ಭಾನುವಾರ, ಏಪ್ರಿಲ್ 2, 2023
24 °C
ಕೇಂದ್ರ ಸಚಿವ ಭಗವಂತ್‌ ಖೂಬಾ ಸಲಹೆ

ರೈತರು ವಿಜ್ಞಾನಿ, ವ್ಯಾಪಾರಿಯೂ ಆಗಬೇಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುತ್ತೂರು (ಮೈಸೂರು ಜಿಲ್ಲೆ): ‘ರೈತರು ಕೇವಲ ರೈತರಾಗಿಯೇ ಉಳಿದರೆ ಲಾಭವಾಗದು. ಸಂಶೋಧಕ, ವ್ಯಾಪಾರಿ ಹಾಗೂ ವಿಜ್ಞಾನಿಯೂ ಆಗಬೇಕು’ ಎಂದು ಕೇಂದ್ರದ ರಾಸಾಯನಿಕ, ರಸಗೊಬ್ಬರ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ್‌ ಖೂಬಾ ಸಲಹೆ ನೀಡಿದರು.

ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಅಂಗವಾಗಿ ಶನಿವಾರ ನಡೆದ ಕೃಷಿ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ರಸಗೊಬ್ಬರ ಬಳಕೆಯು ಮಣ್ಣಿನ ಫಲವತ್ತತೆ ಹಾಳು ಮಾಡುತ್ತವೆ ಎನ್ನುವುದು ಸ್ವಲ್ಪ ಮಟ್ಟಿಗೆ ಸರಿ. ಆದರೆ, ವೈಜ್ಞಾನಿಕವಾಗಿ ಬಳಸಿದರೆ ಪ್ರಯೋಜನವಿದೆ’ ಎಂದರು.

‘ಅಂತರರಾಷ್ಟ್ರೀಯ ಮಟ್ಟದಲ್ಲಿ ರಸಗೊಬ್ಬರದ ಬೆಲೆ ಗಗನಕ್ಕೆ ಏರಿದ್ದರೂ ಪ್ರಧಾನಿ ನರೇಂದ್ರ ಮೋದಿ ಕ್ರಮದಿಂದಾಗಿ ಹಿಂದಿನ ದರದಲ್ಲೇ ಒದಗಿಸುವ ಕೆಲಸ ಮಾಡುತ್ತಿದ್ದೇವೆ. ಭಾರತದ ಆರ್ಥಿಕ‌ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಲಾಗುತ್ತಿದೆ. ಇದರಿಂದಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಹಣದುಬ್ಬರ ನಿಯಂತ್ರಣದಲ್ಲಿದೆ. ಮುಂದಿನ ದಿನಗಳಲ್ಲಿ, ಆರ್ಥಿಕತೆಯಲ್ಲಿ ಭಾರತವು ಜಗತ್ತಿನ ಪ್ರಥಮ ಅಥವಾ ದ್ವಿತೀಯ ಸ್ಥಾನಕ್ಕೆ ಬರುವುದರಲ್ಲಿ ಅಚ್ಚರಿ ಇಲ್ಲ. ವಿಶ್ವಗುರುವಿನ ಸ್ಥಾನವನ್ನೂ ಪಡೆಯಲಿದೆ’ ಎಂದು ಹೇಳಿದರು.

ಆದಾಯವನ್ನೂ ಹೆಚ್ಚಿಸುತ್ತದೆ:

ಕೃಷಿ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟತಾ ಕೇಂದ್ರದ ನಿರ್ದೇಶಕ ಡಾ.ಅಶೋಕ್ ಆಲೂರು ಸರ್ಕಾರದಿಂದ ರೈತರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

‘ಸಣ್ಣ ಹಾಗೂ ಅತಿ ಸಣ್ಣ ರೈತರು ಹಲವು ತೊಂದರೆಗಳನ್ನು ಮತ್ತು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಅವರ ನೆರವಿಗಾಗಿ ತರಬೇತಿ, ತಂತ್ರಜ್ಞಾನ ವರ್ಗಾವಣೆ ಕಾರ್ಯವೂ ನಡೆಯುತ್ತಿದೆ’ ಎಂದರು.

ಐಸಿಎಆರ್‌–ಐಐಎಂಆರ್‌ ವಿಜ್ಞಾನಿ (ಕೃಷಿ ವಿಸ್ತರಣೆ) ಡಾ.ಬಿ.ಸಿ.ಸಂಗಪ್ಪ ಮಾತನಾಡಿ, ‘ಸಿರಿಧಾನ್ಯಗಳು ಆರೋಗ್ಯ ವೃದ್ಧಿಸಿದರೆ, ರೈತ ಉತ್ಪಾದಕ ಸಂಸ್ಥೆಗಳು ಆದಾಯ ಹೆಚ್ಚಿಸುತ್ತವೆ’ ಎಂದು ವ್ಯಾಖ್ಯಾನಿಸಿದರು.

ಸಾನ್ನಿಧ್ಯ ವಹಿಸಿದ್ದ ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ‘ದೇಸಿ ಪದ್ಧತಿಯ ಬೆಳೆಗಳನ್ನು ಬಿಟ್ಟು ಲಾಭದಾಯಕ ಬೆಳೆಗಳಿಗೆ ಮಾರು ಹೋಗಿದ್ದರಿಂದ ಅನಾರೋಗ್ಯದ ಸಮಸ್ಯೆಗಳು ಕಾಡುತ್ತಿವೆ. ಇದರಿಂದ ಹೊರಬರುವುದಕ್ಕಾಗಿ, ಔಷಧಿಗಳ ಅವಲಂಬಿತ ಕೃಷಿಯ ಬದಲಿಗೆ ಸಿರಿಧಾನ್ಯಗಳನ್ನು ಬೆಳೆಯುವುದಕ್ಕೆ ಆದ್ಯತೆ ಕೊಡಬೇಕು’ ಎಂದು ಸಲಹೆ ನೀಡಿದರು.

‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಆದಿಚುಂಚನಗಿರಿ ಮಠದ ಬೆಂಗಳೂರು ಶಾಖೆಯ ಸೌಮ್ಯನಾಥ ಸ್ವಾಮೀಜಿ ಹಾಗೂ ಆರ್ಗ್ ಟ್ರೀ ಕಂಪನಿಯ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಬಸವಣ್ಣ ಮಾತನಾಡಿದರು.

ಕಾಂಗ್ರೆಸ್ ಮುಖಂಡರಾದ ವಾಸು, ನಿರ್ಮಲಾ ವೆಂಕಟೇಶ್, ಕೆಎಸ್‌ಒಯು ಕುಲಪತಿ ಪ್ರೊ.ಶರಣಪ್ಪ ಹಲಸೆ, ತುಮಕೂರು ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ವೈ.ಎನ್.ಸಿದ್ದೇಗೌಡ ಇದ್ದರು.

ವಿಜೇತರಿಗೆ ಬಹುಮಾನ

ಸಿರಿಧಾನ್ಯದಿಂದ ತಿನಿಸು ತಯಾರಿಕೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಖಾರ ತಿನಿಸು ವಿಭಾಗದಲ್ಲಿ ಮಧುರಾ ಸುಧಾಕರ್, ಗಾಯತ್ರಿ, ಪದ್ಮಾ ಪಂಡಿತ್ ಮತ್ತು ಸಿಹಿ ತಿನಿಸು ವಿಭಾಗದಲ್ಲಿ ಗಂಗಾ ಚಿನ್ನಸ್ವಾಮಿ, ಸುಧಾಮಣಿ ರಾಜು ಹಾಗೂ ಶ್ಯಾಮಲಾ ಬಹುಮಾನ ಪಡೆದರು.

ಮುಖ್ಯಮಂತ್ರಿ ಭಾಗಿ ಜ.22ರಂದು

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜ.22ರಂದು ಮಧ್ಯಾಹ್ನ 12.20ಕ್ಕೆ ಸುತ್ತೂರು ಜಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಂಗಳೂರಿನಿಂದ ನೇರವಾಗಿ ಸುತ್ತೂರಿನ ಹೆಲಿಪ್ಯಾಡ್‌ಗೆ ಬರಲಿದ್ದಾರೆ.

ಜಾತ್ರೆಗಳಿಂದ ಪ್ರಮುಖ ಪಾತ್ರ

ಮನುಷ್ಯನ ‌ಜೀವನದಲ್ಲಿ ಜಾತ್ರೆ–ಉತ್ಸವಗಳು ಪ್ರಮುಖ ಪಾತ್ರ ವಹಿಸುತ್ತವೆ. ಆನಂದವನ್ನು ಹೆಚ್ಚಿಸುತ್ತವೆ. ರೈತರ ಏಳಿಗೆಗೆ‌ ಸುತ್ತೂರು ಜಾತ್ರಾ ಮಹೋತ್ಸವ ಸಹಕಾರಿಯಾಗಿದೆ.

– ಭಗವಂತ್ ಖೂಬಾ, ಕೇಂದ್ರ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು