ಬುಧವಾರ, ಮೇ 18, 2022
23 °C
ಹಿನಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರ ಆಕ್ರೋಶ

ನೀರಿಗಾಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಹಿನಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿ ನಿವಾಸಿಗಳು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.

ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯ (ಕಮ್ಯೂನಿಸ್ಟ್) ನೇತೃತ್ವದಲ್ಲಿ ಸೇರಿದ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.

ಪಂಚಾಯಿತಿ ವ್ಯಾಪ್ತಿಯಲ್ಲಿ 35 ಸಾವಿರಕ್ಕೂ ಹೆಚ್ಚು ಜನ ವಾಸವಿದ್ದಾರೆ. ಇರುವ 28 ಕೊಳವೆಬಾವಿಗಳಲ್ಲಿ 25 ಕೊಳೆವೆಬಾವಿಗಳು ಬತ್ತಿ ಹೋಗಿವೆ. ಇದರಿಂದ ನೀರಿನ ಸಮಸ್ಯೆ ಬಿಗಡಾಯಿಸಿದೆ ಎಂದು ಅವರು ಕಿಡಿಕಾರಿದರು.

ಹಿನಕಲ್‌ಗೆ ಕೂಗಳತೆ ದೂರದಲ್ಲಿರುವ ಇತರ ಬಡಾವಣೆಗಳಿಗೆ ಕಾವೇರಿ ಮತ್ತು ಕಬಿನಿ ನದಿ ಮೂಲದಿಂದ ಕುಡಿಯುವ ನೀರನ್ನು ಸರಬರಾಜಾಗುತ್ತಿದೆ. ಇಲ್ಲಿಗೆ ನೀರನ್ನು ಸರಬರಾಜು ಮಾಡುವ ಕೊಳವೆಗಳು ಹಿನಕಲ್‌ ಮೂಲಕವೇ ಹಾದು ಹೋಗಿವೆ. ಹೀಗಿದ್ದರೂ ನೀರು ಸರಬರಾಜು ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಾಲಿಕೆಯಾಗಲಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವಾಗಲಿ, ಪಂಚಾಯಿತಿಯಾಗಲಿ ಸಮರ್ಪಕವಾಗಿ ಕುಡಿಯುವ ನೀರನ್ನು ಸರಬರಾಜು ಮಾಡುವುದಕ್ಕೆ ಆಸಕ್ತಿ ವಹಿಸಿಲ್ಲ. ಇದರಿಂದ ನಿವಾಸಿಗಳು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ ಎಂದು ಅವರು ಹೇಳಿದರು.

ನೀರು ತರುವುದಕ್ಕೆ ಮಕ್ಕಳು, ಮಹಿಳೆಯರು ಕಿ.ಮೀ. ದೂರ ನಡೆಯಬೇಕಿದೆ. ಗಂಟೆಗಟ್ಟಲೆ ಕಾಯಬೇಕಿದೆ ಎಂದು ಅವರು ಅಳಲು ತೋಡಿಕೊಂಡರು.

ಮುಖಂಡರಾದ ಎಂ.ಉಮಾದೇವಿ, ವಿ.ಯಶೋಧರ್, ಹರೀಶ್, ಎಸ್.ಎಚ್.ಸುನೀಲ್, ಟಿ.ಆರ್.ಸುಮಾ, ಆಕಾಶ್‌ಕುಮಾರ್, ಕಲಾವತಿ, ಅಭಿಲಾಷ್, ಅನಿಲ್, ಪುಟ್ಟರಾಜು, ಮುದ್ದುಕೃಷ್ಣ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.