ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: 24 ವರ್ಷ ಪೂರೈಸಿದ ‘ಭಾರತೀ ಯೋಗಧಾಮ’

ಸುಧೀರ್‌ಕುಮಾರ್‌ ಎಚ್‌.ಕೆ
Published 5 ಜನವರಿ 2024, 7:07 IST
Last Updated 5 ಜನವರಿ 2024, 7:07 IST
ಅಕ್ಷರ ಗಾತ್ರ

ಮೈಸೂರು: ಒಂದೆಡೆ ದಕ್ಷಿಣ ಭಾರತದಲ್ಲಿಯೇ ಪ್ರಥಮವಾಗಿ ನಿರ್ಮಿಸುತ್ತಿರುವ ಖಗೋಳ ವೀಕ್ಷಣಾಲಯ ಕೇಂದ್ರ ‘ಜಂತರ್‌ ಮಂತರ್‌’, ಮತ್ತೊಂದೆಡೆ ರಾಮಾಯಣದಲ್ಲಿ ಬರುವ ‘ಪಂಚವಟಿ’ ವನ. ಹಾಗೇ ಸಾಗಿದರೆ ಕಾಣುವ ಭಾರತೀಯ ಗುರುಕುಲ ಪದ್ಧತಿಯ ಕಲಿಕೆ ತಾಣ...

ಇದೆಲ್ಲವೂ ನೋಡ ಸಿಗುವುದು ಇಲ್ಲಿನ ಉತ್ತನಹಳ್ಳಿಯ ವಿಜಯಗಿರಿಯ ಭಾರತೀ ಯೋಗಧಾಮದಲ್ಲಿ.

ದೇಶದ ಇತಿಹಾಸ, ಕಲೆ, ವೇದ ಕಾಲದ ಜ್ಞಾನ, ವಿಜ್ಞಾನವನ್ನು ಆಧುನಿಕ ಜ್ಞಾನದೊಂದಿಗೆ ಹರಡಲು ಸಿದ್ಧವಾಗುತ್ತಿರುವ ಯೋಗಧಾಮಕ್ಕೆ ಇಂದು 24 ಸಂವತ್ಸರಗಳ ಪ್ರಾಯ. ಏಕಕಾಲದಲ್ಲಿಯೇ ಪ್ರಕೃತಿ ಚಿಕಿತ್ಸಾ ತಾಣ, ಖಗೋಳ ಅಧ್ಯಯನ ಕೇಂದ್ರ, ಯೋಗ ಶಾಲೆ, ಗೋ ಶಾಲೆ, ಗುರುಕುಲವಾಗಿ ಕಾರ್ಯಾಚರಿಸಲು ಹಂತಹಂತವಾಗಿ ಸನ್ನದ್ಧವಾಗುತ್ತಿದೆ.

‘ಕೆ.ಎಲ್.ಶಂಕರನಾರಾಯಣ ಜೋಯ್ಸ್‌ ಅವರಿಂದ 1999ರಲ್ಲಿ ಸಂಸ್ಥೆ ಆರಂಭವಾಯಿತು. ಅವರ ಗುರುಗಳಾದ ಎನ್‌.ಎಸ್. ರಾಮಭದ್ರಾಚಾರ್ಯರು ಅಪಾರ ಸಹಕಾರ ನೀಡಿದ್ದರು. ಭಾರತದ ವಿದ್ಯೆ ಕಲೆ, ಸಂಸ್ಕೃತಿ, ಪರಂಪರೆಗಳನ್ನು ಉಳಿಸಿ– ಬೆಳೆಸುವ ಉದ್ದೇಶ ಸಂಸ್ಥೆಯದು’ ಎಂದು ಯೋಗಧಾಮದ ಕಾರ್ಯದರ್ಶಿ ಆದರ್ಶ ‘ಪ್ರಜಾವಾಣಿ’ಗೆ ತಿಳಿಸಿದರು.‌

‘ಯೋಗ– ಆಯುರ್ವೇದ– ಜ್ಯೋತಿಷದಂಥ ‌ಭಾರತೀಯ ವಿದ್ಯೆಗಳಲ್ಲಿ ಅಡಗಿರುವ ವಿಜ್ಞಾನದ ಕುರಿತ ಅಧ್ಯಯನ, ಅಧ್ಯಾಪನ ಹಾಗೂ ಸಂಶೋಧನೆಯು ಸಂಸ್ಥೆಯ ಪ್ರಧಾನ ಕಾರ್ಯ. ಆರ್ಷ ವಿದ್ಯಾ ಪ್ರತಿಷ್ಠಾನ, ಸದ್ವಿದ್ಯಾ ಪ್ರತಿಷ್ಠಾನ, ವಿದ್ಯಾನಂದಿನೀ ಗುರುಕುಲಗಳ ಮೂಲಕ ಜ್ಞಾನ ಪ್ರಸಾರಕ್ಕೆ ಆದ್ಯತೆ ನೀಡಿದ್ದೇವೆ. ವಾಸ್ತು, ಯೋಗ ಕಾರ್ಯಾಗಾರಗಳೂ ನಡೆಯುತ್ತವೆ’ ಎಂದರು.

35 ವಿದ್ಯಾರ್ಥಿಗಳು: ‘ಎರಡು ವರ್ಷದ ಹಿಂದೆ ಆರಂಭವಾದ ವಿದ್ಯಾನಂದಿನೀ ಗುರುಕುಲದಲ್ಲಿ 1ರಿಂದ 8ನೇ ತರಗತಿವರೆಗೂ ಕಲಿಕೆ ನಡೆಯುತ್ತಿದೆ. 35 ವಿದ್ಯಾರ್ಥಿಗಳಿದ್ದು, ಭಾರತೀಯ ಜ್ಞಾನದೊಂದಿಗೆ ಪಾಶ್ಚಾತ್ಯ ಜ್ಞಾನವನ್ನು ಕಲಿಸಲಾಗುತ್ತಿದೆ. ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಇದು ಮಾನ್ಯತೆ ಹೊಂದಿದ ಶಾಲೆ. ಪೋಷಕರು ಮಕ್ಕಳನ್ನು ಕಳುಹಿಸಲು ಉತ್ಸಾಹ ತೋರಬೇಕು. ಯೋಗ, ಜ್ಯೋತಿಷ, ಆಯುರ್ವೇದ ವಿಷಯವುಳ್ಳ ‘ತ್ರಯೀ ಯೋಗ’ ತರಗತಿಗಳು ಆರಂಭವಾಗಲಿವೆ. ಮಾಹಿತಿಗೆ ಮೊ.ಸಂ. 82771 36950 ಸಂಪರ್ಕಿಸಬಹುದು’ ಎಂದು ಮನವಿ ಮಾಡಿದರು.

ವಾಸ್ತು, ಯೋಗ ಕಾರ್ಯಾಗಾರ ‘ತ್ರಯೀ ಯೋಗ’ ಶೀಘ್ರವೇ ಆರಂಭ ಭೇಟಿ ಸಮಯ: ಬೆಳಿಗ್ಗೆ 10ರಿಂದ ಸಂಜೆ 5
ಅರ್ಧಮಂಡಲೋತ್ಸವ; ಉಪನ್ಯಾಸ ನಾಳೆ
ಭಾರತೀ ಯೋಗಧಾಮ ಸಂಸ್ಥೆಗೆ 24 ವರ್ಷ ತುಂಬಿದ್ದು ಅರ್ಧಮಂಡಲೋತ್ಸವ ಆಚರಣೆ ನಡೆಯುತ್ತಿದೆ. ಅದರ ಪ್ರಯುಕ್ತ ಜ.6ರಂದು ಸಂಜೆ 6ರಿಂದ ರಾತ್ರಿ 8.30ರವರೆಗೆ ಸಂಸ್ಥೆಯಲ್ಲಿ ‘ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಔಚಿತ್ಯ’ ಕುರಿತು ಯುವ ಬ್ರಿಗೇಡ್‌ ಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಉಪನ್ಯಾಸ ನೀಡುವರು. ವಿದ್ಯಾನಂದಿನೀ ಗುರುಕುಲದ ವೆಬ್‌ಸೈಟ್‌ ಬಿಡುಗಡೆಯೂ ನಡೆಯಲಿದೆ’ ಎಂದು ಸಂಸ್ಥೆ ಟ್ರಸ್ಟಿ ಗಣಪತಿ ಭಟ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT