ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ಜಿಲ್ಲೆಯಲ್ಲಿ ಮತ್ತೆ ವಾರಾಂತ್ಯ ಕರ್ಫ್ಯೂ ಜಾರಿ

ಇಂದು, ನಾಳೆ ಹಲವು ನಿರ್ಬಂಧ; ಮಧ್ಯಾಹ್ನ 2ರ ವರೆಗೆ ಅಗತ್ಯ ವಸ್ತುಗಳ ವಹಿವಾಟಿಗೆ ಅವಕಾಶ
Last Updated 6 ಆಗಸ್ಟ್ 2021, 15:34 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯಲ್ಲಿ ಕೋವಿಡ್‌ ಲಾಕ್‌ಡೌನ್‌ ತೆರವಾಗಿ ಜನಜೀವನ, ವ್ಯಾಪಾರ ವಹಿವಾಟು ಸಹಜ ಸ್ಥಿತಿಗೆ ಮರಳಿದೆ ಎನ್ನುವಷ್ಟರಲ್ಲೇ ಮತ್ತೆ ನಿರ್ಬಂಧದ ಕರಿನೆರಳು ಬಿದ್ದಿದೆ.

ನೆರೆಯ ರಾಜ್ಯಗಳಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವುದರಿಂದ ಗಡಿ ಜಿಲ್ಲೆಗಳಲ್ಲಿ ವಾರಾಂತ್ಯ ಕರ್ಫ್ಯೂ (ಶನಿವಾರ ಮತ್ತು ಭಾನುವಾರ) ಜಾರಿಗೊಳಿಸಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ. ಕೇರಳದ ಜತೆ ಗಡಿ ಹಂಚಿಕೊಂಡಿರುವುದರಿಂದ ಮೈಸೂರಿಗೂ ಅನ್ವಯವಾಗಿದೆ.

ಶುಕ್ರವಾರ ರಾತ್ರಿಯಿಂದಲೇ ಕರ್ಫ್ಯೂ ಜಾರಿಯಾಗಿದ್ದು, ಸೋಮವಾರ ಬೆಳಿಗ್ಗೆ 5ರ ವರೆಗೆ ಮುಂದುವರಿಯಲಿದೆ. ಈ ಅವಧಿಯಲ್ಲಿ ಅಗತ್ಯ ವಸ್ತುಗಳ ವಹಿವಾಟು ಹೊರತುಪಡಿಸಿ, ಇತರ ಎಲ್ಲ ವಾಣಿಜ್ಯ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರಲಾಗಿದೆ.

ಕೋವಿಡ್‌ ಎರಡನೇ ಅಲೆ ಕಡಿಮೆಯಾದ ಬಳಿಕ ಅನ್‌ಲಾಕ್‌ ಪ್ರಕ್ರಿಯೆ ಹಂತಹಂತವಾಗಿ ನಡೆದಿತ್ತು. ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ, ಮೈಸೂರಿನಲ್ಲಿ ಕೊನೆಯದಾಗಿ ಅನ್‌ಲಾಕ್‌ ಪ್ರಕ್ರಿಯೆ ನಡೆದಿತ್ತು. ಇದೀಗ ಹೊಸದಾಗಿ ನಿರ್ಬಂಧ ವಿಧಿಸಿರುವುದು ದಿನಗೂಲಿ ನೌಕರರು, ವ್ಯಾಪಾರಿಗಳನ್ನು ಚಿಂತೆಗೆ ದೂಡಿದೆ.

ಮಧ್ಯಾಹ್ನ 2ರ ವರೆಗೆ ಅವಕಾಶ: ಹಣ್ಣು, ತರಕಾರಿ, ಮೀನು, ಮಾಂಸ, ದಿನಸಿ ಅಂಗಡಿಗಳು, ನ್ಯಾಯಬೆಲೆ ಅಂಗಡಿಗಳು ಸೇರಿದಂತೆ ಅಗತ್ಯ ವಸ್ತುಗಳ ಮಾರಾಟ, ವಹಿವಾಟಿಗೆ ಬೆಳಿಗ್ಗೆ 5 ರಿಂದ ಮಧ್ಯಾಹ್ನ 2ರ ವರೆಗೂ ಅವಕಾಶ ನೀಡಲಾಗಿದೆ. ಬೀದಿ ಬದಿ ವ್ಯಾಪಾರಕ್ಕೂ ಮಧ್ಯಾಹ್ನದವರೆಗೆ ಅನುಮತಿ ಇದೆ.

ಮದ್ಯದ ಅಂಗಡಿಗಳಿಗೆ ಮಧ್ಯಾಹ್ನ 2ರ ವರೆಗೆ ತೆರೆಯಲು ಅನುವು ನೀಡಲಾಗಿದ್ದು, ಪಾರ್ಸೆಲ್‌ ಮಾತ್ರ ಇರಲಿದೆ. ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳು ದಿನವಿಡೀ ಕಾರ್ಯನಿರ್ವಹಿಸಬಹುದಾದರೂ, ಪಾರ್ಸೆಲ್‌ ಹಾಗೂ ಹೋಂ ಡೆಲಿವರಿಗೆ ಮಾತ್ರ ಅನುಮತಿ ನೀಡಲಾಗಿದೆ.

ಮೈಸೂರು ನಗರದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ನಿಧಾನವಾಗಿ ಗರಿಗೆದರುತ್ತಿದ್ದ ಅವಧಿಯಲ್ಲೇ ವಾರಾಂತ್ಯ ಲಾಕ್‌ಡೌನ್‌ ಜಾರಿಯಾಗಿದೆ. ಇದರಿಂದ ಹೋಟೆಲ್‌ ಸೇರಿದಂತೆ ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿರುವ ಉದ್ಯಮಗಳಿಗೆ ನಷ್ಟದ ಭೀತಿ ಆವರಿಸಿದೆ.

ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯಂತೆ ಮದುವೆ ಸಮಾರಂಭಗಳಿಗೆ 100 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ಅಂತ್ಯಸಂಸ್ಕಾರದಲ್ಲಿ 20 ಮಂದಿ ಪಾಲ್ಗೊಳ್ಳಬಹುದು.

ಪ್ರವಾಸಿತಾಣ– ಇಂದು ನಿರ್ಧಾರ: ‘ಮೈಸೂರಿನ ಪ್ರವಾಸಿ ತಾಣಗಳು ತೆರೆದಿರಬೇಕೋ ಅಥವಾ ಮುಚ್ಚಬೇಕೋ ಎಂಬುದರ ಕುರಿತು ಆಗಸ್ಟ್ 7 ರ ಮಧ್ಯಾಹ್ನದ ಒಳಗಡೆ ಸಂಪೂರ್ಣ ವರದಿ ಕೊಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಿ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು’ ಎಂದು ಸಚಿವ ಎಸ್‌.ಟಿ.ಸೋಮಶೇಖರ್‌ ತಿಳಿಸಿದರು.

‘ಲಾಕ್‌ಡೌನ್‌ನಿಂದ ಜನರಿಗೆ ತೊಂದರೆಯಾಗಿದೆ. ಹೀಗಾಗಿ, ಸಂಪೂರ್ಣ ಮುಚ್ಚುವುದು ಕಷ್ಟ. ಜನರಿಗೆ ಮತ್ತು ವ್ಯಾಪಾರಿಗಳಿಗೆ ತೊಂದರೆಯಾಗದಂತೆ ಎಲ್ಲರಿಗೂ ಅನುಕೂಲವಾಗುವ ರೀತಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT