಿಂದ 60 ವರ್ಷ ವಯಸ್ಸಿನ ವ್ಯಕ್ತಿ ಮೈಸೂರಿನ ಇಟ್ಟಿಗೆಗೂಡಿನ ಸಂಬಂಧಿಕರ ಮನೆಗೆ ಶನಿವಾರ ಬಂದಿದ್ದರು. ಹೀಗಾಗಿ, ಇಲ್ಲಿನ ಜ್ವಾಲಾಮುಖಿ ವೃತ್ತದ ಬಳಿ ಅವರಿದ್ದ ಮನೆಯ ರಸ್ತೆಯನ್ನು ಸೀಲ್‌ಡೌನ್‌ ಮಾಡಲಾಗಿದೆ.

ಆ ವ್ಯಕ್ತಿಯನ್ನು ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಿದ್ದ ಮನೆಯ ಸುತ್ತಮುತ್ತಲಿನ ರಸ್ತೆಗಳಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಲಾಗಿದೆ. ಕಂಟೈನ್‌ಮೆಂಟ್‌ ವಲಯ ಎಂದು ಘೋಷಿಸಿದ್ದು, ಆ ಮನೆಯಲ್ಲೇ ಮೂವರನ್ನು ಹೋಂ ಕ್ವಾರಂಟೈನ್‌ ಮಾಡಲಾಗಿದೆ. ಗೋಡೆಗೆ ನೋಟಿಸ್ ಅಂಟಿಸಲಾಗಿದೆ.

ಈ ರಸ್ತೆಯ ನಿವಾಸಿಗಳ ಮನೆ ಬಾಗಿಲಿಗೆ ಹಾಲು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ. ಬ್ಯಾರಿಕೇಡ್‌ ಅಳವಡಿಸಿ, 28 ದಿನ ಸೀಲ್‌ಡೌನ್‌ ಮಾಡಲು ಪಾಲಿಕೆ ನಿರ್ಧರಿಸಿದೆ.

‘ಈ ವ್ಯಕ್ತಿ ತಮಿಳುನಾಡಿನಿಂದ ಶನಿವಾರ ಬಂದಿದ್ದರು. ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಸಂಬಂಧಿಕರನ್ನು ನೋಡಲು ಭಾನುವಾರ ಹೋಗಿದ್ದರು. ಆಗ ಆಸ್ಪತ್ರೆಯಲ್ಲಿ ಅವರನ್ನು ಥರ್ಮಲ್‌ ಸ್ಕ್ರೀನಿಂಗ್‌ ಮಾಡಲಾಗಿದೆ. ಜ್ವರವಿದ್ದ ಕಾರಣ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಲು ಸೂಚಿಸಿದ್ದರು. ವರದಿ ಬಂದಿದ್ದು, ಪಾಸಿಟಿವ್‌ ಇರುವುದು ಗೊತ್ತಾಯಿತು’ ಎಂದು ಪಾಲಿಕೆ ಆರೋಗ್ಯಾಧಿಕಾರಿ ನಾಗರಾಜ್‌ ಹೇಳಿದರು.

ಮೈಸೂರು ನಗರದಲ್ಲಿ ಕಂಟೈನ್‌ಮೆಂಟ್‌ ವಲಯ ಎಂದು ಘೋಷಿಸಲಾಗಿರುವ ಎರಡನೇ ಪ್ರದೇಶವಿದು. ಈ ಮೊದಲು ಮಹಾರಾಷ್ಟ್ರದಿಂದ ಬಂದಿದ್ದ ಗರ್ಭಿಣಿ ವಾಸವಿದ್ದ ರಾಮಕೃಷ್ಣನಗರ ‘ಜಿ’ ಬ್ಲಾಕ್‌ನ ಕೆಲ ರಸ್ತೆಗಳನ್ನು ಕಂಟೈನ್‌ಮೆಂಟ್ ವಲಯ ಎಂದು ಘೋಷಿಸಲಾಗಿತ್ತು.

ಮತ್ತೊಬ್ಬರು ದೆಹಲಿಯಿಂದ ಬಂದ 22 ವರ್ಷ ವಯಸ್ಸಿನ ವಿದ್ಯಾರ್ಥಿ. ಬೆಂಗಳೂರಿನಲ್ಲಿ 10 ದಿನ ಇದ್ದು, ನಂಜನಗೂಡಿಗೆ ಬಂದಿದ್ದಾರೆ. ಅವರನ್ನು ಪರೀಕ್ಷೆಗೆ ಒಳಪಡಿಸಿದ್ದು, ಮೊದಲ ವರದಿ ನೆಗೆಟಿವ್ ಬಂದಿತ್ತು. ವಾರ ಬಿಟ್ಟು ಎರಡನೇ ಬಾರಿ ಪರೀಕ್ಷೆ ಮಾಡಿದಾಗ ಪಾಸಿಟಿವ್ ಇರುವುದು ಗೊತ್ತಾಗಿದೆ. ಇವರನ್ನು ಮೈಸೂರಿನ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂಜನಗೂಡಿನ ನೀಲಕಂಠ ನಗರದ ಕೆಲ ರಸ್ತೆಗಳನ್ನು ಸೀಲ್‌ಡೌನ್‌ ಮಾಡಿ, ಕುಟುಂಬದವರನ್ನು ಹೋಂ ಕ್ವಾರಂಟೈನ್‌ ಮಾಡಲಾಗಿದೆ.

ಈಚೆಗೆ ಹುಣಸೂರು ತಾಲ್ಲೂಕಿನ ಹೊಸಪೆಂಜಳ್ಳಿ ಗ್ರಾಮವನ್ನು ಸೀಲ್‌ಡೌನ್‌ ಮಾಡಲಾಗಿತ್ತು. ಮಹಾರಾಷ್ಟ್ರದಿಂದ ಬಂದಿದ್ದ ಗರ್ಭಿಣಿಯಲ್ಲಿ ಕೋವಿಡ್‌ ಇರುವುದು ದೃಢಪಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT