ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ದಸರಾ: ಅರಮನೆ ಆವರಣದಲ್ಲಿ ಅಂಬಯ್ಯ ನೂಲಿ ವಚನ ಗಾಯನ

ಅರಮನೆ ಆವರಣದಲ್ಲಿ ದಾಸವಾಣಿ ಪ್ರಸ್ತುತ ಪಡಿಸಿದ ಪುತ್ತೂರು ನರಸಿಂಹನಾಯಕ ತಂಡ
Last Updated 21 ಅಕ್ಟೋಬರ್ 2020, 2:15 IST
ಅಕ್ಷರ ಗಾತ್ರ

ಮೈಸೂರು: ದಸರಾ ಅಂಗವಾಗಿ ಅರಮನೆ ಆವರಣದಲ್ಲಿ ಮಂಗಳವಾರ ರಾತ್ರಿ ನಡೆದ ಸಾಂಸ್ಕೃತಿಕ ಕಲರವದಲ್ಲಿ ವಚನ ಗಾಯನ, ದಾಸವಾಣಿ ಮೊಳಗಿದವು.

ರಾಯಚೂರಿನ ಪಂಡಿತ್ ಅಂಬಯ್ಯನೂಲಿ ಮತ್ತು ತಂಡದವರ ವಚನ ಗಾಯನಕ್ಕೆ ಪ್ರೇಕ್ಷಕರು ತಲೆದೂಗಿದರು.

ಭೂಪ ಭೂಪಾಲಿ ರಾಗದ ದಾದರ ತಾಳದ ಎಲ್ಲಾ ಪುರತರ ಎಂಬ ವಚನ ಗಾಯನದ ಮೂಲಕ ತಮ್ಮ ಗಾಯನ ಆರಂಭಿಸಿದ ಅಂಬಯ್ಯನೂಲಿ, ಮಿಯಾ ಮಲ್ಹಾರ್ ರಾಗದ ಭಜನ್ ತಾಳದಲ್ಲಿ ನಾದಪ್ರಿಯ ಶಿವನೆಂಬರು ಹಾಗೂ ಜೋಗ ಮಿಶ್ರಾ ರಾಗದಲ್ಲಿ ಭಕ್ತಿಯೆಂಬ ಗಾಯನವನ್ನು ಸುಮಧುರವಾಗಿ ಪ್ರಸ್ತುತಪಡಿಸಿದರು.

ಮಾಲಕೌಂಸ್ ರಾಗದ ಜಪ್ ತಾಳದಲ್ಲಿ ತನುವ ಬೇಡಿದಡೀವೆ, ಜೀವನಪುರಿ ರಾಗದಲ್ಲಿ ಬಡತನಕ್ಕೆ ಹುಂಬುವ ಚಿಂತೆ, ತಿಲಾಂಗ್ ರಾಗದಲ್ಲಿ ಹಾವಿನ ಡೊಂಕು ಹುತ್ತಕ್ಕೆ ಸಸಿನ, ಭೀಮ್ ಪಲಾಸ್ ರಾಗದಲ್ಲಿ ಭಕ್ತಿ ಇಲ್ಲದ ಬಡವ ನಾನಯ್ಯ, ಶಿವರಂಜಿನಿ ರಾಗದಲ್ಲಿ ಕಲ್ಲು ಕಟ್ಟಿಗೆ, ಗೋರಕ್ ಕಲ್ಯಾಣ್ ರಾಗದಲ್ಲಿ ಇವನಾರವ, ಮಾರು ಬಿಹಾಗ್ ರಾಗದಲ್ಲಿ ಶರಣ ನಿದ್ದೆಗೈದರೆ ಗೀತೆಗಳು ಶ್ರೋತೃಗಳನ್ನು ತಲೆದೂಗುವಂತೆ ಮಾಡಿದವು.

ಕೀಬೋರ್ಡ್‌ನಲ್ಲಿ ಷಣ್ಮುಗ ಸಜ್ಜ, ತಬಲದಲ್ಲಿ ಭೀಮಾಶಂಕರ್, ಕೊಳಲುವಾದನ ನೀತು ನಿನಾದ್, ರಿದಂ ಪ್ಯಾಡ್‌ನಲ್ಲಿ ರವಿಕುಮಾರ್, ಹಾರ್ಮೋನಿಯಂ ವೆಂಕಟೇಶ್ ಆಲಕೂಡ್, ಸಹ ಗಾಯನದಲ್ಲಿ ಚಿದಾನಂದಮೂರ್ತಿ ಅಂಬಯ್ಯನೂಲಿ ಅವರಿಗೆ ಸಾಥ್ ನೀಡಿದರು.

ದಾಸವಾಣಿ ರಸದೌತಣ: ಪುತ್ತೂರು ನರಸಿಂಹನಾಯಕ ತಂಡದವರು ವೈಶಿಷ್ಟ್ಯಪೂರ್ಣ ದಾಸವಾಣಿಗಳನ್ನು ಪ್ರೇಕ್ಷಕರಿಗೆ ಉಣ ಬಡಿಸಿದರು.

ಮೊದಲಿಗೆ ವಿಜಯದಾಸರ ರಚನೆಯ ಉಮಾ ಕಾತ್ಯಾಯಿನಿ ಗೌರಿ, ನಂತರ ಗೋಪಾಲಕೃಷ್ಣ ವಿಠ್ಠಲ ಅವರ ಹಾಲಾಹಲ ಉಂಡ ಎಂಬ ಅರ್ಥಪೂರ್ಣವಾದ ದಾಸವಾಣಿಗಳನ್ನು ಹಾಡಿದರು.

ಪುರಂದರದಾಸರ ರಚನೆಯ ದೇವರು ಕೊಟ್ಟಾನು, ಕಾಗದ ಬಂದಿದೆ ಹಾಗೂ ಕನಕದಾಸರ ಅಂಗಳದೊಳು ರಾಮನಾಡಿದ, ದಾಸನಾಗು ವಿಶೇಷನಾಗು, ಎಂಥಾ ಠವಳಿಗಾರ ನಮ್ಮ ಮತ್ತು ಜಗನ್ನಾಥದಾಸರ ರಚನೆಯ ರಮಾ ಮನೋಹರನೆ ಹಾಗೂ ವಿಜಯದಾಸರ ಮನವೇ ಮಾಧವನೊಳು ಎಂಬ ದಾಸವಾಣಿಗಳು ಕೇಳುಗರ ಮೆಚ್ಚುಗೆ ಗಳಿಸಿದವು.

ಕೀಬೋರ್ಡ್‌ನಲ್ಲಿ ಗಣೇಶ್ ಭಟ್, ತಬಲ ರಘನಾಥ್, ಕೊಳಲು ಸಮೀರ್ ರಾವ್, ರಿದಂ ಪ್ಯಾಡ್‌ನಲ್ಲಿ ಗುರುದತ್ ಸಾಥ್‌ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT