ಮಂಗಳವಾರ, ಜನವರಿ 31, 2023
19 °C
ಪಾಲಿಕೆಯಿಂದ ಆಯೋಜಿಸಿದ್ದ ಬಜೆಟ್ ಸಮಾಲೋಚನಾ ಸಭೆಯಲ್ಲಿ ಜನರ ಒತ್ತಾಯ

ಬಸ್ ನಿಲ್ದಾಣ ಸ್ಥಳಾಂತರಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಸಬ್‌ ಅರ್ಬನ್‌ ಬಸ್‌ ನಿಲ್ದಾಣವನ್ನು ಬನ್ನಿಮಂಟಪದಲ್ಲಿರುವ ಕೆಎಸ್‌ಆರ್‌ಟಿಸಿ ಡಿಪೊಗೊ ಅಥವಾ ಬೆಂಗಳೂರು–ಮೈಸೂರು ಹೆದ್ದಾರಿಯ ಸಮೀಪಕ್ಕೋ ಸ್ಥಳಾಂತರಿಸಬೇಕು. ನಗರ ಸಾರಿಗೆ ಬಸ್‌ ನಿಲ್ದಾಣವನ್ನು ಸಬ್‌ ಅರ್ಬನ್‌ ನಿಲ್ದಾಣದಿಂದ ಕಾರ್ಯಾಚರಿಸಬೇಕು ಎಂದು ನಾಗರಿಕರು ಒತ್ತಾಯಿಸಿದರು.

ಮೇಯರ್‌ ಶಿವಕುಮಾರ್‌ ಅಧ್ಯಕ್ಷತೆಯಲ್ಲಿ ಇದೇ ಮೊದಲ ಬಾರಿಗೆ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ 2023–24ನೇ ಸಾಲಿನ ಬಜೆಟ್ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಹಲವರು, ಬಸ್ ನಿಲ್ದಾಣ ಸ್ಥಳಾಂತರದ ಅಗತ್ಯದ ಬಗ್ಗೆ ಪ್ರತಿಪಾದಿಸಿದರು. ನಗರದಲ್ಲಿ ವಾಹನಗಳ ದಟ್ಟಣೆ ನಿಯಂತ್ರಣಕ್ಕೆ ಈ ಕ್ರಮ ಸೂಕ್ತವಾಗಿದೆ ಎಂಬ ಸಲಹೆಯನ್ನೂ ಅವರು ನೀಡಿದರು.

‘ವಾಹನಗಳ ನಿಲುಗಡೆ ಜಾಗದ ಸಮಸ್ಯೆ ಉಂಟಾಗಿದ್ದು, ಅದನ್ನೂ ನಿವಾರಿಸಬೇಕು. ಪಾಲಿಕೆಯ ವರಮಾನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಕುಂದುಕೊರತೆ, ಹಕ್ಕೊತ್ತಾಯ:

ಮುಡಾ ಅಧ್ಯಕ್ಷ ಯಶಸ್ವಿನಿ ಸೋಮಶೇಖರ್‌, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ಶಿವಕುಮಾರ್ ಹಾಗೂ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ಕೂಡ ಸಭೆಯಲ್ಲಿ ಭಾಗವಹಿಸಿದ್ದರು. ಹೀಗಾಗಿ, ಆ ಪ್ರಾಧಿಕಾರಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನೂ ಜನರು ಪ್ರಸ್ತಾಪಿಸಿದರು. ಕುಂದುಕೊರತೆಗಳನ್ನೂ ಹೇಳಿಕೊಂಡರು. ವಿಶ್ವಕರ್ಮ, ಸವಿತಾ ಸಮಾಜದವರು ವೃತ್ತಕ್ಕೆ ನಾಮಕರಣ ಮತ್ತು ಪ್ರತಿಮೆ ಸ್ಥಾ‍ಪನೆಗೆ ಹಕ್ಕೊತ್ತಾಯ ಮಂಡಿಸಿದರು.

ಮಾಜಿ ಮೇಯರ್‌ ಬಿ.ಎಲ್.ಭೈರಪ್ಪ ಮಾತನಾಡಿ, ‘ಆಟದ ಮೈದಾನ, ಸ್ಮಶಾನ, ಕಸ ವಿಲೇವಾರಿ ಘಟಕಗಳ‌ ನಿರ್ಮಾಣಕ್ಕೆ ಮುಡಾದವರು ಸಿಎ ನಿವೇಶನಗಳನ್ನು ಪಾಲಿಕೆಗೆ ಆದ್ಯತೆ ಮೇರೆಗೆ ಹಂಚಿಕೆ ಮಾಡಬೇಕು. ವರ್ತುಲ ರಸ್ತೆಯಿಂದಾಚೆ ಆರೋಗ್ಯ ಕೇಂದ್ರಗಳ ನಿರ್ಮಾಣಕ್ಕೆ ಜಾಗ ಒದಗಿಸಬೇಕು’ ಎಂದು ಒತ್ತಾಯಿಸಿದರು.

ಮಾಜಿ ಮೇಯರ್ ಎಚ್.ಎನ್.ಶ್ರೀಕಂಠಯ್ಯ ಮಾತನಾಡಿ, ‘ಪ್ರಾಧಿಕಾರದ ವ್ಯಾಪ್ತಿಯಲ್ಲಿ ಅಭಿವೃದ್ಧಿಪಡಿಸುವ ಬಡಾವಣೆಯಲ್ಲಿ ಒಂದೊಂದು ನಿವೇಶನವನ್ನು ಪಾಲಿಕೆಗೆ ಮೀಸಲಿಡಬೇಕು’ ಎಂದು ಸಲಹೆ ನೀಡಿದರು.

ಎತ್ತರದ ಪ್ರತಿಮೆ ಸ್ಥಾಪಿಸಿ:

ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಮಾತನಾಡಿ, ‘ನಗರದಲ್ಲಿ ಪಾರ್ಕಿಂಗ್ ಸಮಸ್ಯೆ ಬಗೆಹರಿಸಬೇಕು. ಸಯ್ಯಾಜಿರಾವ್ ರಸ್ತೆಯಲ್ಲಿ ಪಾದಚಾರಿ ಮಾರ್ಗ ತೆರವುಗೊಳಿಸಬೇಕು. ಮೃಗಾಲಯವನ್ನು ಸ್ಥಳಾಂತರಿಸಬೇಕು. ಆ ಭಾಗದ ಜನರಿಗೆ ಆಗುತ್ತಿರುವ ತೊಂದರೆ ‌ನಿವಾರಿಸಬೇಕು. ನಗರಕ್ಕೆ ಅಪಾರ ಕೊಡುಗೆ ನೀಡಿದ ನಾಲ್ವಡಿ ಕೃಷ್ಣರಾಜ ‌ಒಡೆಯರ್ ಅವರ ಅತಿ ಎತ್ತರದ ಪ್ರತಿಮೆ ಸ್ಥಾಪಿಸಬೇಕು’ ಎಂದು ಒತ್ತಾಯಿಸಿದರು.

‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದವರು ಬಡಾವಣೆಯನ್ನು ಪಾಲಿಕೆಗೆ ಹಸ್ತಾಂತರ ಮಾಡುವಾಗ ಸಂಪೂರ್ಣ ಸೌಲಭ್ಯಗಳನ್ನು ಒದಗಿಸಿರಬೇಕು’ ಎಂದು ಸಲಹೆ ನೀಡಿದವರು ಮಾಜಿ ಮೇಯರ್‌ ಮೋದಾಮಣಿ.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿ, ‘ಕುವೆಂಪು ಸ್ಮರಣಾರ್ಥ ರಾಷ್ಟ್ರ ಮಟ್ಟದ ಪ್ರಶಸ್ತಿ‌ ಕೊಡುವ ಸಂಪ್ರದಾಯವನ್ನು ಪಾಲಿಕೆ ಆರಂಭಿಸಬೇಕು. ಕನ್ನಡದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ 100 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಬೇಕು. ಬೀದಿನಾಯಿಗಳ ಹಾವಳಿಗೆ ಪರಿಹಾರ ಕಲ್ಪಿಸಬೇಕು. ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಬೇಕು’ ಎಂದು ಆಗ್ರಹಿಸಿದರು.

‘ಸವಿತಾ ಸಮಾಜಕ್ಕೆ ಪಾಲಿಕೆ ಬಜೆಟ್‌ನಲ್ಲಿ ಅನುಕೂಲ ಕಲ್ಪಿಸಬೇಕು. ಯಾವುದಾದರೊಂದು ವೃತ್ತಕ್ಕೆ, ಹಡಪದ ಅಪ್ಪಣ್ಣ ಅಥವಾ ಸವಿತಾ ಮಹರ್ಷಿ ಹೆಸರಿಡಬೇಕು’ ಎಂದು ಸವಿತಾ ಸಮಾಜದ ಅಧ್ಯಕ್ಷ ಎನ್.ಆರ್.ನಾಗೇಶ್ ಕೋರಿದರು.

‘ನಗರದ ಅಲ್ಲಲ್ಲಿ ಪ್ರಭಾವಿ ಮಠಗಳಿಂದ ಆಗಿರುವ ರಸ್ತೆ ಒತ್ತುವರಿ ತೆರವುಗೊಳಿಸಬೇಕು’ ಎಂದು ಮುಖಂಡ ಪುಟ್ಟಸ್ವಾಮಾಚಾರಿ ಒತ್ತಾಯಿಸಿದರು.

‘ಎಂ‌.ಜಿ. ರಸ್ತೆಯ ತರಕಾರಿ ಮಾರುಕಟ್ಟೆಯಲ್ಲಿ ಸಮರ್ಪಕವಾಗಿ ವ್ಯವಸ್ಥೆ ಮಾಡಬೇಕು. ಸಮೀಪದಲ್ಲೇ ಇರುವ ಜಾಗವನ್ನೂ ಬಳಸಿಕೊಳ್ಳಬೇಕು. ಆ ರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಕ್ರಮ ವಹಿಸಬೇಕು’ ಎಂದು ಬಾಲ್ಯ ಪ್ರತಿಷ್ಠಾನದ ಅನಿಲ್ ಒತ್ತಾಯಿಸಿದರು.

ಅಳವಡಿಕೆಗೆ ಕ್ರಮ:

ಮೇಯರ್ ಶಿವಕುಮಾರ್ ಮಾತನಾಡಿ, ‘ನಗರದ ಅಭಿವೃದ್ಧಿಯ ದೂರದೃಷ್ಟಿಯಿಂದ ಈ ಸಭೆ ಕರೆಯಲಾಗಿದೆ. ಸಾರ್ವಜನಿಕರ ಸಲಹೆಗಳು ಅಮೂಲ್ಯವಾಗಿದ್ದು, ಅವುಗಳಲ್ಲಿ ಸಾಧ್ಯವಾಗುವ ಹಾಗೂ ಪಾಲಿಕೆಯ ವ್ಯಾಪ್ತಿಗೆ ಬರುವವನ್ನು ಅಳವಡಿಸಿಕೊಳ್ಳಲಾಗುವುದು’ ಎಂದು ತಿಳಿಸಿದರು.

‘ಬೆಂಗಳೂರು ನಂತರ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಎರಡನೇ ನಗರ ನಮ್ಮದಾಗಿದೆ. ಈಗ ಎಲ್ಲ ರೀತಿಯಲ್ಲೂ ಸಂಪರ್ಕ ಸುಗಮವಾಗಿದೆ. ಇದಕ್ಕೆ ಪೂರಕವಾಗಿ ವ್ಯವಸ್ಥಿತವಾದ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ’ ಎಂದರು.

ಉಪ ಮೇಯರ್ ಡಾ‌‌‌.ಜಿ.ರೂಪಾ, ಸದಸ್ಯರಾದ ಸುನಂದಾ ಫಾಲನೇತ್ರ, ಶಾಂತಕುಮಾರಿ, ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ, ಉಪ ಆಯುಕ್ತರಾದ ರೂಪಾ ಹಾಗೂ ಸವಿತಾ ಇದ್ದರು.

‘ಮುಡಾದಿಂದ ಅದಲಾತ್‌ 10ರಂದು’

ಮುಡಾ ಅಧ್ಯಕ್ಷ ಯಶಸ್ವಿನಿ ಸೋಮಶೇಖರ್ ಮಾತನಾಡಿ, ‘ಕಟ್ಟಡ ತ್ಯಾಜ್ಯ ಸಂಗ್ರಹಿಸಲು ನಾಲ್ಕು ಭಾಗದಲ್ಲಿ ‌ಜಾಗ ಗುರುತಿಸಲಾಗುವುದು. ಪಾಲಿಕೆಗೆ ಸಿಎ ನಿವೇಶನ ಒದಗಿಸಲು ಕ್ರಮ ವಹಿಸಲಾಗುವುದು. ಪ್ರಾಧಿಕಾರದಿಂದ ಹಸ್ತಾಂತರಿಸಿರುವ ಬಡಾವಣೆಯಲ್ಲಿ ಮೂಲಸೌಕರ್ಯ ಇಲ್ಲದಿದ್ದಲ್ಲಿ ಕಲ್ಪಿಸಲಾಗುವುದು’ ಎಂದು ಭರವಸೆ ನೀಡಿದರು.

‘ಬಸ್ ನಿಲ್ದಾಣ ಸ್ಥಳಾಂತರಕ್ಕೆ ಈಗಾಗಲೇ ಜಾಗ ಗುರುತಿಸಲಾಗಿದೆ. ಜ.7ರಂದು ಸಭೆ ನಡೆಯಲಿದ್ದು ಅಲ್ಲಿ ಚರ್ಚಿಸಲಾಗುವುದು. ಮುಡಾದಲ್ಲಿ ಜ.10ರಂದು ಅದಾಲತ್ ಆಯೋಜಿಸಿದ್ದು, ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ವಹಿಸಲಾಗುವುದು’ ಎಂದು ತಿಳಿಸಿದರು.

ಘಟಕ ಸ್ಥಾಪಿಸಿ

ಎಲ್ಲ ಬಡಾವಣೆಗಳಲ್ಲೂ ಸಮರ್ಪಕವಾಗಿ ತೆರಿಗೆ ಕಟ್ಟಿಸಿಕೊಳ್ಳಬೇಕು. ಅಲ್ಲಲ್ಲಿ ಕೊಳಚೆ ನೀರು ಸಂಸ್ಕರಣಾ ಘಟಕ ಸ್ಥಾಪಿಸಬೇಕು.

–ರಮೇಶ್

ಬಾಡಿಗೆ ಹೆಚ್ಚಿಸಬೇಕು

ಪಾಲಿಕೆಯ ಮಳಿಗೆಗಳಿಗೆ ಮಾರುಕಟ್ಟೆ ದರದ ಪ್ರಕಾರ ಬಾಡಿಗೆ ಹೆಚ್ಚಿಸಬೇಕು. ಇದರಿಂದ ವರಮಾನ ಜಾಸ್ತಿಯಾಗುತ್ತದೆ.

–ಟಿ.ರಾಜು

ಆಯೋಜಿಸಿ

ಮಹಾನಗರಪಾಲಿಕೆಯಿಂದ ಕುಸ್ತಿ ಪಂದ್ಯಾವಳಿ ಆಯೋಜಿಸಬೇಕು.

–ಪ್ರಶಾಂತ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು