ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಸಂಚಾರ ನಿಯಮ ಪಾಲಿಸದೆ ಜೀವ ತೆತ್ತವರೇ ಹೆಚ್ಚು! ಕಳೆದ ವರ್ಷ 166 ಸಾವು

Published 3 ಜನವರಿ 2024, 6:54 IST
Last Updated 3 ಜನವರಿ 2024, 6:54 IST
ಅಕ್ಷರ ಗಾತ್ರ

ಮೈಸೂರು: ಕಳೆದ ವರ್ಷ ನಗರದಲ್ಲಿ ನಡೆದ ರಸ್ತೆ ಅಪಘಾತಗಳಲ್ಲಿ 166 ಮಂದಿ ಮೃತಪಟ್ಟಿದ್ದು, ಹೆಚ್ಚಿನವರು ಸಂಚಾರ ನಿಯಮ ಪಾಲಿಸದೇ ಜೀವ ಕಳೆದುಕೊಂಡಿದ್ದಾರೆ! ಅವರ ಪೈಕಿ ಹೆಚ್ಚು ಮಂದಿ ಅತಿವೇಗದಲ್ಲಿ ವಾಹನ ಚಾಲನೆ ಮಾಡಿದವರೇ ಇದ್ದಾರೆ. 2022ರಲ್ಲಿ 170 ಮಂದಿ ಮೃತಪಟ್ಟಿದ್ದರು.

ಹೆಲ್ಮೆಟ್‌ ಧರಿಸದೇ ವಾಹನ ಚಾಲನೆ ಮಾಡಿ ಅಪಘಾತಕ್ಕೆ ಒಳಗಾಗಿ ಮೃತಪಟ್ಟವರೂ ಇದ್ದಾರೆ. ಅತಿವೇಗದ ಚಾಲನೆಯಿಂದಲೂ ಮಾರಣಾಂತಿಕ ಅಪಘಾತಗಳು ಸಂಭವಿಸಿವೆ. ವಾಹನ ಚಾಲನಾ ಪರವಾನಗಿ ಇಲ್ಲದೆ ವಾಹನ ಚಾಲಿಸಿದ ಮಕ್ಕಳಿಂದಲೂ ಅಪಘಾತಗಳಾಗಿವೆ. ರಾತ್ರಿ ವೇಳೆ ಮದ್ಯಪಾನ ಮತ್ತರಾಗಿ ಚಾಲನೆ ಮಾಡಿ ಜೀವ ಕಳೆದುಕೊಂಡವರೂ ಇದ್ದಾರೆ. ರಸ್ತೆ ಅಪಘಾತಗಳಲ್ಲಿ ತೀವ್ರವಾಗಿ ಗಾಯಗೊಂಡು, ಆಸ್ಪತ್ರೆಗೆ ಸಾಗಿಸುವಾಗ, ಆಸ್ಪತ್ರೆಗೆ ದಾಖಲಿಸಿದ ಬಳಿಕ ಜೀವ ಬಿಟ್ಟವರೂ ಇದ್ದಾರೆ.

ಇಂಥ ಮಾರಣಾಂತಿಕ ಅಪಘಾತಗಳೊಂದಿಗೆ, ದಿನವೂ ನಗರದ ವಾಹನದಟ್ಟಣೆಯ ರಸ್ತೆಗಳಲ್ಲಿ ಸಣ್ಣ–ಪುಟ್ಟ ಅಪಘಾತಗಳಲ್ಲಿ ಕೈ, ಕಾಲು ಊನ ಮಾಡಿಕೊಂಡ ಮಂದಿಯೂ ಹೆಚ್ಚಿದ್ದಾರೆ. ಸ್ವಯಂ ಅಪಘಾತಗಳೂ ಹೆಚ್ಚುತ್ತಿವೆ.

‘ಎರಡು ವರ್ಷದಿಂದಲೂ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಮೃತಪಡುವವರ ಸಂಖ್ಯೆ ಹೆಚ್ಚಿರುವುದು ‌ಕಳವಳಕಾರಿ’ ಎಂಬ ಪೊಲೀಸರ ಅಭಿಪ್ರಾಯವೂ ಇದಕ್ಕೆ ಪುಷ್ಠಿ ನೀಡಿದೆ.

ಉಲ್ಲಂಘನೆಯ ದಾರಿ: ವಾಹನ ಸವಾರರ ಸುರಕ್ಷತೆಗಾಗಿ ಪೊಲೀಸ್‌ ಇಲಾಖೆಯು ಹಲವು ನಿಯಮಗಳನ್ನು ರೂಪಿಸಿದೆ. ರಸ್ತೆಗಳಲ್ಲಿ, ವೃತ್ತಗಳಲ್ಲಿ ಸಂಚಾರ ನಿಯಮಗಳ ಕುರಿತ ಫಲಕಗಳೂ ಇವೆ. ಪ್ರಮುಖ ರಸ್ತೆ, ವೃತ್ತಗಳಲ್ಲಿ ಸಂಚಾರ ಪೊಲೀಸರೂ ಪಾಳಿಗಳಲ್ಲಿ ಕಾರ್ಯನಿರ್ವಹಿಸುತ್ತಾರೆ. ನಿಯಮ ಮೀರುವವರಿಂದ ದಂಡ ಶುಲ್ಕ ವಸೂಲಿಯೂ ನಿರಂತರ ನಡೆದಿದೆ.

‘ಆದರೂ, ಸಂಚಾರ ನಿಯಮಗಳನ್ನು ಪ್ರಜ್ಞಾಪೂರ್ವಕವಾಗಿ ಉಲ್ಲಂಘಿಸುವವರ ಸಂಖ್ಯೆ ಹೆಚ್ಚುತ್ತಿದೆ. ಅವರಲ್ಲಿ ಯುವಜನರೇ ಹೆಚ್ಚಿದ್ದಾರೆ’ ಎಂದು ನಗರ ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್‌  ‘ಪ್ರಜಾವಾಣಿ’ಗೆ ತಿಳಿಸಿದರು.

‘ನಿಯಮ ಉಲ್ಲಂಘಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದು ವಾಹನ ಸವಾರರಿಗೂ ಗೊತ್ತಿಲ್ಲವೆಂದೇನಲ್ಲ. ಆದರೆ, ಗೊತ್ತಿದ್ದೂ ಚಾಲನೆ ಮಾಡುವುದು ನಿರ್ಲಕ್ಷ್ಯ ಧೋರಣೆ. ಅದರಿಂದ ಯಾರಿಗೂ ಒಳಿತಾಗುವುದಿಲ್ಲ. ಜೊತೆಗೆ, ರಸ್ತೆಯಲ್ಲಿ ಸಂಚರಿಸುವ ಸಹ ಸವಾರರಿಗೂ ತೊಂದರೆಯಾಗುತ್ತದೆ. ಈ ಅರಿವು ಎಲ್ಲ ವಾಹನ ಸವಾರರಿಗೂ ಇರಬೇಕು’ ಎನ್ನುತ್ತಾರೆ ಅವರು.

ಪರವಾನಗಿ ಬಗ್ಗೆ ಅಸಡ್ಡೆ

‘ವಾಹನ ಓಡಿಸುವಾಗ ಚಾಲನಾ ಪರವಾನಗಿ ಹೊಂದಿರಬೇಕೆಂಬ ನಿಯಮವಿದ್ದರೂ ಉಲ್ಲಂಘಿಸುವವರ ಸಂಖ್ಯೆ ಹೆಚ್ಚಾಗಿದೆ. ಪರವಾನಗಿ ಹೊಂದಿರದ 91 ಮಂದಿಯ ವಾಹನ ಅಪಘಾತಕ್ಕೆ ಒಳಗಾಗಿದೆ. ಇದರಲ್ಲಿ ಕೆಲವರು ಅಪ್ರಾಪ್ತ ವಯಸ್ಸಿನವರೂ ಇರುವುದು ಕಳವಳಕಾರಿ’ ಎಂದು ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್ ಅಭಿಪ್ರಾಯಪಟ್ಟರು. ‘ವಾಹನ ಚಾಲನೆ ಮಾಡುವುದು ಬರುತ್ತದೆ ಎಂಬ ಕಾರಣಕ್ಕೆ ಎಳೆವಯಸ್ಸಿನ ಮಕ್ಕಳಿಗೆ ಪೋಷಕರು ವಾಹನಗಳನ್ನು ಕೊಡಬಾರದು’ ಎಂಬುದು ಅವರ ಸಲಹೆ.

ವಾಹನ ಸವಾರರು ಮನೆ ಬಿಡುವಾಗ ಕುಟುಂಬದ ಸದಸ್ಯರು ತಮಗಾಗಿ ಕಾಯುತ್ತಿರುತ್ತಾರೆ ಎಂಬ ಕಾಳಜಿಯಿಂದ ಹೊರಡಬೇಕು. ಚಾಲನೆ ನಿಯಮ ಕಡ್ಡಾಯವಾಗಿ ಪಾಲಿಸಬೇಕು
–ರಮೇಶ್‌ ಬಾನೊತ್‌ ನಗರ ಪೊಲೀಸ್‌ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT