ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಅನಾರೋಗ್ಯಕ್ಕೆ ರಹದಾರಿ ಫಾಸ್ಟ್‌ಫುಡ್‌– ಅಜಿನೊಮೋಟೊ ವ್ಯಾಪಕ ಬಳಕೆ!

ರುಚಿಕಾರಕಗಳ ಬಳಕೆ l ನಿಯಮಗಳ ಉಲ್ಲಂಘನೆ l ಕಠಿಣ ಕ್ರಮವಹಿಸದ ಸ್ಥಳೀಯ ಸಂಸ್ಥೆಗಳು
Published 15 ಜನವರಿ 2024, 11:34 IST
Last Updated 15 ಜನವರಿ 2024, 11:34 IST
ಅಕ್ಷರ ಗಾತ್ರ

ಮೈಸೂರು: ನಗರವೂ ಸೇರಿದಂತೆ ಜಿಲ್ಲೆಯ ಪಟ್ಟಣ, ಹೋಬಳಿ ಕೇಂದ್ರಗಳಲ್ಲಿ ಫಾಸ್ಟ್‌ಫುಡ್‌ (ರಸ್ತೆ ಬದಿ ಆಹಾರ) ಕೇಂದ್ರಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ. ಇಲ್ಲಿ ಶುದ್ಧ ಹಾಗೂ ಗುಣಮಟ್ಟದ ಆಹಾರ ಸಿಗುತ್ತಿದೆಯೇ ಎಂಬುದು ನಾಗರಿಕರ ಪ್ರಶ್ನೆ.

ನೂರಾರು ಕುಟುಂಬಗಳಿಗೆ ಉದ್ಯೋಗ ನೀಡಿರುವ ಫಾಸ್ಟ್‌ಫುಡ್‌ ಕೇಂದ್ರಗಳು ನಿಯಮಪಾಲನೆ ಜೊತೆಗೆ ಸ್ವಚ್ಛತೆಗೆ ಆದ್ಯತೆಯನ್ನು ನೀಡಬೇಕು ಎಂಬುದೇ ಪ್ರಜ್ಞಾವಂತರ ಆಗ್ರಹ. ರುಚಿಕಾರಕಗಳ ಬಳಕೆ ಅವ್ಯಾಹತವಾಗಿದ್ದು, ಸ್ಥಳೀಯ ಸಂಸ್ಥೆಗಳು ಎಚ್ಚರಿಕೆ ಗಂಟೆಯಾಗಿದೆ.

ನಗರದಲ್ಲಿಯೇ 19,035 ಅಧಿಕೃತ ಫಾಸ್ಟ್‌ಫುಡ್‌ ಕೇಂದ್ರಗಳಿವೆ. ಬಹುತೇಕ ಕಡೆ ಅಶುಚಿತ್ವ ಮನೆ ಮಾಡಿದೆ. ಪಾದಚಾರಿ ಮಾರ್ಗದಲ್ಲಿಯೇ ತೆರಯಲಾಗಿದ್ದು, ಅಡುಗೆ ಅನಿಲ ಸಿಲಿಂಡರ್‌, ಸ್ಟೌಗಳಿರುತ್ತವೆ. ಬಾಂಡಲಿಗಳಲ್ಲಿ ಎಣ್ಣೆ ಕುದಿಯುತ್ತಿರುತ್ತದೆ. ಸುರಕ್ಷಿತ ಜಾಗದಲ್ಲಿ ಫಾಸ್ಟ್‌ಫುಡ್‌ ವಲಯ ತೆರೆಯಬೇಕಿದೆ. 

ಅಸಮರ್ಪಕ ಕಸ ನಿರ್ವಹಣೆ, ಚರಂಡಿ ಪಕ್ಕದಲ್ಲಿಯೇ ವ್ಯಾಪಾರ ಮಾಡುತ್ತಿರುವುದಿರಂದ ಅನಾರೋಗ್ಯ ಭೀತಿಯೂ ಇದೆ. ಜನನಿಬಿಡ ರಸ್ತೆಗಳ ಪಕ್ಕದಲ್ಲಿ, ಇಕ್ಕಟ್ಟಿನಲ್ಲೇ ಅಂಗಡಿಗಳನ್ನು ತೆರೆಯುತ್ತಿದ್ದು, ಪಾರ್ಕಿಂಗ್ ಸಮಸ್ಯೆ , ಸಂಚಾರ ದಟ್ಟಣೆ ಉಂಟಾಗುತ್ತಿದೆ.

‘ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸಿದರೂ, ಮತ್ತೇ ಅದೇ ಕೆಲಸವನ್ನು ಮಾಡುತ್ತಾರೆ. ಕಠಿಣ ಕ್ರಮ ತೆಗೆದುಕೊಳ್ಳಲು ಆಯುಕ್ತರ ನೇತೃತ್ವದಲ್ಲಿ ಜನವರಿ ಮೊದಲ ವಾರದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ’ ಎನ್ನುತ್ತಾರೆ ಪಾಲಿಕೆ ಆಯೋಗ್ಯಾಧಿಕಾರಿ ವೆಂಕಟೇಶ್‌.

ನಗರದ ವಾಣಿವಿಲಾಸ ರಸ್ತೆ, ಹಳೆ ಜಿಲ್ಲಾಧಿಕಾರಿ ಕಚೇರಿ ಸಮೀಪ, ಕೃಷ್ಣವಿಲಾಸ ರಸ್ತೆ, ವಿಜಯನಗರ, ಕುವೆಂಪುನಗರ ಸೇರಿದಂತೆ ವಿವಿಧೆಡೆ ಚರಂಡಿಗಳ ಪಕ್ಕದಲ್ಲಿಯೇ ಅಂಗಡಿಗಳಿವೆ. ಮಳೆ ನೀರಿನ ಚರಂಡಿಗೆ ಕಸ ಬೀಳುತ್ತಿದೆ. ಅದನ್ನು ಶುಚಿಗೊಳಿಸುವುದೂ ಪೌರಕಾರ್ಮಿಕರಿಗೆ ಕಷ್ಟವಾಗಿದೆ.

ಮಸಾಲೆ ಘಾಟು: ಮಾನಂದವಾಡಿಯ ರಸ್ತೆಯ ಎನ್‌ಐಇ ಕಾಲೇಜು ಸಮೀಪ ಫಾಸ್ಟ್‌ಫುಡ್‌ ಅಂಗಡಿಯಿದ್ದು, ಆಹಾರ ಬೇಯಿಸಿದ ಮಸಾಲೆ ಘಾಟು ಸವಾರರ ಮೂಗಿಗೆ ಬಡಿಯುತ್ತದೆ.

ನಂಜನಗೂಡು, ಬೆಂಗಳೂರು, ಹುಣಸೂರು ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿಗಳಲ್ಲೂ ನಿಯಮ ಮೀರಿ ಕೇಂದ್ರಗಳನ್ನು ತೆರೆಯಲಾಗಿದೆ. ರಿಂಗ್‌ರಸ್ತೆಯ ಜಂಕ್ಷನ್‌ಗಳಲ್ಲಿ ಹಾಗೂ ಸರ್ವೀಸ್‌ ರಸ್ತೆ ಬದಿಯಲ್ಲೂ ಕೇಂದ್ರಗಳಿದ್ದು, ಅವುಗಳನ್ನು ತೆರವುಗೊಳಿಸಿ, ಪರ್ಯಾಯ ಜಾಗಗಳನ್ನು ನಿಗದಿಗೊಳಿಸಬೇಕಿದೆ.

ಬೀದಿ ನಾಯಿಗಳ ಹಾವಳಿ: ಮಾಂಸಾಹಾರ ತಿನಿಸಿನ ಫಾಸ್ಟ್‌ಫುಡ್‌ ಕೇಂದ್ರಗಳಲ್ಲಿ ಬೀದಿನಾಯಿಗಳ ಹಾವಳಿಯೂ ಜೋರಿದೆ. ನಾಯಿಗಳನ್ನು ದಿಢೀರನೆ ಓಡಿಸುವುದರಿಂದ, ಬೈಕ್ ಮೊದಲಾದ ವಾಹನಗಳಲ್ಲಿ ಹೋಗುವವರು ಅಪಘಾತಕ್ಕೆ ಒಳಗಾಗಿದ್ದಾರೆ ಎನ್ನುತ್ತಾರೆ ವಿಶ್ವೇಶ್ವರನಗರದ ರಾಕೇಶ್‌.

ನಂಜನಗೂಡು, ಕೆ.ಆರ್‌.ನಗರ, ಬೆಟ್ಟದಪುರ, ಎಚ್‌.ಡಿ.ಕೋಟೆ, ಸರಗೂರು, ಸಾಲಿಗ್ರಾಮ ಪಟ್ಟಣಗಳಲ್ಲೂ ಫಾಸ್ಟ್‌ಫುಡ್‌ ಕೇಂದ್ರಗಳ ಸಮೀಪ ಸ್ವಚ್ಛತೆ ಮರೀಚಿಕೆಯಾಗಿದೆ. ತಿ.ನರಸೀಪುರದ ಪಟ್ಟಣದ ಹುಲ್ಲಹಳ್ಳಿ ನಾಲಾ ರಸ್ತೆಯಲ್ಲಿ ಮಾಂಸಾಹಾರಿ ಫಾಸ್ಟ್‌ಫುಡ್ ಕೇಂದ್ರಗಳಿದ್ದು, ಸಮೀಪದಲ್ಲಿ ಶಿಕ್ಷಣ ಇಲಾಖೆ ಕಚೇರಿ, ತಾಲ್ಲೂಕು ಕಚೇರಿ ಇದ್ದರೂ ಆಹಾರ ತ್ಯಾಜ್ಯ ನಿರ್ವಹಣೆ  ನಡೆದಿಲ್ಲ.

ಹುಣಸೂರಿನ ನಗರಸಭೆ ಅಂಗಡಿ ತೆರೆಯಲು ಪರವಾನಿಗೆ ನೀಡುತ್ತದೆಯೋ ಹೊರತು ವ್ಯಾಪಾರಸ್ಥರು ಸಿದ್ದಪಡಿಸುವ ಆಹಾರ ಗುಣಮಟ್ಟ ಪರೀಕ್ಷಿಸುವ ಅಧಿಕಾರ ಅದಕ್ಕಿಲ್ಲ. 

‘ತಿನಿಸಿನ ಗುಣಮಟ್ಟ ಪರೀಕ್ಷಿಸುವ ಅವಕಾಶ ನಗರಸಭೆಗಿಲ್ಲ. ಜಿಲ್ಲಾಆಹಾರ ಮತ್ತು ನಾಗರಿಕ ಇಲಾಖೆಗೆ ಸೇರಿದೆ. ಅವರು ಭೇಟಿ ನೀಡಿ ಪರಿಶೀಲಿಸಿ ಕ್ರಮವಹಿಸಬೇಕು. ನಗರಸಭೆ ಮುಂದಿನ ದಿನದಲ್ಲಿ ಫುಡ್ ಕೋರ್ಟ್ ನಿರ್ಮಿಸುವ ಆಲೋಚನೆಯಲ್ಲಿದೆ’ ಎಂದು ಪ್ರಭಾರ ನಗರಸಭೆ ಪೌರಾಯುಕ್ತೆ ಶರ್ಮಿಳಾ ಹೇಳಿದರು. 

‘ರುಚಿಕಾರಕಗಳ ಬಳಕೆ: ಆರೋಗ್ಯಕ್ಕೆ ಸಂಚಕಾರ’

‘ತಿನಿಸಿನ ರುಚಿ ಹೆಚ್ಚಿಸಲು ‘ಮೊನೊಸೋಡಿಯಂ ಗ್ಲುಟಾಮೇಟ್‌’ (ಎಂಎಸ್‌ಜಿ) ಅನ್ನು ಪ್ಯಾಕೇಜ್ಡ್‌ ಆಹಾರಗಳಲ್ಲಿ ಮಾತ್ರ ಬಳಸಬೇಕೆಂಬ ನಿಯಮವಿದ್ದರೂ ಅದನ್ನು ಉಲ್ಲಂಘಿಸಿ ಹೋಟೆಲ್‌ ಫಾಸ್ಟ್‌ಫುಡ್‌ ಆಹಾರಗಳಲ್ಲಿ ನಿತ್ಯವೂ ಅತಿಯಾಗಿ ಬಳಸುತ್ತಿರುವುದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ’ ಎನ್ನುತ್ತಾರೆ ನಗರದ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ ವಿಜ್ಞಾನಿಗಳು.  ‘ಎಂಎಸ್‌ಜಿ ಬಳಕೆ ಆರಂಭವಾಗಿ ಎರಡೂವರೆ ದಶಕವಾಗಿದೆ. ಜಿಎಂಪಿ (ಗುಡ್‌ ಮ್ಯಾನ್ಯುಫ್ಯಾಕ್ಚರಿಂಗ್‌ ಪ್ರಾಕ್ಟೀಸ್‌) ಪ್ರಕಾರ ಕೆಲವು ರಾಸಾಯನಿಕಗಳನ್ನು ಸ್ವಲ್ಪವಷ್ಟೇ ಬಳಸಬೇಕು. ಆದರೆ ಹೋಟೆಲ್‌ ಸಮಾರಂಭಗಳ ಅಡುಗೆ ತಯಾರಿ ಫಾಸ್ಟ್‌ಫುಡ್‌ನಲ್ಲಿ ಎಗ್ಗಿಲ್ಲದೆ ಬಳಸಲಾಗುತ್ತಿದೆ’ ಎಂದು ಸಂಸ್ಥೆಯ ನಿವೃತ್ತ ವಿಜ್ಞಾನಿ ಡಾ.ಎ.ಜಯದೀಪ್ ‘ಪ್ರಜಾವಾಣಿ’ಗೆ ತಿಳಿಸಿದರು.   ‘ಬಿರಿಯಾನಿ ಪಲಾವ್‌ ಸೇರಿದಂತೆ ಅಡುಗೆ ಮಾಡುವಾಗ ಎಂಎಸ್‌ಜಿ ಸೇರಿದಂತೆ 23 ರಾಸಾಯನಿಕಗಳನ್ನು ಬಳಸುವಂತಿಲ್ಲ. ಹಾಲು ಮೊಸರು ಸೊ‍ಪ್ಪು– ತರಕಾರಿಗಳು ಹಣ್ಣುಗಳು ಮಾಂಸ ಮೊಟ್ಟೆ ಚಾಕೊಲೇಟ್ ಹಾಲಿನ ಉತ್ಪನ್ನಗಳು ಸಾಂಬಾರು ಪುಡಿಗಳಲ್ಲಿ ಹಾಕುವಂತಿಲ್ಲ. ಆದರೆ ಎಲ್ಲ ತಿಂಡಿಗಳಲ್ಲಿಯೂ ಇವುಗಳ ಬಳಕೆಯಿದೆ’ ಎಂದರು.

ಯಾರು ಏನಂತಾರೆ?

‘ಕಠಿಣ ಕ್ರಮ ವಹಿಸಲಾಗಿದೆ’

ನಿಯಮಾವಳಿ ಉಲ್ಲಂಘಿಸಿ ಫಾಸ್ಟ್‌ಫುಡ್‌ ಮಳಿಗೆ ತೆರೆದವರಿಂದ ₹ 500ರಿಂದ ₹ 10 ಸಾವಿರದವರೆಗೂ ದಂಡ ವಸೂಲು ಮಾಡುತ್ತಿದ್ದೇವೆ. ಮೈಸೂರಿನ ಸಯ್ಯಾಜಿರಾವ್ ರಸ್ತೆಯಿಂದ ದೇವರಾಜ ಮಾರುಕಟ್ಟೆವರೆಗೂ ಅನಧಿಕೃತವಾಗಿ ಸ್ಥಾಪಿಸಿಕೊಂಡಿದ್ದ ಫಾಸ್ಟ್‌ಫುಡ್‌ ಅಂಗಡಿಗಳನ್ನು ತೆರವುಗಳಿಸಲಾಗಿದೆ. ಹೀಗಿದ್ದರೂ ನಿಯಮ ಉಲ್ಲಂಘನೆ ನಡೆದಿದೆ. ಸೂಚಿತ ಜಾಗದಲ್ಲಿಯೇ ಮಳಿಗೆ ತೆರೆದು ಸ್ವಚ್ಛತೆಗೂ ಆದ್ಯತೆ ನೀಡಬೇಕು. 5 ವರ್ಷಕ್ಕೊಮ್ಮೆ ಪರವಾನಗಿ ನವೀಕರಿಸಿಕೊಳ್ಳಬೇಕು. ತಪಾಸಣೆಯನ್ನು ಪಾಲಿಕೆ ಸಿಬ್ಬಂದಿ ನಿಯಮಿತವಾಗಿ ಮಾಡುತ್ತಿದ್ದಾರೆ.

–ಡಾ.ಎನ್‌.ಪಿ.ವೆಂಕಟೇಶ್, ಪಾಲಿಕೆ ಆರೋಗ್ಯಾಧಿಕಾರಿ

–––

‘ಎಂಎಸ್‌ಜಿ ಬಳಕೆ ಅವ್ಯಾಹತ’

ದೇಹದ ತೂಕಕ್ಕೆ ತಕ್ಕಂತೆ 3 ಮಿಲಿ ಗ್ರಾಂಗಿಂತ  ಹೆಚ್ಚು ಮೊನೊಸೋಡಿಯಂ ಗ್ಲುಟಮೇಟ್‌ ಬಳಸಬಾರದು. ಅತಿಯಾದರೆ ಎದೆ ಉರಿ ಹೊಟ್ಟೆ ಭಾರವೆನ್ನಿಸುವ ಚೈನೀಸ್‌ ಸಿಂಡ್ರೋಮ್ ಬರುತ್ತದೆ. ನ್ಯೂಡಲ್ಸ್‌ ಗೋಬಿ ಮಂಚೂರಿಯಂಥ ಕುರುಕಲು ತಿಂಡಿಗಳಲ್ಲಿ ಹೆಚ್ಚೇ ರಾಸಾಯನಿಕ ಹಾಕುತ್ತಾರೆ. ಎಂಎಸ್‌ಜಿ ಬಳಕೆಯೂ ಅವ್ಯಾಹತವಾಗಿದೆ. ಕೃತಕ ಬಣ್ಣವನ್ನೂ ಬಳಸಲಾಗುತ್ತಿದೆ. ಮೈಸೂರು ಪಾಕ್‌ ಕೇಸರಿ ಬಾತ್‌ನಂಥ ಸಿಹಿ ತಯಾರಿಕೆಯಲ್ಲಿ ಬೇಡವಾದರೂ ಬಳಕೆಯಾಗುತ್ತಿದೆ. ಜನರಲ್ಲಿ ಜಾಗೃತಿ ಅಗತ್ಯ.

ಅರುಣ್‌ ಕುಮಾರ್, ಆಹಾರ ವಿಜ್ಞಾನಿ ಸಿಎಫ್‌ಟಿಆರ್‌ಐ.

––––

‘ಸುರಕ್ಷಿತವಾಗಿ ಮುಚ್ಚಿಡುತ್ತಿಲ್ಲ’

ಕಡಿಮೆ ದರದಲ್ಲಿ ಬೇಗನೆ ಆಹಾರ ಸಿಗುತ್ತದೆಂದು ಫಾಸ್ಟ್‌ಫುಡ್‌ ಅಂಗಡಿಗಳತ್ತ ಜನರು ಮುಖ ಮಾಡುತ್ತಿದ್ದಾರೆ. ಕಡಿಮೆ ಗುಣಮಟ್ಟದ ಪದಾರ್ಥಗಳ ಬಳಕೆ ಮಾಡಲಾಗುತ್ತದೆ. ರಸ್ತೆ ಬದಿಗಳಲ್ಲಿ ವಾಹನ ಸಂಚಾರದಿಂದ ದೂಳು ಹೆಚ್ಚಾಗುವುದರಿಂದ ಆಹಾರಗಳನ್ನು ಸುರಕ್ಷಿತವಾಗಿ ಮುಚ್ಚಿಡುತ್ತಿಲ್ಲ. ಶುದ್ಧ ನೀರು ಪೂರೈಕೆಯೂ ಇಲ್ಲ.

–ಎಸ್.‌ನವೀನ್, ತಿ.ನರಸೀಪುರ.

––––

‘ನಾಯಿಗಳ ಕಾಟ ವಿಪರೀತ’

ಪಟ್ಟಣದಲ್ಲಿ ಮಾಂಸಹಾರಿ ಫಾಸ್ಟ್‌ಫುಡ್‌ ಕೇಂದ್ರಗಳು ಹುಲ್ಲಹಳ್ಳಿ ವೃತ್ತ ಮಹಾತ್ಮಗಾಂಧಿ ರಸ್ತೆ ನೆಹರೂ ವೃತ್ತದಲ್ಲಿ ತಲೆಯೆತ್ತಿದ್ದು ಅಶುಚಿತ್ವವಿದೆ. ತ್ಯಾಜ್ಯ ವಿಲೇವಾರಿ ಸರಿಯಾಗಿ ಆಗದದ್ದರಿಂದ ನಾಯಿಗಳ ಕಾಟ ವಿಪರೀತ. ಫುಡ್‌ಸ್ಟ್ರೀಟ್‌ ಮಾಡಬೇಕು. ಉತ್ತಮ ಸೌಲಭ್ಯವನ್ನು ನಗರಸಭೆ ಕಲ್ಪಿಸಬೇಕು  ಆನಂದ ತ್ಯಾಗರಾಜ ಕಾಲೊನಿ ನಂಜನಗೂಡು ‘ಆಗಾಗ್ಗೆ ಗುಣಮಟ್ಟ ಪರಿಶೀಲಿಸಿ’ ಬೀದಿ ಬದಿ ಸಿದ್ದಪಡಿಸುವ ಖಾದ್ಯಗಳಿಗೆ ಕೆಲವೊಂದು ಹಾನಿಕಾರಿಕ ರಾಸಾಯನಿಕ ವಸ್ತುಗಳನ್ನು ಬಳಸಲಾಗುತ್ತಿದೆ. ರುಚಿಗೆ ಮಾರುಹೋದ ನಾಗರಿಕರು ಅನಿವಾರ್ಯವಾಗಿ ತಿನ್ನಬೇಕಿದೆ. ಆಗಾಗ್ಗೆ ಗುಣಮಟ್ಟವನ್ನು ಪರಿಶೀಲಿಸುತ್ತಿದ್ದರೆ ಉತ್ತಮ ಆಹಾರ ಸಿಗಲಿದೆ

–ಜೆ.ಮಹದೇವ್, ಹುಣಸೂರು.

–––

‘ಎಚ್ಚರಿಸುತ್ತಲೇ ಇದ್ದೇವೆ’

ಶುಚಿತ್ವ ಕಾಪಾಡಿಕೊಳ್ಳಬೇಕು ಫಾಸ್ಟ್ ಫುಡ್ ಗಳಲ್ಲಿ ಅಜಿನೊಮೋಟೊ ಮತ್ತು ಬಣ್ಣ ಬಳಸಬಾರದೆಂದು ಆಗಾಗ ಎಚ್ಚರಿಸುತ್ತಲೇ ಇರುತ್ತೇವೆ. ಬಳಕೆ ಮಾಡಿದ್ದಲ್ಲಿ ಕ್ರಮ ಜರುಗಿಸಲಾಗುತ್ತದೆ.

–ಜಯಣ್ಣ ಪುರಸಭೆ ಮುಖ್ಯಾಧಿಕಾರಿ, ಕೆ.ಆರ್.ನಗರ.

––––

ನಿಯಮಗಳನ್ನು ಪಾಲಿಸಬೇಕು

ಬೀದಿಬದಿ ವ್ಯಾಪಾರಿಗಳು ಪ್ಲಾಸ್ಟಿಕ್ ಬಳಸುವಂತಿಲ್ಲ ಹಾಗೂ ಆಹಾರ ಗುಣಮಟ್ಟವನ್ನ ಕಾಯ್ದುಕೊಳ್ಳಬೇಕೆಂದು ತಿಳಿಸಲಾಗಿದೆ. ನಿಯಮಗಳನ್ನು ಪಾಲಿಸಬೇಕು. ಸಂಚಾರ ದಟ್ಟಣೆಯಿರುವ ಸ್ಥಳದಲ್ಲಿ ಕೇಂದ್ರ ತೆರೆಯಬಾರದು. ಸ್ವಚ್ಛತೆಗೆ ಆದ್ಯತೆ ನೀಡಬೇಕು.

–ಪಿ.ಸುರೇಶ್, ಇಒ ಪುರಸಭೆ ಎಚ್.ಡಿ. ಕೋಟೆ.

********

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT