ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ಅದ್ಧೂರಿ ದಸರಾ ಆಚರಣೆಗೆ ₹40 ಕೋಟಿ: ಡಾ.ಎಚ್‌.ಸಿ.ಮಹದೇವಪ್ಪ

ದಸರಾ ಕಾರ್ಯಕಾರಿ ಸಮಿತಿ ಸಭೆ: ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಹೇಳಿಕೆ
Published : 16 ಆಗಸ್ಟ್ 2024, 15:29 IST
Last Updated : 16 ಆಗಸ್ಟ್ 2024, 15:29 IST
ಫಾಲೋ ಮಾಡಿ
Comments

ಮೈಸೂರು: ‘ನಾಡಿನಲ್ಲಿ ಉತ್ತಮ ಮಳೆಯಾಗಿದ್ದು, ನಾಡಹಬ್ಬ ದಸರಾ ಮಹೋತ್ಸವ ಆಚರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಿರ್ಧರಿಸಿದ್ದು, ₹40 ಕೋಟಿ ಅನುದಾನ ವಿನಿಯೋಗಿಸಲಾಗುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ‘ದಸರಾ ಆಚರಣೆ ಕುರಿತ ಕಾರ್ಯಕಾರಿ ಸಮಿತಿ ಸಭೆ’ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ₹10 ಕೋಟಿ, ಅರಮನೆ ಮಂಡಳಿ ₹5 ಕೋಟಿ ನೀಡಲಿವೆ. ಶ್ರೀರಂಗಪಟ್ಟಣ ದಸರೆಗೆ ₹1.5 ಕೋಟಿ, ಚಾಮರಾಜನಗರ ದಸರೆಗೆ ₹2 ಕೋಟಿ ನೀಡಲಾಗುತ್ತಿದೆ’ ಎಂದರು.

‘ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ದಸರಾ ಅತ್ಯುನ್ನತ ಮಟ್ಟದ ಸಮಿತಿ ಸಭೆಯಲ್ಲಿ ಉದ್ಘಾಟಕರ ಆಯ್ಕೆ ಬಗ್ಗೆಯೂ ಚರ್ಚಿಸಲಾಗಿದೆ. ಅ.3ರಂದು ಚಾಮುಂಡಿ ಬೆಟ್ಟದಲ್ಲಿ ಬೆಳಿಗ್ಗೆ 9.15ರಿಂದ 9.45 ಗಂಟೆಯೊಳಗೆ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ. 19 ಉಪ ಸಮಿತಿಗಳನ್ನು ರಚಿಸಲಾಗಿದೆ. ಇದೇ 21ರಂದು ವೀರನಹೊಸಹಳ್ಳಿಯಲ್ಲಿ ಗಜ ಪಯಣ ನಡೆಯಲಿದ್ದು, 23ರಂದು ಅರಮನೆಯ ಆವರಣಕ್ಕೆ ಸ್ವಾಗತಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ರಸ್ತೆ ದುರಸ್ತಿ: ‘ನಗರದ 41 ಕಿ.ಮೀ. ರಸ್ತೆ ದುರಸ್ತಿ ಮಾಡಲಾಗುವುದು. ನಗರದ ಸೌಂದರ್ಯ ಹೆಚ್ಚಿಸಲು ಇನ್ನಿತರ ಕಾಮಗಾರಿಗಳನ್ನು ಶೀಘ್ರ ನಡೆಸುವಂತೆ ಸೂಚಿಸಲಾಗಿದೆ. ಪ್ರವಾಸಿಗರ ಅನುಕೂಲಕ್ಕೆ ಮೈಸೂರಿನಲ್ಲಿ ವಿಮಾನ ಸಂಚಾರ ಮತ್ತೆ ಆರಂಭಿಸಲು ಕೇಂದ್ರ ವಿಮಾನಯಾನ ಸಚಿವರಿಗೆ ಮನವಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು. 

‘4 ಜಿ’ ವಿನಾಯಿತಿ: ದಸರಾ ಆಯೋಜನೆಗೆ ಕಾಲಾವಕಾಶ ಕಡಿಮೆಯಿರುವುದರಿಂದ ಟೆಂಡರ್ ಪ್ರಕ್ರಿಯೆ ನಡೆಸಲು 4 ಜಿ ವಿನಾಯಿತಿ ನೀಡಲಾಗಿದೆ. ದಸರಾ ವಸ್ತುಪ್ರದರ್ಶನವನ್ನು ಉದ್ಘಾಟನಾ ದಿನದಂದೇ ಪೂರ್ಣ ಪ್ರಮಾಣದಲ್ಲಿ ಆರಂಭಿಸಲಾಗುತ್ತದೆ. ದೀಪಾಲಂಕಾರ 21 ದಿನವಿರಲಿದೆ’ ಎಂದರು.

‘ಯುವ ದಸರಾ ಕಾರ್ಯಕ್ರಮ 7 ದಿನ ಇರಲಿದೆ. ಹಿಂದಿನ ವರ್ಷಗಳಲ್ಲಿ ಪ್ರದರ್ಶನ ನೀಡಿದ ಕಲಾವಿದರು ಪುನರಾವರ್ತನೆಯಾಗದಂತೆ ನಿಗಾವಹಿಸಿ ಪಟ್ಟಿ ಸಿದ್ಧಗೊಳಿಸಲು ತಿಳಿಸಲಾಗಿದೆ. ಯುವ ಸಂಭ್ರಮಕ್ಕೂ ಇದೇ ಸೂಚನೆ ಪಾಲಿಸಬೇಕೆಂದು ನಿರ್ದೇಶಿಸಲಾಗಿದೆ’ ಎಂದು ತಿಳಿಸಿದರು.

‘ಅರಮನೆ ಸುತ್ತಮುತ್ತ ದಸರಾ ವೇಳೆ ಶೂನ್ಯ ವಾಹನ ಸಂಚಾರ ಪ್ರದೇಶವಾಗಿ ಪರಿವರ್ತಿಸಲು ಆಲೋಚಿಸಲಾಗಿದ್ದು, ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗುವುದು. ನಂತರ ಕ್ರಮವಹಿಸಲಾಗುವುದು’ ಎಂದರು.

ಸಭೆಯಲ್ಲಿ ಶಾಸಕರಾದ ಜಿ.ಟಿ.ದೇವೇಗೌಡ, ಟಿ.ಎಸ್‌.ಶ್ರೀವತ್ಸ, ಡಿ.ರವಿಶಂಕರ್, ಕೆ.ಹರೀಶ್ ಗೌಡ, ರಮೇಶ್ ಬಂಡಿಸಿದ್ದೇಗೌಡ, ಪುಟ್ಟರಂಗ ಶೆಟ್ಟಿ, ಎಚ್.ಎಂ.ಗಣೇಶ್ ಪ್ರಸಾದ್, ಎ.ಆರ್.ಕೃಷ್ಣಮೂರ್ತಿ, ವಿಧಾನಪರಿಷತ್ ಸದಸ್ಯರಾದ ಎಚ್‌.ವಿಶ್ವನಾಥ್, ಡಿ.ತಿಮ್ಮಯ್ಯ, ಕೆ.ವಿವೇಕಾನಂದ, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯಿತ್ರಿ ಹಾಜರಿದ್ದರು.

ಆನೆ ಕಾರ್ಯಾಚರಣೆಯಲ್ಲಿ ಮೃತಪಟ್ಟ ಅಂಬಾರಿ ಆನೆ ಅರ್ಜುನನ ಹೆಸರಿನಲ್ಲಿ ಮಾವುತರಿಗೆ ಪ್ರಶಸ್ತಿ ನೀಡಬೇಕು
ಅನಿಲ್ ಚಿಕ್ಕಮಾದು, ಶಾಸಕ
20 ಡಿಜಿಟಲ್ ಬೋರ್ಡ್‌ ಅಳವಡಿಸಿ ದಸರಾ ಪ್ರಚಾರ ಕೈಗೊಳ್ಳಬೇಕು. ಕನಿಷ್ಠ 1 ತಿಂಗಳು ಆಹಾರ ಮೇಳ ಆಯೋಜಿಸಿ ಕಡಿಮೆ ದರದಲ್ಲಿ ಗುಣಮಟ್ಟದ ಆಹಾರ ನೀಡಬೇಕು
ತನ್ವೀರ್‌ ಸೇಠ್‌, ಶಾಸಕ

‘ಸ್ವಾತಂತ್ರ್ಯ ಹೋರಾಟ ಸಂವಿಧಾನದ ಆಶಯ’

‘ಬಹುತ್ವದ ಭಾರತ ರಕ್ಷಿಸುವ ಸೌಹಾರ್ದ ಕಾಪಾಡಿಕೊಳ್ಳುವ ಅಂಶಗಳನ್ನು ಜನರಿಗೆ ತಲುಪಿಸಲು ಈ ಬಾರಿ ‘ಸ್ವಾತಂತ್ರ್ಯ ಹೋರಾಟ ಹಾಗೂ ಸಂವಿಧಾನ’ವನ್ನು ದಸರಾ ಥೀಮ್ ಆಗಿ ಆಯ್ಕೆ ಮಾಡಿಕೊಳ್ಳಲಾಗಿದೆ’ ಎಂದು ಎಚ್‌.ಸಿ. ಮಹದೇವಪ್ಪ ತಿಳಿಸಿದರು. ‘ಕರ್ನಾಟಕ ಹೆಸರು ನಾಮಕರಣದ ಸುವರ್ಣ ವರ್ಷಾಚರಣೆಗೆ ಸಂಬಂಧಿಸಿದ ವಿಷಯಗಳನ್ನು ಸ್ತಬ್ಧಚಿತ್ರ ವಸ್ತುಪ್ರದರ್ಶನ ಮಳಿಗೆಯಲ್ಲಿ ಪ್ರದರ್ಶಿಸಲಾಗುವುದು’ ಎಂದರು.

‘ಮಹಿಷ ದಸರಾ: ತೀರ್ಮಾನ ಜಿಲ್ಲಾಡಳಿತಕ್ಕೆ’

‘ಮಹಿಷ ದಸರಾ ಮಾಡಬೇಕು ಅಥವಾ ಮಾಡಬಾರದೆನ್ನುವ ನಿರ್ಧಾರ ನನ್ನದಲ್ಲ. ಅದನ್ನು ಜಿಲ್ಲಾಡಳಿತ ನಿರ್ಧರಿಸಿಲಿದೆ. ಸಂವಿಧಾನದ ಪ್ರಕಾರ ಯಾರು ಯಾವ ಕಾರ್ಯಕ್ರಮ ಮಾಡುತ್ತಾರೋ ಬಿಡುತ್ತಾರೋ ಅದು ಅವರ ಹಕ್ಕು. ಅವರ ಪಾಡಿಗೆ ಅವರು ಶಾಂತಿಯುತವಾಗಿ ಮಾಡಿಕೊಂಡು ಹೋದರೆ ಯಾರಿಗೇನು ಅಭ್ಯಂತರ’ ಎಂದು ಮಹದೇವಪ್ಪ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ‘ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಐದನೇ ಸಾಲಿನಲ್ಲಿ ಕೂರಿಸಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಶೋಭೆ ತರುವಂತದ್ದಲ್ಲ. ಇಂಥ ಘಟನೆ ಮರುಕಳಿಸಬಾರದು. ಆಡಳಿತ ಪಕ್ಷ ಸಾಂವಿಧಾನಿಕ ಅಂಶಗಳನ್ನು ತಿಳಿದುಕೊಳ್ಳಲಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT