ಮಂಗಳವಾರ, ಜನವರಿ 28, 2020
23 °C
ಸಿಎಎ ಪರ ಬೆಂಬಲ ಗಿಟ್ಟಿಸಲು ಸೆಕ್ಸ್‌ ಆಮಿಷ

ಬಿಜೆಪಿಯಿಂದ ಕೀಳುಮಟ್ಟದ ಅಭಿಯಾನ: ಯತೀಂದ್ರ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಪರ ಜನಬೆಂಬಲ ಗಿಟ್ಟಿಸಲು ಬಿಜೆಪಿಯು ಜನರಿಗೆ ವಿವಿಧ ಆಮಿಷಗಳನ್ನು ಒಡ್ಡುತ್ತಿದೆ. ಆ ಪಕ್ಷದ ಸಂಸ್ಕೃತಿ ಕೀಳುಮಟ್ಟಕ್ಕೆ ಇಳಿದಿದೆ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಟೀಕಿಸಿದರು.

ಸಿಎಎಗೆ ಜನಬೆಂಬಲ ಗಿಟ್ಟಿಸಲು ಬಿಜೆಪಿ ಮಿಸ್ಡ್‌ಕಾಲ್‌ ಆಭಿಯಾನ ಆರಂಭಿಸಿದೆ. ಆದರೆ ನಿರೀಕ್ಷಿತ ಬೆಂಬಲ ದೊರೆಯದ ಕಾರಣ ಸೆಕ್ಸ್‌ ಚಾಟ್, ಸೆಕ್ಸ್, ಉದ್ಯೋಗದ ಆಮಿಷವೊಡುತ್ತಿದೆ. ಸಿಎಎ ಪರ ಅಭಿಯಾನ ಅಡ್ಡದಾರಿ ಹಿಡಿದಿರುವುದು ದುರಂತ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.

ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ಅವರು ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಸಿಎಎ ವಿರುದ್ಧ ಪ್ರತಿಭಟನೆ ಮಾಡುವವರಿಗೆ ದೇಶದ್ರೋಹಿಗಳು ಎಂಬ ಪಟ್ಟಕಟ್ಟುತ್ತಿದ್ದಾರೆ. ಬಿಜೆಪಿ ನಾಯಕರು ಅಲ್ಪಸಂಖ್ಯಾತರನ್ನು ಈ ರೀತಿ ಬೆದರಿಸುತ್ತಿರುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.

ಜೆಎನ್‌ಯು ದಾಂದಲೆ ಖಂಡನೀಯ

ನವದೆಹಲಿಯ ಜವಾಹರಲಾಲ್‌ ನೆಹರು ವಿ.ವಿಯಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದಿರುವ ದಾಳಿ ಖಂಡನೀಯ. ಮುಸುಕುಧಾರಿಗಳು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ ನಡೆಸಿದ್ದಾರೆ. ಪೊಲೀಸರು ಮತ್ತು ಸರ್ಕಾರದ ಕುಮ್ಮಕ್ಕಿನಿಂದ ಈ ದಾಳಿ ನಡೆದಿದೆ ಎಂದು ಆರೋಪಿಸಿದರು.

ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿ, ಬಿಜೆಪಿಯ ಮಿಸ್ಡ್‌ಕಾಲ್‌ ಅಭಿಯಾನಕ್ಕೆ ನಿರೀಕ್ಷಿತ ಬೆಂಬಲ ಲಭಿಸಿಲ್ಲ. ಆದ್ದರಿಂದ ಜನ ಬೆಂಬಲ ಗಿಟ್ಟಿಸಲು ಅಡ್ಡದಾರಿ ಹಿಡಿದೆ. ನಟಿಯರು, ಹುಡುಗಿಯರ ಫೋಟೊ ಬಳಸಿ ಟ್ವಿಟರ್‌ನಲ್ಲಿ 3 ಸಾವಿರಕ್ಕೂ ಅಧಿಕ ನಕಲಿ ಖಾತೆಗಳನ್ನು ಸೃಷ್ಟಿಸಿದೆ ಎಂದರು.

ಸೆಕ್ಸ್‌ ಚಾಟ್‌ ಬಯಸುವುದಾದರೆ ಕರೆಮಾಡಿ, ಉದ್ಯೋಗ ಬೇಕಾದರೆ ಕರೆಮಾಡಿ, ಈ ನಂಬರ್‌ಗೆ ಕರೆ ಮಾಡಿದರೆ ಆರು ತಿಂಗಳು ನೆಟ್‌ಫ್ಲಿಕ್ಸ್‌ ಉಚಿತ... ಮುಂತಾದ ಆಮಿಷಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಒಡ್ಡಲಾಗಿದೆ. ಈ ಪ್ರಚೋದನಕಾರಿ ಬರಹಗಳ ಕೆಳಗೆ ಟೋಲ್‌ಫ್ರೀಸಂಖ್ಯೆಯನ್ನು ನೀಡಲಾಗಿದೆ. ಆ ಸಂಖ್ಯೆಗೆ ಕರೆಮಾಡಿದರೆ ಸಿಎಎಗೆ ಬೆಂಬಲಿಸಿದಂತೆ ಆಗುತ್ತದೆ ಎಂದು ತಿಳಿಸಿದರು.

ಬಿಜೆಪಿಯ ಈ ಕೀಳುಮಟ್ಟದ ಅಭಿಯಾನದ ವಿರುದ್ಧ ಎಐಸಿಸಿ ಮತ್ತು ಕೆಪಿಸಿಸಿ ವತಿಯಿಂದ ಈಗಾಗಲೇ ಸೈಬರ್‌ ಕ್ರೈಂ ವಿಭಾಗಕ್ಕೆ ದೂರು ಕೊಡಲಾಗಿದೆ. ಮೈಸೂರು ಜಿಲ್ಲಾ ಕಾಂಗ್ರೆಸ್‌ ವತಿಯಿಂದಲೂ ದೂರು ಸಲ್ಲಿಸಲಾಗುವುದು ಎಂದರು.

ಜ.8ರ ಮುಷ್ಕರಕ್ಕೆ ಬೆಂಬಲ

ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರೋಧಿಸಿ ಕಾರ್ಮಿಕ ಸಂಘಟನೆಗಳು ಜ.8 ರಂದು ದೇಶದಾದ್ಯಂತ ಮುಷ್ಕರಕ್ಕೆ ಕರೆ ನೀಡಿವೆ. ಕಾಂಗ್ರೆಸ್‌ ಕೂಡಾ ಮುಷ್ಕರಕ್ಕೆ ಬೆಂಬಲ ನೀಡಲಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜೆ.ವಿಜಯಕುಮಾರ್‌ ತಿಳಿಸಿದರು.

ಕೆಪಿಸಿಸಿ ವಕ್ತಾರರಾದ ಮಂಜುಳಾ ಮಾನಸ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಆರ್‌.ಮೂರ್ತಿ, ಜಿಲ್ಲಾ ಘಟಕದ ಪದಾಧಿಕಾರಿಗಳಾದ ಪ್ರಕಾಶ್‌ ಕುಮಾರ್‌, ಮಂಜುನಾಥ್‌ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು