ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ಕಲುಷಿತ ನೀರಿನಿಂದ ಕಾಲರಾ; ಸೊಳ್ಳೆಗಳಿಂದ ಡೆಂಗಿ, ಚಿಕೂನ್‌ಗುನ್ಯಾ ಬಾಧೆ

Published 17 ಜೂನ್ 2024, 6:55 IST
Last Updated 17 ಜೂನ್ 2024, 6:55 IST
ಅಕ್ಷರ ಗಾತ್ರ

ಮೈಸೂರು: ಕಡು ಬೇಸಿಗೆ ಮುಗಿದು ಇದು ಮಳೆಗಾಲದ ಆರಂಭ ಕಾಲ. ಕಲುಷಿತ ನೀರು, ನೊಣಗಳಿಂದ ಹರಡುವ ವಾಂತಿಭೇದಿ, ಕಾಲರಾ; ಸೊಳ್ಳೆಗಳಿಂದ ಹರಡುವ ಡೆಂಗಿ ಮತ್ತು ಚಿಕೂನ್‌ಗುನ್ಯಾ, ಮಲೇರಿಯಾ, ಆನೆಕಾಲು ರೋಗ, ಕರುಳುಬೇನೆ, ಮಿದುಳು ಜ್ವರ (ಮೆನಿಂಜೈಟಿಸ್‌), ಆರ್ಜಿತ  ಸೋಂಕು (ಎಇ– ಅಕ್ವೈರ್ಡ್‌ ಅಸ್ಟ್ರೋಫಿಯಾ) ಮುಂತಾದ ಸಾಂಕ್ರಾಮಿಕ ಬ್ಯಾಕ್ಟೀರಿಯಾ, ವೈರಾಣು  ರೋಗ  ಬಾಧೆ ಹೆಚ್ಚುತ್ತಿದ್ದು ಜನ ಎಚ್ಚೆತ್ತಿರಬೇಕಾಗಿದೆ.

ಮೈಸೂರು ನಗರದಲ್ಲಿ ನೀರು ಕಟ್ಟಿ ನಿಂತು ಸೊಳ್ಳೆ ಉತ್ಪತ್ತಿಯಾಗುವ ದೃಶ್ಯಗಳು ಸಾಮಾನ್ಯ. ಜೊತೆಗೆ ನೊಣಗಳು ಹರಡುವಂತೆ ಗಲ್ಲಿ, ಮನೆಗಳ ಮುಂದೆಯೇ ಜಾನುವಾರು ಸಾಕಣೆ ನಡೆದಿದೆ. ನಗರಪಾಲಿಕೆ ಇತ್ತ ಗಮನಿಸಿಲ್ಲ. ಆರೋಗ್ಯ ಇಲಾಖೆ ಗಮನಿಸಿದರೂ ಇತರ ಇಲಾಖೆಗಳ ಸಮನ್ವಯವೂ ಅತ್ಯಗತ್ಯ. ಜನನಿಬಿಡ ವಾಸದ ಗಲ್ಲಿಗಳನ್ನೇ (ಅಗ್ರಹಾರ, ಸುಬ್ಬಯ್ಯ ರಸ್ತೆ, ದಿವಾನ್‌ ರಸ್ತೆ, ಶಾಸ್ತ್ರಿ ರಸ್ತೆ, ಚಾಮರಾಜ ಮೊಹಲ್ಲಾ, ಕೆ.ಆರ್‌.ಮೊಹಲ್ಲಾ, ಎನ್‌.ಆರ್‌.ಮೊಹಲ್ಲಾ ಇತ್ಯಾದಿ) ದನ, ಕುರಿಗಳ ಸಾಕಣೆ ನಡೆದಿದ್ದು, ಸೊಳ್ಳೆ, ನೊಣ ಬಾಧೆ ಹೆಚ್ಚುತ್ತಿದೆ. ಶ್ವಾನ ಪ್ರಿಯರ ಕೊಡುಗೆಯೂ ಇದೆ.

ನಗರ ಮಧ್ಯದ ರಾಜ ಕಾಲುವೆಯಲ್ಲಿ ನೀರು ಸರಾಗ ಹರಿಯದಂತೆ ಜೊಂಡು, ಕಸ ಕೆಸರು–ಹೂಳು ತುಂಬಿದೆ. ಅದರ ಬದಿಯ ನಿವಾಸಿಗಳು, ಗುಡಿಸಲು ವಾಸಿಗಳು ಸೊಳ್ಳೆಗಳೊಂದಿಗೆ ಸಹಜೀವನ ನಡೆಸುತ್ತಿದ್ದಾರೆ. ಪಕ್ಕದಲ್ಲೇ ಸರ್ಕಾರಿ ಆರೋಗ್ಯ ಕೇಂದ್ರಗಳಿರುವುದು ಸ್ವಲ್ಪ ಸಮಾಧಾನ. ಆದರೆ ಒಟ್ಟಾರೆ ಸನ್ನಿವೇಶ ಆಡಳಿತದ ಅವ್ಯವಸ್ಥೆಗೆ ಹಿಡಿದ ಕನ್ನಡಿ.

ಜಿಲ್ಲೆಯಲ್ಲಿ ಈಗಾಗಲೇ ಕಲುಷಿತ ಆಹಾರ ಪಾನೀಯ , ನೊಣಗಳಿಂದಾಗಿ ಕಾಲರಾ– ವಾಂತಿಭೇದಿ ಪ್ರಕರಣಗಳು ಕಾಣಿಸಿಕೊಂಡಿವೆ. ‘ಮೈಸೂರಿನ ಸಿದ್ದಲಿಂಗಪುರ ಆಸುಪಾಸಿನಲ್ಲಿ ಪ್ರಕರಣ ಕಂಡರೂ ನಿಯಂತ್ರಣದಲ್ಲಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೊಳ್ಳೆ ಕಡಿತದಿಂದ ಹರಡುವ ಡೆಂಗಿ, ಚಿಕೂನ್‌ ಗುನ್ಯಾ ಪ್ರಕರಣಗಳು ಅಲ್ಲಲ್ಲಿ ಕಾಣಿಸಿಕೊಂಡಿವೆ.

‘ಜಪಾನೀಸ್ ಎನ್ಸೆಫಾಲಿಟಿಸ್ ವೈರಸ್‌’ ಬಾಧಿಸುವ ಡೆಂಗಿ, ಇದನ್ನು ಹರಡುವ ಈಡೆಸ್‌ ಪ್ರಭೇದದ ಸೊಳ್ಳೆಗಳು, ಚಿಕೂನ್‌ ಗುನ್ಯಾ ಹರಡುವ ಈಡಿಸ್‌ ಈಜಿಪ್ಟಿ (ಹೆಚ್ಚಾಗಿ ಹಗಲು ಹೊತ್ತಿನಲ್ಲಿ ಕಚ್ಚಿ ರೋಗ ಹರಡುತ್ತದೆ), ಮಲೇರಿಯಾ ಹರಡುವ ಅನಾಫಿಲಿಸ್‌ ಸೊಳ್ಳೆಗಳ ಉತ್ಪತ್ತಿ ಹೆಚ್ಚುತ್ತಿದೆ. ಅವುಗಳನ್ನು ಲಾರ್ವಾ– ಮರಿ ಹಂತದಲ್ಲೇ ನಿಯಂತ್ರಿಸುವ ಕಾರ್ಯವನ್ನು ಆರೋಗ್ಯ ಇಲಾಖೆ ಮಾಡುತ್ತಿದೆ. ಟೈರ್‌, ತೆಂಗಿನ ಚಿಪ್ಪು, ಹಳೆ ಡಬ್ಬಗಳಲ್ಲಿ,ಮಳೆ ನೀರು ಕಟ್ಟಿ ನಿಲ್ಲದಂತೆ ಜನರೂ ಎಚ್ಚರವಹಿಸಬೇಕು.

‘ಸೊಳ್ಳೆಗಳನ್ನು ನಿಯಂತ್ರಿಸುವುದೇ ರೋಗ ತಡೆಗೆ ಉಪಾಯ. ಸೊಳ್ಳೆಗಳ ಲಾರ್ವ ನೀರಿನಲ್ಲಿ ಉತ್ಪತ್ತಿ ಆಗುವುದರಿಂದ ಮನೆ, ಕಚೇರಿ, ಶಾಲೆ, ಅಂಗಡಿಗಳ ಸುತ್ತ ನೀರು, ಕಸ ಕೊಳಚೆ ಇಲ್ಲದಂತೆ ಶುಚಿಯಾಗಿಡಲೇಬೇಕು. ಬಾವಿಗಳಲ್ಲಿ ಸೊಳ್ಳೆ ಲಾರ್ವವನ್ನು ತಿನ್ನುವ ಗಪ್ಪಿ ಮೀನುಗಳ ಸಾಕಣೆ, ಕೀಟನಾಶಕ ಬಳಕೆ ಇತರ ಉಪಾಯಗಳು’ ಎಂದು ಸೊಳ್ಳೆಯಿಂದ ಹರಡುವ ರೋಗಗಳ ನಿಯಂತ್ರಣಾಧಿಕಾರಿ ಡಾ. ಸುವರ್ಣಾ ತಿಳಿಸಿದರು.

28 ಪ್ರಕರಣ:  ‘ಹುಣಸೂರು ತಾಲ್ಲೂಕು ಜಿಲ್ಲೆಯಲ್ಲೇ ಅತಿ ಹೆಚ್ಚು ಡೆಂಗಿ ಜ್ವರ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದೆ. ಮುಂಜಾಗ್ರತೆ ಕ್ರಮಗಳೊಂದಿಗೆ ಇಲಾಖೆ ಸನ್ನದ್ಧವಾಗಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಕೀರ್ತಿಕುಮಾರ್ ತಿಳಿಸಿದರು.

‘ನೀರು ಸಂಗ್ರಹ ಘಟಕಗಳ ಸ್ವಚ್ಛತೆ, ಮನೆ ಸುತ್ತ ನೀರು ಕಟ್ಟಿ ನಿಲ್ಲದಂತೆ ಜಾಗೃತಿಗಾಗಿ ಕರಪತ್ರ ವಿತರಿಸಿ ಜನರನ್ನು ಸಜ್ಜುಗೊಳಿಸುವ ಕೆಲಸ ನಿರಂತರವಾಗಿದೆ. ನೀರು ಸರಬರಾಜು ಮಾಡುವ ಪೈಪ್ ಲೈನ್ ಸೋರಿಕೆ ದುರಸ್ತಿ ನಡೆದಿದೆ’ ಎಂದರು.

‘ತಾಲ್ಲೂಕಿನಲ್ಲಿ 18 ಡೆಂಗಿ ಪ್ರಕರಣದಲ್ಲಿ 12 ಗುಣವಾಗಿದ್ದು, 6 ಚಿಕಿತ್ಸಾ ಹಂತದಲ್ಲಿದೆ. ಚಿಕೂನ್ ಗುನ್ಯಾ 10 ಪ್ರಕರಣಗಳು ಪತ್ತೆಯಾಗಿದ್ದು ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ನಗರದ ಶಬ್ಬೀರ್ ನಗರ, ವಿ.ಪಿ.ಬೋರೆ. ಎನ್.ಎಸ್. ತಿಟ್ಟು ಮತ್ತು 12 ಕೊಳಚೆ ಪ್ರದೇಶಗಳಲ್ಲಿ ನೀರು ಸಂಗ್ರಹ ತೊಟ್ಟಿ ಸ್ವಚ್ಛತೆ, ಸೊಳ್ಳೆಲಾರ್ವ ಪರಿಶೀಲನೆ ನಡೆಸಿ ತಿಳಿವಳಿಕೆ ನೀಡಲಾಗಿದೆ’ ಎಂದು ಆರೋಗ್ಯ ಶಿಕ್ಷಣಾಧಿಕಾರಿ ವಿಶ್ವನಾಥ್ ವಿವರಿಸಿದರು.

‘ಹುಣಸೂರಿನ ಶಬ್ಬೀರ್ ನಗರದ, ಬಿಳಿಕೆರೆ ಮತ್ತು ಕಡೆಮನುಗನಹಳ್ಳಿಯಲ್ಲಿ ವಾಂತಿ–ಭೇದಿ ಹತೋಟಿಗೆ ಬಂದಿದೆ’ ಎಂದರು.

ವಾಟ್ಸ್‌ಆ್ಯಪ್ ಗ್ರೂಪ್‌: ‘ಪಿರಿಯಾಪಟ್ಟಣ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯ ಎಲ್ಲ ಹಾಸ್ಟೆಲ್ ಗಳಲ್ಲಿ ನೀರಿನ ಟ್ಯಾಂಕ್‌, ತೊಟ್ಟಿಗಳನ್ನು ಸ್ವಚ್ಛಗೊಳಿಸಿ ಫೋಟೊಗಳನ್ನು ನಮ್ಮ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಕಳುಹಿಸಲು ಸೂಚಿಸಲಾಗಿದೆ’  ಎಂದು ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ತಿಳಿಸಿದರು.

‘ಪಿಡಿಒಗಳ ಸಭೆ ನಡೆಸಿ, ಸಾಂಕ್ರಾಮಿಕ ರೋಗ ತಡೆಗೆ ಸಲಹೆ ನೀಡಲಾಗಿದೆ. ಸೊಳ್ಳೆಗಳ ನಿರ್ಮೂಲನೆ, ಕುಡಿಯುವ ನೀರಿನ ಶುದ್ಧೀಕರಣಕ್ಕೆ ಆರೋಗ್ಯ ನಿರೀಕ್ಷಕರು ಗ್ರಾಮ ಪಂಚಾಯಿತಿಗಳಿಗೆ ಮನವಿ ಪತ್ರ ರವಾನಿಸಿದ್ದಾರೆ’ ಎಂದು ಟಿಎಚ್ಒ ಡಾ. ಶ್ರೀನಿವಾಸ್ ತಿಳಿಸಿದರು.  

ಐದು ಹಾಸಿಗೆ ಮೀಸಲು: ‘ಕೆ.ಆರ್.ನಗರ  ತಾಲ್ಲೂಕು ಆಸ್ಪತ್ರೆಯಲ್ಲಿ ಐದು ಹಾಸಿಗೆ ಅಗತ್ಯ ಔಷಧ ಕಾಯ್ದಿರಿಸಲಾಗಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜ್ ತಿಳಿಸಿದರು.

15 ದಿನಕ್ಕೊಮ್ಮೆ ಸ್ವಚ್ಛತೆ: ‘ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಶುದ್ಧ ನೀರನ್ನು ಕೊಡಲು ಆಡಳಿತಕ್ಕೆ ಮಾಹಿತಿ ನೀಡಲಾಗಿದೆ. 15 ದಿನಕ್ಕೊಮ್ಮೆ ನೀರಿನ ಟ್ಯಾಂಕ್‌ ಸ್ವಚ್ಛಗೊಳಿಸಿ ಕ್ಲೋರಿನೇಷನ್ ಮಾಡಿಸಬೇಕು. ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮ, ಅರಿವು  ಕಾರ್ಯಕ್ರಮ ನಡೆಸಲಾಗುತ್ತಿದೆ. ಸಾಂಕ್ರಾಮಿಕ ರೋಗಗಳ ಬಗ್ಗೆ ಜನಜಾಗೃತಿ ನಡೆಯುತ್ತಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್  ತಿಳಿಸಿದರು.

ರಕ್ತ ಪರೀಕ್ಷೆ: ‘ತಿ.ನರಸೀಪುರ ತಾಲ್ಲೂಕಿನಲ್ಲಿ ಜ್ವರ ಕಾಣಿಸಿಕೊಂಡವರ ರಕ್ತ ಪರೀಕ್ಷೆ ಮಾಡಿಸಲಾಗುತ್ತಿದೆ. ಆಶಾ ಕಾರ್ಯಕರ್ತೆಯರು ಮನೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ. ಗ್ರಾಮ ಪಂಚಾಯಿತಿಗಳ ನೀರಿನ‌ ಸರಬರಾಜು ಮೂಲಗಳ ಸ್ವಚ್ಛತೆಗೆ, ಪೈಪ್ ಸೋರಿಕೆ ಸಮಸ್ಯೆ ತಡೆಗೆ ನಿರ್ದೇಶನ ನೀಡಲಾಗಿದೆ’ ಎಂದು ತಿ.ನರಸೀಪುರ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ರವಿಕುಮಾರ್ ತಿಳಿಸಿದ್ದಾರೆ‌‌.

200 ಮಂದಿಗೆ ವಾಂತಿಭೇದಿ: ನಂಜನಗೂಡು ತಾಲ್ಲೂಕಿನ ತಗಡೂರು ಗ್ರಾಮದ 1 ಮತ್ತು 2 ನೇ ವಾರ್ಡ್‌ಗಳಲ್ಲಿ ನೀರಿನ ಪೈಪ್ ಲೈನ್‌ಗೆ ಚರಂಡಿ ನೀರು ಸೇರಿ 200 ಕ್ಕೂ ಹೆಚ್ಚು ಮಂದಿಗೆ ವಾಂತಿ -ಭೇದಿ ಕಾಣಿಸಿತ್ತು. ಹೊಸ ಎರಡು ಕೊಳವೆಬಾವಿ ಕೊರೆಯಿಸಿ, ನೀರನ್ನು ಪರೀಕ್ಷೆಗೆ ಒಳಪಡಿಸಿದ ನಂತರ ಬಳಸಲಾಗುತ್ತಿದೆ, ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.

‘ತಾಲ್ಲೂಕಿನಲ್ಲಿ ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ಬಗ್ಗೆ ವರದಿಯಾಗಿಲ್ಲ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಬಾ.ಈಶ್ವರ್ ಬಿ.ಕನಾಟ್ಗೆ ಹೇಳಿದರು. 

ಪೂರಕ ಮಾಹಿತಿ: ಸಚ್ಚಿತ್‌ ಎಸ್‌., ಗಣೇಶ್‌,ಎಂ.ಮಹದೇವ, ಪಂಡಿತ್‌ ನಾಟೀಟೇಕರ್‌, ಪ್ರಕಾಶ್‌, ಸತೀಶ್‌ ಆರಾಧ್ಯ.

ಹುಣಸೂರಿನಲ್ಲಿ ಸೊಳ್ಳೆಲಾರ್ವ ಖಾತ್ರಿ ಪಡಿಸಿಕೊಳ್ಳಲು ಆರೋಗ್ಯ ಇಲಾಖೆ ಸಿಬ್ಬಂದಿ ಪರಿಶೀಲಿಸುತ್ತಿರುವುದು.
ಹುಣಸೂರಿನಲ್ಲಿ ಸೊಳ್ಳೆಲಾರ್ವ ಖಾತ್ರಿ ಪಡಿಸಿಕೊಳ್ಳಲು ಆರೋಗ್ಯ ಇಲಾಖೆ ಸಿಬ್ಬಂದಿ ಪರಿಶೀಲಿಸುತ್ತಿರುವುದು.
ಮನೆಗಳ ಸುತ್ತ ಮಲಿನ ಮಳೆ ನೀರು ಸಂಗ್ರಹದ ವಾಹನ ಟೈರ್ ತೆಂಗಿನ ಚಿಪ್ಪುಗಳನ್ನು ತೆರವುಗೊಳಿಸಿ ಶುಚಿತ್ವದ ಜಾಗೃತಿ ಮೂಡಿಸುತ್ತಿದ್ದೇವೆ. ತೆರೆದ ತೊಟ್ಟಿಗಳಿಗೆ ಲಾರ್ವ ತಿನ್ನುವ ಮೀನು ಬಿಡುವಲ್ಲಿ ತೊಡಗಿದೆ.
ಶ್ವೇತ ಎಂ. ಆಶಾ ಕಾರ್ಯಕರ್ತೆ ಹುಣಸೂರು.
ಸಾಂಕ್ರಾಮಿಕ ರೋಗಗಳು ಹರಡದಂತೆ ಜನ ಸ್ವಯಂ ಎಚ್ಚರಿಕೆ ವಹಿಸಬೇಕು. ಆರೋಗ್ಯ ಇಲಾಖೆಯಿಂದ ಅರಿವು ಮೂಡಿಸಬೇಕು.
ನಟರಾಜ್ ಸಾಮಾಜಿಕ ಕಾರ್ಯಕರ್ತ ಪಿರಿಯಾಪಟ್ಟಣ
ಜಿಲ್ಲೆಯಲ್ಲಿ ಡೆಂಗಿ ಜ್ವರ ವಿವರ (2024 ಜನವರಿ 01ರಿಂದ ಮೇ 28 ವರೆಗೆ)
ತಾಲ್ಲೂಕು;ಶಂಕಿತ ಪ್ರಕರಣ;ಸ್ಯಾಂಪಲ್‌ ಪರೀಕ್ಷೆ; ಪಾಸಿಟಿವ್‌(ಸೋಂಕು); ಶೇಕಡಾವಾರು ಮೈಸೂರು ನಗರ;1566;666;139;21 ಮೈಸೂರು ಗ್ರಾ.;635;244;43;18 ತಿ.ನರಸೀಪುರ;268;88;6;7 ನಂಜನಗೂಡು;406;167;18;11 ಎಚ್‌.ಡಿ.ಕೋಟೆ;354;80;14;18 ಹುಣಸೂರು;2642;617;66;11 ಪಿರಿಯಾಪಟ್ಟಣ;536;159;20;13 ಕೆ.ಆರ್‌.ನಗರ;363;98;17;17 ಒಟ್ಟು;6770;2119;323;15

ಕಾಲರಾ ವಾಂತಿಭೇದಿ ತಡೆಯಲು

*ಶುದ್ಧ ನೀರು ಕುಡಿಯಬೇಕು * ಸಾಧ್ಯವಾದಷ್ಟೂ ಕುದಿಸಿ ಆರಿಸಿದ ನೀರನ್ನೇ ಸೇವಿಸಬೇಕು * ತೆರೆದ ಬಾವಿ ಕೊಳವೆಬಾವಿ ಪೈಪ್‌–ನಲ್ಲಿಗಳನ್ನು ಸ್ಚಚ್ಛಗೊಳಿಸಬೇಕು * ಕೀಟಾಣು ನಿವಾರಕ ಬಳಸಿ ಕ್ಲೋರಿನೇಶನ್‌ ಮಾಡಬೇಕು * ಬೀದಿ ಬದಿ ಆಹಾರ ಪಾನೀಯ ಬಳಸಬಾರದು * ಆಹಾರ ಪಾತ್ರೆಗಳನ್ನು ಮುಚ್ಚಿ ಇರಿಸಬೇಕು ಚಿಕೂನ್‌ ಗುನ್ಯಾ ಡೆಂಗಿ ಮಲೇರಿಯಾ ತಡೆಯಲು * ಸೊಳ್ಳೆಗಳನ್ನು ನಾಶ ಮಾಡಬೇಕು * ಸೊಳ್ಳೆ ನೊಣ ಉತ್ಪತ್ತಿ ಜಾಗಗಳನ್ನು ನಿವಾರಿಸಬೇಕು * ತೆಂಗಿನ ಚಿಪ್ಪು ಒಡೆದ ಮಡಿಕೆ ಟೈರ್‌ಗಳು ಬಾಟಲಿ ರಾಶಿ ತೆರವುಗೊಳಿಸಬೇಕು * ಬಾವಿಗಳನ್ನು ಸ್ವಚ್ಛ ಹಾಗೂ ಕೀಟ ಮುಕ್ತಗೊಳಿಸಬೇಕು * ಕೆರೆ ಬಾವಿಗಳಲ್ಲಿ ಸೊಳ್ಳೆ ಲಾರ್ವಾವನ್ನು ತಿನ್ನುವ ಗಪ್ಪಿ ಮೀನಿನ ಮರಿ ಸಾಕಬೇಕು * ಒಳಚರಂಡಿ ಮ್ಯಾನ್‌ಹೋಲ್‌ ಪೈಪ್‌ಗಳನ್ನು ಮುಚ್ಚಿ ಸೊಳ್ಳೆ ನಿವಾರಿಸಬೇಕು * ಯಾವುದೇ ಜ್ವರದ ಲಕ್ಷಣಗಳಿದ್ದರೆ ತಜ್ಞ ವೈದ್ಯರನ್ನು ಸಂಪರ್ಕಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT