ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬರದ ನಡುವೆ ದಸರೆಗೆ ಚಾಲನೆ ಇಂದು: ಸಂಗೀತ ನಿರ್ದೇಶಕ ಹಂಸಲೇಖರಿಂದ ಉದ್ಘಾಟನೆ

ಅ.24ರಂದು ವಿಜಯದಶಮಿ ಮೆರವಣಿಗೆ, ಜಂಬೂಸವಾರಿ
Published 14 ಅಕ್ಟೋಬರ್ 2023, 21:16 IST
Last Updated 14 ಅಕ್ಟೋಬರ್ 2023, 21:16 IST
ಅಕ್ಷರ ಗಾತ್ರ

ಮೈಸೂರು: ಬರ ಹಾಗೂ ಕಾವೇರಿ ನದಿ ನೀರು ಹಂಚಿಕೆಯ ವಿಷಯದಲ್ಲಿ ಎದುರಾಗಿರುವ ಸಮಸ್ಯೆಯ ನಡುವೆಯೇ, ಸಂಭ್ರಮದ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ.

ಅ.15ರಂದು ಬೆಳಿಗ್ಗೆ 10.15ರಿಂದ 10.36ರೊಳಗೆ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಯ ಅಗ್ರ ಪೂಜೆಯೊಂದಿಗೆ ಹತ್ತು ದಿನಗಳ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಹಂಸಲೇಖ ಉದ್ಘಾಟಿಸಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹಾಗೂ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಬಳಿಕ ವಿವಿಧ ವೇದಿಕೆಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದ್ದು, ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿವೆ.

ಜಿಲ್ಲೆಯ ಎಲ್ಲ 9 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಅದರ ಮಧ್ಯೆಯೂ, ಉತ್ಸವವನ್ನು ವೈಭವದಿಂದ ಆಯೋಜಿಸಲಾಗುತ್ತಿದೆ. ನಗರದ ಪ್ರಮುಖ ರಸ್ತೆಗಳು, ವೃತ್ತಗಳು ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿವೆ.

ಮೊದಲ ದಿನವಾದ ಭಾನುವಾರ ಬರೋಬ್ಬರಿ 11 ಕಾರ್ಯಕ್ರಮಗಳು ಉದ್ಘಾಟನೆಗೊಳ್ಳಲಿವೆ. ಕುಪ್ಪಣ್ಣ ಉದ್ಯಾನದಲ್ಲಿ ಫಲಪುಷ್ಪ ಪ್ರದರ್ಶನ, ಚಲನಚಿತ್ರೋತ್ಸವ, ಸ್ಕೌಟ್ಸ್‌ ಮೈದಾನದಲ್ಲಿ ಆಹಾರ ಮೇಳ, ದೊಡ್ಡಕೆರೆ ಮೈದಾನದಲ್ಲಿ ಕುಸ್ತಿ ಪಂದ್ಯಾವಳಿ, ವಸ್ತುಪ್ರದರ್ಶನ, ಸೆನೆಟ್ ಭವನದಲ್ಲಿ ಯೋಗ ದಸರಾ, ಕಲಾಮಂದಿರದಲ್ಲಿ ಅಖಿಲ ಭಾರತ ಹಾಗೂ ರಾಜ್ಯ ಮಟ್ಟದ ಶಿಲ್ಪಕಲಾ ಪ್ರದರ್ಶನ, ಓವೆಲ್‌ ಮೈದಾನದಲ್ಲಿ ಕನ್ನಡ ಪುಸ್ತಕ ಮಾರಾಟ ಮೇಳ, ರಂಗಾಯಣದಲ್ಲಿ ನವರಾತ್ರಿ ರಂಗೋತ್ಸವ ಗರಿಗೆದರಲಿದೆ. ನ್ಯೂ ಸಯ್ಯಾಜಿರಾವ್‌ ರಸ್ತೆಯ ಹಸಿರು ಮಂಟಪದಲ್ಲಿ ವಿದ್ಯುತ್ ದೀಪಾಲಂಕಾರಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. ಕ್ರೀಡಾಕೂಟ ಈಗಾಗಲೇ ಆರಂಭಗೊಂಡಿದೆ.

ಅಂಬಾವಿಲಾಸ ಅರಮನೆ ಆವರಣ ಸೇರಿದಂತೆ 10 ವಿವಿಧ ವೇದಿಕೆಗಳಲ್ಲಿ ಆಯೋಜಿಸಿರುವ ಸಾಂಸ್ಕೃತಿಕ ಸೌರಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಜೆ 7ಕ್ಕೆ ಉದ್ಘಾಟಿಸಲಿದ್ದಾರೆ. ಕಲಾವಿದೆ ಪದ್ಮಾ ಮೂರ್ತಿ ಅವರಿಗೆ 2023-24ನೇ ಸಾಲಿನ ‘ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ’ ಪ್ರದಾನ ಮಾಡಲಾಗುವುದು.

ಈ ಬಾರಿ ಏರ್‌ಶೋ ನಡೆಯಲಿದ್ದು, ಅ.22ರಂದು ರಿಹರ್ಸಲ್ ಹಾಗೂ 23ರಂದು ಮುಖ್ಯ ಪ್ರದರ್ಶನ ಇರಲಿದೆ.

ಉತ್ಸವದ ಪ್ರಮುಕ ಆಕರ್ಷಣೆಯಾದ ವಿಜಯದಶಮಿ ಮೆರವಣಿಗೆಯು ಅ.24ರಂದು ನಡೆಯಲಿದ್ದು, ಅಂದು ಮಧ್ಯಾಹ್ನ 1.46ರಿಂದ 2.08ರವರೆಗೆ ಅರಮನೆ ಬಲರಾಮ ದ್ವಾರದಲ್ಲಿ ನಂದಿಧ್ವಜ ಪೂಜೆ ನೆರವೇರಲಿದೆ. ಸಂಜೆ 4.40ರಿಂದ 5ರವರೆಗೆ ಅರಮನೆ ಒಳಾವರಣದಲ್ಲಿ ಮೆರವಣಿಗೆ ಚಾಲನೆ ನೀಡಲಾಗುವುದು.

ಗಜಪಡೆಯ ನಾಯಕ ಅಭಿಮನ್ಯು ಆನೆ ಹೊರಲಿರುವ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ಅಲಂಕರಿಸಿಡಲಾಗುವ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಲಿದ್ದಾರೆ. ಮೆರವಣಿಗೆಯು ಬನ್ನಿಮಂಟಪದ ತಲುಪಿದ ಬಳಿಕ, ಅಲ್ಲಿನ ಮೈದಾನದಲ್ಲಿ ಸಂಜೆ 7.30ಕ್ಕೆ ಪಂಜಿನ ಕವಾಯತು ಪ್ರದರ್ಶನ ನಡೆಯಲಿದೆ. ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಕವಾಯತು ವೀಕ್ಷಿಸಿ, ಗೌರವವಂದನೆ ಸ್ವೀಕರಿಸಲಿದ್ದಾರೆ. ಈ ಪ್ರದರ್ಶನಗೊಂದಿಗೆ ಮಹೋತ್ಸವಕ್ಕೆ ತೆರೆ ಬೀಳಲಿದೆ.

ಮೈಸೂರು ದಸರಾ ಅಂಗವಾಗಿ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಅರಮನೆ ಆವರಣದಲ್ಲಿ ವೇದಿಕೆಯನ್ನು ಶನಿವಾರ ಸಜ್ಜುಗೊಳಿಸುವ ಕೆಲಸ ನಡೆಯಿತು
ಮೈಸೂರು ದಸರಾ ಅಂಗವಾಗಿ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಅರಮನೆ ಆವರಣದಲ್ಲಿ ವೇದಿಕೆಯನ್ನು ಶನಿವಾರ ಸಜ್ಜುಗೊಳಿಸುವ ಕೆಲಸ ನಡೆಯಿತು
ನಾಡಿಗೆ ಬರದ ಸ್ಥಿತಿ ಆವರಿಸಿದ್ದರೂ ವೈಭವ ಸಂಭ್ರಮ ಹಾಗೂ ಪಾರಂಪರಿಕ ಮೆರುಗಿಗೆ ಕೊರತೆಯಾಗದಂತೆ ಸಾಂಪ್ರದಾಯಿಕ ರೀತಿಯಲ್ಲಿ ದಸರಾ ಆಚರಿಸಲು ಕ್ರಮ ವಹಿಸಲಾಗಿದೆ
-ಸಿದ್ದರಾಮಯ್ಯ ಮುಖ್ಯಮಂತ್ರಿ

‘ಗ್ಯಾರಂಟಿ’ಗಳ ಧ್ಯಾನ!

ಉತ್ಸವದ ವಿವಿಧ ಕಾರ್ಯಕ್ರಮಗಳಲ್ಲಿ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಿಗೆ ಪ್ರಚಾರ ನೀಡಲಾಗುತ್ತಿದೆ. ಫಲಪುಷ್ಪ ಪ್ರದರ್ಶನ ವಸ್ತುಪ್ರದರ್ಶನದಲ್ಲಿನ ಮರಳು ಶಿಲ್ಪ ವಿದ್ಯುತ್‌ ದೀಪಾಲಂಕಾರದಲ್ಲಿ ‘ಶಕ್ತಿ’ ‘ಭಾಗ್ಯಲಕ್ಷ್ಮಿ’ ಗೃಹಜ್ಯೋತಿ’ ‘ಅನ್ನಭಾಗ್ಯ’ ಹಾಗೂ ‘ಯುವನಿಧಿ’  ಯೋಜನೆಯನ್ನು ಬಿಂಬಿಸಲಾಗುತ್ತಿದೆ.

ಸಿಎಂ ಸಿದ್ದರಾಮಯ್ಯಗೆ 6ನೇ ದಸರಾ

ಮೈಸೂರು ಜಿಲ್ಲೆಯವರೇ ಆಗಿರುವ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿಯಾಗಿ ಇದು 6ನೇ ಹಾಗೂ ಡಾ.ಎಚ್‌.ಸಿ. ಮಹದೇವಪ್ಪ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಇದು 3ನೇ ದಸರಾ.

ರಮನೆಯಲ್ಲೂ ಸಿದ್ಧತೆ

ಮೈಸೂರು ರಾಜವಂಶಸ್ಥರು ಅರಮನೆಯಲ್ಲಿ ಭಾನುವಾರದಿಂದಲೇ ಶರನ್ನವರಾತ್ರಿ ಆಚರಿಸಲಿದ್ದಾರೆ. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ರತ್ನಖಚಿತ ಸಿಂಹಾಸನದಲ್ಲಿ ಕುಳಿತು 9ನೇ ವರ್ಷದ ಖಾಸಗಿ ದರ್ಬಾರ್‌ ನಡೆಸಲಿದ್ದಾರೆ. ಬೆಳಿಗ್ಗೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಸಾರ್ವಜನಿಕರಿಗೆ ಪ್ರವೇಶವಿರುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT