ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜ್ವಲ್‌ಗೆ ರಾಜತಾಂತ್ರಿಕ ಪಾಸ್‌ಪೋರ್ಟ್‌: ಆಕ್ಷೇಪ

ಕೇಂದ್ರ ಸರ್ಕಾರದ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ವಾಗ್ದಾಳಿ
Published 8 ಮೇ 2024, 14:19 IST
Last Updated 8 ಮೇ 2024, 14:19 IST
ಅಕ್ಷರ ಗಾತ್ರ

ಮೈಸೂರು: ‘ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ಕೇಂದ್ರ ಸರ್ಕಾರವು ಕೇವಲ 15 ಗಂಟೆಯಲ್ಲೇ ರಾಜತಾಂತ್ರಿಕ (ಡಿಪ್ಲೊಮ್ಯಾಟಿಕ್) ಪಾಸ್‌ಪೋರ್ಟ್‌ ನೀಡುವ ಮೂಲಕ ಅವರು ವಿದೇಶಕ್ಕೆ ಪರಾರಿಯಾಗಲು ಸಹಕರಿಸಿದೆ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ವಾಗ್ದಾಳಿ ನಡೆಸಿದರು.

ನಗರದ ಕಾಂಗ್ರೆಸ್‌ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಪ್ರಜ್ವಲ್‌ ರೇವಣ್ಣ ಹಾಗೂ ಎಚ್‌.ಡಿ.ರೇವಣ್ಣ ವಿರುದ್ಧದ ದೌರ್ಜನ್ಯ ಪ್ರಕರಣಗಳಲ್ಲಿ ತನಿಖೆಗೆ ಜೆಡಿಎಸ್‌ ಸಹಕರಿಸುತ್ತಿಲ್ಲ. ಬದಲಾಗಿ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಮುಖಂಡರು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಮೇಲೆ ಕೊಳಕು ಎಸೆಯುವ ಕೆಲಸ ಮಾಡುತ್ತಿದ್ದಾರೆ’ ಎಂದರು. 

‘ಪ್ರಕರಣದ ಆರೋಪಿಗಳನ್ನು ಖಂಡಿಸುವುದನ್ನು ಬಿಟ್ಟು ಪೆನ್‌ಡ್ರೈವ್ ಹಂಚಿದವರ ಬಗ್ಗೆ ಜೆಡಿಎಸ್‌ ಹಾಗೂ ಬಿಜೆಪಿ ಮುಖಂಡರು ಕೂಗಾಡುತ್ತಿದ್ದಾರೆ. ಕೊಲೆ ಮಾಡಿದವನ ಬಿಟ್ಟು, ಕತ್ತಿ ತಯಾರಿಸಿದವನ ಮೇಲೆ ಶಿಕ್ಷೆ ವಿಧಿಸುವಂತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಎಸ್‌ಐಟಿ ಬಗ್ಗೆ ನಂಬಿಕೆ ಇಲ್ಲದಿದ್ದರೆ ಪ್ರಕರಣವನ್ನು ಸಿಬಿಐಗೆ ವಹಿಸಲು ಕುಮಾರಸ್ವಾಮಿ ಒತ್ತಾಯಿಸಲಿ. ಗಾಜಿನ ಮನೆಯಲ್ಲಿ ಕೂತು ರಾಜ್ಯ ಸರ್ಕಾರದ ಮೇಲೆ ಕಲ್ಲೆಸೆಯುವುದೇಕೆ’ ಎಂದು ಪ್ರಶ್ನಿಸಿದರು.

‘ರಾಜತಾಂತ್ರಿಕ ಪಾಸ್‌ಪೋರ್ಟ್‌ ಹಾಗೂ ವೀಸಾ ಸಮೇತ ಮಧ್ಯರಾತ್ರಿ ದೇಶ ಬಿಟ್ಟು ಕಳುಹಿಸಿರುವುದು ಯಾರೆಂಬುದನ್ನು ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ತಿಳಿಸಲಿ. ಕೇಂದ್ರ ಗೃಹ ಸಚಿವರಿಗೆ ಪ್ರಜ್ವಲ್ ಅವರನ್ನು ಹುಡುಕುವುದು ಕಷ್ಟವೇ’ ಎಂದು ಕೇಳಿದರು.

ಮಂಪರು ಪರೀಕ್ಷೆ ನಡೆಸಿ: ‘ವಕೀಲ ದೇವರಾಜೇಗೌಡ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ, ಮಾಜಿ ಶಾಸಕ ಪ್ರೀತಂಗೌಡ, ಪ್ರಜ್ವಲ್ ರೇವಣ್ಣ ಅವರ ಕಾರು ಚಾಲಕ ಕಾರ್ತಿಕ್‌ ಗೌಡ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು’ ಎಂದು ಲಕ್ಷ್ಮಣ ಒತ್ತಾಯಿಸಿದರು.

‘ಆರ್.ಅಶೋಕ ಅವರು ಹುಚ್ಚರಂತೆ ಮಾತನಾಡುತ್ತಿದ್ದಾರೆ. ಪೆನ್‌ಡ್ರೈವ್‌ ಕೊಡಿಸಿದ್ದು ಯಾರು? ಎಲ್ಲಿಂದ ಖರೀದಿ ಮಾಡಿದರು? ಎಷ್ಟು ಬಿಲ್‌ ಕೊಟ್ಟಿದ್ದಾರೆ ಎಂಬುದನ್ನು ಒಂದರೆಡು ದಿನದಲ್ಲಿ ತಿಳಿಸಲಾಗುವುದು. ದೇಶದಲ್ಲಿ ಬಿಜೆಪಿಯ 68 ಶಾಸಕರ ವಿರುದ್ಧ ಲೈಂಗಿಕ ದೌರ್ಜನ್ಯ ನಡೆಸಿರುವ ಸಿ.ಡಿ.ಗಳಿವೆ. ರಾಜ್ಯದಲ್ಲಿಯೇ 14 ಮುಖಂಡರ ಸಿ.ಡಿ.ಗಳಿದ್ದು, ಅವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ’ ಎಂದು ಮಾಹಿತಿ ನೀಡಿದರು.

ನಗರ ಕಾಂಗ್ರೆಸ್‌‍ ಸಮಿತಿ ಅಧ್ಯಕ್ಷ ಆರ್‌.ಮೂರ್ತಿ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಬಿ.ಜೆ.ವಿಜಯಕುಮಾರ್‌, ಮುಖಂಡರಾದ ಬಿ.ಎಂ. ರಾಮು, ಶಿವಣ್ಣ, ಭಾಸ್ಕರ್‌ ಎಲ್‌. ಗೌಡ, ರಘು, ಗಿರೀಶ್‌, ರಘು ಗೌಡ, ರಾಮಚಂದ್ರ, ಮಹೇಶ ಇದ್ದರು.

‘ಆರೋಪಿ ಸಮರ್ಥನೆಗೆ ಜೆಡಿಎಸ್‌ ಪ್ರತಿಭಟನೆ’ 

‘ಜೆಡಿಎಸ್‌ ನಾಯಕರು ಪ್ರತಿಭಟನೆ ಮೂಲಕ ಆರೋಪಿ ‍ಪ್ರಜ್ವಲ್ ರೇವಣ್ಣ ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಪ್ರತಿಭಟನೆ ವೇಳೆ ತನಿಖೆ ಬೇಡವೆಂದು ಭಿತ್ತಿಪತ್ರ ಹಿಡಿದಿದ್ದಾರೆ. ಇದು ದುರಂತ’ ಎಂದು ಲಕ್ಷ್ಮಣ ದೂರಿದರು. ‘ಸಂತ್ರಸ್ತ ಮಹಿಳೆಯರಲ್ಲಿ ಶೇ 80ರಷ್ಟು ಮಂದಿ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದಾರೆ. ಈ ಪ್ರಕರಣದಿಂದ ಸಮುದಾಯ ತಲೆ ತಗ್ಗಿಸುವಂತಾಗಿದೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಸಂಪಾದಿಸಿದ ಗೌರವವನ್ನು ಹಾಳುಗೆಡವಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT