ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ನಾಯಕರು ತುಷ್ಟೀಕರಣ ಮಾಡಿದ್ದರೇ?: ಸಿಎಂ

Published 2 ಮಾರ್ಚ್ 2024, 23:30 IST
Last Updated 2 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ಮೈಸೂರು: ‘ಬಿಜೆಪಿ ಸರ್ಕಾರವಿದ್ದಾಗ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್‌ ಸ್ಫೋಟವಾಗಿತ್ತು. ಆಗ, ಆ ಪಕ್ಷದ ನಾಯಕರು ಅಲ್ಪಸಂಖ್ಯಾತರ ತುಷ್ಟೀಕರಣ ಮಾಡಿದ್ದರೇ?’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಳಿದರು.

‘ಅಲ್ಪಸಂಖ್ಯಾತರ ತೃಷ್ಟೀಕರಣದಿಂದಾಗಿ ಬಾಂಬ್‌ ಸ್ಫೋಟದಂತಹ ಕೃತ್ಯ ನಡೆದಿದೆ’ ಎಂಬ ಬಿಜೆಪಿಯವರ ಆರೋಪಕ್ಕೆ ಇಲ್ಲಿ ಶನಿವಾರ ತಿರುಗೇಟು ನೀಡಿದ ಅವರು, ‘ಬಿಜೆಪಿ ಅಧಿಕಾರದಲ್ಲಿದ್ದ ಕಾಲದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಗಳಿಗೆ ಏನು ಕಾರಣ, ಅದು ಅಲ್ಪಸಂಖ್ಯಾತರ ತೃಷ್ಟೀಕರಣವಾ, ಜೆಪಿಯವರು ರಾಜಕೀಯಕ್ಕಾಗಿ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಅಲ್ಪಸಂಖ್ಯಾತರ ಪರ ಇರುವುದಕ್ಕೂ– ಈ ಪ್ರಕರಣಕ್ಕೂ ಏನು ಸಂಬಂಧ’ ಎಂದು ಪ್ರಶ್ನಿಸಿದರು.

‘ರಾಮೇಶ್ವರ ಕೆಫೆಯಲ್ಲಿ ಸ್ಫೋಟಕ ಇಟ್ಟು ಹೋಗಿದ್ದ ಆರೋಪಿಯ ಪತ್ತೆ ಕಾರ್ಯ ಚುರುಕಾಗಿ ನಡೆಯುತ್ತಿದೆ. ಮಾಸ್ಕ್ ಹಾಗೂ ಟೋಪಿ ಹಾಕಿಕೊಂಡು ಬಂದ ವ್ಯಕ್ತಿ ಸ್ಫೋಟಕ್ಕೆ ಕಾರಣವಾಗಿದ್ದಾನೆ’ ಎಂದು ತಿಳಿಸಿದರು.

‘ಆತ ಹೋಟೆಲ್‌ನಲ್ಲಿ ತಿಂಡಿಯ ಟೋಕನ್ ತೆಗೆದುಕೊಂಡು, ಅಲ್ಲೇ ಕುಳಿತು ಟೈಮರ್ ಫಿಕ್ಸ್ ಮಾಡಿ ಬ್ಲಾಸ್ಟ್ ಮಾಡಿ ನಂತರ ಹೋಗಿದ್ದಾನೆ. ಅವನು ಬಸ್‌ನಿಂದ ಇಳಿಯುವುದು, ಬರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆ ವ್ಯಕ್ತಿಯ ಗುರುತು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ’ ಎಂದು ಹೇಳಿದರು.

‘ಇದು ಒಬ್ಬ ವ್ಯಕ್ತಿಯ ಕೃತ್ಯವಾ ಅಥವಾ ಸಂಘಟನೆಯದ್ದಾ ಎಂಬುದು ಗೊತ್ತಾಗಿಲ್ಲ. ಇದು ಭಯೋತ್ಪಾದಕರ ಕೃತ್ಯವಾ ಎನ್ನುವುದೂ ಸ್ಪಷ್ಟವಾಗಿಲ್ಲ. ಎಲ್ಲವೂ ಇನ್ನೂ ತನಿಖೆಯ ಹಂತದಲ್ಲಿದೆ. ಒಟ್ಟು 9 ಮಂದಿ ಗಾಯಗೊಂಡಿದ್ದಾರೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ’ ಎಂದು ತಿಳಿಸಿದರು.

‘ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೂ– ಈ ಸ್ಫೋಟಕ್ಕೂ ಸಾಮ್ಯತೆ ಇಲ್ಲ. ಇಲ್ಲಿ ಯಾವ ಕುಕ್ಕರ್ ಕೂಡ ಸ್ಫೋಟವಾಗಿಲ್ಲ’ ಎಂದರು.

‘ಈ ಘಟನೆಯನ್ನು ಖಂಡಿಸುತ್ತೇನೆ. ಇದರಲ್ಲಿ ಪ್ರತಿಪಕ್ಷದವರು ರಾಜಕಾರಣ ಮಾಡಬಾರದು’ ಎಂದು ಮತ್ತೊಮ್ಮೆ ಕೋರಿದರು.

ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ:

‘ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆಯೋ ಇಲ್ಲವೋ ಎನ್ನುವುದು ಇನ್ನೂ ದೃಢಪಟ್ಟಿಲ್ಲ. ಎಫ್‌ಎಸ್‌ಎಲ್‌ ವರದಿ ಬಂದಿಲ್ಲ. ವರದಿ ಬಂದ ಮೇಲೆ, ತಪ್ಪು ನಡೆದಿದ್ದು ಸಾಬೀತಾದರೆ ಕ್ರಮ ಕೈಗೊಳ್ಳಲಾಗುವುದು. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ’ ಎಂದು ಪ್ರತಿಕ್ರಿಯಿಸಿದರು.

‘ವರದಿಯೇ ಬಂದಿಲ್ಲವಾದ್ದರಿಂದ ಬಿಜೆಪಿಯ ಆರೋಪಗಳಿಗೆ ಏನೆಂದು ಉತ್ತರ ಕೊಡಲಿ?’ ಎಂದು ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT