ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ‘ಚಾಮುಂಡಿ ಬೆಟ್ಟ: ಪ್ಲಾಸ್ಟಿಕ್‌ ಮುಕ್ತಗೊಳಿಸಿ’

ಪ್ರವೇಶದ್ವಾರದಲ್ಲೇ ತಪಾಸಣೆ ನಡೆಸಲು ಸಲಹೆ: ಪರಿಶೀಲಿಸುವ ಭರವಸೆ ನೀಡಿದ ಸುಭಾಷ್‌ ಬಿ. ಅಡಿ
Last Updated 26 ಮಾರ್ಚ್ 2023, 6:12 IST
ಅಕ್ಷರ ಗಾತ್ರ

ಮೈಸೂರು: ಚಾಮುಂಡಿ ಬೆಟ್ಟದ ರಸ್ತೆ ಬದಿಯಲ್ಲೆಲ್ಲ ತ್ಯಾಜ್ಯ ಸಿಗುತ್ತಿದೆ. ಮದ್ಯ ಬಾಟಲಿಗಳು ಬಿದ್ದಿವೆ. ಪ್ಲಾಸ್ಟಿಕ್‌ನಿಂದಾಗಿ ಕಾಳ್ಗಿಚ್ಚು ಹೆಚ್ಚಾಗುತ್ತಿದೆ. ಕಡ್ಡಾಯವಾಗಿ ಪ್ಲಾಸ್ಟಿಕ್‌ ನಿಷೇಧಿಸಬೇಕು. ಪ್ರವೇಶದ್ವಾರದಲ್ಲಿ ತಪಾಸಣೆ ಮಾಡಬೇಕು.

ಪಾಲಿಕೆಯಲ್ಲಿ ಶನಿವಾರ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ರಾಜ್ಯ ಮಟ್ಟದ ಸಮಿತಿ ಅಧ್ಯಕ್ಷ ಸುಭಾಷ್‌ ಬಿ. ಅಡಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಂಘ, ಸಂಸ್ಥೆಗಳು ಹಾಗೂ ಪಾಲಿಕೆ ಪಾಲುದಾರರ ಸಭೆಯಲ್ಲಿ ನಾಗರಿಕರು ಮೇಲಿನಂತೆ ಆಗ್ರಹಿಸಿದರು.

‘ಚಾಮುಂಡಿ ಬೆಟ್ಟ ಉಳಿಸಿ ಸಮಿತಿ ಮೂಲಕ ಪ್ಲಾಸ್ಟಿಕ್‌ ಮುಕ್ತ ಚಾಮುಂಡಿಬೆಟ್ಟ ಅಭಿಯಾನ ನಡೆಸಿ ಟನ್‌ಗಟ್ಟಲೆ ತ್ಯಾಜ್ಯ ಸಂಗ್ರಹಿಸಿದ್ದೆವು. ಭಕ್ತರು, ಪ್ರವಾಸಿಗರು ಕಸದ ತಾಣವಾಗಿಸಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಮಾತ್ರ ಪ್ರವೇಶ ಕಲ್ಪಿಸಬೇಕು’ ಎಂದು ಸಮಿತಿಯ ಲೀಲಾ ಶಿವಕುಮಾರ್‌ ಆಗ್ರಹಿಸಿದರು. ‌

ಅದಕ್ಕೆ ಪ್ರತಿಕ್ರಿಯಿಸಿದ ಸುಭಾಷ್‌ ಬಿ. ಅಡಿ, ‘ತಿರುಪತಿ ಮಾದರಿಯಲ್ಲಿ ಬೆಟ್ಟವನ್ನು ಪ್ಲಾಸ್ಟಿಕ್‌ ಮುಕ್ತವಾಗಿಸಲು ಜಿಲ್ಲಾಧಿಕಾರಿ ಹಾಗೂ ಚಾಮುಂಡಿ ಬೆಟ್ಟ ಗ್ರಾಮ ಪಂಚಾಯಿತಿ ಜೊತೆ ಚರ್ಚಿಸಲಾಗುವುದು. ಬಸ್‌ ಹಾಗೂ ವಾಹನ ತಪಾಸಣೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗುವುದು’ ಎಂದರು.

‘ಎಲ್ಲೆಡೆ ಏಕಬಳಕೆ ಪ್ಲಾಸ್ಟಿಕ್ ಬಳಕೆ ಮಾಡುವವರಿಗೆ ಕಡ್ಡಾಯವಾಗಿ ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರನ್ನೊಳಗೊಂಡ ತಪಾಸಣಾ ತಂಡವನ್ನು ರಚಿಸಲಾಗುವುದು. ಪ್ಲಾಸ್ಟಿಕ್ ಬಳಕೆ ಮಾಡುವ ಹೋಟೆಲ್‌, ಮಳಿಗೆದಾರರ ಪರವಾನಗಿ ರದ್ದು ಮಾಡಬೇಕು’ ಎಂದರು.

‘ತ್ಯಾಜ್ಯ ನಿರ್ವಹಣೆಗೆ ವಿಷನ್ ಗ್ರೂಪ್ ರಚಿಸಿ ಸಲಹೆ ಸ್ವೀಕರಿಸಲಾಗುತ್ತಿತ್ತು. ಸಲಹಾ ಸಮಿತಿ ನಿಷ್ಕ್ರಿಯವಾಗಿದೆ’ ಎಂದು ಶೂನ್ಯ ತ್ಯಾಜ್ಯ ನಿರ್ವಹಣಾ ಘಟಕದ ಉಸ್ತುವಾರಿ ವಹಿಸಿಕೊಂಡಿರುವ ನಾಗಪತಿ ಹೇಳಿದರು.

‘ಕಸ ವಿಂಗಡಣೆ ಮಾಡದ ಪ್ರತಿಮನಗೂ ದಂಡ ವಿಧಿಸಬೇಕು. ಇಲ್ಲದಿದ್ದರೆ ದೇಶದ ಸ್ವಚ್ಛನಗರಿಯಾಗಲು ಸಾಧ್ಯವಿಲ್ಲ. ಮಧ್ಯಪ್ರದೇಶದ ಇಂದೋರ್‌ ಸ್ವಚ್ಛತೆಯಲ್ಲಿ ಮೊದಲ ಸ್ಥಾನ ಪಡೆಯಲು ಪೌರಕಾರ್ಮಿಕರ ಜೊತೆಗೆ ಎಲ್ಲರ ಸಹಕಾರ ಸಿಕ್ಕಿದೆ. ಅದೇ ಮಾದರಿಯಲ್ಲಿ ಮೈಸೂರು ಕೆಲಸ ಮಾಡಬೇಕು’ ಎಂದು ಅಡಿ ಸಲಹೆ ನೀಡಿದರು.

‘ಮೈಸೂರು ಪಾರಂಪರಿಕ ನಗರಿಯಾಗಿದ್ದು, ಎಲ್ಲ ಕಟ್ಟಡಗಳು ಕುಸಿಯುತ್ತಿವೆ’ ಎಂದು ಇತಿಹಾಸತಜ್ಞ ಪ್ರೊ.ಎನ್‌.ಎಸ್‌.ರಂಗರಾಜು ಗಮನಸೆಳೆದರು. ಅದಕ್ಕೆ ಪ್ರತಿಕ್ರಿಯಿಸಿದ ಸುಭಾಷ್‌ ಬಿ. ಅಡಿ, ‘ಎಲ್ಲ ಉದ್ಯಮಿಗಳ ಸಹಕಾರ ಪಡೆದು ಅಭಿವೃದ್ಧಿಗೊಳಿಸಬೇಕು’ ಎಂದರು.

ವಿವಿಧ ಸಂಸ್ಥೆಗಳ ಸುರೇಶ್ ಕುಮಾರ್ ಜೈನ್, ನಾರಾಯಣ ಗೌಡ, ಗಂಟಯ್ಯ, ವಿಶ್ವನಾಥ್, ರಮೇಶ್ ಕಿಕ್ಕೇರಿ, ಲೀಲಾ ಶಿವಕುಮಾರ್, ಲೀಲಾ ವೆಂಕಟೇಶ್, ನಾಗಪತಿ, ಶೈಲಜೇಶ್ ಸಲಹೆ ನೀಡಿದರು.

ಪಾಲಿಕೆ ಆಯುಕ್ತ ಜಿ. ಲಕ್ಷ್ಮೀಕಾಂತ್ ರೆಡ್ಡಿ, ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜ್, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯತ್ರಿ, ಮುಡಾ ಆಯುಕ್ತ ಜಿ.ಟಿ.ದಿನೇಶ್‌ ಕುಮಾರ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT