ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಬಿಜೆಪಿ ಅಬ್ಬರ: ಕಾಂಗ್ರೆಸ್‌ ನಿರುತ್ಸಾಹ

ಅಭ್ಯರ್ಥಿ ಘೋಷಣೆ ಕಗ್ಗಂಟು; ಪ್ರಚಾರ ಆರಂಭಿಸದ ಕೈ ಪಾಳಯ
Published 19 ಮಾರ್ಚ್ 2024, 5:27 IST
Last Updated 19 ಮಾರ್ಚ್ 2024, 5:27 IST
ಅಕ್ಷರ ಗಾತ್ರ

ಮೈಸೂರು: ಲೋಕಸಭೆ ಚುನಾವಣೆಯ ಮತದಾನಕ್ಕೆ ಮುಹೂರ್ತ ನಿಗದಿಯಾಗಿದ್ದರೂ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಇನ್ನೂ ತನ್ನ ಅಭ್ಯರ್ಥಿಯನ್ನೇ ಘೋಷಿಸಿಲ್ಲ. ಒಂದೆಡೆ ಬಿಜೆಪಿ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದರೆ, ಮತ್ತೊಂದೆಡೆ ಕೈ ಪಾಳಯದಲ್ಲಿ ನಿರುತ್ಸಾಹ ಮನೆ ಮಾಡಿದಂತಿದೆ.

ರಾಜ್ಯದಲ್ಲಿ ಮೊದಲ ಹಂತದ ಮತದಾನ ನಡೆಯಲಿರುವ ಕ್ಷೇತ್ರಗಳಲ್ಲಿ ಈ ಕ್ಷೇತ್ರವೂ ಒಂದು. ಇದೇ ತಿಂಗಳ 28ರಂದು ಚುನಾವಣೆಯ ಅಧಿಸೂಚನೆ ಹೊರಬೀಳಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ. ಅದಾದ ಬಳಿಕ ಪ್ರಚಾರಕ್ಕೆ 25 ದಿನವಷ್ಟೇ ಸಿಗಲಿದೆ. ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಲ್ಲಿ 20.72 ಲಕ್ಷ ಮತದಾರರು ಇದ್ದಾರೆ. ಎರಡು ಜಿಲ್ಲೆಗಳಿಂದ 8 ವಿಧಾನಸಭಾ ಕ್ಷೇತ್ರಗಳಿದ್ದು, ಸೀಮಿತ ಅವಧಿಯಲ್ಲಿ ಕ್ಷೇತ್ರ ವ್ಯಾಪ್ತಿಯ ಎಲ್ಲ ಜನರನ್ನೂ ತಲುಪುವುದು ಅಭ್ಯರ್ಥಿಗಳಿಗೂ ಸವಾಲಿನ ಕೆಲಸವಾಗಿದೆ.

ಬಿಜೆಪಿ ಈಗಾಗಲೇ ಅಭ್ಯರ್ಥಿ ಘೋಷಣೆ ಮಾಡಿದ್ದು, ಯದುವೀರ್ ಅರಮನೆ ಬಿಟ್ಟು ಕಾರ್ಯಕರ್ತರ ಜೊತೆಗೂಡಿ ಮನೆಮನೆ ಸುತ್ತುತ್ತಿದ್ದಾರೆ. ರಾಜವಂಶಸ್ಥ ಎಂಬ ಜನಪ್ರಿಯತೆಯೂ ಅವರಿಗೆ ಇದ್ದು, ಬಹಿರಂಗ ಪ್ರಚಾರದ ಜೊತೆಗೆ ಸಾಮಾಜಿಕ ಜಾಲತಾಣಗಳ ಮೂಲಕವೂ ಮತಯಾಚನೆ ನಡೆಸತೊಡಗಿದ್ದಾರೆ.

ಕಾಂಗ್ರೆಸ್‌ನ ಕೆಲವು ಟಿಕೆಟ್ ಆಕಾಂಕ್ಷಿಗಳು ಕಳೆದ ನವೆಂಬರ್‌–ಡಿಸೆಂಬರ್‌ನಲ್ಲೇ ಪ್ರಚಾರ ನಡೆಸತೊಡಗಿದ್ದು, ಅಭ್ಯರ್ಥಿ ಘೋಷಣೆಗೆ ಮುನ್ನ ಪ್ರಚಾರ ಮಾಡಕೂಡದು ಎಂದು ಕೆಪಿಸಿಸಿ ಎಚ್ಚರಿಕೆ ಸಹ ನೀಡಿತ್ತು. ಆದರೆ ಅದೇ ಉತ್ಸಾಹ ಈಗ ಕಾಣುತ್ತಿಲ್ಲ. ಈಚೆಗೆ ಗ್ಯಾರಂಟಿ ಸಮಾವೇಶ ನಡೆಸಿದ್ದು ಬಿಟ್ಟರೆ ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ಹೆಚ್ಚಿನ ಪ್ರಚಾರ ನಡೆದಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರೇ ಹೇಳುತ್ತಾರೆ.

ಅಭ್ಯರ್ಥಿಗಳಿಗೂ ಸವಾಲು:
ಸದ್ಯ ಕಾಂಗ್ರೆಸ್‌ನ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಇರುವ ಮೂವರು ಪಕ್ಷದ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರೂ ಲೋಕಸಭೆ ಚುನಾವಣೆ ಎದುರಿಸಿದ ಅನುಭವ ಇಲ್ಲ. ಕೆಪಿಸಿಸಿ ವಕ್ತಾರರಾಗಿ ಪ್ರತಿಪಕ್ಷಗಳ ಟೀಕೆ ಟಿಪ್ಪಣಿಗಳಿಗೆ ಉತ್ತರ ನೀಡುವ ಕೆಲಸ ಮಾಡುತ್ತಿರುವ ಎಂ. ಲಕ್ಷ್ಮಣ್‌ ಈ ಹಿಂದೆ ವಿಧಾನ ಪರಿಷತ್‌ಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು. ಬಿ.ಜೆ. ವಿಜಯ್‌ಕುಮಾರ್‌ ಕಾಂಗ್ರೆಸ್‌ನ ಮೈಸೂರು ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷರಾಗಿ ಪಕ್ಷ ಸಂಘಟನೆಯ ಜವಾಬ್ದಾರಿ ಹೊತ್ತಿದ್ದು, ಅವರಿಗೂ ಚುನಾವಣೆಯಲ್ಲಿ ನೇರ ಸ್ಪರ್ಧೆಯ ಅನುಭವ ಹೊಸತೇ ಆಗಲಿದೆ. ಸೂರಜ್‌ ಹೆಗಡೆ ಸೇರಿದಂತೆ ಇನ್ನಿತರ ಆಕಾಂಕ್ಷಿಗಳಿಗೂ ಇಡೀ ಕ್ಷೇತ್ರದ ಪರಿಚಯ ಕಡಿಮೆಯೇ.

ಇವರನ್ನು ಹೊರತುಪಡಿಸಿ ಅಚ್ಚರಿಯ ಅಭ್ಯರ್ಥಿಯನ್ನು ಪಕ್ಷ ಕಣಕ್ಕೆ ಇಳಿಸಿದರೂ ಅವರಿಗೂ ಸೀಮಿತ ಅವಧಿಯಲ್ಲಿ ಕ್ಷೇತ್ರ ಸುತ್ತುವ ಸವಾಲು ಎದುರಾಗಲಿದೆ. ಕ್ಷೇತ್ರದ ಒಂದು ಗಡಿಯಿಂದ ಮತ್ತೊಂದು ಗಡಿಗೆ 150–200 ಕಿ.ಮೀ. ಅಂತರ ಇದೆ. ಹೀಗಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮರ್ಥವಾಗಿ ಪ್ರಚಾರ ಮಾಡಲು ಸಾಕಷ್ಟು ಸಮಯ ಬೇಕು. ಕಾಂಗ್ರೆಸ್‌ ಈಗಿನಿಂದ ಆದರೂ ಪ್ರಚಾರ ಆರಂಭಿಸಬೇಕು ಎಂಬುದು ಕೈ ಪಾಳಯದ ಕಾರ್ಯಕರ್ತರ ಆಶಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT