ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಎಸ್‌ಸಿ: ಮೈಸೂರಿನ ಇಬ್ಬರ ಸಾಧನೆ

Last Updated 4 ಆಗಸ್ಟ್ 2020, 13:32 IST
ಅಕ್ಷರ ಗಾತ್ರ

ಮೈಸೂರು: ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮೈಸೂರಿನ ತಿ.ನರಸೀಪುರ ತಾಲ್ಲೂಕು ಬನ್ನೂರು ಹೋಬಳಿ ಅತ್ತಹಳ್ಳಿ ಗ್ರಾಮದ ವರುಣ್‌ ಕೆ ಗೌಡ ಮೊದಲ ಪ್ರಯತ್ನದಲ್ಲೇ 528ನೇ ರ‍್ಯಾಂಕ್‌ ಪಡೆದುಕೊಂಡಿದ್ದಾರೆ.

ವರುಣ್‌ ಅವರು ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ಕಳೆದ ವರ್ಷ ಎಂಬಿಬಿಎಸ್‌ ಪೂರೈಸಿದ್ದರು.

‘ಸಮಾಜದ ದೊಡ್ಡ ವರ್ಗದ ಜನರ ಸೇವೆ ಮಾಡಬೇಕು ಎಂಬ ಕನಸು ಇತ್ತು. ಆದ್ದರಿಂದ ಯುಪಿಎಸ್‌ಸಿ ಪರೀಕ್ಷೆ ಬರೆದೆ. ಮೊದಲ ಪ್ರಯತ್ನದಲ್ಲೇ ರ‍್ಯಾಂಕ್‌ ದೊರೆಯುವ ನಿರೀಕ್ಷೆ ಇರಲಿಲ್ಲ’ ಎಂದು ಪ್ರತಿಕ್ರಿಯಿಸಿದರು.

‘ನಮ್ಮದು ಕೃಷಿಕ ಕುಟುಂಬ. ತಂದೆ ಕೃಷಿ ಚಟುವಟಿಕೆ ನೋಡಿಕೊಂಡಿದ್ದಾರೆ. ತಾಯಿ ಗೃಹಿಣಿ. ಪ್ರಿಲಿಮ್‌ ಮತ್ತು ಮುಖ್ಯ ಪರೀಕ್ಷೆಗೆ ಕೋಚಿಂಗ್‌ಗೆ ಹೋಗಿಲ್ಲ. ಮನೆಯಲ್ಲೇ ಕುಳಿತು ಓದಿದೆ. ಸಂದರ್ಶನ ಎದುರಿಸಲು ಅಲ್ಪ ಮಾರ್ಗದರ್ಶನ ಪಡೆದುಕೊಂಡೆ’ ಎಂದರು.

636ನೇ ರ‍್ಯಾಂಕ್‌:ಮೈಸೂರಿನ ವಿಜಯಶ್ರೀಪುರದ ಪ್ರಜ್ವಲ್‌ ಅವರು 636ನೇ ರ‍್ಯಾಂಕ್‌ ಪಡೆದುಕೊಂಡಿದ್ದಾರೆ. ಮೈಸೂರು ಎನ್‌ಐಇ ಕಾಲೇಜಿನಲ್ಲಿ ಬಿಇ (ಮೆಕ್ಯಾನಿಕಲ್‌) ಪೂರೈಸಿರುವ ಪ್ರಜ್ವಲ್‌ ಅವರು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಡಿಸೈನ್‌ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

ನಾಲ್ಕನೇ ಪ್ರಯತ್ನದಲ್ಲಿ ಇವರಿಗೆ ಯಶಸ್ಸು ಲಭಿಸಿದೆ. ಕಳೆದ ಬಾರಿ ಸಂದರ್ಶನಕ್ಕೆ ಆಯ್ಕೆಯಾಗಿದ್ದರೂ, ರ‍್ಯಾಂಕ್‌ ಲಭಿಸಿರಲಿಲ್ಲ.

‘ಕೆಳ ಮಧ್ಯಮ ವರ್ಗದ ಕುಟುಂಬದಿಂದ ಬಂದರೂ ಕಷ್ಟಪಟ್ಟು ಓದಿದೆ. ತಂದೆ ಹೋಟೆಲ್‌ನಲ್ಲಿ ಸೂಪರ್‌ವೈಸರ್‌ ಆಗಿ ಕೆಲಸ ಮಾಡುತ್ತಿದ್ದರು. ತಾಯಿ ಗೃಹಿಣಿ. ಕುಟುಂಬದ ಆರ್ಥಿಕ ಸ್ಥಿತಿ ಚೆನ್ನಾಗಿರಲಿಲ್ಲ. ಆದ್ದರಿಂದ ಕೆಲಸದ ನಡುವೆಯೂ ಓದಿಕೊಂಡು ಪರೀಕ್ಷೆ ಬರೆಯಬೇಕಾಗಿತ್ತು. ಈ ಸಾಧನೆ ಖುಷಿ ನೀಡಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT