ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಶಿಕ್ಷಕರ ಕ್ಷೇತ್ರ: 'ಕೈ ನಾಯಕರ ಬಲ ಪ್ರದರ್ಶನ'

ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ನಾಮಪತ್ರ ಸಲ್ಲಿಕೆ, ಸಿದ್ದರಾಮಯ್ಯ ಖುದ್ದು ಹಾಜರಿ
Published 14 ಮೇ 2024, 15:24 IST
Last Updated 14 ಮೇ 2024, 15:24 IST
ಅಕ್ಷರ ಗಾತ್ರ

ಮೈಸೂರು: ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮರಿತಿಬ್ಬೇಗೌಡ ಮಂಗಳವಾರ ಉಮೇದುವಾರಿಕೆ ಸಲ್ಲಿಸಿದ್ದು, ಈ ಭಾಗದ ಕಾಂಗ್ರೆಸ್ ನಾಯಕರೆಲ್ಲ ಹಾಜರಿದ್ದು ಶಕ್ತಿ ಪ್ರದರ್ಶನ ಮಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಖುದ್ದು ಹಾಜರಿದ್ದು ಪಕ್ಷದ ಅಭ್ಯರ್ಥಿ ಪರ ನಾಮಪತ್ರ ಸಲ್ಲಿಕೆಗೆ ಕೈ ಜೋಡಿಸಿದರು. ಮಧ್ಯಾಹ್ನ 12.45ರ ಸುಮಾರಿಗೆ ಪ್ರಾದೇಶಿಕ ಆಯುಕ್ತರ ಕಚೇರಿಗೆ ಬಂದ ಅವರು, ಮರಿತಿಬ್ಬೇಗೌಡ ಜೊತೆಗೆ ನೈರುತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್‌ ಅವರ ನಾಮಪತ್ರ ಸಲ್ಲಿಕೆಗೂ ಕೈ ಜೋಡಿಸಿದರು. ಮುಖ್ಯಮಂತ್ರಿಗೆ ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳ ಸಚಿವರು ಮತ್ತು ಕಾಂಗ್ರೆಸ್‌ ಶಾಸಕರು ಸಾಥ್‌ ನೀಡಿದರು.

ಸಚಿವರಾದ ಎಚ್‌.ಸಿ. ಮಹದೇವಪ್ಪ, ಕೆ.ವೆಂಕಟೇಶ್‌, ಮಧು ಬಂಗಾರಪ್ಪ, ಚಲುವರಾಯಸ್ವಾಮಿ, ಶಾಸಕರಾದ ತನ್ವೀರ್ ಸೇಠ್‌, ಕೃಷ್ಣಮೂರ್ತಿ, ನರೇಂದ್ರ ಸ್ವಾಮಿ, ಶಿವಲಿಂಗೇಗೌಡ, ರಮೇಶ್‌ ಬಂಡಿಸಿದ್ದೇಗೌಡ, ಕೆ. ಹರೀಶ ಗೌಡ, ರವಿಶಂಕರ್, ಪರಿಷತ್‌ ಸದಸ್ಯ ಪುಟ್ಟಣ್ಣ ಈ ಸಂದರ್ಭ ಹಾಜರಿದ್ದರು.

ನಾಮಪತ್ರ ಸಲ್ಲಿಕೆಗೂ ಮುನ್ನ ನಗರದ ಪಡುವಾರಹಳ್ಳಿಯ ಲೀಲಾ ಚೆನ್ನಯ್ಯ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್‌ನಿಂದ ಪ್ರಚಾರ ಸಭೆ ನಡೆಯಿತು.

ಮರಿತಿಬ್ಬೇಗೌಡ ಮಾತನಾಡಿ, ‘ನಾಲ್ಕು ಜಿಲ್ಲೆಗಳ ಶಿಕ್ಷಕರು‌ ನಾಲ್ಕು ಬಾರಿ‌ ಸತತವಾಗಿ ನನ್ನನ್ನು ಗೆಲ್ಲಿಸಿದ್ದಾರೆ. ಮೊದಲು ಆಯ್ಕೆಯಾಗಿದ್ದು ಕಾಂಗ್ರೆಸ್‌ನಿಂದ. ಈಗ ಮತ್ತೆ ತವರು ಪಕ್ಷದಿಂದ ಟಿಕೆಟ್ ಪಡೆದಿದ್ದೇನೆ. ಉಪ ಸಭಾಪತಿಯಾಗಿ ಸದನದ ಗೌರವ ಹೆಚ್ಚಿಸುವ ಕೆಲಸ‌ ಮಾಡಿದ್ದೇನೆ. 24 ವರ್ಷದಲ್ಲಿ 20 ವರ್ಷ ವಿರೋಧ ಪಕ್ಷದಲ್ಲೇ ಕೆಲಸ ಮಾಡಿದ್ದೇನೆ. ಪಕ್ಷ ಬದಲಿಸಿದ್ದರೂ ಶಿಕ್ಷಕರ ಆದ್ಯತೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ನನಗೆ ಶಿಕ್ಷಕರ ಒಡನಾಟ ಬಿಟ್ಟು ಬೇರೆ ವ್ಯವಹಾರ ಇಲ್ಲ’ ಎಂದು ವಿವರಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಕ್ಷಕರ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡಿದ್ದಾರೆ. ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಈಗಾಗಲೇ ಒಪಿಎಸ್ ಜಾರಿಗೆ ಹಾಗೂ ಏಳನೇ ವೇತನ ಆಯೋಗ ಜಾರಿಗೆ ಬದ್ಧ ಆಗಿದೆ. ಮಹಾರಾಣಿ ಕಾಲೇಜು ಕಟ್ಟಡ ನಿರ್ಮಾಣಕ್ಕೆ ₹170 ಕೋಟಿ ಮಂಜೂರು ಮಾಡಿದೆ. ಮೈಸೂರು ವಿ.ವಿ. ಘನತೆ ಕುಗ್ಗುತ್ತಿದ್ದು, ಅದರ ಬಲವರ್ಧನೆ ಜೊತೆಗೆ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಕಾಂಗ್ರೆಸ್‌ನ ಜನಪ್ರತಿನಿಧಿಗಳು ಹಾಗೂ ಪಕ್ಷದ ಮುಖಂಡರು, ಶಿಕ್ಷಕರ ಸಂಘಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡರು.

ಲೀಲಾ ಚನ್ನಯ್ಯ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್‌ ಸಭೆಯಲ್ಲಿ ಪಾಲ್ಗೊಂಡ ಆಸಕ್ತರು –ಪ್ರಜಾವಾಣಿ ಚಿತ್ರ
ಲೀಲಾ ಚನ್ನಯ್ಯ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್‌ ಸಭೆಯಲ್ಲಿ ಪಾಲ್ಗೊಂಡ ಆಸಕ್ತರು –ಪ್ರಜಾವಾಣಿ ಚಿತ್ರ

Cut-off box - ಮುಖಂಡರು ಮಾಧ್ಯಮದವರ ಜೊತೆ ವಾಗ್ದಾದ ನಾಮಪತ್ರ ಸಲ್ಲಿಕೆಗೆ ಬಂದ ಕಾಂಗ್ರೆಸ್‌ನ ಕೆಲ ನಾಯಕರನ್ನು ಪೊಲೀಸರು ಪ್ರಾದೇಶಿಕ ಆಯುಕ್ತರ ಕಚೇರಿಯ ಗೇಟಿನಲ್ಲೇ ತಡೆದರು. ಶಾಸಕರ ಆದಿಯಾಗಿ ಬೆರಳೆಣಿಕೆಯ ಮಂದಿಯನ್ನಷ್ಟೇ ಒಳಗೆ ಬಿಟ್ಟರು. ‘ನಮ್ಮನ್ನೂ ಒಳಗೆ ಬಿಡಿ’ ಎಂದು ನಾಯಕರು ಪೊಲೀಸರಿಗೆ ದುಂಬಾಲು ಬಿದ್ದರೂ ಪ್ರಯೋಜನವಾಗಲಿಲ್ಲ. ಮಾಧ್ಯಮವರನ್ನೂ ಗೇಟಿನ ಹೊರಗೆ ಇಟ್ಟಿದ್ದು ಈ ಸಂಬಂಧ ವಾಗ್ದಾದವೂ ನಡೆಯಿತು. ಮುಖ್ಯಮಂತ್ರಿ ಭೇಟಿ ಸಂದರ್ಭ ಕಲಾಮಂದಿರದಿಂದ ಮಹಾರಾಣಿ ಕಾಲೇಜುವರೆಗೆ ಹೆದ್ದಾರಿಯಲ್ಲಿ ವಾಹನಗಳ ಸಂಚಾರವನ್ನು ಪೊಲೀಸರು ನಿರ್ಬಂಧಿಸಿದರು. ಇದರಿಂದಾಗಿ ವಾಹನ ಸವಾರರು ತೊಂದರೆ ಅನುಭವಿಸುವಂತೆ ಆಯಿತು. ನಾಮಪತ್ರ ಸಲ್ಲಿಸಿ ಹೊರ ಬಂದ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಿನಲ್ಲಿ ನಿಂತುಕೊಂಡೇ ಕಾರ್ಯಕರ್ತರತ್ತ ಕೈ ಬೀಸಿದರು. ಬಳಿಕ ಅಷ್ಟೇ ವೇಗದಲ್ಲಿ ಅಲ್ಲಿಂದ ನಿರ್ಗಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT