ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಬಾಂಬ್‌ ಸ್ಫೋಟ ಟ್ರೇಲರಷ್ಟೆ, ಇನ್ನೂ ಗಂಡಾಂತರ ಕಾದಿದೆ: ಪ್ರತಾಪ ಸಿಂಹ

Published 4 ಮಾರ್ಚ್ 2024, 6:36 IST
Last Updated 4 ಮಾರ್ಚ್ 2024, 6:36 IST
ಅಕ್ಷರ ಗಾತ್ರ

ಮೈಸೂರು: ‘ಬೆಂಗಳೂರಿನಲ್ಲಿ ನಡೆದಿರುವ ಬಾಂಬ್‌ ಸ್ಫೋಟ ಪ್ರಕರಣ ಟ್ರೇಲರ್‌ ಅಷ್ಟೆ. ಮುಂದೆ ರಾಜ್ಯದಲ್ಲಿ ಇನ್ನೂ ದೊಡ್ಡ ದೊಡ್ಡ ಗಂಡಾಂತರಗಳು ಕಾದಿವೆ’ ಎಂದು ಮೈಸೂರು–ಕೊಡಗು ಬಿಜೆಪಿ ಸಂಸದ ಪ್ರತಾಪ ಸಿಂಹ ಹೇಳಿದರು.

ಇಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ‘ಕಾಂಗ್ರೆಸ್‌ಗೆ ಮತ ಹಾಕಿದರೆ ತಾಲಿಬಾನಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ವಿಧಾನಸಭೆ ಚುನಾವಣೆ ಪ್ರಚಾರದ ವೇಳೆಯೇ ಹೇಳಿದ್ದೆ. ಅದೀಗ ನಿಜವಾಗಿದೆ ಎನ್ನುವುದಕ್ಕೆ ಪೂರಕವಾಗಿ ಹಲವು ಘಟನೆಗಳು ನಡೆದಿವೆ’ ಎಂದರು.

‘ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ವಿಧಾನಸೌಧದ ಆವರಣದಲ್ಲೇ ಕೂಗಲಾಗಿದೆ. ಬೆಂಗಳೂರಿನ ಕೆಫೆಯಲ್ಲಿ ಬಾಂಬ್‌ ಸ್ಫೋಟಿಸಲಾಗಿದೆ. ಇದೆಲ್ಲವನ್ನೂ ಗಮನಿಸಿದರೆ ಯಾರು ಅಧಿಕಾರ ನಡೆಸುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಕಾಂಗ್ರೆಸ್ ಸರ್ಕಾರವೇ ಮುಂದುವರಿದರೆ ವಿಧಾನಸೌಧದ ಮೇಲೆ ಗುಂಬಜ್‌ಗಳು ಬರಲಿವೆ. ಮೇಲೆಯೇ ಮೈಕ್ ಇಟ್ಟು ಆಜಾನ್ ಕೂಗಿದರೂ ಆಶ್ಚರ್ಯಪಡಬೇಡಿ’ ಎಂದು ಹೇಳಿದರು.

‘ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ಹತ್ತು ವರ್ಷಗಳ ಅವಧಿಯಲ್ಲಿ ಸರಣಿ ಬಾಂಬ್ ಸ್ಫೋಟ ನಡೆದಿದ್ದವು. ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಸ್ಫೋಟಗಳು ಆರಂಭಗೊಂಡಿವೆ’ ಎಂದು ದೂರಿದರು.

‘ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನಗಳಲ್ಲೂ ಬಿಜೆಪಿ– ಜೆಡಿಎಸ್ ಮೈತ್ರಿಕೂಟವನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್‌ ಸರ್ಕಾರ ತೊಲಗಲು ಅವಕಾಶ ಮಾಡಿಕೊಡಬೇಕು. ಆಗ ಮಾತ್ರ ಕರ್ನಾಟಕ ಉಳಿಯುತ್ತದೆ. ಇಲ್ಲದಿದ್ದರೆ ದೊಡ್ಡ ದೊಡ್ಡ ದುರ್ಘಟನೆಗಳು ಕಾದಿವೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಪಾಕಿಸ್ತಾನಕ್ಕೆ ಜಿಂದಾಬಾದ್ ಕೂಗಿದ ಪ್ರಕರಣದಲ್ಲಿ ಎಫ್‌ಎಸ್‌ಎಲ್‌ ವರದಿ ತಿರುಚಲಾಗುತ್ತಿದೆ’ ಎಂದು ಆರೋಪಿಸಿದರು. ‌‘ಸಿದ್ದರಾಮಯ್ಯ ಅವರೇ, ನೀವು ಮುಸ್ಲಿಮರ ಕೈ ಕಡಿದರೂ ಅವರು ನಿಮಗೇ ಮತ ಹಾಕುತ್ತಾರೆ. ಮತ್ತೇಕೆ ಅವರನ್ನು ರಕ್ಷಿಸಲು ಹೊರಟಿದ್ದೀರಿ? ಇದೇ ರೀತಿ ಮುಂದುವರಿದರೆ ಕರ್ನಾಟಕ ಯಾವ ಸ್ಥಿತಿಗೆ ಬರುತ್ತದೆ ಎಂಬುದನ್ನು ಯೋಚಿಸಿ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದೀರಿ; ಅದನ್ನು ಕೃತಿಯಲ್ಲಿ ತೋರಿಸಿ’ ಎಂದರು.

‘ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಸ್ವಂತ ಬಲದ ಮೇಲೆ ಸ್ಪರ್ಧಿಸುವ ರಾಜ್ಯಗಳ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನಷ್ಟೆ ಮೊದಲ ಪಟ್ಟಿಯಲ್ಲಿ ಪ್ರಕಟಿಸಲಾಗಿದೆ. ಎಲ್ಲೆಲ್ಲಿ ಮೈತ್ರಿ ಇದೆಯೋ ಅಲ್ಲೆಲ್ಲಾ ಇನ್ನೂ ಚರ್ಚೆ ನಡೆಯುತ್ತಿದೆ. ಸೀಟು ಹಂಚಿಕೆ ಬಳಿಕ ಘೋಷಣೆ ಮಾಡಲಾಗುತ್ತದೆ. ಕೇಂದ್ರದ ನಾಯಕರು ಸೂಕ್ತ ಸಂದರ್ಭದಲ್ಲಿ ನಿರ್ಧಾರ ಕೈಗೊಳ್ಳುತ್ತಾರೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT