ಸೋಮವಾರ, ಜುಲೈ 26, 2021
26 °C
ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ವಾಟಾಳ್ ನಾಗರಾಜ್; ಮೈಸೂರಿನಲ್ಲಿ ಪ್ರತಿಭಟನೆ

‘ಎಲ್ಲರನ್ನೂ ಪಾಸ್ ಮಾಡದಿದ್ದರೆ ಕ್ರಾಂತಿಯಾಗುತ್ತೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಯಾವೊಂದು ಪರೀಕ್ಷೆ ನಡೆಸಬಾರದು. ಎಲ್ಲರನ್ನೂ ಮುಂದಿನ ಶೈಕ್ಷಣಿಕ ವರ್ಷಕ್ಕೆ ಅರ್ಹರನ್ನಾಗಿಸಿ ಪಾಸು ಮಾಡಬೇಕು. ಒಂದು ವೇಳೆ ರಾಜ್ಯ ಸರ್ಕಾರ ಪರೀಕ್ಷೆ ನಡೆಸುವ ನಿರ್ಧಾರಕ್ಕೆ ಅಂಟಿಕೊಂಡರೆ, ಜೂನ್ 21ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತೇವೆ. ಕ್ರಾಂತಿ ನಡೆಯಲಿದೆ’ ಎಂದು ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದರು.

ನಗರದ ಆರು ಗೇಟ್‌ ವೃತ್ತದಲ್ಲಿ ಮಂಗಳವಾರ ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಸಿದ ಅವರು, ‘ಪರೀಕ್ಷೆಗಿಂತ ಪ್ರಾಣ ಮುಖ್ಯ. ಆನ್‌ಲೈನ್ ಶಿಕ್ಷಣ ಬೇಕಿಲ್ಲ. ಈ ಸರ್ಕಾರಕ್ಕೆ ತಲೆಯೇ ಇಲ್ಲದಂತೆ ವರ್ತಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸರ್ಕಾರ ವಿದ್ಯಾರ್ಥಿಗಳ ಜತೆ ಆಟವಾಡಬಾರದು. ಛತ್ತೀಸ್‌ಗಡದ ಮಾದರಿಯಲ್ಲೇ ಎಲ್ಲರನ್ನೂ ಪಾಸು ಮಾಡಬೇಕು. ಈ ಹೊತ್ತಲ್ಲಿ ಪರೀಕ್ಷೆ ಮಾಡುವುದು ಸರಿಯಲ್ಲ. ಆನ್‌ಲೈನ್ ಎಂಬುದು ದೊಡ್ಡ ನರಕ. ದುರಂತ. ಗ್ರಾಮೀಣ ಮಕ್ಕಳಿಗೆ ಇದರ ಅರಿವೇ ಇಲ್ಲ. ಮೊಬೈಲ್ ಆಪರೇಟ್ ಬಹುತೇಕರಿಗೆ ಗೊತ್ತಿಲ್ಲ. ಐಐಟಿ ಮುಂಬೈ, ಗೋವಾ ವಿಶ್ವವಿದ್ಯಾಲಯ, ಐಐಟಿ ಕಾನ್ಪುರ್ ಸಹ ಪರೀಕ್ಷೆಗಳನ್ನು ರದ್ದುಗೊಳಿಸಿ, ವಿದ್ಯಾರ್ಥಿಗಳನ್ನು ಪಾಸು ಮಾಡಿದೆ’ ಎಂದು ಹೇಳಿದರು.

ಪರೀಕ್ಷೆ ನಡೆಸದಿದ್ದರೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದಂತಾಗುತ್ತದಲ್ಲಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಾಟಾಳ್, ‘ಪ್ರತಿಭಾವಂತರಿಗೆ ಅವರ ಈ ಹಿಂದಿನ ಸಾಧನೆ ಆಧಾರದಲ್ಲೇ ಅಂಕ ನೀಡಿ. ಪಾಠಗಳು ಪೂರ್ಣಗೊಂಡಿಲ್ಲದಿರುವುದರಿಂದ ಎಲ್ಲರನ್ನೂ ಪಾಸು ಮಾಡಿ’ ಎಂದು ಆಗ್ರಹಿಸಿದರು.

‘ಬಿಜೆಪಿಯಲ್ಲಿ ಬೇರೆ ಯಾರೂ ಇಲ್ಲ’

‘ಬಿ.ಎಸ್.ಯಡಿಯೂರಪ್ಪ ಅಂದರೇ ಬಿಜೆಪಿ. ಕರ್ನಾಟಕದಲ್ಲಿ ಬಿಜೆಪಿ ಅಂದರೇ ಬಿ.ಎಸ್.ಯಡಿಯೂರಪ್ಪ. ಯಡಿಯೂರಪ್ಪ ಹೊರತುಪಡಿಸಿದ ಪ್ರಬಲ ನಾಯಕ ಮತ್ತೊಬ್ಬ ಇಲ್ಲದಿರುವುದರಿಂದ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲಾಗಲ್ಲ’ ಎಂದು ವಾಟಾಳ್ ನಾಗರಾಜ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಉಮೇಶ ಕತ್ತಿ, ಮುರುಗೇಶ ನಿರಾಣಿ ಸೇರಿದಂತೆ ಮತ್ತಿತರರು ಯಡಿಯೂರಪ್ಪ ಅವರಿಂದ ಬೆಳೆದವರು. ಬಹುತೇಕ ಶಾಸಕರು, ಸಂಸದರು ಬಿಎಸ್‌ವೈನಿಂದ ಬೆಳೆದವರೇ ಆಗಿದ್ದಾರೆ’ ಎಂದರು.

ಚಾಡಿ ಕೇಳುವ ಯಡಿಯೂರಪ್ಪ: ವಾಟಾಳ್‌ ಲೇವಡಿ

‘ಯಡಿಯೂರಪ್ಪ ಒಳ್ಳೆಯ ಮನುಷ್ಯ. ಆದರೆ ಅವರ ಕಿವಿ ಹಿತ್ತಾಳೆಯಾಗಿದೆ. ಕೆಟ್ಟಿದೆ. ಹೊಗಳಿದರೆ ಉಬ್ಬುತ್ತಾರೆ. ಚಾಡಿ ಕೇಳಲಿಕ್ಕಾಗಿಯೇ ಇಬ್ಬರನ್ನಿಟ್ಟುಕೊಂಡಿದ್ದಾರೆ. ಸೋಮವಾರವಷ್ಟೇ ಮತ್ತೊಬ್ಬ ಚಾಡಿಕೋರನನ್ನು ಸಲಹೆಗಾರನನ್ನಾಗಿ ನೇಮಿಸಿಕೊಂಡಿದ್ದಾರೆ’ ಎಂದು ವಾಟಾಳ್ ನಾಗರಾಜ್ ಲೇವಡಿ ಮಾಡಿದರು.

‘ನನ್ನನ್ನು ಎಂಎಲ್‌ಸಿಯನ್ನಾಗಿ ಮಾಡಿದರೆ ಬಿಜೆಪಿಯ ಶಕ್ತಿ ಹೆಚ್ಚುತ್ತೆ. ಗೌರವ ಹೆಚ್ಚಲಿದೆ’ ಎಂದು ವಾಟಾಳ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಈಶಾನ್ಯ ಪದವೀಧರ ಕ್ಷೇತ್ರ ಅಥವಾ ಬೆಂಗಳೂರು ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಸ್ಪರ್ಧಿಸುವಂತೆ ಒತ್ತಡವಿದೆ. ಎರಡರಲ್ಲಿ ಒಂದು ಕಡೆ ಸ್ಪರ್ಧೆಗಿಳಿಯುವೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.