ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಕೈ’ ಸರ್ಕಾರಕ್ಕೆ ವರ್ಷ: ಮೈಸೂರಿಗೆ ಸಿಕ್ಕಿದ್ದು ಘೋಷಣೆಯಷ್ಟೇ!

ಮೈಸೂರಿನವರೇ ಮುಖ್ಯಮಂತ್ರಿ, ಇಬ್ಬರು ಪ್ರಭಾವಿ ಸಚಿವರಿದ್ದರೂ ಅನುಷ್ಠಾನಕ್ಕಿಲ್ಲ ಆದ್ಯತೆ
Published 21 ಮೇ 2024, 5:41 IST
Last Updated 21 ಮೇ 2024, 5:41 IST
ಅಕ್ಷರ ಗಾತ್ರ

ಮೈಸೂರು: ಮೈಸೂರಿನವರೇ ಆಗಿರುವ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಒಂದು ವರ್ಷದ ಸಂಭ್ರಮದಲ್ಲಿದೆ.  ಈ ಅವಧಿಯಲ್ಲಿ ಜಿಲ್ಲೆಗೆ ದೊರೆತ ಯೋಜನೆಗಳ ಪೈಕಿ ಬಹುತೇಕವು ಘೋಷಣೆಗಷ್ಟೆ ಸೀಮಿತವಾಗಿವೆ!

ಸಮಾಜ ಕಲ್ಯಾಣ (ಡಾ.ಎಚ್‌.ಸಿ. ಮಹದೇವಪ್ಪ) ಹಾಗೂ ರೇಷ್ಮೆ, ಪಶುಸಂಗೋಪನೆ (ಕೆ.ವೆಂಕಟೇಶ್‌)ಯಂತಹ ಪ್ರಮುಖ ಖಾತೆಗಳು ಜಿಲ್ಲೆಗೆ ದೊರೆತಿವೆ. ‘ಪಂಚ ಗ್ಯಾರಂಟಿ’ ಯೋಜನೆಗಳ ಗಳ ರಾಜ್ಯ ಮಟ್ಟದ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾಗಿ ಜಿಲ್ಲೆಯವರೇ ಆದ ಪುಷ್ಪಾ ಅಮರನಾಥ್ ಹಾಗೂ ಸೂರಜ್‌ ಹೆಗ್ಡೆ ನೇಮಕಗೊಂಡಿದ್ದಾರೆ. ಆದರೆ, ಬಜೆಟ್‌ನಲ್ಲಿ ಜಿಲ್ಲೆಗೆ ಯೋಜನೆಗಳ ಘೋಷಣೆಗೆ ತೋರಿದ ಕಾಳಜಿಯನ್ನು ಅನುಷ್ಠಾನಕ್ಕೆ ತೋರದಿರುವುದು ಕಂಡುಬಂದಿದೆ.

ಗ್ಯಾರಂಟಿ ಯೋಜನೆಗಳ ಪೈಕಿ ಪ್ರಮುಖವಾದ ‘ಗೃಹಲಕ್ಷ್ಮಿ’ ಯೋಜನೆಗೆ ಚಾಲನೆ ದೊರೆತದ್ದೂ ಇಲ್ಲೇ. ಹೋದ ವರ್ಷ ಆ.30ರಂದು ಮಹಾರಾಜ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ ಉದ್ಘಾಟನೆಗೊಂಡಿತ್ತು.

ಒಟ್ಟು 15 ಬಾರಿ ಬಜೆಟ್ ಮಂಡಿಸಿದ ದಾಖಲೆ ಸಿದ್ದರಾಮಯ್ಯ ಅವರದು. 2ನೇ ಬಾರಿಗೆ ಮುಖ್ಯಮಂತ್ರಿ ಆಗಿರುವ ಅವರು,  ವರ್ಷದಲ್ಲಿ ಎರಡು ಬಜೆಟ್ ಮಂಡಿಸಿದ್ದಾರೆ.

2023ರಲ್ಲಿ ಘೋಷಿಸಿದ್ದೇನು?:

2023ರಲ್ಲಿ ಘೋಷಿಸಿದ್ದ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇಗುಲದ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿಲ್ಲ. ಸರ್ಕಾರಿ ಆಸ್ಪತ್ರೆಗಳಿಗೆ ಅನುದಾನದ ‘ಚೈತನ್ಯ’ ಸಿಕ್ಕಿಲ್ಲ.

ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ)ದಲ್ಲಿ ವರುಣ ಕ್ಷೇತ್ರದ ಇಮ್ಮಾವು ಕೈಗಾರಿಕಾ ಪ್ರದೇಶದಲ್ಲಿ ಚಿತ್ರನಗರಿ ಸ್ಥಾಪಿಸಲಾಗುವುದು ಎಂದಿದ್ದರು. ಸಿಎಂ ಸ್ವಕ್ಷೇತ್ರದಲ್ಲಿನ ಯೋಜನೆಯೇ ಪುಸ್ತಕದಲ್ಲಿ ಉಳಿದಿದೆ.

ನಗರದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾರ್ಯಾರಂಭಿಸಲಾಗಿದೆ. ಸುಟ್ಟ ಗಾಯಗಳ ಘಟಕ ಸ್ಥಾಪನೆಗೆ ಹಾಗೂ ಟ್ರಾಮಾಕೇರ್ ಸೆಂಟರ್‌ ಕಾರ್ಯಾಚರಣೆ ಶುರು ಮಾಡಿವೆ. ಅದಕ್ಕೆ ಅನುದಾನ ದೊರೆತಿಲ್ಲ. ಮೈಸೂರಿನಲ್ಲಿ ಸೈಕ್ಲಿಂಗ್ ವೇಲೋಡ್ರೋಮ್ ಸ್ಥಾಪನೆಗೆ ₹10 ಕೋಟಿ ಅನುದಾನ ಈವರೆಗೂ ಬಂದಿಲ್ಲ.

ನಜರ್‌ಬಾದ್‌ನ ಚಾಮುಂಡಿವಿಹಾರ ಕ್ರೀಡಾಂಗಣದ ಬಳಿ ಎಆರ್‌ (ಆಗ್ಯೂಮೆಂಟೆಡ್ ರಿಯಾಲಿಟಿ) ಮತ್ತು ವಿಆರ್‌ (ವರ್ಚುವಲ್‌ ರಿಯಾಲಿಟಿ) ತಂತ್ರಜ್ಞಾನದೊಂದಿಗೆ ಅಂತರರಾಷ್ಟ್ರೀಯ ಗುಣಮಟ್ಟದ ‘ಕರ್ನಾಟಕ ಪುರಾತತ್ವ ವಸ್ತುಸಂಗ್ರಹಾಲಯ ಮತ್ತು ಕಲಾ ಗ್ಯಾಲರಿ’ ನಿರ್ಮಾಣದ ಬಗ್ಗೆ ಘೋಷಿಸಲಾಗಿತ್ತು. ಅದಿನ್ನೂ ಸಮಗ್ರ ಯೋಜನಾ ವರದಿ ಸಿದ್ಧಪಡಿಸುವ ಹಂತದಲ್ಲೇ ಇದೆ.

ಸರ್ಕಾರ ಹೇಳಿದಂತೆ, ದಸರಾ ವಸ್ತುಪ್ರದರ್ಶನ ಆವರಣ ದೆಹಲಿಯ ಪ್ರಗತಿ ಮೈದಾನದ ಮಾದರಿಯಲ್ಲಿ ಮೇಲ್ದರ್ಜೆಗೇರಲೇ ಇಲ್ಲ. ಅಲ್ಲಿ ಏಕತಾಮಾಲ್‌ ನಿರ್ಮಾಣಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದ್ದು ಬಿಟ್ಟರೆ ಬೇರ‍್ಯಾವ ಬೆಳವಣಿಗೆಯೂ ಆಗಿಲ್ಲ.

ಕೂರ್ಗಳ್ಳಿಯಲ್ಲಿರುವ ವನ್ಯಜೀವಿಗಳ ಪುನರ್ವಸತಿ ಕೇಂದ್ರದ ಬಲವರ್ಧನೆ, ಮೈಸೂರಿನಲ್ಲಿ ನಿರ್ಮಾಣಗೊಳ್ಳಲಿರುವ ಕಿದ್ವಾಯಿ ಮಾದರಿ ಕ್ಯಾನ್ಸರ್ ಘಟಕಕ್ಕೆ ₹20 ಕೋಟಿ ಬಿಡುಗಡೆಯಾಗಿಲ್ಲ ಎನ್ನುತ್ತವೆ ಮೂಲಗಳು.

ರೇಷ್ಮೆ ಕೃಷಿ ಅಭಿವೃದ್ಧಿಗೆ ಮೈಸೂರು ಬಿತ್ತನೆ ಪ್ರದೇಶದಲ್ಲಿ ಮೂಲ ಸೌಕರ್ಯ ಬಲಪಡಿಸುವ ಕೆಲಸ ರೇಷ್ಮೆ ಸಚಿವ ಕೆ.ವೆಂಕಟೇಶ್ ತವರಲ್ಲೇ ಕಾಗದದಲ್ಲಷ್ಟೆ ಉಳಿದಿದೆ. ಮೈಸೂರು ವಿಮಾನನಿಲ್ದಾಣದ ರನ್‌ವೇ ವಿಸ್ತರಣೆ ಯೋಜನೆಯು ಇನ್ನೂ ಭೂಸ್ವಾಧೀನದ ಪ್ರಕ್ರಿಯೆಯಿಂದ ಮೇಲೆದ್ದಿಲ್ಲ.

ಒಮ್ಮೆಯಷ್ಟೇ ಕೆಡಿಪಿ ಸಭೆ!

ಸಿದ್ದರಾಮಯ್ಯ ಅವರು ಒಂದು ವರ್ಷದ ಅವಧಿಯಲ್ಲಿ ಬರೋಬ್ಬರಿ 27 ಬಾರಿ ನಗರ ಅಥವಾ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಲೋಕಸಭೆ ಚುನಾವಣೆ ಪ್ರಚಾರ ಮತದಾನ ಖಾಸಗಿ ಹಾಗೂ ಸರ್ಕಾರಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ರಸ್ತೆ ಮಾರ್ಗದ ಬದಲಿಗೆ ವಿಶೇಷ ವಿಮಾನ ಹಾಗೂ ಹೆಲಿಕಾಪ್ಟರ್‌ನಲ್ಲಿ ಬಂದಿದ್ದೇ ಹೆಚ್ಚು. ಅವರು ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆಯನ್ನು ಇಲ್ಲಿ ಒಮ್ಮೆ ಮಾತ್ರವೇ ನಡೆಸಿದ್ದಾರೆ.

ಸಿಎಂಗೆ ಸಿಗದ ‘ಪೌರ ಸನ್ಮಾನ’!

ಮುಖ್ಯಮಂತ್ರಿ ಆದವರಿಗೆ ಅವರ ತವರಿನಲ್ಲಿ ನಗರಪಾಲಿಕೆ ಅಥವಾ ನಗರ ಸ್ಥಳೀಯ ಸಂಸ್ಥೆಯಿಂದ ಪೌರಸನ್ಮಾನ ನೀಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ಸಿದ್ದರಾಮಯ್ಯ  ಅವರಿಗೆ 2ನೇ ಅವಧಿಯಲ್ಲಿ ಪೌರಸನ್ಮಾನ ಇನ್ನೂ ಸಿಕ್ಕಿಲ್ಲ. ಕಾರ್ಯಕ್ರಮ ಆಯೋಜಿಸುವ ಸಂಬಂಧ ಮಹಾನಗರ‍ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ಒಮ್ಮೆ ಚರ್ಚೆಯಾಗಿತ್ತು. ಆದರೆ ನಡೆಯಲಿಲ್ಲ. ಬಳಿಕ ಆಡಳಿತ ಮಂಡಳಿಯ ಅಧಿಕಾರದ ಅವಧಿ ಪೂರ್ಣಗೊಂಡಿದೆ. ಸದ್ಯ ನಗರಪಾಲಿಕೆಯಲ್ಲಿ ಜನಪ್ರತಿನಿಧಿಗಳಿಲ್ಲ.

2024ರಲ್ಲಿ...

ನೆಫ್ರೊ– ನ್ಯುರಾಲಜಿ ಆಸ್ಪತ್ರೆಯ ಹಾಸಿಗೆಗಳ ಸಾಮರ್ಥ್ಯವನ್ನು 40ರಿಂದ 100 ಹಾಸಿಗೆಗೆ ಮೇಲ್ದರ್ಜೆಗೆ ಏರಿಸಲಾಗುವುದು ಕೆ.ಆರ್‌. ಆಸ್ಪತ್ರೆಯಲ್ಲಿ ₹75 ಕೋಟಿ ವೆಚ್ಚದಲ್ಲಿ ಹೊರ ರೋಗಿ ವಿಭಾಗದ ಕಟ್ಟಡ ನಿರ್ಮಾಣ ಕ್ರಿಟಿಕಲ್‌ ಕೇರ್‌ ಬ್ಲಾಕ್‌ ಸ್ಥಾಪನೆ ಮಾನವ ಹಾಲಿನ ಬ್ಯಾಂಕ್‌ ಸ್ಥಾಪನೆ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಕಟ್ಟಡಕ್ಕೆ ₹54 ಕೋಟಿ ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜು ಹಾಸ್ಟೆಲ್‌ ನಿರ್ಮಾಣಕ್ಕೆ ₹ 116 ಕೋಟಿ ಲ್ಯಾನ್ಸ್‌ಡೌನ್‌ ಮತ್ತು ದೇವರಾಜ ಮಾರುಕಟ್ಟೆ ಪಾರಂಪರಿಕ ಕಟ್ಟಡಗಳ ನವೀಕರಣಕ್ಕೆ ಕ್ರಮ ವಹಿಸಲಾಗುವುದು ಎಂದು ಘೋಷಿಸಿದ್ದಾರೆ. ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಮೈಸೂರು ಹೊರವಲಯದಲ್ಲಿ ಫ್ಲೈ ಓವರ್‌ ನಿರ್ಮಾಣ  ಕುಕ್ಕರಹಳ್ಳಿ ಕೆರೆ ಹಾಗೂ ಕೆಆರ್‌ಎಸ್‌ ರಸ್ತೆ (ಮೇಟಗಳ್ಳಿ) ರಸ್ತೆ ಬಳಿ ರೈಲ್ವೆ ಸೇತುವೆಗಳ ನಿರ್ಮಾಣ ಮೈಸೂರು ಎಪಿಎಂಸಿಯಲ್ಲಿ ₹40 ಕೋಟಿ ವೆಚ್ಚದಲ್ಲಿ ಶೀತಲೀಕರಣ ಘಟಕದ ಕೆಲಸವೂ ಶುರುವಾಗಿಲ್ಲ. ಎಪಿಎಂಸಿಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಜೈವಿಕ ಇಂಧನ ಘಟಕ ನಿರ್ಮಾಣ ಮೈಸೂರಿನಲ್ಲಿ ಪೆರಿಪೆರಿಯಲ್‌ ರಸ್ತೆ ನಿರ್ಮಾಣದ ಕಾರ್ಯಸಾಧ್ಯತಾ ವರದಿ ತಯಾರಿಕೆ ಮೈಸೂರು ವಿಮಾನ ನಿಲ್ದಾಣ ರನ್‌ವೇ ವಿಸ್ತರಣೆಗೆ ₹43 ಕೋಟಿ ಒದಗಿಸಲಾಗುವುದು. ವಿಜ್ಞಾನ ಕೇಂದ್ರ ಅಥವಾ ತಾರಾಲಯ ಸ್ಥಾಪನೆ ಹಾಗೂ ಮೈಸೂರು ಸಮೀಪ ಇಂಟಿಗ್ರೇಟೆಡ್‌ ಟೌನ್‌ಶಿಪ್ ನಿರ್ಮಾಣ ಮಾಡಲಾಗುವುದು ಎಂದು ಹೇಳಲಾಗಿದೆ. ಇವುಗಳೂ ಕಾಗದದಲ್ಲೇ ಇವೆ. ವರುಣದಲ್ಲಿ ಜಿಟಿಟಿಸಿ ಸ್ಥಾಪನೆ ನಾಲೆಗಳ ಅಭಿವೃದ್ಧಿಗೆ ಕ್ರಮವಾಗಿಲ್ಲ. ಕೆಸ್ತೂರು ಕೊಪ್ಪಲು ದೇವನೂರು ಏತ ನೀರಾವರಿ ಮರದೂರು ಕೆರೆ ತುಂಬಿಸುವ ಯೋಜನೆಯೂ ಚಾಲನೆ ಪಡೆದಿಲ್ಲ. ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಸಿದ್ಧಾರ್ಥ ನಗರದ ಜಿಲ್ಲಾಮಟ್ಟದ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನೆಗೆ ಫೆ.19ರಂದು ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಬಳಿಕ ಅಲ್ಲಿ ಯಾವುದೇ ಕೆಲಸ ಆರಂಭಗೊಂಡಿಲ್ಲ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT