ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರದ ನಡುವೆ ಕುಗ್ಗದ ದಸರೆಯ ವೈಭವ

ಚಾಮುಂಡಿ ಬೆಟ್ಟದಲ್ಲಿ ಉತ್ಸವಕ್ಕೆ ಚಾಲನೆ; ನಗರದೆಲ್ಲೆಡೆ ಹಬ್ಬಿದ ಸಂಭ್ರಮ
Published 16 ಅಕ್ಟೋಬರ್ 2023, 6:33 IST
Last Updated 16 ಅಕ್ಟೋಬರ್ 2023, 6:33 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯ ಎಂಟು ತಾಲ್ಲೂಕುಗಳೂ ಬರಪೀಡಿತವಾಗಿರುವ ಸನ್ನಿವೇಶದಲ್ಲೂ ದಸರೆಯ ವೈಭವ ಕುಗ್ಗಿಲ್ಲ ಎಂದು ಸಾರುವ ರೀತಿಯಲ್ಲಿ ನಗರದಲ್ಲಿ ಭಾನುವಾರ ದಸರೆಯ ಉದ್ಘಾಟನಾ ಚಟುವಟಿಕೆಗಳು ಗರಿಗೆದರಿದವು.

ಚಾಮುಂಡಿಬೆಟ್ಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವ ಸಂಪುಟದ ಗಣ್ಯರು, ಜಿಲ್ಲೆಯ ಶಾಸಕರ ಸಮ್ಮುಖದಲ್ಲಿ ಸಂಗೀತ ನಿರ್ದೇಶಕ ಹಂಸಲೇಖ ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಉತ್ಸವಕ್ಕೆ ಚಾಲನೆ ನೀಡಿದರು.

ನಂತರ, ನಗರದ ಎಲ್ಲ ದಿಕ್ಕುಗಳಲ್ಲೂ ವೈವಿಧ್ಯಮಯ ಕಾರ್ಯಕ್ರಮಗಳು ಆರಂಭವಾದವು. ಕಲಾಮಂದಿರದಲ್ಲಿ ಚಲನಚಿತ್ರೋತ್ಸವ ಮತ್ತು ಶಿಲ್ಪಕಲಾ ಪ್ರದರ್ಶನಕ್ಕೆ ಚಾಲನೆ ದೊರಕಿತು. ಕುಪ್ಪಣ್ಣ ಪಾರ್ಕ್‌ನಲ್ಲಿ ಫಲಪುಷ್ಪ ಪ್ರದರ್ಶನ, ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೈದಾನದಲ್ಲಿ ಆಹಾರ ಮೇಳ, ದೇವರಾಜ ಅರಸು ಕ್ರೀಡಾಂಗಣದಲ್ಲಿ ಕುಸ್ತಿ ಪಂದ್ಯಾವಳಿ, ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ವಸ್ತುಪ್ರದರ್ಶನ, ಓವಲ್‌ ಮೈದಾನದಲ್ಲಿ ಪುಸ್ತಕ ಪ್ರದರ್ಶನ, ಸೆನೆಟ್‌ ಭವನದಲ್ಲಿ ಯೋಗ ದಸರಾ, ಕಣ್ಮನ ಕೋರೈಸುವ ವಿದ್ಯುತ್ ದೀಪಾಲಂಕಾರಕ್ಕೆ ಸಂಭ್ರಮದ ಚಾಲನೆ ದೊರಕಿತು. ರಂಗಾಯಣದಲ್ಲಿ ‘ನವರಾತ್ರಿ ರಂಗೋತ್ಸವ’ವೂ ಆರಂಭವಾಯಿತು.

ಸಾವಿರಾರು ಮಂದಿ: ಎಲ್ಲ ಕಡೆಯೂ ಸಾವಿರಾರು ಜನ ಭೇಟಿ ನೀಡಿ ಉತ್ಸವದ ಆರಂಭಕ್ಕೆ ಸಾಕ್ಷಿಯಾದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರು, ಶಾಸಕರು ಇಡೀ ದಿನ ಈ ಚಟುವಟಿಕೆಗಳಿಗೆ ಚಾಲನೆ ನೀಡಿ ಗಮನಸೆಳೆದರು.

ಜನದಟ್ಟಣೆ: ಉದ್ಘಾಟನೆಯ ದಿನವಾದ ಭಾನುವಾರ ರಜೆಯೂ ಇದ್ದುದರಿಂದ, ಸ್ಥಳೀಯರು ಮತ್ತು ಪ್ರವಾಸಿಗರು ಸೇರಿ ಎಲ್ಲೆಡೆ ಜನದಟ್ಟಣೆ ಮತ್ತು ವಾಹನ ದಟ್ಟಣೆ ಏರ್ಪಟ್ಟಿತ್ತು. ಪ್ರಮುಖ ವೃತ್ತಗಳಲ್ಲಿ ವಾಹನ ಸಂಚಾರವನ್ನು ಸುಗಮಗೊಳಿಸಲು ಪೊಲೀಸರು ಹೆಚ್ಚು ಶ್ರಮಪಟ್ಟರು. ನಗರದ ಹೊರವಲಯದ ಕೆಲವು ರಸ್ತೆ ಮತ್ತು ವೃತ್ತಗಳಲ್ಲಿ ದೀಪಾಲಂಕಾರದ ಸಿದ್ಧತೆಗಳು ಇನ್ನೂ ನಡೆದಿದ್ದವು.

ವೈವಿಧ್ಯವೇ ವಿಶೇಷ: ನವರಾತ್ರಿಯ ಅಷ್ಟೂ ದಿನ ನಗರದ ವಿವಿಧೆಡೆ ವೈವಿಧ್ಯಮಯ ಸ್ಪರ್ಧೆ, ನಡಿಗೆ, ಪ್ರದರ್ಶನಗಳು ನಡೆಯಲಿವೆ. ಮಹಿಳೆಯರು, ಮಕ್ಕಳಿಗೆ ವಿವಿಧ ಸ್ಪರ್ಧೆಗಳು, ಪಾರಂಪರಿಕ ನಡಿಗೆ, ಸೈಕಲ್‌ ಸವಾರಿ, ರೈತ ದಸರಾ, ಹಾಲು ಕರೆಯುವ ಸ್ಪರ್ಧೆ, ಮುದ್ದು ಪ್ರಾಣಿಗಳ ಪ್ರದರ್ಶನವಿರಲಿದೆ.

ಅಂಬಾವಿಲಾಸ ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಗೀತ–ನೃತ್ಯಪ್ರಿಯರ ಮನತಣಿಸಲಿವೆ. ವಿವಿಧ ರಾಜ್ಯಗಳ ಅನನ್ಯ ಕಲಾವಿದರು ವಿಶೇಷ ಪ್ರದರ್ಶನಗಳನ್ನು ನೀಡಲಿದ್ದಾರೆ. ಅ. 21 ಮತ್ತು 22ರಂದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ನಿರಂತರ ಕಾರ್ಯಕ್ರಮಗಳು ನಡೆಯಲಿರುವುದು ವಿಶೇಷ.

ದಸರೆ ಉದ್ಘಾಟನೆ ಸಲುವಾಗಿ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾಲಂಕಾರ ಮಾಡಲಾಗಿತ್ತು
ದಸರೆ ಉದ್ಘಾಟನೆ ಸಲುವಾಗಿ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾಲಂಕಾರ ಮಾಡಲಾಗಿತ್ತು

‌ಸಂವಿಧಾನವನ್ನು ನೆನೆದ ಹಂಸಲೇಖ ಚಾಮುಂಡಿ ಬೆಟ್ಟದಲ್ಲಿ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಸಂಗೀತ ನಿರ್ದೇಶಕ ಹಂಸಲೇಖ ಆ ಅವಕಾಶಕ್ಕಾಗಿ ಕಾರಣರಾದವರನ್ನು ಸ್ಮರಿಸುತ್ತಾ ಸಂವಿಧಾನವನ್ನೂ ಸ್ಮರಿಸಿದರು. ಅದೇ ವೇಳೆ’ ‘ಸಂವಿಧಾನದ ಗುಡ್‌ ಶೆಪರ್ಡ್‌ ಸಿದ್ದರಾಮಯ್ಯ’ ಅವರನ್ನೂ ಸ್ಮರಿಸಬೇಕು’ ಎಂದು ಹೇಳಿದ್ದು ಗಮನ ಸೆಳೆಯಿತು. ‘ರಾಜ್ಯದ ಶಕ್ತಿಶಾಲಿ ಡಿಸಿಎಂ ಶಿವಕುಮಾರ್’ ಎಂದೂ ಬಣ್ಣಿಸಿದರು. ತಮ್ಮ ತಂದೆ ತಾಯಿ ಗುರುವಿನ ಜೊತೆಗೆ ನಾದ ಭೀಮ ಪರಿವಾರವನ್ನು ಸ್ಮರಿಸಿದರು. ‘ಇವರೆಲ್ಲರನ್ನು ಹೊತ್ತಿರುವ ಭೂಮಿಯನ್ನು ನೆನೆದರೆ ಎಲ್ಲರನ್ನೂ ನೆನೆದಂತೆ’ ಎನ್ನುತ್ತಾ ಬೆಳಗಾಗ ನಾನೆದ್ದು ಯಾರ್‍ಯಾರ ನೆನೆಯಾಲಿ’ ಜನಪದ ಗೀತೆಯನ್ನು ಉಲ್ಲೇಖಿಸಿದರು.

ಸಚಿವರು ಶಾಸಕರ ದಂಡು ಬೆಟ್ಟದಲ್ಲಿ ನಡೆದ ಉತ್ಸವದ ಉದ್ಘಾಟನೆ ಕಾರ್ಯಕ್ರಮದಲ್ಲಿ ಹಲವು ಸಚಿವರು ಮತ್ತು ಶಾಸಕರು ಪಾಲ್ಗೊಂಡಿದ್ದರು. ಸಚಿವರಾದ ಕೆ.ವೆಂಕಟೇಶ್ ಕೆ.ಜೆ.ಜಾರ್ಜ್ ಶಿವರಾಜ ತಂಗಡಗಿ ಕೆ.ಎಚ್.ಮುನಿಯಪ್ಪ ಶಾಸಕರಾದ‌ ಜಿ.ಟಿ.ದೇವೇಗೌಡ ಎ.ಆರ್‌.ಕೃಷ್ಣಮೂರ್ತಿ ಜಿ.ಡಿ.ಹರೀಶ್ ಗೌಡ ತನ್ವೀರ್ ಸೇಠ್  ದರ್ಶನ್ ಧ್ರುವನಾರಾಯಣ ಅನಿಲ್ ಚಿಕ್ಕಮಾದು ಕೆ.ಹರೀಶ್ ಗೌಡ ಟಿ.ಎಸ್.ಶ್ರೀವತ್ಸ ಮರಿತಿಬ್ಬೇಗೌಡ ಡಾ.ಡಿ. ತಿಮ್ಮಯ್ಯ ಡಿ.ರವಿಶಂಕರ್ ಸಿ.ಎನ್.ಮಂಜೇಗೌಡ ಸಂಸದ ಪ್ರತಾಪಸಿಂಹ ಪಾಲ್ಗೊಂಡಿದ್ದರು. ಕನ್ನಡ ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಎನ್.ಮಂಜುಳಾ ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ನಗರ ಪೊಲೀಸ್‌ ಆಯುಕ್ತ ರಮೇಶ್‌ ಬಾನೊತ್‌ ಎಸ್ಪಿ ಸೀಮಾ ಲಾಟ್ಕರ್ ಭದ್ರತೆಯ ಹೊಣೆ ಹೊತ್ತಿದ್ದರು.

ಇನ್ನರ್ಧ ಗಂಟೆ ಕುತ್ಕೊಳಿ! ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಟಿ.ದೇವೇಗೌಡ ಅವರು ಮಾತನಾಡಲು ಬಂದ ವೇಳೆ ಜನ ಸ್ಥಳದಿಂದ ನಿರ್ಗಮಿಸುತ್ತಿದ್ದುದನ್ನು ನೋಡಿ ಅವರು ಬೇಸರ ವ್ಯಕ್ತಪಡಿಸಿದರು. ‘ಯಾಕೆ ಕುರ್ಚಿ ಕಾಲಿ ಮಾಡುತ್ತಿದ್ದೀರಿ? ಇನ್ನರ್ಧ ಗಂಟೆ ಕಾರ್ಯಕ್ರಮ ನಡೆಯುತ್ತದೆ. ಕುತ್ಕೊಳಿ. ಅರ್ಧಕ್ಕೇ ಹೋಗೋದಾದ್ರೆ ಯಾಕೆ ಬಂದ್ರಿ’ ಎಂದು ಆಕ್ಷೇಪಿಸಿದರು.

ಪ್ರಬಂಧ ಅರ್ಪಿಸಿದ ವಿದ್ಯಾರ್ಥಿನಿ; ಫೋಟೋ ತೆಗೆದ ತನ್ವೀರ್ ಸೇಠ್ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧನಾ ವಿದ್ಯಾರ್ಥಿನಿ ಅಂಧೆ ಬಬಿತಾ ಅವರು ತಮ್ಮ ಸಂಶೋಧನಾ ಕೃತಿಯನ್ನು ಉದ್ಘಾಟನೆ ಕಾರ್ಯಕ್ರಮದಲ್ಲೇ ಹಂಸಲೇಖಾ ಅವರಿಗೆ ಅರ್ಪಿಸಿ ಗಮನಸೆಳೆದರು. ಆ ಸಂದರ್ಭದ ಮೊಬೈಲ್‌ ಫೋಟೊ ತೆಗೆಯಲು ಅವರ ಪೋಷಕರೊಬ್ಬರು ಪ್ರಯತ್ನಿಸುತ್ತಿದ್ದುದನ್ನು ಕಂಡು ತಮ್ಮ ಕುರ್ಚಿಯಿಂದ ಎದ್ದು ಬಂದ ಶಾಸಕ ತನ್ವೀರ್‌ ಸೇಠ್‌ ಅವರಿಂದ ಮೊಬೈಪ್‌ಫೋನ್‌ ಪಡೆದು ಗಣ್ಯರೊಂದಿಗೆ ನಿಲ್ಲುವಂತೆ ಸೂಚಿಸಿ ತಾವೇ ಅವರ ಫೋಟೋ ತೆಗೆದು ಮೆಚ್ಚುಗೆ ಗಳಿಸಿದರು.

ಅಪ್ಪನ ಹೆಗಲ ಮೇಲೆ ಕುಳಿತು ದಸರಾ ನೋಡಿದ್ದ ಸಿಎಂ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ‘ನಮ್ಮಪ್ಪನ‌ ಹೆಗಲ ಮೇಲೆ ಕುಳಿತು ದಸರಾ ನೋಡಿದ್ದೆ. ಮೆರವಣಿಗೆ ಬರುವಾಗ ಅಪ್ಪ ಮಹಾರಾಜರಿಗೆ ಕೈಮುಗಿ ಅಂತಿದ್ದರು. ಆದರೆ ಮಹಾರಾಜರೇ ಕಾಣ್ತಿರಲಿಲ್ಲ. ಇನ್ನೆಲ್ಲಿ ಎಲ್ಲಿ ಕೈಮುಗಿಯೋದು’ ಎಂದು ನಗೆ ಚಟಾಕಿ ಹಾರಿಸಿದರು. ‘ಕನ್ನಡ ನಾಡಿನ ಸಂಪ್ರದಾಯ ಸಂಸ್ಕೃತಿ ಭಾಷೆಯನ್ನು ಜನರಿಗೆ ತಿಳಿಸುವ ಪ್ರಯತ್ನ ಉತ್ಸವದ ಮೂಲಕ ನಡೆದಿದೆ. ಸರ್ಕಾರವೇ ದಸರಾ ಆಚರಿಸಲು ಶುರು ಮಾಡಿದ ಬಳಿಕ ಎಲ್ಲ ಜಿಲ್ಲೆಗಳ ವಿಶೇಷಗಳು ಸಾಧನೆಗಳು ಎಲ್ಲರಿಗೂ ತಿಳಿಯುವಂತಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT