ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು–ಮೈಸೂರು ಹೆದ್ದಾರಿ: ಪ್ರವೇಶ–ನಿರ್ಗಮನ ದ್ವಾರಕ್ಕೆ ಹಸಿರು ನಿಶಾನೆ

ಬೆಂಗಳೂರು–ಮೈಸೂರು ಹೆದ್ದಾರಿ: ಇಂದು ಸಚಿವ ನಿತಿನ್‌ ಗಡ್ಕರಿ ಚಾಲನೆ
Published 9 ಮಾರ್ಚ್ 2024, 22:53 IST
Last Updated 9 ಮಾರ್ಚ್ 2024, 22:53 IST
ಅಕ್ಷರ ಗಾತ್ರ

ಮೈಸೂರು: ಬೆಂಗಳೂರು–ಮೈಸೂರು ನಡುವಿನ ಹತ್ತು ಪಥಗಳ ಹೆದ್ದಾರಿಯಲ್ಲಿ ಪ್ರಮುಖ ನಗರಗಳಿಗೆ ವ್ಯವಸ್ಥಿತ ಪ್ರವೇಶ ಮತ್ತು ನಿರ್ಗಮನ ದ್ವಾರ ವ್ಯವಸ್ಥೆ ಕಲ್ಪಿಸುವ ಯೋಜನೆಗೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಚುನಾವಣೆಯ ಹೊಸ್ತಿಲಲ್ಲಿ ಚಾಲನೆ ನೀಡಲಿದ್ದಾರೆ.

ದಶಪಥ ಹೆದ್ದಾರಿ ಉದ್ಘಾಟನೆಗೊಂಡು ವರ್ಷವೇ ಕಳೆದಿದೆ. ಆದಾಗ್ಯೂ ಹೆದ್ದಾರಿಯ ಆರು ಪ್ರಮುಖ ನಗರಗಳಿಗೆ ವ್ಯವಸ್ಥಿತವಾದ ಪ್ರವೇಶ ಮತ್ತು ನಿರ್ಗಮನದ ‌ವ್ಯವಸ್ಥೆ ಇಲ್ಲ. ಅದಕ್ಕಾಗಿ ₹1,200 ಕೋಟಿ ವೆಚ್ಚದಲ್ಲಿ ಪ್ರತ್ಯೇಕ ಯೋಜನೆಯ ಪ್ರಸ್ತಾವವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕೇಂದ್ರಕ್ಕೆ ಸಲ್ಲಿಸಿತ್ತು.

ಭಾನುವಾರ ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸಚಿವರು ಈ ಯೋಜನೆಯ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಿದ್ದಾರೆ. ಭೂಸ್ವಾಧೀನ ಹಾಗೂ ಟೆಂಡರ್ ಪ್ರಕ್ರಿಯೆಗಳು ನಂತರದಲ್ಲಿ ಆರಂಭವಾಗಲಿವೆ.

ಬೆಂಗಳೂರು–ಮೈಸೂರು ಮಾರ್ಗ ಮಧ್ಯೆ ಬರುವ ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಹಾಗೂ ಶ್ರೀರಂಗಪಟ್ಟಣ ನಗರಗಳಿಗೆ ಎಕ್ಸ್‌ಪ್ರೆಸ್‌ ವೇನಲ್ಲಿ ಪ್ರವೇಶ ಮತ್ತು ನಿರ್ಗಮನ ದ್ವಾರಗಳ ನಿರ್ಮಾಣಕ್ಕೆ ಯೋಜನೆಯು ಅವಕಾಶ ಕಲ್ಪಿಸಲಿದೆ.

ಈ ನಗರಗಳಿಗೆ ಕೆಲವೇ ಕಿ.ಮೀ. ದೂರದಲ್ಲಿ ಎಕ್ಸ್‌ಪ್ರೆಸ್‌ ವೇನಲ್ಲಿ ಪ್ರವೇಶ ಮತ್ತು ನಿರ್ಗಮನವನ್ನು ವಿನ್ಯಾಸಗೊಳಿಸಲಾಗುತ್ತದೆ. ಕುಂಬಳಗೋಡು ಟೋಲ್ ಪ್ಲಾಜಾ, ಬಿಡದಿ, ರಾಮನಗರದ ಕೆಂಪೇಗೌಡನದೊಡ್ಡಿ, ಚನ್ನಪಟ್ಟಣದ ತಿಟ್ಟಮಾರನಹಳ್ಳಿ ಇಲ್ಲವೇ ಮತ್ತಿಕೆರೆ–ಶೆಟ್ಟಿಹಳ್ಳಿ, ಮದ್ದೂರು ತಾಲ್ಲೂಕಿನ ನಿಡಘಟ್ಟ, ಮಂಡ್ಯ ಬೈಪಾಸ್ (ಹೋಟೆಲ್‌ ಅಮರಾವತಿ ಬಳಿ), ಶ್ರೀರಂಗಪಟ್ಟಣ ಟೋಲ್‌ (ಗಣಂಗೂರು) ಇಲ್ಲವೇ ಕರಿಘಟ್ಟ ರಸ್ತೆ ಬಳಿ ವಾಹನಗಳು ಎಕ್ಸ್‌ಪ್ರೆಸ್ ವೇ ಏರಲು ಇಲ್ಲವೇ ಇಳಿಯಲು ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ.

ಸದ್ಯ ಬೆಂಗಳೂರು–ಮೈಸೂರು ಹೆದ್ದಾರಿ ನಡುವೆ ಮೂರು ಟೋಲ್ ಸಂಗ್ರಹ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಆರು ಪಥಗಳ ಎಕ್ಸ್‌ಪ್ರೆಸ್‌ವೇನಲ್ಲಿ ಸಂಚರಿಸುವ ವಾಹನಗಳಿಂದ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಇದಲ್ಲದೇ ತಲಾ ಎರಡು ಪಥಗಳ ಸರ್ವೀಸ್ ರಸ್ತೆಯಲ್ಲಿ ವಾಹನಗಳು ಟೋಲ್‌ ಇಲ್ಲದೇ ಸಂಚರಿಸಲು ಅವಕಾಶ ಇದೆ.

ಹೊಸ ಪ್ರವೇಶ–ನಿರ್ಗಮನ ಪಥಗಳು ನಿರ್ಮಾಣಗೊಂಡ ಬಳಿಕ ವಾಹನಗಳು ಸಂಚರಿಸುವ ದೂರಕ್ಕೆ ಅನುಗುಣವಾಗಿ ಟೋಲ್‌ ಸಂಗ್ರಹ ಮಾಡಲಾಗುತ್ತದೆ. ಇದಕ್ಕಾಗಿ ಜಿಪಿಎಸ್‌ ಆಧಾರಿತ ಟೋಲ್ ವ್ಯವಸ್ಥೆಯನ್ನು ಜಾರಿಗೊಳಿಸುವುದಾಗಿ ಸಚಿವ ಗಡ್ಕರಿ ಈಚೆಗಷ್ಟೇ ಘೋಷಿಸಿದ್ದರು.

ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ₹1200 ಕೋಟಿ ವೆಚ್ಚದಲ್ಲಿ ಪ್ರವೇಶ–ನಿರ್ಗಮನ ವ್ಯವಸ್ಥೆ ಯೋಜನೆಗೆ ಪ್ರಸ್ತಾವ ಸಲ್ಲಿಸಲಾಗಿತ್ತು.
ಪ್ರತಾಪ ಸಿಂಹ ಮೈಸೂರು–ಕೊಡಗು ಸಂಸದ

ವರ್ಷವಾದರೂ ಆರಂಭವಾಗದ ಕಾಮಗಾರಿ

ಮೈಸೂರು–ಕುಶಾಲನಗರ ನಡುವಿನ (ಎನ್‌.ಎಚ್‌. 275) ನಾಲ್ಕು ಪಥಗಳ ಹೆದ್ದಾರಿ ಮತ್ತು ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಸಚಿವ ನಿತಿನ್‌ ಗಡ್ಕರಿ ಭಾನುವಾರ ಚಾಲನೆ ನೀಡಲಿದ್ದಾರೆ. ಕಳೆದ ವರ್ಷ ಮಾರ್ಚ್‌ನಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನ ಮಂಡ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು–ಮೈಸೂರು ಹೆದ್ದಾರಿ ಉದ್ಘಾಟನೆ ಜೊತೆಗೆ ಶ್ರೀರಂಗಪಟ್ಟಣದಿಂದ ಕುಶಾಲನಗರದವರೆಗಿನ ಹೆದ್ದಾರಿ ನಿರ್ಮಾಣ ಕಾಮಗಾರಿಗೂ ಶಂಕುಸ್ಥಾಪನೆ ನೆರವೇರಿಸಿದ್ದರು. ಅದಾದ ಒಂದು ವರ್ಷದ ಬಳಿಕವೂ ಈ ಕಾಮಗಾರಿ ಆರಂಭಗೊಂಡಿಲ್ಲ. ಒಟ್ಟು 93 ಕಿ.ಮೀ. ಉದ್ದದ ರಸ್ತೆ ನಿರ್ಮಾಣಕ್ಕೆ ₹4130 ಕೋಟಿ ವೆಚ್ಚ ಅಂದಾಜಿಸಲಾಗಿದೆ. ಕಳೆದ ವರ್ಷವೇ ಕಾಮಗಾರಿ ಆರಂಭಗೊಂಡು 2024ರ ಡಿಸೆಂಬರ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಇನ್ನೂ ಭೂಸ್ವಾಧೀನ ಪ್ರಕ್ರಿಯೆಯೇ ಪೂರ್ಣಗೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT