ಮೈಸೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಆಡಳಿತ ಮಂಡಳಿ ಆಯ್ಕೆಗಾಗಿ ನ.4ರಂದು ಚುನಾವಣೆ ನಿಗದಿಪಡಿಸಿ ಹೊರಡಿಸಲಾಗಿದ್ದ ಅಧಿಸೂಚನೆ ರದ್ದುಪಡಿಸಲಾಗಿದೆ.
‘ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ನಿಯಮಾವಳಿಗಳು 1960ರ ನಿಯಮ 13 (ಡಿ) (1), (2)ರ ಅನ್ವಯ ಮತದಾರರ ಪಟ್ಟಿ ತಯಾರಿಕಾ ಕಾರ್ಯ ನಡೆಯದೇ ಇರುವುದರಿಂದ ಚುನಾವಣಾ ಅಧಿಸೂಚನೆಯನ್ನು ಹಿಂಪಡೆಯಲಾಗಿದೆ’ ಎಂದು ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.
‘ಆದಾಗ್ಯೂ ಬ್ಯಾಂಕ್‌ನಿಂದ ಡೆಲಿಗೇಟ್ ಫಾರಂಗಳನ್ನು ಸಲ್ಲಿಸುವಂತೆ ಸದಸ್ಯ ಸಹಕಾರ ಸಂಘಗಳಿಗೆ ನಿರ್ದೇಶನಗಳನ್ನು ನೀಡಿರುವ ಬಗ್ಗೆ ದೂರುಗಳು ಸ್ವೀಕೃತವಾಗಿವೆ. ಚುನಾವಣೆ ಪ್ರಕ್ರಿಯೆ ಅಧಿಸೂಚನೆ ಹಿಂಪಡೆದಿರುವ ಹಿನ್ನೆಲೆಯಲ್ಲಿ, ಸದಸ್ಯ ಸಹಕಾರ ಸಂಘಗಳು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಡೆಲಿಗೇಟ್ ಫಾರಂಗಳನ್ನು ಸಲ್ಲಿಸುವ ಪ್ರಕ್ರಿಯೆಯನ್ನು ಮುಂದಿನ ಅಧಿಸೂಚನೆ ಹೊರಡಿಸುವವರೆಗೂ ಸಲ್ಲಿಸದಂತೆ ತಿಳಿಸಲಾಗಿದೆ. ಆದಾಗ್ಯೂ, ಸಹಕಾರ ಸಂಘಗಳು ಡೆಲಿಗೇಟ್ ಫಾರಂಗಳನ್ನು ಸಲ್ಲಿಸಿದ್ದಲ್ಲಿ ಅದು ಅಸಿಂಧುವಾಗುತ್ತದೆ’ ಎಂದು ತಿಳಿಸಿದ್ದಾರೆ. ಅದರ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.
ಹಿಡಿತ ತಪ್ಪಿಸಲು: ಪ್ರಸ್ತುತ ಬ್ಯಾಂಕ್ ಮೇಲೆ ಜೆಡಿಎಸ್ ಶಾಸಕರಾದ ಜಿ.ಟಿ. ದೇವೇಗೌಡ ಮತ್ತು ಅವರ ಪುತ್ರ ಹಾಲಿ ಅಧ್ಯಕ್ಷರೂ ಆಗಿರುವ ಜಿ.ಡಿ. ಹರೀಶ್ ಗೌಡ ಅವರ ಹಿಡಿತವಿದೆ. ಇದನ್ನು ತಪ್ಪಿಸಲು ಕಾಂಗ್ರೆಸ್ ಸರ್ಕಾರ ಯೋಜಿಸಿದೆ ಎಂದು ಹೇಳಲಾಗುತ್ತಿದೆ.
ಹಾಲಿ ಅಧ್ಯಕ್ಷರ ಹಾಗೂ ಆಡಳಿತ ಮಂಡಳಿಯ ಅಧಿಕಾರದ ಅವಧಿ ನ.10ಕ್ಕೆ ಅಂತ್ಯವಾಗಲಿದೆ. ಇದಕ್ಕೆ ಪೂರ್ವಭಾವಿಯಾಗಿ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಲಾಗಿತ್ತು. ಎಂಡಿಸಿಸಿ ಬ್ಯಾಂಕ್ ಆಡಳಿತವನ್ನು ಮತ್ತೆ ತಮ್ಮ ವಶಕ್ಕೆ ಪಡೆದುಕೊಳ್ಳಲು ಜಿಟಿಡಿ ಹಾಗೂ ಹರೀಶ್ ಗೌಡ ಪ್ರಯತ್ನಿಸಿದ್ದರು. ಇದಕ್ಕೆ ಸರ್ಕಾರ ಬ್ರೇಕ್ ಹಾಕಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಮತದಾರರ ಪಟ್ಟಿ ತಯಾರಿಸದೇ ಇರುವುದರಿಂದ ಚುನಾವಣೆ ಅಧಿಸೂಚನೆ ಹಿಂಪಡೆದು ಆದೇಶ ಹೊರಡಿಸಲಾಗಿದೆ. ಈ ಬ್ಯಾಂಕ್‌ನ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಆದೇಶದ ನಂತರವೂ ಬ್ಯಾಂಕ್‌ಗೆ ಒಳಪಡುವ ಸದಸ್ಯ ಸಹಕಾರ ಸಂಘಗಳ ಪ್ರತಿನಿಧಿಗಳಿಗೆ ಡೆಲಿಗೇಟ್ ಫಾರಂ ವಿತರಿಸುತ್ತಿರುವುದು ಕಂಡುಬಂದಿದೆ. ಚುನಾವಣಾ ಅಧಿಸೂಚನೆ ರದ್ದಾಗಿರುವ ಕಾರಣ ಡೆಲಿಗೇಟ್ ಫಾರಂ ಸಲ್ಲಿಸಿದರೆ ಅದು ಅಸಿಂಧುಗೊಳ್ಳಲಿದೆ.
ಈ ನಡುವೆ, ಎಂಡಿಸಿಸಿ ಬ್ಯಾಂಕ್ ಆಡಳಿತವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಪ್ರಯತ್ನ ಆರಂಭಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.