ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ‘ಮಕ್ಕಳಲ್ಲಿ ಸಂವೇದನೆ ಜಾಗೃತಗೊಳಿಸಬೇಕಿದೆ’

‘ಆರ್ಟ್‌ ಇಂಟ್ರೋ’ ಬೇಸಿಗೆ ಶಿಬಿರ ಉದ್ಘಾಟನೆ
Published 15 ಏಪ್ರಿಲ್ 2024, 16:35 IST
Last Updated 15 ಏಪ್ರಿಲ್ 2024, 16:35 IST
ಅಕ್ಷರ ಗಾತ್ರ

ಮೈಸೂರು: ‘ಮಕ್ಕಳ ಸಂವೇದನೆ ಜಾಗೃತಗೊಳಿಸುವುದು ನಮ್ಮ ಕರ್ತವ್ಯ. ಅದಕ್ಕಾಗಿ ತರಬೇತಿ ಕಾರ್ಯಗಾರ ಅಗತ್ಯ’ ಎಂದು ಇಂಡಿಯನ್‌ ಥಿಯೇಟರ್‌ ಫೌಂಡೇಶನ್‌ನ ಮ್ಯಾನೇಜಿಂಗ್‌ ಟ್ರಸ್ಟಿ ಪ್ರಸನ್ನ ತಿಳಿಸಿದರು.

ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ, ವರ್ಣ ಕಲೆಕ್ಟಿವ್‌ ಮತ್ತು ಮೈಸೂರು ಆರ್ಟ್‌ ಸೆಂಟರ್ ವತಿಯಿಂದ ಸೋಮವಾರದಿಂದ ಆರಂಭವಾದ ‘ಆರ್ಟ್‌ ಇಂಟ್ರೋ’ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

‘ಕಲಾ ಶಿಕ್ಷಣದ ಬಗ್ಗೆ ಹಲವರಲ್ಲಿ ತಪ್ಪು ಕಲ್ಪನೆಯಿದೆ. ಕಲಾ ಪ್ರಕಾರವನ್ನು ಗಮನಿಸುವುದು, ಸಿನಿಮಾ, ಚಿತ್ರ ನೋಡುವುದು, ಸಂಗೀತ ಕೇಳುವುದು ಹೇಗೆ ಎಂದು ಕಳಿಸುವುದಷ್ಟೇ ಶಿಕ್ಷಣವೆಂದು ನಾವು ನಂಬಿದ್ದೇವೆ. ಆದರೆ ಮಕ್ಕಳಲ್ಲಿನ ಸಂವೇದನೆ ಜಾಗೃತಗೊಳಿಸದಿದ್ದರೆ ಕಲಾ ಶಿಕ್ಷಣ ನೀಡುವುದು ಅಸಾಧ್ಯ’ ಎಂದರು.

‘ಈಚೆಗೆ ಅನೇಕ ಕಡೆ ಬೇಸಿಗೆ ತರಬೇತಿಗಳು ಚಿಗುರೊಡೆದಿದೆ. ಅಲ್ಲಿನ ಶಿಕ್ಷಣ ಮಕ್ಕಳ ಕೌಶಲ ಅರಳಿಸುವಂತಿರಬೇಕು. ಕಲೆಯೊಂದಿಗೆ ಬದುಕನ್ನು ಸವಿಯುವ ಪಾಠವನ್ನು ಪರಿಚಯಿಸಬೇಕು. ಶಿಕ್ಷಣ ವ್ಯವಸ್ಥೆಯಲ್ಲಿ ಇದಕ್ಕೆ ಅವಕಾಶ ಕಡಿಮೆಯಾಗಿರುವುದರಿಂದ ತರಬೇತಿ ಶಿಬಿರಗಳ ಆಯೋಜನೆ ಅನಿವಾರ್ಯವಾಗಿದೆ’ ಎಂದು ಹೇಳಿದರು.

ಶಿಕ್ಷಣ ತಜ್ಞ ಎಚ್‌.ಎಸ್‌.ಉಮೇಶ್‌ ಮಾತನಾಡಿ, ‘ಮಕ್ಕಳಲ್ಲಿ ಹೊಸತನ ತುಂಬುವ ಪಠ್ಯೇತರ ಚಟುವಟಿಕೆಯ ಜಾಗವನ್ನು ಮೊಬೈಲ್‌ ಆಕ್ರಮಿಸಿದೆ. ಹೀಗಾಗಿ ಅವರಲ್ಲಿ ಸೃಜನಶೀಲತೆ ಹೆಚ್ಚಿಸುವ ಪ್ರಯತ್ನ ನಿರಂತರವಾಗಿ ನಡೆಯಬೇಕಾದ ಅವಶ್ಯಕತೆಯಿದೆ’ ಎಂದು ತಿಳಿಸಿದರು.

ಪ್ರಸನ್ನ ಅವರು ರಚಿಸಿ, ನಿರ್ದೇಶಿಸಿದ ‘ಪಿಪ್ಪಿಗೊಂದು ಪಪ್ಪಿ’ ನಾಟಕವನ್ನು ಸಂಸ್ಥೆಯ ಕಲಾವಿದರು ಪ್ರದರ್ಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT