ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ವಾಸವಿ ಶಾಂತಿಧಾಮವೆಂಬ ಮಹಾಮನೆ

Last Updated 11 ಜನವರಿ 2020, 19:30 IST
ಅಕ್ಷರ ಗಾತ್ರ

ಜೀವಮಾನವಿಡೀ ಗೌರವಯುತ ಬದುಕು ನಡೆಸಿದ ಜೀವಗಳು ಸಂಧ್ಯಾಕಾಲದಲ್ಲೂ ಅಂತಹದ್ದೇ ಜೀವನ ಬೇಕೆಂದು ಬಯಸುವುದು ಸಹಜ. ಅವಿಭಕ್ತ ಕುಟುಂಬಗಳು ವಿಘಟಿಸಿ ವಿಭಕ್ತ ಕುಟುಂಬಗಳಾಗಿ ಒಡೆದು ಹೋಗುತ್ತಿರುವ ಈ ದಿನಮಾನದಲ್ಲಿ ಇಳಿ ವಯಸ್ಸಿನಲ್ಲಿ ನೆಮ್ಮದಿಯ ಬದುಕು ನಡೆಸಿ ಮಣ್ಣಾಗುತ್ತೇವೆ ಎಂಬ ನಂಬಿಕೆ ಬಹುತೇಕ ಹಿರಿಯ ಜೀವಗಳಿಗೆ ಇರುವುದಿಲ್ಲ.

ಕೆಲಸದ ನಿಮಿತ್ತ ವಿದೇಶದಲ್ಲೋ, ಬೇರೆ ರಾಜ್ಯದಲ್ಲೋ ನೆಲೆಸಿರುವ ಮಕ್ಕಳಿಂದ ದೂರವಾಗಿ ಉಳಿಯುವ ಪೋಷಕರು, ಮಕ್ಕಳಿಲ್ಲದ ತಂದೆ-ತಾಯಿಗಳು, ಮಕ್ಕಳಿಂದ ನಿರ್ಲಕ್ಷ್ಯಕ್ಕೆ ಒಳಗಾದ ಪೋಷಕರು, ಹಣವಿದ್ದೂ ಅಗತ್ಯವಾದ ಸೌಕರ್ಯಗಳನ್ನು ಹೊಂದಿಸಿಕೊಳ್ಳಲು ಆಗದವರಿಗೆ ಜೀವನದ ಕೊನೇ ದಿನಗಳನ್ನು ಸಂತೋಷವಾಗಿ ಕಳೆಯುವ ಭರವಸೆಯೇ ಕ್ಷೀಣಿಸಿರುತ್ತದೆ.

ವೃದ್ಧಾಪ್ಯ ಎಂಬುದು ಸಾವಿನ ದಿನಗಳನ್ನು ಎಣಿಸುವ ಕ್ಷಣಗಳಲ್ಲ. ವೃದ್ಧರ ಬದುಕು ಗೌರವಯುತವಾಗಿ ಸಾಗಬೇಕು, ಆ ಹಿರಿಯ ಜೀವಗಳಿಗೆ ಸುಖ, ನೆಮ್ಮದಿ ಕಲ್ಪಿಸಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡು ಮೈಸೂರಿನ ಆಲನಹಳ್ಳಿ ಬಡಾವಣೆಯ ನಾಡನಹಳ್ಳಿ ರಸ್ತೆಯಲ್ಲಿ ‘ಶ್ರೀ ವಾಸವಿ ಶಾಂತಿಧಾಮ’ವನ್ನು ಸ್ಥಾಪಿಸಲಾಗಿದೆ. ವೃತ್ತಿಯಲ್ಲಿ ಲೆಕ್ಕಪರಿಶೋಧಕರಾಗಿರುವ ಬಿ.ವಿ.ಶ್ರೀನಿವಾಸ ಗುಪ್ತ ಅವರ ಕನಸಿನ ಕೂಸು ಇದು. ಐದು ಎಕರೆ ಪ್ರದೇಶದಲ್ಲಿ ನೆಲೆನಿಂತಿರುವ ಈ ಧಾಮವು ವೃದ್ಧರ ಪಾಲಿಗೆ ಶಾಂತಿಧಾಮವೂ, ಸುಸ್ಥಿರ ಬದುಕಿನ ಮಹಾಮನೆಯೂ ಆಗಿದೆ.

ಈ ಧಾಮವನ್ನು ಅತ್ಯಂತ ಯೋಜನಾಬದ್ಧವಾಗಿ ನಿರ್ಮಿಸಲಾಗಿದ್ದು, ವೃದ್ಧರ ಜೀವನ ಶೈಲಿಗೆ ಹೊಂದುವಂತಿದೆ. ಸ್ವಚ್ಛತೆಗೆ ಇಲ್ಲಿ ಪ್ರಧಾನ ಆದ್ಯತೆ. ಸುಂದರ ಭೂದೃಶ್ಯವು ಧಾಮಕ್ಕೆ ವಿಶೇಷ ಮೆರುಗನ್ನೇ ನೀಡಿದೆ. ಧಾಮದೊಳಗೆ ಕಾಲಿಟ್ಟ ತಕ್ಷಣ ಮನಸ್ಸಿಗೆ ಮುದ ನೀಡುತ್ತದೆ. ಇಲ್ಲಿ 160 ಹಿರಿಯ ನಾಗರಿಕರು ವಾಸವಾಗಿದ್ದಾರೆ.

ಕಿರಿದಾದ ರಸ್ತೆ, ವಾಹನಗಳ ಸದ್ದು, ಜನಜಂಗುಳಿ, ಎಲ್ಲೆಂದರಲ್ಲಿ ಬಿದ್ದಿರುವ ಕಸದ ರಾಶಿ, ಬೀದಿನಾಯಿಗಳ ಹಾವಳಿ ಇಲ್ಲಿಲ್ಲ. ಮೌನವೇ ಹೊದ್ದು ಮಲಗಿದಂತೆ ಭಾಸವಾಗುವ ಈ ತಾಣದಲ್ಲಿ ಮಕ್ಕಳಂತೆ ಪುಟ್ಟಪುಟ್ಟ ಹೆಜ್ಜೆಗಳನ್ನು ಇಡುತ್ತಾ ಓಡಾಡುವ ಹಿರಿಯ ಜೀವಗಳನ್ನು ಕಾಣಬಹುದು.

ಹೈಟೆಕ್ ಬಡಾವಣೆಯಂತೆ ಈ ಧಾಮ ಭಾಸವಾಗುತ್ತದೆ. ಇಲ್ಲಿರುವ ಬಹುತೇಕರು ಆರ್ಥಿಕವಾಗಿ ಸ್ಥಿತಿವಂತರೇ. ವಿವಿಧ ಕಾರಣಗಳಿಂದಾಗಿ ಇಲ್ಲಿ ನೆಲೆಸಿದ್ದಾರೆ. ಕೆಲವರು ಕಾರುಗಳನ್ನು ಹೊಂದಿದ್ದು, ತಮ್ಮತಮ್ಮ ಕೆಲಸಗಳಲ್ಲಿ ನಿರತರಾಗಿದ್ದಾರೆ. ಶಾಂತಿಧಾಮದೊಳಗೇ ಬಂಧಿಯಾಗಬೇಕೆಂಬ ಷರತ್ತು ಇಲ್ಲಿಲ್ಲ. ಬೇಸರವಾದರೆ ನಗರಕ್ಕೋ ಅಥವಾ ಇನ್ನೆಲ್ಲಿಗಾದರೂ ಹೋಗಿ ಬರಬಹುದು.

ಶಾಂತಿಧಾಮದಲ್ಲಿರುವ ಸೌಲಭ್ಯಗಳು

ಫೌಂಟೆನ್ ಕಾಟೇಜ್, ಸೆಂಟ್ರಲ್ ಕಾಟೇಜ್, ಗಾರ್ಡನ್ ಕಾಟೇಜ್, ಫೌಂಟೆನ್ ಮಿನಿ ಕಾಟೇಜ್, ಗಾರ್ಡನ್ ಮಿನಿ ಕಾಟೇಜ್, ಎನ್.ಆರ್.ಐ ಕಾಟೇಜ್ ಎಂಬ ಬ್ಲಾಕ್‌ಗಳಿವೆ. ಇವುಗಳಲ್ಲಿ ಮಿನಿ ಕಾಟೇಜ್, ಸಿಂಗಲ್ ಬೆಡ್‌ರೂಂ ಕಾಟೇಜ್, ಡಬಲ್ ಬೆಡ್‌ರೂಂ ಕಾಟೇಜ್, ಎ/ಸಿ ಕಾಟೇಜ್, ಲಕ್ಷುರಿ ಎಸಿ ಕಾಟೇಜ್‌ಗಳಿವೆ. ತಮಗಿಷ್ಟಬಂದ ಕಾಟೇಜ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದ್ದು, ಅದಕ್ಕೆ ನಿಗದಿಪಡಿಸಿರುವ ಶುಲ್ಕವನ್ನು ಪಾವತಿಸಬೇಕು. ಇದಲ್ಲದೆ, ವಿಶೇಷ ಅತಿಥಿ ಗೃಹವಿದ್ದು, ಹಿರಿಯ ನಾಗರಿಕರನ್ನು ಭೇಟಿ ಮಾಡಲು ಬರುವವರು ಇಲ್ಲಿ ವಿಶ್ರಾಂತಿ ಪಡೆಯಬಹುದು.

ವೈದ್ಯಕೀಯ ಸೌಲಭ್ಯ

ವಯಸ್ಸಾಗುತ್ತಿದ್ದಂತೆ ಅನಾರೋಗ್ಯ ಕಾಡುವುದು ಸರ್ವೇ ಸಾಮಾನ್ಯ. ಹೀಗಾಗಿ ಆಸ್ಪತ್ರೆಯ ಬ್ಲಾಕ್ ಸ್ಥಾಪಿಸಲಾಗಿದೆ. ಮೈಸೂರು ವೈದ್ಯಕೀಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ರಂಗಸ್ವಾಮಿ ಅವರು ಭೇಟಿ ನೀಡಿ ವಿವಿಧ ರೋಗಗಳ ತಪಾಸಣೆ ನಡೆಸುತ್ತಾರೆ. ಔಷಧ ಮಳಿಗೆಯವರು ಸ್ಥಳಕ್ಕೆ ಬಂದು ಔಷಧ ಪೂರೈಸುತ್ತಾರೆ. ವಾರಕ್ಕೆ 3-4 ದಿನ ಫಿಜಿಯೋಥೆರಪಿ ಮಾಡಲಾಗುತ್ತದೆ. ಅನಾರೋಗ್ಯ ಪೀಡಿತರ ಆರೈಕೆಗಾಗಿ ನರ್ಸ್ ಇದ್ದಾರೆ.

ಪ್ರಾರ್ಥನೆ ಸಲ್ಲಿಸಲು, ಧ್ಯಾನ ಮಾಡಲು ವಿಶೇಷ ವ್ಯವಸ್ಥೆ ಇದೆ. ವೆಂಕಟೇಶ್ವರ ಸ್ವಾಮಿ, ಮಹಾಗಣಪತಿ, ಕನ್ನಿಕಾ ಪರಮೇಶ್ವರಿ ಮೂರ್ತಿಗಳನ್ನು ಹೊಂದಿದ ದೇವಸ್ಥಾನವಿದೆ. 102 ಋಷಿಗಳ ಪ್ರತಿಮೆಗಳನ್ನು ಒಳಗೊಂಡಿರುವ ಋಷಿ ಮಂಟಪ, ವನಸ್ಪತಿ ನವಗ್ರಹಗಳಿವೆ. ಓದಲು ಉತ್ತಮ ಪುಸ್ತಕಗಳ ಗ್ರಂಥಾಲಯವಿದೆ.

ಇದಲ್ಲದೆ, ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ, ಬೆಳದಿಂಗಳ ಕೂಟ, ರಸಪ್ರಶ್ನೆ ಸ್ಪರ್ಧೆ, ಚಲನಚಿತ್ರ ಪ್ರದರ್ಶನ, ಭಜನೆ, ಭಗವದ್ಗೀತೆ ಪ್ರವಚನ, ಪ್ರಾಣಾಯಾಮ ತರಗತಿಗಳನ್ನು ನಡೆಸಲಾಗುತ್ತದೆ.

ಹಿರಿಯ ಜೀವಗಳ ಜೀವನೋತ್ಸಾಹ

ಹಿರಿಯ ಪತ್ರಕರ್ತ ಎಸ್. ಪದ್ಮನಾಭ ಹೆಬ್ಬಾರ್ (81) ಅವರು ಪತ್ನಿಯೊಂದಿಗೆ ಇಲ್ಲಿ ನೆಲೆಸಿದ್ದಾರೆ. ಮಗಳು ಸಿರಿಲತಾ ಜನಾರ್ದನ್ ಅವರು ಕ್ಯಾಲಿಫೋರ್ನಿಯಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದಾರೆ. ಅಲ್ಲಿಗೆ ಹೋಗಿದ್ದ ಪದ್ಮನಾಭ ಅವರಿಗೆ ಅಲ್ಲಿನ ಹವಾಮಾನ ಹೊಂದಾಣಿಕೆ ಆಗಲಿಲ್ಲ. ಅಲ್ಲದೆ, ತಾಯ್ನಾಡನ್ನು ಬಿಟ್ಟಿರಲು ಸಾಧ್ಯವಾಗದೆ ವಾಪಸ್ ಬಂದರು. ಮೂತ್ರಪಿಂಡ ಸಮಸ್ಯೆ ಕಾಡುತ್ತಿದ್ದರಿಂದ ಚೆನ್ನಾಗಿ ನೋಡಿಕೊಳ್ಳುವ ವೃದ್ಧಾಶ್ರಮವನ್ನು ಹುಡುಕುತ್ತಿದ್ದರು. ಅವರಿಗೆ ಈ ಧಾಮ ಕಣ್ಣಿಗೆ ಬಿತ್ತು.

‘ನನಗೆ ಮೂತ್ರಪಿಂಡ ಸಮಸ್ಯೆ ಉಂಟಾಗಿ, ಕೊನೆಯ ಹಂತಕ್ಕೆ ತಲುಪಿತ್ತು. ಶಸ್ತ್ರಚಿಕಿತ್ಸೆ ಮಾಡಿದರೆ ಜೀವಕ್ಕೆ ಅಪಾಯ ಆಗುವ ಸಾಧ್ಯತೆ ಇದೆ ಎಂದೇ ಕೆಲ ವೈದ್ಯರು, ಸ್ನೇಹಿತರು ಹೆದರಿಸಿದ್ದರು. ಈ ಧಾಮಕ್ಕೆ ಬಂದ ಒಂದು ತಿಂಗಳಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡೆ. ಈಗ ನಾಲ್ಕು ತಿಂಗಳು ಕಳೆದಿದ್ದು, ಆರೋಗ್ಯವಾಗಿ, ಲವಲವಿಕೆಯಿಂದ ಇದ್ದೇನೆ. ನನ್ನ ಬರವಣಿಗೆಯನ್ನೂ ಮುಂದುವರಿಸಿದ್ದೇನೆ’ ಎಂದು ಹೇಳಿದರು.

ಡಾ.ಎಚ್.ಎಸ್.ಸುಜಾತಾ ಹಾಗೂ ಡಾ.ಎಸ್.ಎಂ.ರಮಾನಂದ ಶೆಟ್ಟಿ ದಂಪತಿ ವೃತ್ತಿಯಲ್ಲಿ ಉಪನ್ಯಾಸಕರಾಗಿದ್ದರು. ಮಕ್ಕಳಿಲ್ಲದ ಕಾರಣ, ಸಂಧ್ಯಾಕಾಲದಲ್ಲಿ ಒಳ್ಳೆಯ ಜೀವನ ಸಾಗಿಸುವ ಇರಾದೆ ಹೊಂದಿದ್ದರು. ಇದ್ದ ಮನೆಗಳನ್ನು ಮಾರಿ ಆ ಹಣದಲ್ಲಿ ಈ ಶಾಂತಿಧಾಮದಲ್ಲಿ ಕಾಂಕ್ರೀಟ್ ರಸ್ತೆ ಮಾಡಿಸಿದ್ದಾರೆ. ಇದಕ್ಕೆ ಸುಪ್ರಭಾನಂದ ಮಾರ್ಗ ಎಂಬ ಹೆಸರು ಇಡಲಾಗಿದೆ.

‘ನಾವು ಸಂಪಾದಿಸಿದ ಹಣ ಸದ್ವಿನಿಯೋಗ ಆಗಬೇಕು ಎಂಬ ಉದ್ದೇಶದಿಂದ ಕಾಂಕ್ರೀಟ್ ರಸ್ತೆಗೆ ಹಣ ನೀಡಿದೆವು. ಮನೆಯಲ್ಲಿದ್ದ ಪೀಠೋಪಕರಣಗಳನ್ನೂ ಕೊಟ್ಟಿದ್ದೇವೆ. ಈ ಹಿಂದೆ 22 ಪುಸ್ತಕಗಳನ್ನು ಬರೆದಿದ್ದೆ. ಇಲ್ಲಿಗೆ ಬಂದ ಬಳಿಕ ಮೂರು ಪುಸ್ತಕಗಳನ್ನು ಹೊರತಂದಿದ್ದೇನೆ’ ಎಂದು ಹೆಮ್ಮೆಯಿಂದ ಹೇಳಿದರು.

ಬೆಂಗಳೂರಿನ ಜಿಕೆವಿಕೆಯಲ್ಲಿ ಕೆಲಸ ಮಾಡಿ ನಿವೃತ್ತರಾಗಿರುವ ಎಂ.ಜೆ.ಪದ್ಮಿನಿ ಅವಿವಾಹಿತೆ. ಅವರು ಇಲ್ಲಿಗೆ ಬಂದ ಬಳಿಕ ಸೈಕಲ್ ತುಳಿಯುವುದನ್ನು ಕಲಿತಿದ್ದಾರೆ. ಹೊರಗೆ ಟೈಲರಿಂಗ್ ತರಬೇತಿ ಕಲಿತು ಈಗ ಶಾಂತಿಧಾಮದಲ್ಲಿರುವ ಜನರಿಗೆ ಬಟ್ಟೆಗಳನ್ನು ಹೊಲಿದುಕೊಡುತ್ತಾರೆ.

ವಾಸವಿ ಶಾಂತಿಧಾಮದ ಉಗಮ

ಮೈಸೂರಿನ ವೆಂಕಟರಮಣ ಶೆಟ್ಟಿ, ಕಾಂತಮ್ಮ ಅವರ ಪುತ್ರರಾದ ಬಿ.ವಿ.ಶ್ರೀನಿವಾಸ ಗುಪ್ತ ಅವರು 1993ರಲ್ಲಿ 5 ಎಕರೆ ಭೂಮಿ ಖರೀದಿಸಿ ಶಾಂತಿಧಾಮ ಸ್ಥಾಪಿಸಿದ್ದರು.

‘ಆರಂಭದಲ್ಲಿ ಸ್ನೇಹಿತರು, ದಾನಿಗಳಿಂದ ಆರ್ಥಿಕ ನೆರವು, ದಿನಸಿ ಪದಾರ್ಥಗಳನ್ನು ಪಡೆದು ಈ ಧಾಮವನ್ನು ಮುನ್ನಡೆಸಿದ್ದೆ. ಆಗ ಎಲ್ಲರಿಗೂ ಉಚಿತವಾಗಿ ಸೇವೆ ಒದಗಿಸಲಾಗುತ್ತಿತ್ತು. ಆದರೆ, ವಸ್ತುಗಳ ಬೆಲೆ ಹೆಚ್ಚಾಗಿದ್ದರಿಂದ ಪ್ರತಿ ತಿಂಗಳು 1 ಸಾವಿರ ರೂಪಾಯಿ ಶುಲ್ಕ ಪಡೆದು ವಸತಿ, ಊಟ, ವಿದ್ಯುತ್, ನೀರಿನ ಸೌಲಭ್ಯ ಕಲ್ಪಿಸಲಾಯಿತು. ಈಗ ವಿವಿಧ ಕಾಟೇಜ್‌ಗಳಿಗೆ ಪ್ರತ್ಯೇಕ ಶುಲ್ಕವಿದೆ. ₹ 1 ಸಾವಿರದಿಂದ 15 ಸಾವಿರ ರೂಪಾಯಿವರೆಗೂ ಶುಲ್ಕ ಪಾವತಿಸುವವರು ಇದ್ದಾರೆ. 30 ಮಂದಿಗೆ ಉಚಿತವಾಗಿ ವಸತಿ, ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೂ, ತಿಂಗಳಿಗೆ ₹2.5 ಲಕ್ಷ ಕೊರತೆ ಉಂಟಾಗುತ್ತಿದೆ’ ಎಂದು ಈ ಧಾಮದ ಟ್ರಸ್ಟ್ ನ ಗೌರವ ಕಾರ್ಯದರ್ಶಿ ಶ್ರೀನಿವಾಸ ಗುಪ್ತ ತಿಳಿಸಿದರು.

ಅವರ ಮೊ.ಸಂ: 9342188469. ಶಾಂತಿಧಾಮದ ಮೊ.ಸಂ: 8880888509.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT