ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಕ್ಯಾರಲ್‌ ಹಾಡಿನಲ್ಲಿ ಕ್ರಿಸ್‌ಮಸ್‌ ಸಡಗರ

ಸುಧೀರ್‌ಕುಮಾರ್‌ ಎಚ್‌.ಕೆ.
Published 17 ಡಿಸೆಂಬರ್ 2023, 6:07 IST
Last Updated 17 ಡಿಸೆಂಬರ್ 2023, 6:07 IST
ಅಕ್ಷರ ಗಾತ್ರ

ಮೈಸೂರು: ಧರಣಿಗೆ ಯೇಸು ಬಂದ, ಜನಕೆ ಶಾಂತಿ ತಂದ, ಜಗಕ್ಕೆ ಹರುಷ ತಂದ, ಹಲ್ಲೆಲೂಯಾ... ನಗರದ ಕ್ರೈಸ್ತ ಸಮುದಾಯದ ಮನೆಯೊಂದರಲ್ಲಿ ರಾತ್ರಿ ವೇಳೆ ಕೇಳಿ ಬರುತ್ತಿದ್ದ ಕ್ಯಾರಲ್ ಗಾಯನವಿದು.

ನಗರದಲ್ಲಿ ಕ್ರಿಸ್‌ಮಸ್‌ ಸಡಗರ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹಬ್ಬದ ಆಗಮನಕ್ಕೆ ಪೂರಕವಾಗಿ ನಡೆಯುವ ಕ್ಯಾರಲ್ ಗಾಯನಕ್ಕೆಂದು ವಿವಿಧ ಚರ್ಚ್‌ಗಳಿಗೆ ಸಂಬಂಧಿಸಿದ ಗಾಯನ ತಂಡಗಳು ಚರ್ಚ್ ಸದಸ್ಯರ ಮನೆಗ‌ಳಿಗೆ ಭೇಟಿ ನೀಡುತ್ತಿವೆ.

ತಂಡದಲ್ಲಿ ಪುರುಷ, ಮಹಿಳೆ, ಮಕ್ಕಳು ಕೂಡ ಭಾಗವಹಿಸುತ್ತಿದ್ದಾರೆ. ತಾವು ಭೇಟಿ ಕೊಟ್ಟ ಮನೆಯಲ್ಲಿ ತಬಲ, ಹಾರ್ಮೋನಿಯಂ, ಗಿಟಾರ್‌ ಮುಂತಾದ ಸಂಗೀತ ವಾದ್ಯಗಳನ್ನು ಬಳಸಿ, ಸಂತಸದಿಂದ ಹಾಡುಗಳನ್ನು ಹೇಳುತ್ತಾ ಯೇಸು ಬರುತ್ತಿದ್ದಾರೆ ಎಂದು ಸಾರತೊಡಗುತ್ತಾರೆ.

‘ಡಿಸೆಂಬರ್‌ ತಿಂಗಳು ಪೂರ್ತಿ ಕ್ಯಾರಲ್‌ ಗಾಯನ ಮಾಡಲಾಗುತ್ತದೆ. ಚರ್ಚ್‌ಗೆ ಸಂಬಂಧಿಸಿದ ಮನೆಗಳ ಸಂಖ್ಯೆ ಆಧರಿಸಿ ಯೋಜನೆ ರೂಪಿಸುತ್ತೇವೆ. ನಮ್ಮ ಚರ್ಚ್‌ನಲ್ಲಿ 280 ಕುಟುಂಬಗಳಿವೆ. ನಾವು ಒಂದು ದಿನದಲ್ಲಿ 32 ಮನೆಗಳಿಗೆ 2 ಗುಂಪು ಮಾಡಿಕೊಂಡು ತೆರಳುತ್ತೇವೆ. ತಂಡವೂ ಈ ತಿಂಗಳು 9 ದಿನದ ಕ್ಯಾರಲ್‌ ಯೋಜನೆ ರೂಪಿಸಿದೆ’ ಎಂದು ನಗರದ ಹಾರ್ಡ್ವಿಕ್ ಚರ್ಚ್ ಕ್ಯಾರಲ್‌ ಗಾಯನ ತಂಡದ ಸಂಚಾಲಕ ಎಸ್‌.ರಂಜಿತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಗಾಯನಕ್ಕಿದೆ ಪಟ್ಟಿ

‘ಗಾಯನಕ್ಕೆ ತೆರಳಬೇಕಿರುವ ಮನೆಗಳ ಪಟ್ಟಿಯೂ ತಿಂಗಳ ಹಿಂದೆಯೇ ಸಿದ್ಧವಾಗಿರುತ್ತದೆ. ಡಿಸೆಂಬರ್ ಆರಂಭದಿಂದಲೇ ತಂಡದ ಸಂಚಾರ ಶುರುವಾಗುತ್ತದೆ. ಸಂಜೆ 6.30ರ ಸುಮಾರಿಗೆ ತಮ್ಮ ತಮ್ಮ ಚರ್ಚ್ ಬಳಿ ಸೇರುವ ಕ್ಯಾರಲ್ ಗಾಯನ ತಂಡದ ಸದಸ್ಯರು ತಾವು ತೆರಳಲಿರುವ ಮನೆಗಳ ಮಾರ್ಗವನ್ನು ಅನುಸರಿಸಿ ಒಂದೊಂದರಂತೆ ಭೇಟಿ ನೀಡುತ್ತಾರೆ. ಕೆಲವೆಡೆ ತಡರಾತ್ರಿವರೆಗೂ ಗಾಯನ ಸಾಗುತ್ತದೆ. ಪ್ರತಿ ಮನೆಯಲ್ಲೂ ಸಂಭ್ರಮದಿಂದ ಸ್ವಾಗತಿಸಲಾಗುತ್ತಿದೆ’ ಎಂದರು.

ಕ್ರೈಸ್ತರಲ್ಲಿನ ಮುಖ್ಯ ಪಂಗಡಗಳಾದ ಕ್ಯಾಥೊಲಿಕ್‌ ಮತ್ತು ಪ್ರೊಟೆಸ್ಟೆಂಟ್‌ಗಳಿಬ್ಬರೂ ಕ್ಯಾರಲ್‌ ಗಾಯನ ಮಾಡುತ್ತಾರೆ. ಗಾಂಧಿನಗರ, ಶ್ರೀರಾಂಪುರ, ಶ್ರೀರಾಂಪುರ 2ನೇ ಹಂತ, ವಿಜಯನಗರ, ಜೆ.ಪಿ.ನಗರ, ಅಶೋಕಪುರಂಗಳಲ್ಲಿ, ಲಷ್ಕರ್ ಮೊಹಲ್ಲಾ ಬಳಿಯ ಸೇಂಟ್ ಫಿಲೋಮಿನಾ ಚರ್ಚ್, ಕೆ.ಆರ್. ನಗರದ ಅಂಥೋನಿ ಚರ್ಚ್, ಬೆಂಗಳೂರು– ನೀಲಗಿರಿ ರಸ್ತೆಯ ವೆಸ್ಲಿ ಕ್ಯಾಥೆಡ್ರಲ್, ಸೇಂಟ್ ಬಾರ್ಥಲೋಮಿಯಸ್ ಕ್ಯಾಥೆಡ್ರಲ್, ವಿಜಯನಗರದ 4ನೇ ಹಂತದ ಇನ್ಫ್ಯಾಂಟ್ ಜೀಸಸ್ ಚರ್ಚ್, ಹಾರ್ಡ್ವಿಕ್ ಚರ್ಚ್ ಸುತ್ತಮುತ್ತಲಿನ ಸಮುದಾಯದ ಮನೆಗಳಲ್ಲೂ ಕ್ಯಾರಲ್‌ ಗಾಯನ ನಡೆಯುತ್ತಿದೆ.

‘ಆಗಮನ ಭಾನುವಾರ’ದಿಂದ ಸಡಗರ

‘ನವೆಂಬರ್‌ ತಿಂಗಳ ಕೊನೆಯ ಭಾನುವಾರವನ್ನು ಆಗಮನ ಭಾನುವಾರವೆಂದು ಕ್ರೈಸ್ತರು ಕರೆಯುತ್ತಾರೆ. ಅಂದು ಚರ್ಚ್‌ ಬಳಿ ಸೇರಿ ಪ್ರಾರ್ಥಿಸಿ ಕ್ರಿಸ್‌ಮಸ್‌ ಹಬ್ಬಕ್ಕೆ ತಯಾರಿ ನಡೆಸುತ್ತೇವೆ’ ಎಂದು ಹಾರ್ಡ್ವಿಕ್‌ ಚರ್ಚ್‌ ಕಾರ್ಯದರ್ಶಿ ರೊನಾಲ್ಡ್‌ ಜೋಸೆಫ್‌ ತಿಳಿಸಿದರು. ‘ಎಲ್ಲ ಚರ್ಚ್‌ಗಳಲ್ಲೂ ಡಿಸೆಂಬರ್‌ ತಿಂಗಳಿಡೀ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ’ ಎಂದರು.

ಮನೆಗಳಿಗೆ ತೆರಳಿ ಕ್ಯಾರಲ್‌ ಹಾಡುಗಳನ್ನು ಹಾಡುತ್ತಾ ಹಬ್ಬಕ್ಕೆ ಚರ್ಚ್‌ಗೆ ಆಗಮಿಸಲು ಸಂದೇಶ ನೀಡುತ್ತೇವೆ.
ಎಸ್‌.ರಂಜಿತ್‌, ಹಾರ್ಡ್ವಿಕ್ ಚರ್ಚ್ ಕ್ಯಾರಲ್‌ ತಂಡದ ಸಂಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT