ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿನಲ್ಲೇ ಮುಖ್ಯಮಂತ್ರಿ ವಾಸ್ತವ್ಯ

ಮೈಲಾರಿ ದೋಸೆ ತಿಂದು ಕಾಲೇಜು ದಿನಗಳನ್ನು ನೆನೆದ ಸಿಎಂ
Published 25 ಮೇ 2024, 4:23 IST
Last Updated 25 ಮೇ 2024, 4:23 IST
ಅಕ್ಷರ ಗಾತ್ರ

ಮೈಸೂರು: ನಗರಕ್ಕೆ ಗುರುವಾರ ಸಂಜೆ ಬಂದು ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶುಕ್ರವಾರವೂ ಇಲ್ಲೇ ವಾಸ್ತವ್ಯ ಹೂಡಿದರು.

ಬೆಳಿಗ್ಗೆ ನಜರ್‌ಬಾದ್‌ನ ಮೈಲಾರಿ ಹೋಟೆಲ್‌ನಲ್ಲಿ ದೋಸೆ ತಿಂದರು. ಅವರಿಗೆ ಸಚಿವರಾದ ಡಾ.ಎಚ್‌.ಸಿ. ಮಹದೇವಪ್ಪ, ಕೆ.ವೆಂಕಟೇಶ್, ಶಾಸಕ ಸಿ.ಪುಟ್ಟರಂಗಶೆಟ್ಟಿ, ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ, ಮುಡಾ ಅಧ್ಯಕ್ಷ ಕೆ.ಮರೀಗೌಡ ಮೊದಲಾದವರು ಜತೆಗಿದ್ದರು.

‘ಮೈಲಾರಿ ಹೋಟೆಲ್‌ನಲ್ಲಿ ತಿಂಡಿ ತಿನ್ನುವಾಗ ನನ್ನ ಕಾಲೇಜು ದಿನಗಳು ನೆನಪಾದವು. ನನ್ನ ಬದುಕಿನ ಅವಿಸ್ಮರಣೀಯ ನೆನಪುಗಳೆಲ್ಲವೂ ಮೈಸೂರಿನ ಜೊತೆ ಬೆಸೆದುಕೊಂಡಿವೆ. ಮೈಸೂರು ನನಗೆ ಹುಟ್ಟೂರು ಮಾತ್ರವಲ್ಲ ಬದುಕು ಕೊಟ್ಟ ಊರು. ದೈಹಿಕವಾಗಿ ದೂರವಿದ್ದಾಗಲೂ ಇಲ್ಲಿನ ನೆನಪು ಮನಸ್ಸಿಗೆ ಸದಾ ಹತ್ತಿರವಾಗಿರುತ್ತದೆ. ಈ ಮಣ್ಣಿನ ಋಣ ಬಹಳ ದೊಡ್ಡದು, ಅದರೆದುರು ನಾವು ಸಣ್ಣವರು’ ಎಂದು ‘ಎಕ್ಸ್‌’ನಲ್ಲಿ ಹಂಚಿಕೊಂಡು ನೆನಪುಗಳಿಗೆ ಜಾರಿದರು.

ಬಳಿಕ, ತಮ್ಮ ನಿವಾಸದಲ್ಲಿ ಆಪ್ತರೊಂದಿಗೆ ಅನೌಪಚಾರಿಕ ಸಭೆ ನಡೆಸಿದರು. ಮನೆಯ ಬಳಿಗೆ ಬಂದಿದ್ದ ಕೆಲವರಿಂದ ಅಹವಾಲು ಸ್ವೀಕರಿಸಿದರು. ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಎಲ್ಲರಿಂದಲೂ ಮನವಿ ಪತ್ರ ಸ್ವೀಕರಿಸಿದರು.

ಚಾಮರಾಜನಗರ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಮನವಿ ಸಲ್ಲಿಸಿದರು ಎಂದು ತಿಳಿದುಬಂದಿದೆ.

ನಂತರ ಮುಖ್ಯಮಂತ್ರಿ, ತಾಲ್ಲೂಕಿನ ಕಾಟೂರಿನ ತಮ್ಮ ತೋಟದಲ್ಲಿ ನಡೆದಿರುವ ಮನೆ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿದರು. ಬಳಿಕ ಟಿ.ಕೆ.ಲೇಔಟ್‌ನಲ್ಲಿರುವ ನಿವಾಸದಲ್ಲಿ ವಾಸ್ತವ್ಯ ಹೂಡಿದರು.

ಮೇ 25 (ಶನಿವಾರ) ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಕೈಗೊಂಡಿರುವ ಅವರು, ಇಲ್ಲಿಂದ ಬೆಳಿಗ್ಗೆ 11.30ಕ್ಕೆ ವಿಶೇಷ ವಿಮಾನದಲ್ಲಿ ತೆರಳುವರು. ರಾತ್ರಿ 8.20ಕ್ಕೆ ವಾಪಸಾಗಿ ನಗರದಲ್ಲೇ ವಾಸ್ತವ್ಯ ಹೂಡುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT