ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟಾಕಿಯಿಂದ ದೂರವಿರುವುದೇ ಕ್ಷೇಮ: ಆಯಿಷ್‌ ನಿರ್ದೇಶಕಿ ಡಾ.ಎಂ.ಪುಷ್ಪಾವತಿ

ದೀಪ ಹಚ್ಚಿ ದೀಪಾವಳಿ ಆಚರಿಸಿ
Last Updated 8 ನವೆಂಬರ್ 2020, 14:22 IST
ಅಕ್ಷರ ಗಾತ್ರ

ಮೈಸೂರು: ದೀಪಾವಳಿಯ ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದೆ. ಕೋವಿಡ್–19 ಸೋಂಕು ಇಳಿಮುಖವಾಗುತ್ತಿರುವುದು ಒಂದೆಡೆ ಜನರಲ್ಲಿ ತುಸು ನೆಮ್ಮದಿ ಮೂಡಿಸಿದೆ. ಮತ್ತೊಂದೆಡೆ ಖರೀದಿಯ ಉತ್ಸಾಹವನ್ನು ಹೆಚ್ಚಿಸಿದೆ.

ಈ ಹೊತ್ತಲ್ಲಿ ಜನ ಜಾಗರೂಕರಾಗಿರುವುದು ಅತ್ಯಂತ ಅವಶ್ಯ ಎನ್ನುತ್ತಾರೆ ಆಯಿಷ್‌ನಿರ್ದೇಶಕರಾದ ಡಾ.ಎಂ.ಪುಷ್ಪಾವತಿ.

‘ದೀಪಗಳನ್ನು ಹಚ್ಚುವ ಮೂಲಕ ದೀಪಾವಳಿಯ ಸಂಭ್ರಮವನ್ನು ಹೆಚ್ಚಿಸಿಕೊಳ್ಳಬೇಕೇ ಹೊರತು, ಪಟಾಕಿ ಸಿಡಿಸಲು ಮುಂದಾಗಬಾರದು’ ಎಂದು ಮನವಿ ಮಾಡಿದರು.

‘ಪಟಾಕಿಸಿಡಿಸುವುದರಿಂದವಾಯು ಮಾಲಿನ್ಯ ಹೆಚ್ಚಳವಾಗಲಿದೆ. ಶಬ್ದಮಾಲಿನ್ಯ ಎಲ್ಲೆ ಮೀರಲಿದೆ. ಇವೆರಡೂ ಮನುಷ್ಯರಿಗೆ ದೀರ್ಘ ಕಾಲದಲ್ಲಿ ಅಪಾಯ ತಂದೊಡ್ಡಬಲ್ಲವು. ಕೋವಿಡ್‌ನಈ ಸಂದಿಗ್ಧ ಸಮಯದಲ್ಲಿ ಅಪಾಯವನ್ನು ಮತ್ತಷ್ಟು ಹೆಚ್ಚಿಸಲಿದೆ. ನಾನಾ ಬಗೆಯ ಅನಾರೋಗ್ಯಕ್ಕೂ ಕಾರಣವಾಗಲಿದೆ’ ಎಂಬ ಆತಂಕ ವ್ಯಕ್ತಪಡಿಸಿದರು.

‘ದೀಪಾವಳಿ ಹಬ್ಬದ ಹೊತ್ತಲ್ಲೇ ‌ಸರ್ಕಾರ ಹಸಿರು ಪಟಾಕಿ ಸಿಡಿಸುವಿಕೆಗೆ ಸಂಬಂಧಿಸಿದಂತೆ ಆದೇಶ ಹೊರಡಿಸಿರುವುದು ಒಳ್ಳೆಯ ಬೆಳವಣಿಗೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಆಯಿಷ್‌ ವತಿಯಿಂದ ವಿಶೇಷ ಅಭಿನಂದನೆ ಸಲ್ಲಿಸುತ್ತೇವೆ’ ಎಂದರು.

ಕನಿಷ್ಠ 4 ಮೀಟರ್ ಅಂತರವಿರಲಿ

‘ಪಟಾಕಿ ಸಿಡಿಯುವ ಸ್ಥಳಕ್ಕೂ, ಹಚ್ಚುವ ವ್ಯಕ್ತಿಯ ನಡುವೆ ಕನಿಷ್ಠ 4 ಮೀಟರ್ ಅಂತರ ಇರಲೇಬೇಕು’ ಎನ್ನುತ್ತಾರೆ ಆಯಿಷ್‌ ಶ್ರವಣ ವಿಜ್ಞಾನ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್‌ ಡಾ.ಕೆ.ಶ್ರೀರಾಜ್‌.

‘ಪಟಾಕಿ ಸಿಡಿದಾಗ ಅದರಿಂದ ಹೊರಹೊಮ್ಮುವ ಶಬ್ದ 125 ಡೆಸಿಬಲ್‌ಗಿಂತ ಹೆಚ್ಚಿರಬಾರದು ಎಂಬ ನಿಯಮವಿದೆ. ಆದರೆ, ಬಹುತೇಕ ಪಟಾಕಿಗಳು 140 ಡೆಸಿಬಲ್ ಶಬ್ದ ಹೊರಹೊಮ್ಮಿಸುತ್ತವೆ. ಇವು ಕಿವಿಗೆ ಅಪಾಯ ತಂದೊಡ್ಡುತ್ತವೆ’ ಎಂಬ ಆತಂಕ ವ್ಯಕ್ತಪಡಿಸಿದರು.

‘ಹೆಚ್ಚು ಶಬ್ದ ಹೊರಹೊಮ್ಮಿಸುವ ಪಟಾಕಿಗಳು ದೇಹದ ಸೂಕ್ಷ್ಮ ಅಂಗವಾದ ಕಿವಿಯೊಳಗಿನ ತಮಟೆ, ಚಿಕ್ಕ ಚಿಕ್ಕ ಮೂಳೆ ಹಾಗೂ ಸೆಲ್ಸ್‌ಗಳಿಗೆ ಹಾನಿಯುಂಟು ಮಾಡಿ ಶಾಶ್ವತವಾಗಿ ಸಂವಹನ ನ್ಯೂನತೆ (ಕಿವುಡುತನ) ಸೃಷ್ಟಿಸಬಲ್ಲವು. ಆದ್ದರಿಂದ ಪಟಾಕಿ ಸಿಡಿಸುವುದರಿಂದ ದೂರ ಇರುವುದೇ ಒಳ್ಳೆಯದು. ಹತ್ತಿರದಿಂದ ಪಟಾಕಿ ಸುಡುವುದು ಅತ್ಯಂತ ಅಪಾಯಕಾರಿ’ ಎಂದು ಹೇಳಿದರು.

ಹಾರನ್ ಬಳಕೆಯೇ ಗೊತ್ತಿಲ್ಲವಾಗಿದೆ...

ವಾಹನಗಳ ಹಾರನ್‌ ಅನ್ನು ಮನಸ್ಸಿಗೆ ತೋಚಿದಂತೆ ಬಳಸುವುದು ಸಹ ಶಬ್ದಮಾಲಿನ್ಯ ಹೆಚ್ಚಲು ಪ್ರಮುಖ ಕಾರಣವಾಗಿದೆ. ಯಾವಾಗ ಹಾರನ್ ಬಳಸಬೇಕು ಎಂಬ ಜಾಗೃತಿಯೇ ವಾಹನ ಚಾಲಕರಿಗೆ ಇಲ್ಲವಾಗಿದೆ ಎಂದು ಡಾ.ಪುಷ್ಪಾವತಿ ಬೇಸರ ವ್ಯಕ್ತಪಡಿಸಿದರು.

ವಿನಾಕಾರಣ ಹಾರ್ನ್‌ಮಾಡಿದರೆ ಹೆಚ್ಚು ಹೊತ್ತು ಸಿಗ್ನಲ್‌ನಲ್ಲೇ ನಿಲ್ಲುವಂತೆಮುಂಬೈನ ಸಂಚಾರ ಪೊಲೀಸರು ನಡೆಸಿದ ಪ್ರಯೋಗ ಎಲ್ಲೆಡೆ ಅನುಷ್ಠಾನಗೊಳ್ಳಬೇಕು. ಆಗ ಶಬ್ದಮಾಲಿನ್ಯಕ್ಕೂ ಕಡಿವಾಣ ಹಾಕಬಹುದು. ಜನರ ಕಿವಿಗಳಿಗೂ ಸುರಕ್ಷತೆ ಒದಗಿಸಬಹುದು ಎಂದರು.

ಬೆರಳೆಣಿಕೆಯ ಯುವ ಸಮೂಹ ತಮ್ಮ ಮೋಜಿಗಾಗಿ ಕರ್ಕಶ ಧ್ವನಿ ಹೊರಹಾಕುವ ಹಾರನ್ ಬಳಸುತ್ತಾರೆ. ವಾಹನದ ಸೈಲೆನ್ಸರ್‌ ಬದಲಿಸಿ, ಜೋರಾಗಿ ಶಬ್ದ ಮಾಡುತ್ತಾ ಬೈಕ್ ಓಡಿಸುತ್ತಾರೆ. ಇದು ತಪ್ಪು. ಪ್ರತಿಯೊಂದಕ್ಕೂ ನಿಯಮವಿದೆ. ಅದನ್ನು ಪಾಲಿಸಲೇಬೇಕು. ಮರಗಳು ಹೆಚ್ಚಿದ್ದಷ್ಟು ಶಬ್ದಮಾಲಿನ್ಯ ತಗ್ಗಲಿದೆ ಎನ್ನುತ್ತಾರೆ ಡಾ.ಕೆ.ಶ್ರೀರಾಜ್‌.

ಕಿವಿ ರಕ್ಷಣೆಗೂ ಒತ್ತು ಕೊಡಿ...

ಕಿವಿ ನೋಯುತ್ತಿದೆ, ಕಿವಿಯೊಳಗೆ ಇರುವೆಯೋ, ಯಾವುದೋ ಹುಳು ಸೇರಿಕೊಂಡು ಓಡಾಡಿದಂತಾಗುತ್ತದೆ ಎಂದು ತಾವೇ ಸ್ವಯಂ ವೈದ್ಯರಾಗಿ, ಕೊಬ್ಬರಿ ಎಣ್ಣೆ ಬಿಸಿ ಮಾಡಿಕೊಂಡು ಹಾಕಿಕೊಳ್ಳುವುದು, ಉಗುರು ಬೆಚ್ಚಗಿನ ನೀರಿಗೆ ಉಪ್ಪನ್ನು ಸೇರಿಸಿ ಕಿವಿಯೊಳಗೆ ಹಾಕಿಕೊಳ್ಳುವುದನ್ನು ಎಂದೆಂದೂ ಮಾಡಬಾರದು. ಇದು ಸರಿಪಡಿಸಲಾಗದ ತಪ್ಪನ್ನು ಮಾಡಿಕೊಂಡಂತೆ ಎಂದು ಡಾ.ಪುಷ್ಪಾವತಿಎಚ್ಚರಿಸಿದರು.

ಶೀತವಾದಾಗ ಕಿವಿಗೆ ಬೆಳ್ಳುಳ್ಳಿಯನ್ನು ಹಿಚುಕಿ ಇಟ್ಟುಕೊಳ್ಳುವ ಪದ್ಧತಿ ಕೆಲವರಲ್ಲಿದೆ. ಇದು ಅತ್ಯಂತ ಅಪಾಯಕಾರಿಯಾದುದು. ಬೆಳ್ಳುಳ್ಳಿಯನ್ನು ತಿನ್ನಿ. ಆದರೆ ಕಿವಿಗಿಟ್ಟುಕೊಳ್ಳಬೇಡಿ. ಅದರಲ್ಲಿನ ತೇವಾಂಶ ಕಿವಿಯ ತಮಟೆಗೆ ಅಪಾಯತಂದೊಡ್ಡುತ್ತದೆಎಂದು ಪ್ರೊ.ಅನಿಮೇಶ್‌ ಹೇಳಿದರು.

ಹಲವು ದಿನಗಳಿಗೊಮ್ಮೆ ಕಿವಿಯೊಳಗಿನ ಗುಗ್ಗೆಯನ್ನು ತೆಗೆಯುವುದು ಕೆಲವರಿಗೆ ಅಭ್ಯಾಸವಾಗಿದೆ. ಇದು ತಪ್ಪು. ಕಿವಿಯನ್ನು ಯಾವೊಂದು ಪದಾರ್ಥದಿಂದಲೂ ಸ್ವಚ್ಛಗೊಳಿಸಬೇಕಿಲ್ಲ. ಬಡ್ಸ್‌, ಗುಗ್ಗೆಕಡ್ಡಿಯನ್ನು ಕಿವಿಯೊಳಗೆ ಹಾಕಬಾರದು. ಗುಗ್ಗೆಯನ್ನು ಕಿವಿಯೇ ಸ್ವಯಂ ಹೊರಹಾಕುತ್ತದೆ. ನಾವು ಅದನ್ನು ತೆಗೆಯಲು ಯತ್ನಿಸಿದರೆ ತಮಟೆಯ ಕಡೆ ಜಾರಿ ಒಳಗೆ ತುಂಬಿಕೊಳ್ಳುತ್ತದೆ. ಹಲವು ಬಾಧೆಯನ್ನುತಂದೊಡ್ಡಲಿದೆಎಂದರು.

ಶ್ರವಣ ಉಪಕರಣ: ಖರೀದಿ–ಬಳಕೆಯಲ್ಲಿ ಎಚ್ಚರವಿರಲಿ

ಶ್ರವಣ ಉಪಕರಣವನ್ನು ಬಳಸಲೇಬೇಕು ಎನ್ನುವವರು ಖರೀದಿಸುವಾಗಲೂ, ಉಪಕರಣದ ಬಳಕೆ ಆರಂಭಿಸುವಾಗಲೂ ಎಚ್ಚರಿಕೆ ವಹಿಸಬೇಕು ಎನ್ನುತ್ತಾರೆ ಡಾ.ಎಂ.ಪುಷ್ಪಾವತಿ.

ಶ್ರವಣ ಉಪಕರಣ ಬಳಸುವುದು ಏತಕ್ಕಾಗಿ? ನರ ದೋಷವಾ? ಮತ್ತೇನಾದರೂ ಸಮಸ್ಯೆಯಿದೆಯಾ? ಎಷ್ಟು ದೂರದ ಮಾತು ಕೇಳಲ್ಲ? ಹಿಂದಿನದ್ದು ಕೇಳಲ್ವಾ? ಮುಂದಿನದ್ದು ಕೇಳಲ್ವಾ...?. ಎಂಬುದು ಸೇರಿದಂತೆ ವಿವಿಧ ಮಾನದಂಡದಡಿ ಶ್ರವಣ ಉಪಕರಣ ಬಳಕೆಗೆ ಶ್ರವಣ ತಜ್ಞರು ಸಲಹೆ ನೀಡುತ್ತಾರೆ. ಇದರನ್ವಯವೇ ಉಪಕರಣ ಖರೀದಿಸಿ, ಬಳಸಬೇಕು ಎಂದುಸಲಹೆ ನೀಡಿದರು.‌

ಉಪಕರಣ ಖರೀದಿಸುವಾಗ ಎಚ್ಚರಿಕೆಯಿರಬೇಕು. ಖಾಸಗಿ ಅಂಗಡಿ, ಸಂಸ್ಥೆಗಳಲ್ಲಿ ಮಾರಾಟ ಬೆಲೆಗೆ ಕೊಡುತ್ತಾರೆ. ನಮ್ಮ ಸಂಸ್ಥೆಯ ಶ್ರವಣ ವಿಜ್ಞಾನ ವಿಭಾಗ ಇದಕ್ಕಾಗಿ ಜನೌಷಧಿ ಮಳಿಗೆ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಮಾರುಕಟ್ಟೆ ಬೆಲೆಗಿಂತ ಅರ್ಧ ಬೆಲೆಗೆ ಕೊಡುತ್ತಿದೆ. ಉತ್ಪಾದನಾ ವೆಚ್ಚವನ್ನಷ್ಟೇ ಜನರಿಂದ ಪಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ಸಂಸದರು, ಶಾಸಕರು ಸಹ ನಮ್ಮ ಗ್ರಾಹಕರೇ ಆಗಿದ್ದಾರೆ. ನಮ್ಮಲ್ಲಿನ ಬೆಲೆ ಕೇಳಿ ಹೊರಗೆ ದುಪ್ಪಟ್ಟು ಕೊಟ್ಟೆವಲ್ಲಾ ಎಂದು ಹೇಳಿದವರು ಇದ್ದಾರೆ. ನಮ್ಮಲ್ಲಿ ಮಧ್ಯವರ್ತಿಗಳಿಗೆ ಅವಕಾಶವೇ ಇಲ್ಲ ಎಂದು ಹೇಳಿದರು.

ಬಡವರಿಗೆ ಇಲ್ಲ ಎಂದಿಲ್ಲ...

ಶ್ರವಣ ಉಪಕರಣವೊಂದರ ಬೆಲೆ ಮುಕ್ತ ಮಾರುಕಟ್ಟೆಯಲ್ಲಿ ₹ 3 ಲಕ್ಷದ ಆಸುಪಾಸಿದ್ದರೆ, ನಮ್ಮಲ್ಲಿ ₹ 1.25 ಲಕ್ಷದಿಂದ ₹ 1.50 ಲಕ್ಷ ಆಗಲಿದೆ.

ಬಡವರ ಮಕ್ಕಳಿಗೆ ಸಂಸ್ಥೆಯೇ ಉಚಿತವಾಗಿ ಉಪಕರಣ ನೀಡುತ್ತಿದೆ. ವಾರ್ಷಿಕ ಬಜೆಟ್‌ನಲ್ಲಿ ಇದಕ್ಕಾಗಿಯೇ ಅನುದಾನ ಮೀಸಲಿಟ್ಟಿದೆ ಎನ್ನುತ್ತಾರೆ ಡಾ.ಎಂ.ಪುಷ್ಪಾವತಿ.

ಆಯಿಷ್‌ನಲ್ಲಿರುವ ಕ್ಲೈಂಟ್‌ ವೆಲ್‌ಫೇರ್‌ ಫಂಡ್‌ ಹಾಗೂ ಕೇಂದ್ರ ಸರ್ಕಾರದ ಎಡಿಐಬಿ ಯೋಜನೆಯಡಿಯೂ ಶ್ರವಣ ಉಪಕರಣ ಕೊಡುತ್ತೇವೆ. ಖರೀದಿ ಸಾಮರ್ಥ್ಯವಿಲ್ಲದ ಬಡವರನ್ನು ಎಂದೂ ಬರಿಗೈಲಿ ಕಳುಹಿಸಿಲ್ಲ. ಯಾವುದಾದರೂ ಯೋಜನೆಯಡಿ ಅವರಿಗೆ ಶ್ರವಣ ಉಪಕರಣ ಒದಗಿಸಿದ್ದೇವೆ. ತಪಾಸಣಾ ವೆಚ್ಚವೂ ನಮ್ಮಲ್ಲಿ ತುಂಬಾ ಕಡಿಮೆಯಿದೆ ಎಂದು ಮಾಹಿತಿ ನೀಡಿದರು.

ಕಾಕ್ಲಿಯರ್‌ ಇಂಪ್ಲಾಂಟ್‌ಗೆ ಸಹಾಯಧನ

‘ಶೇ 70ಕ್ಕಿಂತ ಹೆಚ್ಚಿನ ಕಿವುಡುತನದ ಸಮಸ್ಯೆ ಇರುವವರಿಗೆ ಕಾಕ್ಲಿಯರ್‌ ಇಂಪ್ಲಾಂಟ್‌ ಮಾಡಲಾಗುತ್ತದೆ. ಇದಕ್ಕೆ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ. ಕೇಂದ್ರ ಸರ್ಕಾರದಿಂದ ಸಹಾಯಧನವೂ ಸಿಗುತ್ತದೆ. ಆಯಿಷ್‌ನಲ್ಲಿ ಶ್ರವಣದೋಷ ಇರುವವರನ್ನು ಪರೀಕ್ಷಿಸಿ ವರದಿ ಸಿದ್ಧಪಡಿಸುತ್ತೇವೆ. ಇದನ್ನು ಮುಂಬೈನ ಎವೈಜೆಎನ್‌ಐಎಸ್‌ಎಚ್‌ಡಿ ಸಂಸ್ಥೆಗೆ ಕಳುಹಿಸಿ ಕೊಡುತ್ತೇವೆ. ಅಲ್ಲಿಂದ ಅನುಮೋದನೆಯಾದ ಬಳಿಕ, ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬಹುದು. ಐದು ವರ್ಷದೊಳಗಿನ ಶ್ರವಣದೋಷವುಳ್ಳ ಇರುವ ಮಕ್ಕಳಿಗೆ ಕಾಕ್ಲಿಯರ್‌ ಇಂಪ್ಲಾಂಟ್‌ ಮಾಡಿಸಬಹುದು’ ಎಂದು ಡಾ.ಅನಿಮೇಶ್‌ ಬರ್ಮನ್‌ ತಿಳಿಸಿದರು.

ರಕ್ತಸಂಬಂಧಿಗಳಲ್ಲಿ ಕಿವಿ ಸಮಸ್ಯೆ ಹೆಚ್ಚು

ರಕ್ತ ಸಂಬಂಧಿ ಮದುವೆಯಾಗಿ, ಅವರಿಗೆ ಜನಿಸುವ ಮಕ್ಕಳಿಗೆ ಕಿವಿ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಹೀಗೆ ಜನಿಸುವ 4 ಮಕ್ಕಳಲ್ಲಿ ಒಬ್ಬರಿಗೆ ಕಿವಿ ಸಮಸ್ಯೆ ಕಾಣಿಸಿಕೊಳ್ಳಬಹುದು ಎಂದು ಡಾ.ಅನಿಮೇಶ್‌ ಹೇಳಿದರು.

ವಿಳಾಸ

ಅಖಿಲ ಭಾರತ ವಾಕ್-ಶ್ರವಣ ಸಂಸ್ಥೆ

ಮಾನಸಗಂಗೋತ್ರಿ, ಮೈಸೂರು–06

0821–2502000/2502100

aiishmysore.in

director@aiishmysore.in

ಕೆಲಸದ ವೇಳೆ

ಸೋಮವಾರದಿಂದ ಶುಕ್ರವಾರ

(ಶನಿವಾರ, ಭಾನುವಾರ, ಕೇಂದ್ರ ಸರ್ಕಾರದ ರಜೆ ದಿನಗಳನ್ನು ಹೊರತುಪಡಿಸಿ)

ಬೆಳಿಗ್ಗೆ 9ರಿಂದ ಸಂಜೆ 5.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT