ಮೈಸೂರು: ‘ಸೆಮಿಕಂಡಕ್ಟರ್, ಎಲಿಮೆಂಟ್ ಮ್ಯಾನೇಜ್‌ಮೆಂಟ್ ಸಿಸ್ಟಂ ಸೇರಿದಂತೆ 20ಕ್ಕೂ ಹೆಚ್ಚು ಇಎಸ್‌ಡಿಎಂ ಕಂಪನಿಗಳು ಮೈಸೂರು ಕ್ಲಸ್ಟರ್‌ಗೆ ಸೇರ್ಪಡೆಗೊಳ್ಳುತ್ತಿದ್ದು, ಇದರಿಂದ ₹600 ಕೋಟಿ ಹೊಸ ಹೂಡಿಕೆ ಹರಿದು ಬರುತ್ತಿದೆ’ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಮತ್ತು ಇಂಡಿಯಾ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಅಸೋಸಿಯೇಷನ್ (ಐಇಎಸ್‌ಎ) ಸಹಯೋಗದಲ್ಲಿ ‘ಬಿಕ್‌ಟೆಕ್ ಶೋ-2024’ ಕಾರ್ಯಕ್ರಮದ ನಾಲ್ಕನೇ ಆವೃತ್ತಿ ಅನಾವರಣ ಹಾಗೂ ಕರ್ನಾಟಕ ಇಎಸ್‌ಡಿಎಂ ಬ್ರ್ಯಾಂಡ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಚಿವರ ಅನುಪಸ್ಥಿತಿಯಲ್ಲಿ ಅವರ ಸಂದೇಶವನ್ನು ಓದಲಾಯಿತು.
‘ಮೈಸೂರನ್ನು ಉದ್ಯೋಗಶೀಲ ನಗರವನ್ನಾಗಿ ವರ್ಧಿಸಲು ಮಾಹಿತಿ ತಂತ್ರಜ್ಞಾನ ಇಲಾಖೆ ಯೋಜಿಸಿದೆ. ಸುಮಾರು 150 ಎಕರೆಗಳಷ್ಟು ಜಾಗದಲ್ಲಿ ಪಿಸಿಬಿ ಕ್ಲಸ್ಟರ್ ಸ್ಥಾಪಿಸುವ ಗುರಿ ಹೊಂದಲಾಗಿದೆ. ಅಲ್ಲದೆ ಪ್ರಸ್ತುತ ಇರುವ ಪರೀಕ್ಷಾ ಸೌಲಭ್ಯವನ್ನು ವಿಸ್ತರಿಸಲು, ಮಲ್ಟಿಟೆನೆನ್ಸಿ ಕ್ಲೀನ್ ರೂಮ್ ಸ್ಥಾಪಿಸಲು ತೀರ್ಮಾನಿಸಲಾಗಿದೆ. ಇದರಿಂದ 5 ಸಾವಿರ ಹೊಸ ಉದ್ಯೋಗ ಸೃಷ್ಟಿಯಾಗಿಲಿದೆ. ಅದರಲ್ಲಿಯೂ ಮಹಿಳಾ ಉದ್ಯೋಗಿಗಳಿಗೆ ಅವಕಾಶ ಸಿಗಲಿದೆ. ಈ ಎಲ್ಲ ಬೆಳವಣಿಗೆಯಿಂದ ಜಾಗತಿಕ ಕಂಪನಿಗಳು ಮೈಸೂರಿನಲ್ಲಿ ಬೆಳೆಯಲು ಇದು ಉತ್ತಮ ಸಮಯವಾಗಿದೆ’ ಎಂದು ಸಚಿವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಐಇಎಸ್‌ಎ ಅಧ್ಯಕ್ಷ ವಿ. ವೀರಪ್ಪನ್ ಮಾತನಾಡಿ, ‘ಮೈಸೂರಿನಲ್ಲಿ ಉದ್ಯಮ ಸ್ನೇಹಿ ವಾತಾವರಣ ಇದೆ. ಹೀಗಾಗಿ ಇಲ್ಲಿ ಉದ್ಯಮ ಸ್ಥಾಪನೆಗೆ ಸಹಕಾರ ನೀಡಲಾಗುವುದು’ ಎಂದರು.
ಕೆಡಿಇಎಂ ಅಧ್ಯಕ್ಷ ಬಿ.ವಿ. ನಾಯ್ಡು ಮಾತನಾಡಿ, ‘ಮೈಸೂರಿನಲ್ಲಿ 1.6 ಲಕ್ಷ ಚದರಡಿ ವಿಸ್ತೀರ್ಣದಲ್ಲಿ ದಿ ಗ್ಲೋಬಲ್ ಟೆಕ್ನಾಲಜಿ ಕೇಂದ್ರವನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ವರ್ಷದ ಕೊನೆಗೆ ಕಾರ್ಯಾಚರಣೆ ಮಾಡಲಿದೆ’ ಎಂದು ತಿಳಿಸಿದರು.
ಕೆಡಿಇಎಂ ಸಿಇಒ ಸಂಜೀವ್ ಗುಪ್ತ, ಗ್ಲೋಬಲ್ ಪೌಡ್ರಿ ಸಿಸಿಒ ಜಿತೇಂದ್ರ ಚೆಡ್ಡಾ, ರುಚಿ ಬಿಂದಾಲ್, ಪರಿಣಿಕ ಪವನ್ ರಾಮ್, ಕೆಡೆಮ್ ಸಂಸ್ಥೆಯ ಸುಧೀರ್, ಗೌರವ್, ಸಂಜಯ್ ಗುಪ್ತ, ಚೇತನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.