ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಪೀಳಿಗೆ ಕನ್ನಡತನ ಅಳವಡಿಸಲಿ: ಸಚಿವ ಎಸ್‌.ಟಿ.ಸೋಮಶೇಖರ್

ಕರ್ನಾಟಕ ರಾಜ್ಯೋತ್ಸವ ಸಂದೇಶದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಕರೆ
Last Updated 2 ನವೆಂಬರ್ 2020, 1:30 IST
ಅಕ್ಷರ ಗಾತ್ರ

ಮೈಸೂರು: ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಯುವ ಪೀಳಿಗೆ ಪಾಲುದಾರರಾಗಬೇಕು. ತಮ್ಮ ಶೈಕ್ಷಣಿಕ ಅಧ್ಯಯನದ ಜತೆಗೆ ಕನ್ನಡ ಸಾಹಿತ್ಯ, ಸಂಸ್ಕೃತಿಯ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಕರೆ ನೀಡಿದರು.

ಜಿಲ್ಲಾಡಳಿತದ ವತಿಯಿಂದ ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಎದುರು ಭಾನು ವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜ ಮತ್ತು ಕನ್ನಡ ಧ್ವಜಾರೋಹಣದ ಬಳಿಕ ಅವರು ಮಾತನಾಡಿದರು.

ಇಂದಿನ ಯುವ ಸಮೂಹವು ನಮ್ಮ ಪರಂಪರೆಯ ವಾರಸುದಾರರಾಗಿ, ಕನ್ನಡತನವನ್ನು ಬದುಕಿನಲ್ಲಿ ಅಳ ವಡಿಸಿಕೊಳ್ಳಬೇಕು. ಹಾಗಾದಲ್ಲಿ ಕನ್ನಡದ ಉಳಿವು ಸಾಧ್ಯ ಎಂದು ಅಭಿಪ್ರಾಯಪಟ್ಟರು.

‘ಮೈಸೂರು ಜಿಲ್ಲೆಯನ್ನು ಕೋವಿಡ್‌ಮುಕ್ತವನ್ನಾಗಿಸುವುದು ನಮ್ಮ ಗುರಿ. ಕೋವಿಡ್‌ ಮಾರ್ಗಸೂಚಿಯನ್ನು ಉಲ್ಲಂಘಿಸದೆ ದಸರಾ ಉತ್ಸವವನ್ನು ಯಶಸ್ವಿಯಾಗಿ ಆಯೋಜಿಸಿದ್ದೇವೆ. ಜನರ ಸಹಕಾರ ಇದೇ ರೀತಿ ಮುಂದುವರಿದರೆ ಮೈಸೂರು ಜಿಲ್ಲೆಯನ್ನು ಕೋವಿಡ್‌ ಮುಕ್ತವನ್ನಾಗಿಸುವುದು ಕಷ್ಟವಾಗದು’ ಎಂದು ಹೇಳಿದರು.

‘ರಾಜ್ಯದ ಜನರು ಈ ಸರ್ಕಾರಕ್ಕೆ ಸಹಕಾರ ನೀಡುತ್ತಾ ಬಂದಿದ್ದಾರೆ. ಕನ್ನಡಿಗರ ಹೃದಯ ವೈಶಾಲ್ಯತೆಯನ್ನು ಎಷ್ಟು ಸ್ಮರಿಸಿದರೂ ಸಾಲದು. ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದುಕೊಂಡು ಇನ್ನು ಮುಂದೆಯೂ ಜನರ ಸಹಕಾರ ಬಯಸುತ್ತೇನೆ’ ಎಂದರು.

ಸಚಿವರು ಹಾಗೂ ಗಣ್ಯರು ಕಾರ್ಯ ಕ್ರಮಕ್ಕೂ ಮುನ್ನ ಅರಮನೆ ಆವರಣದ ಭುವನೇಶ್ವರಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.

11 ಮಂದಿಗೆ ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 11 ಮಂದಿ ಸಾಧಕರನ್ನು ಜಿಲ್ಲಾಡಳಿತ ವತಿಯಿಂದ ರಾಜ್ಯೋತ್ಸವ ಕಾರ್ಯ ಕ್ರಮದಲ್ಲಿ ಸನ್ಮಾನಿಸಲಾಯಿತು.

ಗುಬ್ಬಿಗೂಡು ರಮೇಶ್‌ (ಸಾಹಿತ್ಯ), ಕೆ.ಜೆ.ಶಂಕರನಾರಾಯಣ ಶಾಸ್ತ್ರಿ (ಸಮಾಜ ಸೇವೆ), ಭಾಗ್ಯಮ್ಮ (ಜಾನಪದ), ರೇವಣ್ಣ (ಕಲೆ/ಸಂಗೀತ), ಕೆ.ಪಿ.ನಾಗರಾಜು (ಮಾಧ್ಯಮ), ನಾಗಭೂಷಣ್‌ ರಾವ್‌ (ಪ್ಯಾಲೇಸ್‌ ಬಾಬು–ವಿಶಿಷ್ಟ ಸೇವೆ/ಪರಿಸರ ಕ್ಷೇತ್ರ), ಸಿದ್ದರಾಜು, ಡಿ.ಆರ್‌.ಕರೀಗೌಡ, ಡಿ.ಎಂ.ಬಸವಣ್ಣ, ಡಾ.ಎಂ.ಬಿ.ಮಂಜೇಗೌಡ (ಕನ್ನಡ ಹೋರಾಟಗಾರರು) ಹಾಗೂ ನಗರದಲ್ಲಿ ಸುಮಾರು 23 ಸಾವಿರ ಸಸಿಗಳಿಗೆ ರಕ್ಷಾಕವಚ ಒದಗಿಸಿರುವ ಎನ್‌.ರಾಘವನ್‌ ಅವರು ಗೌರವ ‍ಪಡೆದರು.

ಶಾಸಕರಾದ ಜಿ.ಟಿ.ದೇವೇಗೌಡ, ಎಲ್‌.ನಾಗೇಂದ್ರ, ತನ್ವೀರ್‌ ಸೇಠ್‌, ವಿದಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್, ಎಸ್‌ಪಿ ರಿಷ್ಯಂತ್, ನಗರ ಪೊಲೀಸ್‌ ಆಯುಕ್ತ ಡಾ.ಚಂದ್ರಗುಪ್ತ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿಲ್ಲಾ ಪಂಚಾಯಿತಿ ಸಿಇಒ ಭಾರತಿ, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಮುಡಾ ಅಧ್ಯಕ್ಷ ಎಚ್‌.ವಿ.ರಾಜೀವ್, ಉಪಮೇಯರ್‌ ಸಿ.ಶ್ರೀಧರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಚನ್ನಪ್ಪ, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಪಾಲ್ಗೊಂಡಿದ್ದರು.

ಸೈಕಲ್‌, ತ್ರಿಚಕ್ರವಾಹನದಲ್ಲಿ ಅಭಿಮಾನಿ

ತಮ್ಮ ತ್ರಿಚಕ್ರ ವಾಹನವನ್ನು ಕನ್ನಡದ ಬಣ್ಣಗಳಿಂದ ಅಲಂಕರಿಸಿ, ಕನ್ನಡ ಧ್ವಜ ಹಿಡಿದುಕೊಂಡು ಬಂದ ರಮೇಶ್‌ ಶೆಟ್ಟಿ ಅವರು ಕನ್ನಡ ಪ್ರೇಮ ಮೆರೆದರು.

ಬಿಇಎಂಎಲ್‌ನಲ್ಲಿ ಉದ್ಯೋಗಿಯಾಗಿರುವ ಅವರು ಕಳೆದ 13 ವರ್ಷಗಳಿಂದ ತ್ರಿಚಕ್ರವಾಹನವನ್ನೇ ಕನ್ನಡ ರಥವನ್ನಾಗಿಸಿಕೊಂಡು ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದಾರೆ.

ಮಂಡಿಮೊಹಲ್ಲಾದ ಸೊಪ್ಪಿನಕೇರಿ ನಿವಾಸಿ ಪುಟ್ಟಸ್ವಾಮಿ ಅವರು ತಮ್ಮ ಸೈಕಲ್‌ಅನ್ನು ಸಿಂಗರಿಸಿ, ಬೃಹತ್‌ ಬಾವುಟ ಹಿಡಿದುಕೊಂಡು ಬಂದಿದ್ದರು.

‘ಕಳೆದ 35 ವರ್ಷಗಳಿಂದಲೂ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಭುವನೇಶ್ವರಿ ದೇವಿಯ ಭಕ್ತ ನಾನು. ಆದ್ದರಿಂದ ಪ್ರತಿವರ್ಷ ಇಲ್ಲಿಗೆ ಬರುತ್ತೇನೆ’ ಎಂದರು.

ಜಾಗೃತಿ ಮೂಡಿಸಿದ ಬಾಲಕ

ಚಾಮುಂಡಿಪುರಂನ ಸೇಂಟ್‌ ಮೇರಿಸ್‌ ಶಾಲೆಯ 7ನೇ ತರಗತಿ ವಿದ್ಯಾರ್ಥಿ ವಿ.ಭುವಂತ್‌ ಅವರು ಕನ್ನಡ ಬಾವುಟ ಹಿಡಿದು ಪ್ಲಾಸ್ಟಿಕ್‌ ವಿರುದ್ಧ ಮತ್ತು ಕೊರೊನಾ ಬಗ್ಗೆ ಜಾಗೃತಿ ಮೂಡಿಸಿ ಗಮನ ಸೆಳೆದರು.

‘ಕಳೆದ ಮೂರು ವರ್ಷಗಳಿಂದಲೂ ಪಾಲ್ಗೊಳ್ಳುತ್ತಿದ್ದೇನೆ. ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದು ನನ್ನ ಉದ್ದೇಶ’ ಎಂದು ಭುವಂತ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT