ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಅರ್ಧ ಕಿ.ಮೀ.ನಲ್ಲೇ ಸಿಕ್ತು 4 ಮೂಟೆ ಮದ್ಯದ ಬಾಟಲಿ!

ಪ್ಲಾಸ್ಟಿಕ್ ಮುಕ್ತ ಅಭಿಯಾನ
Last Updated 3 ಮಾರ್ಚ್ 2023, 13:40 IST
ಅಕ್ಷರ ಗಾತ್ರ

ಮೈಸೂರು: ಅರಣ್ಯ ಇಲಾಖೆಯಿಂದ ‘ನಾಡದೇವಿಯ ಒಡಲನ್ನು ತ್ಯಾಜ್ಯ ಮುಕ್ತಗೊಳಿಸೋಣ’ ಎಂಬ ಘೋಷಣೆಯೊಂದಿಗೆ ‘ಪ್ಲಾಸ್ಟಿಕ್‌ ಮುಕ್ತ ಚಾಮುಂಡಿಬೆಟ್ಟ ಅಭಿಯಾನ’ವನ್ನು ಶುಕ್ರವಾರದಿಂದ ಆರಂಭಿಸಲಾಗಿದ್ದು, ಮಾರ್ಚ್‌ 21ರವರೆಗೆ ಹಮ್ಮಿಕೊಳ್ಳಲಾಗಿದೆ.

ಆಸಕ್ತರು, ಸಂಘ–ಸಂಸ್ಥೆಗಳವರು, ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಪರಿಸರ ಪ್ರೇಮಿಗಳು ಈ ಅಭಿಯಾನದಲ್ಲಿ ಭಾಗವಹಿಸಬೇಕು ಮತ್ತು ಚಾಮುಂಡಿಬೆಟ್ಟವನ್ನು ಸಂರಕ್ಷಿಸುವ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಇಲಾಖೆ ತಿಳಿಸಿದೆ.

ವಿಶ್ವ ವನ್ಯಜೀವಿ ದಿನದಿಂದ ಆರಂಭಿಸಿದ ಅಭಿಯಾನ, ವಿಶ್ವ ಅರಣ್ಯ ದಿನದವರೆಗೆ ಮುಂದುವರಿಯಲಿದೆ.

ಬೆಟ್ಟಕ್ಕೆ ಬರುವವರು ಪ್ಲಾಸ್ಟಿಕ್‌ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುವುದು ಸಾಮಾನ್ಯವಾಗಿದೆ. ಅಲ್ಲದೇ, ಅಲ್ಲಲ್ಲಿ ಗುಂಪು ಗುಂಪಾಗಿ ಕುಳಿತು ಮದ್ಯ ಸೇವಿಸುವುದು ಕೂಡ ನಡೆಯುತ್ತಿದೆ. ಹೀಗೆ, ‘ಪಾರ್ಟಿ’ ಮಾಡಿದವರು ಮದ್ಯದ ಬಾಟಲಿಗಳನ್ನು ಎಲ್ಲೆಂದರಲ್ಲಿ ಬಿಸಾಡಿ ಹೋಗುತ್ತಿದ್ದಾರೆ. ಇದೆಲ್ಲದರಿಂದಲೂ ಬೆಟ್ಟದ ಪರಿಸರ ಹಾಳಾಗುತ್ತಿದೆ. ಅಲ್ಲದೇ, ಬೇರೆ ಜಿಲ್ಲೆ, ರಾಜ್ಯ ಹಾಗೂ ದೇಶಗಳಿಂದ ಬರುವ ಪ್ರವಾಸಿಗರಿಗೆ ಅಲ್ಲಲ್ಲಿ ಸಂಗ್ರಹವಾಗಿರುವ ತ್ಯಾಜ್ಯದ ಗುಡ್ಡೆಗಳು ಸ್ವಾಗತ ನೀಡುತ್ತಿವೆ! ಇದನ್ನು ತಪ್ಪಿಸಲು ಅರಣ್ಯ ಇಲಾಖೆಯು ಅಭಿಯಾನವನ್ನು ಆರಂಭಿಸಿದೆ. ಅಭಿಯಾನದ ಮೊದಲ ದಿನವಾದ ಶುಕ್ರವಾರ ಅರಣ್ಯ ಇಲಾಖೆಯ ಸಿಬ್ಬಂದಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

‘ನಾವು ಮತ್ತು ನಮ್ಮ ಸಿಬ್ಬಂದಿ ಶುಕ್ರವಾರ ಅರ್ಧ ಕಿ.ಮೀ.ವರೆಗೆ ಮೂರು ತಾಸುಗಳವರೆಗೆ ಸ್ವಚ್ಛತಾ ಕಾರ್ಯ ಕೈಗೊಂಡೆವು. ತಾವರೆಕಟ್ಟೆ ಮುಖ್ಯ ಗೇಟ್‌ನಿಂದ ಅಭಿಯಾನ ಆರಂಭಿಸಲಾಗಿದೆ. ಅಲ್ಲಿ ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ಬಾಟಲಿಗಳು, ತಿಂಡಿ–ತಿನಿಸುಗಳ ಪೇಪರ್‌ಗಳು, ಕವರ್‌ಗಳು ಮೊದಲಾದವುಗಳನ್ನು ಹಾಕಿರುವುದು ಕಂಡುಬಂದಿದ್ದು, ಅವುಗಳನ್ನು ಸಂಗ್ರಹಿಸಲಾಯಿತು’ ಎಂದು ವಲಯ ಅರಣ್ಯಾಧಿಕಾರಿ (ನಗರ ಹಸಿರೀಕರಣ ವಲಯ) ಧನ್ಯಶ್ರೀ ಎಂ.ಆರ್. ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಲಾಖೆಯ 12 ಮಂದಿ ಹಾಗೂ ಧಾರ್ಮಿಕ ದತ್ತಿ ಇಲಾಖೆಯಿಂದ ಇಬ್ಬರನ್ನು ಬಳಸಿಕೊಂಡಿದ್ದೇವೆ. 30 ಚೀಲ ಪ್ಲಾಸ್ಟಿಕ್‌ ಹಾಗೂ 4 ಮೂಟೆಗಳಷ್ಟು ಮದ್ಯದ ಗಾಜಿನ ಬಾಟಲಿಗಳನ್ನು ಸಂಗ್ರಹಿಸಲಾಯಿತು’ ಎಂದು ಮಾಹಿತಿ ನೀಡಿದರು.

‘ಚಾಮುಂಡಿ ಬೆಟ್ಟಕ್ಕೆ ಬರುವವರು ಪ್ಲಾಸ್ಟಿಕ್‌ ಅಥವಾ ಏನೇ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡದೇ, ನಿಗದಿತ ಸ್ಥಳಗಳಲ್ಲಿ ಹಾಕಿ ಸಹಕರಿಸಬೇಕು. ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಿದರೆ ನಾಡದೇವಿಯ ಒಡಲನ್ನು ತ್ಯಾಜ್ಯ ಮುಕ್ತಗೊಳಿಸಬಹುದಾಗಿದೆ’ ಎಂದು ಹೇಳಿದರು.

‘ದೇವಸ್ಥಾನದ ಆವರಣವನ್ನು ಪ್ಲಾಸ್ಟಿಕ್‌ ಮುಕ್ತ ಪ್ರದೇಶ ಎಂದು ಈಗಾಗಲೇ ಧಾರ್ಮಿಕ ದತ್ತಿ ಇಲಾಖೆಯಿಂದ ಘೋಷಿಸಲಾಗಿದೆ. ಇಡೀ ಬೆಟ್ಟವನ್ನು ಪ್ಲಾಸ್ಟಿಕ್‌ ಮುಕ್ತ ವಲಯವನ್ನಾಗಿಸಬೇಕು ಎನ್ನುವುದು ನಮ್ಮ ಉದ್ದೇಶ. ಹಂತ ಹಂತವಾಗಿ ಪ್ಲಾಸ್ಟಿಕ್‌ ಬಳಕೆ ನಿಷೇಧಕ್ಕೆ ಕ್ರಮ ಕೈಗೊಳ್ಳಲು ಉದ್ದೇಶಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಅಭಿಯಾನದಲ್ಲಿ ಭಾಗವಹಿಸಲು ಬಯಸುವವರು ಮೊ.ಸಂಖ್ಯೆ: 80506 63068 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT