ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ಪಂಪ್‌ಸೆಟ್‌ಗೆ ‘ಆಧಾರ್’ ಜೋಡಣೆ: ವಿರೋಧ

ಕಬ್ಬು ಬೆಳೆಗಾರರ ಸಂಘದಿಂದ ‘ಸೆಸ್ಕ್‌’ಗೆ ಮುತ್ತಿಗೆ ನಾಳೆ
Published : 2 ಸೆಪ್ಟೆಂಬರ್ 2024, 15:39 IST
Last Updated : 2 ಸೆಪ್ಟೆಂಬರ್ 2024, 15:39 IST
ಫಾಲೋ ಮಾಡಿ
Comments

ಮೈಸೂರು: ‘ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಸಂಖ್ಯೆ ಜೋಡಿಸಬೇಕು ಎಂಬ ನಿಯಮ ವಿರೋಧಿಸಿ ಹಾಗೂ ಅಕ್ರಮ– ಸಕ್ರಮ ಯೋಜನೆ ಮರು ಜಾರಿಗೆ ಆಗ್ರಹಿಸಿ ಸೆ.4ರಂದು ‘ಸೆಸ್ಕ್‌’ ಪ್ರಧಾನ ಕಚೇರಿಗೆ ಮುತ್ತಿಗೆ ಹಾಕಲಾಗುವುದು’ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ತಿಳಿಸಿದರು.

ಇಲ್ಲಿನ ಜಲದರ್ಶಿನಿ ಅತಿಥಿಗೃಹದಲ್ಲಿ ಸೋಮವಾರ ನಡೆದ ಸಂಘದ ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

‘ರೈತರ ಕೃಷಿ ಪಂಪ್‌ಸೆಟ್‌ಗಳ ಆರ್‌ಆರ್‌ ನಂಬರ್‌ಗೆ ಆಧಾರ್‌ ನಂಬರ್‌ ಜೋಡಿಸಬೇಕು ಎಂದು ತಿಳಿಸಲಾಗಿದೆ. ಈ ಮೂಲಕ ವಿದ್ಯುತ್‌ ಖಾಸಗೀಕರಣಕ್ಕೆ ಸರ್ಕಾರಗಳು ಹುನ್ನಾರ ನಡೆಸಿವೆ. ಇದು ಕೃಷಿಕರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಕೃಷಿ ಚಟುವಟಿಕೆಗಳಿಗೆ ಮೂಲವಾದ ವಿದ್ಯುತ್‌ ಹಾಗೂ ಇದಕ್ಕೆ ಬೇಕಾದ ಪರಿವರ್ತಕ, ವಿದ್ಯುತ್‌ ಕಂಬ ಹಾಗೂ ತಂತಿಗಳನ್ನು ಇಂಧನ ಇಲಾಖೆಯ ವೆಚ್ಚದಲ್ಲಿ ಮಾಡಲಾಗುತ್ತಿತ್ತು. ಇದಕ್ಕೆ ರೈತರಿಂದ ವಂತಿಕೆಯಾಗಿ ₹ 17ಸಾವಿರದಿಂದ ₹ 23ಸಾವಿರದವರೆಗೆ ಪಡೆಯಲಾಗುತ್ತಿತ್ತು. ಅದನ್ನು 2023ರ ಅಕ್ಟೋಬರ್‌ನಿಂದ ಕೈಬಿಡಲಾಗಿದೆ. ಇದರಿಂದಾಗಿ, ರೈತರೇ ನೇರವಾಗಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪಡೆದುಕೊಳ್ಳಲು ₹ 3 ಲಕ್ಷದಿಂದ ₹ 4 ಲಕ್ಷ ವೆಚ್ಚ ಮಾಡಬೇಕಾದ ದುಬಾರಿಯಾದ ಪರಿಸ್ಥಿತಿಯನ್ನು ಸರ್ಕಾರ ಸೃಷ್ಟಿಸಿದೆ. ಇದು ತೀವ್ರ ಖಂಡನೀಯ’ ಎಂದರು.

‘ರೈತರು ಬೆಳೆಯುವ ಕೃಷಿ ಉತ್ಪನ್ನಗಳಿಗೆ ಈವರೆಗೂ ಕಾನೂನು ಬದ್ಧ ಹಾಗೂ ವೈಜ್ಞಾನಿಕ ಬೆಲೆ ದೊರೆಯುವಂತಹ ವಾತಾವರಣವನ್ನು ಸರ್ಕಾರ ಇನ್ನೂ ಸೃಷ್ಟಿಸಿಲ್ಲ. ಹೀಗಿದ್ದರೂ ಹಲವು ರೀತಿಯಲ್ಲಿ ಹೊರೆ ಹೇರುತ್ತಿರುವುದು ಸರಿಯಲ್ಲ’ ಎಂದು ಹೇಳಿದರು.

‘ರಾಜ್ಯ ಸರ್ಕಾರವು ಪ್ರತಿ ಕುಟುಂಬಕ್ಕೂ 200 ಯುನಿಟ್ ವಿದ್ಯುತ್‌ ಅನ್ನು ಉಚಿತವಾಗಿ ಒದಗಿಸಬೇಕು; ಇದಕ್ಕಾಗಿ ಯಾವುದೇ ಷರತ್ತು ವಿಧಿಸಬಾರದು. ಸೌರವಿದ್ಯುತ್‌ ಪಂಪ್‌ಸೆಟ್ ಹಾಕಿಸಿಕೊಂಡ ರೈತರಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಬಾರದು. ಕೈಗಾರಿಕೆಯಂತೆ ಕೃಷಿಗೂ ಹಗಲು ಹೊತ್ತಿನಲ್ಲೇ ವಿದ್ಯುತ್ ಪೂರೈಸಬೇಕು. ನಗರ ಹಾಗೂ ಗ್ರಾಮಾಂತರ ಪ್ರದೇಶ ಎಂಬ ತಾರತಮ್ಯ ಮಾಡಬಾರದು. ಜಿಂದಾಲ್ ಸ್ಟೀಲ್‌ ಕಂಪನಿಗೆ ಅತ್ಯಂತ ಕನಿಷ್ಠ ದರದಲ್ಲಿ 3,667 ಎಕರೆ ಭೂಮಿ ಮಾರುವ ಸಚಿವ ಸಂಪುಟ ಸಭೆಯ ನಿರ್ಣಯವನ್ನು ವಾಪಸ್ ಪಡೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

ಇದಕ್ಕೆ ಮುನ್ನ ನಡೆದ ಸಭೆಯಲ್ಲಿ, ಮುಖಂಡರಾದ ಅಂಕನಹಳ್ಳಿ ತಿಮ್ಮಪ್ಪ, ಕೆರೆಹುಂಡಿ ರಾಜಣ್ಣ, ದೇವೇಂದ್ರಕುಮಾರ್, ಶಿವರುದ್ರಪ್ಪ, ಕಸುವನಹಳ್ಳಿ ಮಂಜೇಶ್, ಎಂ.ವಿ. ಕೃಷ್ಣಪ್ಪ, ದೇವೀರಮ್ಮನಹುಂಡಿ ಮಹೇಶ್, ಕುಮಾರ್, ಅಂಬಳೆ ಮಹದೇವಸ್ವಾಮಿ, ಗಣೇಶ್, ಮಹದೇವಪ್ಪ ಹಾಗೂ ಮಂಜುನಾಥ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT