ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು: ಬಣ್ಣದ ಶಿಬಿರದಲ್ಲಿ ಮಕ್ಕಳ ಸಂಭ್ರಮ

ಜೆಎಸ್ಎಸ್ ಬಾಲ ಜಗತ್ ಶಾಲೆ ಆವರಣದಲ್ಲಿ ಚಿತ್ರಕಲಾ ಶಿಬಿರ; 15 ವರ್ಷಗಳ ಯಶಸ್ವಿ ಪಯಣ
ಸುಧೀರ್‌ಕುಮಾರ್ ಎಚ್‌.ಕೆ
Published 14 ಏಪ್ರಿಲ್ 2024, 7:16 IST
Last Updated 14 ಏಪ್ರಿಲ್ 2024, 7:16 IST
ಅಕ್ಷರ ಗಾತ್ರ

ಮೈಸೂರು: ನಗರದ ಹತ್ತು ಹಲವು ಬೇಸಿಗೆ ಶಿಬಿರಗಳ ನಡುವೆ ಮಕ್ಕಳ ಕ್ರಿಯಾತ್ಮಕ ಮನಸ್ಸು ಹಾಗೂ ಕನಸುಗಳಿಗೆ ಬಣ್ಣ ತುಂಬುವ ಕೆಲಸವನ್ನು ಜೆಎಸ್ಎಸ್ ಬಾಲ ಜಗತ್ ಶಾಲೆ ಆವರಣದ ಚಿತ್ರಕಲಾ ಶಿಬಿರ ಮಾಡುತ್ತಿದೆ.

ಕಳೆದ 15 ವರ್ಷಗಳಿಂದ ಯಾವುದೇ ಲಾಭ ಬಯಸದೆ ಮಕ್ಕಳ ಬೇಸಿಗೆ ರಜೆಯನ್ನು ಸುಂದರಗೊಳಿಸುವ ಕೆಲಸ ಸದ್ದಿಲ್ಲದೆ ಸಾಗುತ್ತಿದೆ.

ಇಲ್ಲಿನ ಮಕ್ಕಳಿಂದ ಕುಂಚವನ್ನು ಬಳಸಿ ಪ್ರಕೃತಿ ಸೌಂದರ್ಯ ಸೆರೆ ಹಿಡಿಯುವುದು, ಕಸವೆಂದು ದೂರವಿರಿಸಿದ ವಸ್ತುಗಳಿಗೆ ಕಲಾತ್ಮಕ ಸ್ಪರ್ಶ ನೀಡುವುದು, ಗಾಜಿನ ಮೇಲೆ ಬಣ್ಣಗಳ ಚಿತ್ತಾರ ಬರೆಯುವುದು, ಪೇಪರ್‌ ಬಳಸಿ ಹೂಗಳ ಗುಚ್ಛ ಸಿದ್ಧಪಡಿಸುತ್ತಿದ್ದಾರೆ. ಆಕರ್ಷಕ ಪೆನ್ ಸ್ಟ್ಯಾಂಡ್, ಹೂದಾನಿಗಳು, ಪೇಪರ್‌ ಗುಲಾಬಿಗಳು ತಯಾರಾಗಿವೆ.

ನಗರದ ನೂರಾರು ಮಕ್ಕಳು ಚಿತ್ರಕಲೆಯ ವಿವಿಧ ಮಜಲುಗಳನ್ನು ಕಲಿಯುತ್ತಲೇ ಜೀವನದ ವಿವಿಧ ಆಯಾಮಗಳಿಗೆ ತೆರೆದುಕೊಳ್ಳುತ್ತಿದ್ದಾರೆ. ಶಿಬಿರದ ಹಿಂದಿರುವ ಜೆಎಸ್ಎಸ್ ಸಂಸ್ಥೆ ಹಾಗೂ ಹಿರಿಯ ಕಲಾವಿದ ಎಸ್.ಎಂ.ಜಂಬುಕೇಶ್ವರ ಅವರ ಪ್ರಯತ್ನ ಇಂದು 900ಕ್ಕೂ ಹೆಚ್ಚು ಮಕ್ಕಳಲ್ಲಿ ಕಲೆಯ ಅಭಿರುಚಿ ಬೆಳೆಸಿದೆ.

‘ಜೆಎಸ್ಎಸ್ ಮಹಾವಿದ್ಯಾಪೀಠದ ಆಶ್ರಯದಲ್ಲಿ 2005ರಲ್ಲಿ 20 ಮಕ್ಕಳೊಂದಿಗೆ ಬೇಸಿಗೆ ಚಿತ್ರಕಲೆ ಶಿಬಿರ ಆರಂಭವಾಯಿತು. ಜೆಎಸ್ಎಸ್ ಸಂಸ್ಥೆಯ ವಿವಿಧ ಶಾಲೆಗಳ ಚಿತ್ರಕಲಾ ಶಿಕ್ಷಕರು ಇಲ್ಲಿ ಆಗಮಿಸಿ ತರಬೇತಿ ನೀಡುತ್ತಾರೆ. ಕೇವಲ ಚಿತ್ರಕಲೆಗೆ ಮಾತ್ರ ಸೀಮಿತವಾದ ನಗರದ ಏಕೈಕ ಬೇಸಿಗೆ ಶಿಬಿರವಿದು’ ಎಂದು ಶಿಬಿರದ ಸಂಚಾಲಕ ಜಂಬುಕೇಶ್ವರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಟ್ಟು 22 ದಿನಗಳ ಕಾಲ ಪ್ರತಿ ದಿನ ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಶಿಬಿರ ನಡೆಯುತ್ತದೆ. ಒಂದರಿಂದ ಹತ್ತನೇ ತರಗತಿವರೆಗಿನ ಮಕ್ಕಳು ಭಾಗವಹಿಸುವರು. ಒಂದರಿಂದ ನಾಲ್ಕು, ಐದರಿಂದ ಏಳು, ಎಂಟರಿಂದ ಹತ್ತನೇ ತರಗತಿವರೆಗೆ ಒಂದೊಂದು ಗುಂಪುಗಳಾಗಿ ರಚಿಸಿ, ಆಯಾ ಹಂತಗಳಿಗೆ ಅನುಗುಣವಾಗಿ ತರಬೇತಿ ನೀಡಲಾಗುವುದು. ಚಿತ್ರಕಲೆಯ ಮೂಲಭೂತ ವಿಚಾರದಿಂದ ಕಲಿಕೆ ಆರಂಭವಾಗುತ್ತದೆ’ ಎಂದರು.

‘ಮಕ್ಕಳಿಗೆ ಡ್ರಾಯಿಂಗ್ ಶೀಟ್, ಸ್ನ್ಯಾಕ್ಸ್‌ ನೀಡಲಾಗುತ್ತದೆ. ನಿಸರ್ಗ ಚಿತ್ರ ರಚನೆಗೆಂದೇ ಒಂದು ದಿನ ಪ್ರೇಕ್ಷಣೀಯ ಸ್ಥಳಕ್ಕೆ ಪ್ರವಾಸ ಆಯೋಜಿಸುತ್ತೇವೆ. ಅಂತಿಮವಾಗಿ ಸಮಾರೋಪದಲ್ಲಿ ಚಿತ್ರಗಳ ಪ್ರದರ್ಶನ ಹಾಗೂ ಪ್ರತಿ ಗುಂಪಿನಲ್ಲೂ ಉತ್ತಮ ಚಿತ್ರಗಳನ್ನು ರಚಿಸಿದ ಮೂವರಿಗೆ ನಗದು ಬಹುಮಾನ, ಎಲ್ಲರಿಗೂ ಅರ್ಹತಾ ಪತ್ರ ವಿತರಣೆ ನಡೆಯಲಿದೆ’ ಎಂದು ಹೇಳಿದರು.

‘ಈ ಬಾರಿ ಏ.3ರಿಂದ ಶಿಬಿರ ಆರಂಭವಾಗಿದ್ದು, 70 ಮಕ್ಕಳು ಆಗಮಿಸಿದ್ದಾರೆ. ಎಂಟು ಶಿಕ್ಷಕರು ಸ್ವಯಂ ಉತ್ಸಾಹದಿಂದ ತರಬೇತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ನಿಸರ್ಗ ಚಿತ್ರಕಲೆ ಕಲಿಕೆ ಭಾಗವಾಗಿ ಸೋಮನಾಥಪುರ, ಮುಡುಕುತೊರೆಗೆ ಕರೆದೊಯ್ಯುತ್ತಿದ್ದೇವೆ. ಬಳಿಕ ಸುತ್ತೂರು ಮಠ ಹಾಗೂ ಶಾಲೆಯ ಭೇಟಿಯೂ ಆಯೋಜಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಶಿಬಿರದಲ್ಲಿ ಭಾಗವಹಿಸಿರುವ ಅಗ್ರಹಾರದ ಧೃತಿ ತಾವು ಬರೆದ ಚಿತ್ರಗಳನ್ನು ತೋರುತ್ತಾ, ‘ಇಲ್ಲಿ ಬಂದಮೇಲೆ ಇಷ್ಟೆಲ್ಲಾ ಚಿತ್ರಗಳನ್ನು ರಚಿಸಿದ್ದೇನೆ. ಪೆನ್ಸಿಲ್‌ಗಳ ಬಳಕೆ, ಬಣ್ಣಗಳನ್ನು ತುಂಬುವುದು, ಪ್ರಕೃತಿಯನ್ನು ಚಿತ್ರಿಸುವುದನ್ನು ಕಲಿತಿದ್ದೇನೆ. ಶಿಕ್ಷಕರು ಕೂಡ ನಮ್ಮೊಂದಿಗೆ ಕುಳಿತು ಎಲ್ಲವನ್ನು ನಿಧಾನವಾಗಿ ವಿವರಿಸುತ್ತಾರೆ. ಎಲ್ಲರೊಂದಿಗೆ ಕಲಿಯುವುದು ಸಂತಸವಾಗುತ್ತದೆ’ ಎಂದರು.

ವಿವಿಧ ಅನುಪಯುಕ್ತ ವಸ್ತುಗಳನ್ನು ಬಳಸಿ ಮಕ್ಕಳು ಸಿದ್ಧಪಡಿಸಿರುವ ಹೂದಾನಿ ಪೆನ್‌ ಸ್ಟ್ಯಾಂಡ್‌ಗಳು
ವಿವಿಧ ಅನುಪಯುಕ್ತ ವಸ್ತುಗಳನ್ನು ಬಳಸಿ ಮಕ್ಕಳು ಸಿದ್ಧಪಡಿಸಿರುವ ಹೂದಾನಿ ಪೆನ್‌ ಸ್ಟ್ಯಾಂಡ್‌ಗಳು
ಎಸ್‌.ಎಂ. ಜಂಬುಕೇಶ್ವರ
ಎಸ್‌.ಎಂ. ಜಂಬುಕೇಶ್ವರ
ಲಿಖಿತಾ
ಲಿಖಿತಾ
ಶಿಬಿರದಲ್ಲಿನ ಚಿತ್ರಕಲೆ ತರಬೇತಿಯಿಂದ ಶಾಲೆಯ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಲು ಸಾಧ್ಯವಾಗಿದೆ
ಲಿಖಿತಾ ಶಿಬಿರಾರ್ಥಿ ಬೋಗಾದಿ

ಚಿತ್ರಕಲಾ ಸಂಘದಿಂದ ಪ್ರಾರಂಭ

‘ಸಯ್ಯಾಜಿರಾವ್ ರಸ್ತೆಯ ಚಾಮರಾಜೇಂದ್ರ ಟೆಕ್ನಿಕಲ್ ಇನ್‌ಸ್ಟಿಟ್ಯೂಟ್‌ನಲ್ಲಿ 1978ರಲ್ಲಿ ಆರಂಭವಾದ ಮೈಸೂರು ಚಿತ್ರಕಲಾ ಸಂಘ ಈ ಶಿಬಿರದ ಆರಂಭಕ್ಕೆ ಮೂಲ’ ಎಂದು ಸಂಘದ ಸ್ಥಾಪಕ ಕಾರ್ಯದರ್ಶಿಯೂ ಆಗಿದ್ದ ಜಂಬುಕೇಶ್ವರ ತಿಳಿಸಿದರು. ಹಿರಿಯ ಕಲಾವಿದರಾದ ಪಿ.ಆರ್.ತಿಪ್ಪೇಸ್ವಾಮಿ ವೈ.ನಾಗರಾಜು ಚಂದ್ರಶೇಖರಯ್ಯ ಕಾಳಪ್ಪ ಸುಭಾಷಿಣಿ ದೇವಿ ಎಚ್.ಎಸ್.ಪಾಟಕ್ ವಾಸುದೇವ ರಾವ್ ಎಂ.ಇ.ಗುರು ಮುಂತಾದವರ ನೇತೃತ್ವದ ಸಂಘವು 1984ರಲ್ಲಿ ಸುತ್ತೂರಿನ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಸಹಕಾರದಲ್ಲಿ ಜೆಎಸ್ಎಸ್ ಮಹಾವಿದ್ಯಾಪೀಠ ಕಟ್ಟಡದ ಆವರಣದಲ್ಲಿ ಶಿಬಿರ ಆರಂಭಿಸಿತು. ‘ಹತ್ತು ವರ್ಷಗಳ ಕಾಲ ನಡೆದು ನಂತರ ನಿಂತುಹೋಗಿತ್ತು. ಬಳಿಕ 2005ರಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾರ್ಗದರ್ಶನದಲ್ಲಿ ಮರುಚಾಲನೆ ದೊರೆಯಿತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT