ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೋದ್ಯಮ ಸ್ಥಾಪನೆಗೆ ಪೂರಕ ವಾತಾವರಣ: ಆರ್‌.ಗೋಪಿನಾಥರಾವ್‌

ಎಂಎಸ್‌ಎಂಇ ಅಭಿವೃದ್ಧಿ ಸಂಸ್ಥೆ ಉಪನಿರ್ದೇಶಕ ಆರ್‌.ಗೋಪಿನಾಥರಾವ್‌ ಅಭಿಮತ
Last Updated 30 ಜನವರಿ 2023, 12:39 IST
ಅಕ್ಷರ ಗಾತ್ರ

ಮೈಸೂರು: ‘ನವೋದ್ಯಮ ಸ್ಥಾಪನೆಗೆ ಪೂರಕ ವಾತಾವರಣ ದೇಶದಲ್ಲಿ ಸೃಷ್ಟಿಯಾಗಿದೆ. ವಿದ್ಯಾರ್ಥಿಗಳು ಉದ್ಯಮ ಸ್ಥಾಪಿಸಿ ಉದ್ಯೋಗ ಸೃಷ್ಟಿಗೆ ಮುಂದಾಗಬೇಕು’ ಎಂದು ಎಂಎಸ್‌ಎಂಇ ಅಭಿವೃದ್ಧಿ ಸಂಸ್ಥೆ ಉಪನಿರ್ದೇಶಕ ಆರ್‌.ಗೋಪಿನಾಥರಾವ್‌ ಹೇಳಿದರು.

ಎನ್‌ಐಇ ಕಾಲೇಜಿನ ಎನ್ಐಇ ಕಾಲೇಜಿನ ಮೆಕ್ಯಾನಿಕಲ್ ಎಂಜಿನಿಯರಿಂಗ್ ಅಧ್ಯಯನ ವಿಭಾಗವು ‘ಕಿರು, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ (ಎಂಎಸ್‌ಎಂಇ) ಅಭಿವೃದ್ಧಿಯಲ್ಲಿ ಆಟೊಮೇಷನ್ ತಂತ್ರಜ್ಞಾನ ಹಾಗೂ ಅದರ ಪ್ರಸ್ತುತ ಬೆಳವಣಿಗೆಗಳು’ ಕುರಿತು ಆಯೋಜಿಸಿದ್ದ ಕಾರ್ಯಾಗಾರಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಎಂಎಸ್‌ಎಂಇ ಕ್ಷೇತ್ರವು ದೇಶದ 6.5 ಕೋಟಿ ಜನರಿಗೆ ಉದ್ಯೋಗ ನೀಡಿದೆ. ಸೇವಾ ವಲಯದ ನಂತರ ಅತಿ ಹೆಚ್ಚು ತೆರಿಗೆ ಈ ಕ್ಷೇತ್ರದಿಂದಲೇ ಸಂಗ್ರಹವಾಗುತ್ತಿದೆ. ಡಿಜಿಟಲ್‌ ಇಂಡಿಯಾ, ಮೇಕ್‌ ಇನ್‌ ಇಂಡಿಯಾ ಯೋಜನೆಗಳು ಉದ್ಯಮದ ವಿಸ್ತರಣೆಯನ್ನು ಮಾಡಿವೆ’

‘ಆರ್ಥಿಕತೆ ದ್ವಿಗುಣಸಲು ಕೇಂದ್ರವು ಎಂಎಸ್‌ಎಂಇ ಕ್ಷೇತ್ರವನ್ನು ಬಲಗೊಳಿಸುತ್ತಿದೆ. ಅದಕ್ಕಾಗಿ 17ಕ್ಕೂ ಹೆಚ್ಚು ಯೋಜನೆಗಳನ್ನು ಜಾರಿಗೊಳಿಸಿದೆ. ಡಿಜಿಟಲ್ ತಂತ್ರಜ್ಞಾನವು ಉದ್ದಿಮೆಗಳ ವ್ಯವಹಾರ ಸುಗಮಗೊಳಿಸಿದೆ’ ಎಂದರು.

‘ಶಿಕ್ಷಣ ಕ್ಷೇತ್ರ ಹಾಗೂ ಉದ್ಯಮಗಳ ನಡುವೆ ಕೊಡುಕೊಳ್ಳುವಿಕೆ ಇದ್ದರೆ ಮಾತ್ರ ಸುಧಾರಣೆ ಸಾಧ್ಯ. ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಸಂಶೋಧನೆಗಳು ಉದ್ಯಮಗಳ ಬೆಳವಣಿಗೆಗೆ ಸಹಕರಿಸುತ್ತವೆ’ ಎಂದು ಅಭಿಪ್ರಾಯಪಟ್ಟರು.

ಜನಟಿಕ್ಸ್‌ ಇಂಡಿಯಾ ಲಿಮಿಟೆಡ್‌ನ ಉಪ ವ್ಯವಸ್ಥಾಪಕ ಸುಬ್ರಹ್ಮಣ್ಯ ಭಟ್‌ ಮಾತನಾಡಿ, ‘ಮೂರು ದಶಕದ ಹಿಂದೆ ಆಟೊಮೇಶನ್ ತಂತ್ರಜ್ಞಾನ ಇರಲಿಲ್ಲ. ಕಳೆದ 15 ವರ್ಷಗಳಿಂದ ಈ ಕ್ಷೇತ್ರ ಬೆಳವಣಿಗೆ ಸಾಧಿಸಿದೆ. ಭಾರತವು ಉತ್ಪಾದನಾ ಕ್ಷೇತ್ರದಲ್ಲಿ ಇನ್ನೂ ಪಾರಮ್ಯ ಸಾಧಿಸಿಲ್ಲ. ಹೂಡಿಕೆ ಹಾಗೂ ಸಂಶೋಧನೆಗಳ ಅಭಾವ ಅದಕ್ಕೆ ಕಾರಣ’ ಎಂದು ವಿಶ್ಲೇಷಿಸಿದರು.

‘ತರಗತಿಯಲ್ಲಿ ನಡೆಯುವ ಪಾಠಗಳಿಗೂ ಕೈಗಾರಿಕೆಗಳಲ್ಲಿ ಆಗಿರುವ ಬದಲಾವಣೆಗಳಿಗೂ ಸಂಬಂಧವೇ ಇಲ್ಲವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಾಗಾರದ ಸಂಯೋಜಕ ಡಾ.ಕೆ.ಆರ್.‍ಪ್ರಕಾಶ್‌, ‘ರೊಬಾಟಿಕ್‌ ತಂತ್ರಜ್ಞಾನಕ್ಕೆ ಉಜ್ವಲ ಭವಿಷ್ಯವಿದೆ. ಮೆಕ್ಯಾನಿಕಲ್‌, ಎಲೆಕ್ಟ್ರಾನಿಕ್ಸ್‌ ಹಾಗೂ ಕಂಪ್ಯೂಟರ್‌ ವಿಜ್ಞಾನದ ಅರಿವು ಬೇಕಾಗುತ್ತದೆ’ ಎಂದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ.ಎಚ್‌.ಆರ್‌.ಶಿವಕುಮಾರ್, ಉಪ ಪ್ರಾಂಶುಪಾಲ ಡಾ‌.ಎಂ.ಎಸ್.ಗಣೇಶ್ ಪ್ರಸಾದ್, ಡಾ.ಶ್ರೀನಾಥ್‌ ಆರ್‌. ಕಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT