ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

33 ಸಾವಿರ ಆಕ್ಸಿಜನ್ ಹಾಸಿಗೆ ವ್ಯವಸ್ಥೆ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

ಕೋವಿಡ್‌–19 ಸಭೆ: ಹಿರಿಯ ನಾಗರಿಕರ ಆರೋಗ್ಯದ ಮೇಲೆ ನಿಗಾ ಇಡಲು ಸಚಿವ ಸೂಚನೆ‌
Last Updated 6 ಅಕ್ಟೋಬರ್ 2020, 2:09 IST
ಅಕ್ಷರ ಗಾತ್ರ

ಮೈಸೂರು: ‘ಕೋವಿಡ್‌–19ನಿರ್ವಹಣೆ ಗಾಗಿರಾಜ್ಯದಾದ್ಯಂತ 33 ಸಾವಿರ ಆಕ್ಸಿಜನ್ ಹಾಸಿಗೆಗಳ ವ್ಯವಸ್ಥೆ ಮಾಡಲಾಗುತ್ತದೆ. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಆಕ್ಸಿಜನ್ ಹಾಸಿಗೆ ಲಭ್ಯವಿರಲಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಮೈಸೂರು ಜಿಲ್ಲಾ ಕೋವಿಡ್‌ ಪರಿಸ್ಥಿತಿಯ ಪರಿಶೀಲನಾ ಸಭೆ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ವೆಂಟಿಲೇಟರ್ ಇಲ್ಲದ ಕಾರಣ ಸಾವಿನ ಪ್ರಮಾಣವೇನು ಹೆಚ್ಚಳವಾಗಿಲ್ಲ. ಆದರೆ, ಆಕ್ಸಿಜನ್ ಹಾಸಿಗೆಗಳ ಕೊರತೆಯಿಂದ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಈ ಕೊರತೆಯನ್ನು ಈಗ ನೀಗಿಸಲಾಗುತ್ತಿದೆ’ ಎಂದರು.

ಸಾಮಾನ್ಯವಾಗಿ 65 ವರ್ಷ ಮೇಲಿನವರು ಖುದ್ದಾಗಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳುವ ಅಗತ್ಯವಿದೆ. ನಾನಾ ರೋಗಗಳಿಂದ ಬಳಲುತ್ತಿರುವ 96 ಸಾವಿರ ಹಿರಿಯ ನಾಗರಿಕರ ಪರೀಕ್ಷೆ ನಡೆಸಿ ಅವರನ್ನು ಕ್ವಾರಂಟೈನ್‌ ಮಾಡಿ ನಿಗಾ ಇಡಬೇಕು ಎಂದು ಸೂಚನೆ ನೀಡಿದರು.

‘ಮೈಸೂರಿನಲ್ಲಿ ಆರಂಭದಲ್ಲಿ ಕೋವಿಡ್‌ ನಿಯಂತ್ರಣದಲ್ಲಿತ್ತು, ಇಡೀ ರಾಜ್ಯಕ್ಕೆ ಮಾದರಿಯಾಗಿತ್ತು. ಈಗ ಸಾವಿನ ಪ್ರಮಾಣ ಹೆಚ್ಚಿದೆ. ರಾಜ್ಯದ ಪ್ರಮಾಣ ಶೇ 1.5, ರಾಷ್ಟ್ರದ ಪ್ರಮಾಣ ಶೇ 1.6, ಜಾಗತಿಕ ಪ್ರಮಾಣ ಶೇ 3.5 ಇದ್ದರೆ ಮೈಸೂರು ಜಿಲ್ಲೆಯ ಪ್ರಮಾಣ ಶೇ 1.9ರಷ್ಟಿದೆ. ಕಳೆದ ಒಂದು ವಾರದಲ್ಲಿ ಆ ಪ್ರಮಾಣ ಶೇ 3.9ಕ್ಕೇರಿದೆ. ಸೋಂಕಿನ ಪ್ರಮಾಣ ಶೇ 10ರಷ್ಟಿದೆ. ಪರೀಕ್ಷೆಗೆ ನಿಗದಿಪಡಿಸಿದ ಗುರಿಯನ್ನೂ ತಲುಪಿಲ್ಲ. ಸದ್ಯ ಶೇ 65ರಷ್ಟಿದೆ. ಹೀಗಾಗಿ, ತುರ್ತಾಗಿ ಬಂದು ಸಭೆ ನಡೆಸಿದ್ದೇನೆ’ ಎಂದರು.

ಖಾಸಗಿ ಆಸ್ಪತ್ರೆಗಳಲ್ಲಿ ಶೇ 50ರಷ್ಟು ಹಾಸಿಗೆಗಳನ್ನು ಜಿಲ್ಲಾಡಳಿತದ ವಶಕ್ಕೆ ಪಡೆದು ಪಾರದರ್ಶಕವಾಗಿ ಹಂಚಿಕೆ ಮಾಡಬೇಕು. ಖಾಸಗಿ ಆಸ್ಪತ್ರೆಗಳು ಸಹಕರಿಸದಿದ್ದರೆ ಕಾನೂನಿನ ಮೂಲಕ ನಿಯಂತ್ರಣ ಮಾಡಲೇಬೇಕು. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಎಲ್ಲಾ ಆಸ್ಪತ್ರೆಗಳ ಆಡಳಿತ ಮಂಡಳಿ ಸಭೆ ನಡೆಸಬೇಕು. ಹೆಚ್ಚುವರಿ ಶುಲ್ಕದ ದೂರುಗಳು ಬರಬಾರದು ಎಂದು ತಾಕೀತು ಮಾಡಿದರು.

ಮಾಸ್ಕ್‌ ಧರಿಸದವರಿಗೆ ದಂಡ ಏರಿಕೆ ಮಾಡಿರುವ ಕುರಿತು, ‘ಹಣ ವಸೂಲಿಗಾಗಿ ಈ ಕ್ರಮ ಕೈಗೊಂಡಿಲ್ಲ. ಬದಲಾಗಿ ಕೋವಿಡ್‌ ನಿಯಂತ್ರಣಕ್ಕೆ ತರಲು ಸಹಾಯವಾಗುತ್ತದೆ ಎಂಬ ಕಾರಣಕ್ಕೆ ದಂಡ ಹೆಚ್ಚಿಸಲಾಗಿದೆ. ಜೊತೆಗೆ ಜಾಗೃತಿ ಕೂಡ ಮೂಡಿಸಬಹುದು’ ಎಂದರು.

ಶಾಸಕ ಎಲ್‌.ನಾಗೇಂದ್ರ, ವಿಧಾನ ಪರಿಷತ್‌ ಸದಸ್ಯರಾದ ಎಚ್‌.ವಿಶ್ವನಾಥ್‌, ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪರಿಮಳಾ ಶ್ಯಾಮ್‌, ಜಿಲ್ಲಾಧಿ ಕಾರಿ ರೋಹಿಣಿ ಸಿಂಧೂರಿ, ಜಿಲ್ಲಾ ಪಂಚಾಯಿತಿ ಸಿಇಒ ಡಿ.ಭಾರತಿ, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಇದ್ದರು.

2 ವಾರ ಕಾಲಾವಕಾಶ ಕೊಡಿ: ಡಿ.ಸಿ

ಜಿಲ್ಲೆಯಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಎರಡು ವಾರಗಳ ಕಾಲಾವಕಾಶ ಕೊಡಿ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕೋರಿದರು.

ಮೈಸೂರು ನಗರದ ಎಲ್ಲಾ ಮಾರುಕಟ್ಟೆಯ ವ್ಯಾಪಾರಸ್ಥರಿಗೆ ಪ್ರತಿ 15 ದಿನಗಳಿಗೊಮ್ಮೆ ಕೋವಿಡ್ ಪರೀಕ್ಷೆ ನಡೆಸಲು ಕ್ರಮ ಜರುಗಿಸಲಾಗಿದೆ ಎಂದರು.

ಈ ಕುರಿತು ಪ್ರತಿಕ್ರಿಯಿಸಿದ ಸಚಿವರು, ‘ಜಿಲ್ಲಾಧಿಕಾರಿ ವಿಶ್ವಾಸದಿಂದ 2 ವಾರ ಕಾಲಾವಕಾಶ ಕೇಳಿದ್ದಾರೆ, ನಾವು ಕೊಟ್ಟಿ ದ್ದೇವೆ. ಅವರ ಈ ಶ್ರಮಕ್ಕೆ ಎಲ್ಲರೂ ನೆರವು ನೀಡಬೇಕು’ ಎಂದು ಮನವಿ ಮಾಡಿದರು.

ಸಚಿವರ ಪ್ರಮುಖ ಸಲಹೆ, ಸೂಚನೆ

-ನಗರ ಹಾಗೂ ಗ್ರಾಮಾಂತರದಲ್ಲಿ ಬೂಟ್‌ ಮಟ್ಟದಲ್ಲಿ ಕಾರ್ಯಪಡೆ ಚುರುಕುಗೊಳಿಸಿ, ಸೋಂಕಿತರ ಪ್ರಮಾಣ ಹೆಚ್ಚಲು ಕಾರಣವಾದ ಅಂಶ ಪತ್ತೆ ಹಚ್ಚಿ.

-ಹೋಂ ಐಸೊಲೇಷನ್‌ನಲ್ಲಿರುವ ರೋಗಿಗಳಿಗೆ ನೀಡಿರುವ ಚಿಕಿತ್ಸೆ ಮತ್ತು ಸಾವಿನ ಪ್ರಮಾಣ ಸರಿಯಾಗಿ ದಾಖಲಾಗುತ್ತಿಲ್ಲ. ಈಚೆಗೆ ಮನೆಯಲ್ಲೇ 11 ಸಾವು ಸಂಭವಿಸಿರುವುದು ಆತಂಕಕಾರಿ. ಟೆಲಿ ಮೆಡಿಸಿನ್‌ ವ್ಯವಸ್ಥೆ ಸರಿಯಾಗಿ ಬಳಕೆ ಆಗುತ್ತಿಲ್ಲ.

-ಕೋವಿಡ್‌ ಆಸ್ಪತ್ರೆಗೆ 68 ಸ್ಥಾನಿಕ ವೈದ್ಯರು ಇದ್ದರೂ ಸರಿಯಾಗಿ ಚಿಕಿತ್ಸೆದೊರೆಯುತ್ತಿಲ್ಲ.

-ಮಾರುಕಟ್ಟೆ, ಜನಸಂದಣಿ ಪ್ರದೇಶದಲ್ಲಿ ಸೋಂಕಿತರ ಪತ್ತೆ ಚುರುಕು ಪಡೆಯಬೇಕು. ಸಾವಿನ ಆಡಿಟ್ ಬೇಗನೇ ಪೂರ್ಣಗೊಳಿಸಿ.

- ಕೋವಿಡ್‌ ಮುಕ್ತ ಗ್ರಾಮ, ಕೋವಿಡ್‌ ರಹಿತ ವಾರ್ಡ್‌ ಮಾಡಲು ಕ್ರಿಯಾಯೋಜನೆ ರೂಪಿಸಬೇಕು.

-ಔಷಧ ಅಂಗಡಿಗಳಲ್ಲಿ ಐಎಲ್‌ಐ ರೋಗಕ್ಕೆ ಔಷಧ ಖರೀದಿಸುವವರಮೇಲೆ ನಿಗಾ ಇಡಬೇಕು

-ಜಿಲ್ಲೆಯ ಪ್ರತಿಯೊಬ್ಬ ಅಧಿಕಾರಿ ಕೋವಿಡ್ ನಿಯಂತ್ರಿಸುವ ಕೆಲಸಕ್ಕೆಮೊದಲ ಆದ್ಯತೆ ನೀಡಬೇಕು. ನಂತರ ಇತರೆ ಕೆಲಸಗಳಲ್ಲಿ ನಿರತರಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT