ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದನಾಗಿ ಆಯ್ಕೆ: ಲಕ್ಷ್ಮಣ ವಿಶ್ವಾಸ

‘ಅಭಿವೃದ್ಧಿ ವಿಷಯ ಮುಂದಿಟ್ಟುಕೊಂಡು ಚುನಾವಣೆ ಮಾಡಿದ ತೃಪ್ತಿ ಇದೆ’
Published 27 ಏಪ್ರಿಲ್ 2024, 14:05 IST
Last Updated 27 ಏಪ್ರಿಲ್ 2024, 14:05 IST
ಅಕ್ಷರ ಗಾತ್ರ

ಮೈಸೂರು: ‘ಜಾತಿ, ಧರ್ಮವನ್ನು ಟೀಕಿಸದೆ ಅಭಿವೃದ್ಧಿ ವಿಷಯಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಿದ್ದು, ಮತದಾರರು ನಮ್ಮ ಪಕ್ಷದ ಪರವಾಗಿ ಮತ ನೀಡಿದ್ದಾರೆಂಬ ಆತ್ಮವಿಶ್ವಾಸವಿದೆ. ಸುಲಭ ಗೆಲುವು ನನ್ನದಾಗಲಿದೆ’ ಎಂದು ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಂ.ಲಕ್ಷ್ಮಣ ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕ್ಷೇತ್ರದಲ್ಲಿ ಮತದಾನದ ಪ್ರಮಾಣ ಹೆಚ್ಚಿರುವುದು ನಮಗೆ ಪೂರಕ ವಾತಾವರಣ ಸೃಷ್ಟಿಸಿದೆ. ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದು, ಅವರು ಕಾಂಗ್ರೆಸ್‌ ಬೆಂಬಲಿಸಿದ್ದಾರೆಂಬ ವಿಶ್ವಾಸವಿದೆ. ಇಷ್ಟೇ ಅಲ್ಲದೆ ಜಾತಿ, ಭೇದ ಮರೆತು ಜನ ಬೆಂಬಲ ನೀಡಿದ್ದಾರೆ. ಶೇ 85ರಷ್ಟು ಮಹಿಳೆಯರು ನನಗೆ ಮತ ನೀಡಿದ್ದಾರೆ’ ಎಂದು ಹೇಳಿದರು.

‘ಚುನಾವಣೆಗಾಗಿ ಬಿಜೆಪಿ ಬಹಳಷ್ಟು ಕಸರತ್ತು ನಡೆಸಿತು. ರಾಜಕಾರಣವೇ ಬೇಡವೆಂದು ಕುಳಿತಿದ್ದವರನ್ನು ಕರೆತಂದು ಚುನಾವಣೆಗೆ ನಿಲ್ಲಿಸಿದರು. ಮಹಾರಾಜರ ನೆಪದಲ್ಲಿ ಜನರನ್ನು ಸೆಳೆಯುವ ಕುತಂತ್ರ ನಡೆಸಿದರು. ಟಿಕೆಟ್‌ ಘೋಷಣೆಯಾದಾಗ ಯದುವೀರ್‌ ಪಕ್ಷದ ಸದಸ್ಯತ್ವವನ್ನೂ ಪಡೆದಿರಲಿಲ್ಲ’ ಎಂದರು.

ಮೋದಿ ಗೆಲ್ಲಸದಿರಲು ಜನರ ತೀರ್ಮಾನ: ‘ಮೈಸೂರಿನ ಚುನಾವಣಾ ಪ್ರಚಾರ ಸಭೆಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್‌ ಟೀಕೆಯಲ್ಲೇ ಸಮಯ ಕಳೆದರು. ಕ್ಷೇತ್ರದಲ್ಲಿ ಅವರು ಮಾಡಿದ ಅಭಿವೃದ್ಧಿಯೇನು, ಮುಂದೆ ಏನು ಮಾಡುತ್ತೇವೆ ಎಂಬುದನ್ನು ತಿಳಿಸಲೇ ಇಲ್ಲ. ಹೀಗಾಗಿ ಜನರು ಆ ವ್ಯಕ್ತಿಯನ್ನು ಮತ್ತೆ ಅಧಿಕಾರಕ್ಕೆ ತರುವುದು ಬೇಡವೆಂದು ನಿರ್ಧರಿಸಿದ್ದಾರೆ’ ಎಂದು ಹೇಳಿದರು.

‘ನನ್ನ ಜಾತಿಯ ಬಗ್ಗೆ ಪ್ರಶ್ನಿಸಿ ಪ್ರತಾಪ ಸಿಂಹ ನನ್ನನ್ನು ಬೈದರು. ಆಗಲೂ ಅಭಿವೃದ್ಧಿ ಕುರಿತು ಮಾತನಾಡಿಲ್ಲ. ಚುನಾವಣೆಗೆ ಎರಡು ದಿನವಿರುವಾಗ ಕ್ಷೇತ್ರದಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ನನ್ನ ಗೆಲುವಿನ ಬಳಿಕ ಅವರನ್ನು ಭೇಟಿಯಾಗಿ, ಸುಳ್ಳು ಮಾತನಾಡುತ್ತಿದ್ದದ್ದು ಹೇಗೆ ಎಂಬುದನ್ನು ತಿಳಿದುಕೊಳ್ಳುತ್ತೇನೆ’ ಎಂದರು.

‘ಸಾಮಾನ್ಯ ಕಾರ್ಯಕರ್ತನಾದ ನನಗೆ ಪಕ್ಷ ಟಿಕೆಟ್‌ ನೀಡಿದೆ. ಅದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ  ಡಿ.ಕೆ.ಶಿವಕುಮಾರ್‌ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಮುಖ್ಯಮಂತ್ರಿಯನ್ನು ನಾನು ಸಾಯುವವರೆಗೂ ಮರೆಯುವುದಿಲ್ಲ. ಮುಂದೆ ಅವರು ಹೇಳಿದ್ದನ್ನು ಪಾಲಿಸಿಕೊಂಡಿರುತ್ತೇನೆ. ಬೆಂಬಲಿಸಿದ ಪಕ್ಷದ ಮುಖಂಡರು, ತೆರೆಮರೆಯಲ್ಲಿ ದುಡಿದ ಕಾರ್ಯಕರ್ತರು ಹಾಗೂ ವಿವಿಧ ಸಂಘಟನೆಯವರನ್ನು ನೆನಪಿನಲ್ಲಿಟ್ಟುಕೊಳ್ಳುತ್ತೇನೆ. ಅಹಿತಕರ ಘಟನೆ ನಡೆಯದಂತೆ ಚುನಾವಣೆ ನಡೆಸಿದ ಆಯೋಗದ ಕಾರ್ಯ ಅಭಿನಂದನೀಯ’ ಎಂದು ಹೇಳಿದರು.

ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಮುಖಂಡರಾದ ಶಿವಣ್ಣ, ಮಹೇಶ್, ಗಿರೀಶ್, ನಾಗೇಶ್, ಬಿ.ಎಂ.ರಾಮು ಇದ್ದರು.

‘2 ಕಡೆ ಕಚೇರಿ ತೆರೆಯುತ್ತೇನೆ’

‘ಸಂಸದನಾಗಿ ಆಯ್ಕೆಯಾದ ಬಳಿಕ ಕೊಡಗು ಹಾಗೂ ಮೈಸೂರಿನಲ್ಲಿ ಪ್ರತ್ಯೇಕ ಕಚೇರಿ ತೆರೆಯುತ್ತೇನೆ. ಶಾಸಕರೊಂದಿಗೆ ಸೇರಿ ಕ್ಷೇತ್ರದ ಅಭಿವೃದ್ಧಿ ಮಾಡಲು ಬದ್ಧನಾಗಿದ್ದೇನೆ. ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಲಿದ್ದು ಕರ್ನಾಟಕಕ್ಕೆ ದೊರೆಯಬೇಕಾದ ತೆರಿಗೆ ಹಣವನ್ನು ತೆಗೆದುಕೊಂಡು ಬರುತ್ತೇವೆ’ ಎಂದು ಲಕ್ಷ್ಮಣ ವಿಶ್ವಾಸ ವ್ಯಕ್ತಪಡಿಸಿದರು.

‘ಇತರ ಕಡೆಗಳಲ್ಲಿ ಪ್ರಚಾರ’

‘ಚುನಾವಣೆಗೆ ಸಂಬಂಧಿಸಿದ ಕೆಲವು ಕೆಲಸಗಳನ್ನು ಮುಗಿಸಿಕೊಳ್ಳುತ್ತಿದ್ದೇನೆ. ಕುಟುಂಬದೊಂದಿಗೆ ಮೂರು ದಿನ ಪ್ರವಾಸಕ್ಕೆ ತೆರಳಿ ವಿಶ್ರಾಂತಿ ಪಡೆಯಲಿದ್ದೇನೆ. ಮೇ 7ರಂದು ನಡೆಯುವ 2ನೇ ಹಂತದ ಚುನಾವಣೆಯಲ್ಲಿನ ಕಾಂಗ್ರೆಸ್‌ ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕೆ ತೆರಳಲಿದ್ದೇನೆ’ ಎಂದು ಲಕ್ಷ್ಮಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT