ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಕುಡುಗೋಲು ಕಣ ರಕ್ತಹೀನತೆ’ ವಿರುದ್ಧದ ಹೋರಾಟ: ‘ಚಂದನ’ ಕಾರ್ಯಕ್ರಮಕ್ಕೆ ಚಾಲನೆ

Published 19 ಜೂನ್ 2024, 7:59 IST
Last Updated 19 ಜೂನ್ 2024, 7:59 IST
ಅಕ್ಷರ ಗಾತ್ರ

ಮೈಸೂರು: ಚಾಮರಾಜನಗರ, ಮೈಸೂರು ಹಾಗೂ ಕೊಡಗು ಜಿಲ್ಲೆಗಳ ಬುಡಕಟ್ಟು ಜನರಲ್ಲಿ ದೃಢಪಟ್ಟಿರುವ ‘ಕುಡುಗೋಲು ಕಣ ರಕ್ತಹೀನತೆ’ (ಸಿಕಲ್ ಸೆಲ್ ಅನೀಮಿಯಾ) ಕಾಯಿಲೆ ವಿರುದ್ಧದ ಹೋರಾಟಕ್ಕೆ ರಾಜ್ಯ ಸರ್ಕಾರದಿಂದ ಜಾರಿಗೊಳಿಸಿರುವ ‘ಪ್ರಾಜೆಕ್ಟ್‌ ಚಂದನ’ ಕಾರ್ಯಕ್ರಮಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಸಚಿವ ದಿನೇಶ್‌ ಗುಂಡೂರಾವ್ ಇಲ್ಲಿ ಚಾಲನೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ‘ರಾಜ್ಯಮಟ್ಟದ ಸಿಕಲ್ ಸೆಲ್ ಅನೀಮಿಯಾ ನಿರ್ಮೂಲನೆ ಕಾರ್ಯಕ್ರಮ’ದಲ್ಲಿ ಯೋಜನೆಯನ್ನು ಸಚಿವರು ಉದ್ಘಾಟಿಸಿದರು.

ಏನಿದು ಯೋಜನೆ?:

ಈ ಕಾಯಿಲೆಯ ತಪಾಸಣೆ ಕಾರ್ಯಕ್ಕೆ ಹೋದ ವರ್ಷ ಮೈಸೂರಿನಲ್ಲೇ ಚಾಲನೆ ನೀಡಲಾಗಿತ್ತು. ಕೊಡಗು, ಉತ್ತರ ಕನ್ನಡ, ಚಿಕ್ಕಮಗಳೂರು, ಉಡುಪಿ, ಮೈಸೂರು, ಚಾಮರಾಜನಗರ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 55,503 ಮಂದಿ ಆದಿವಾಸಿಗಳನ್ನು ತಪಾಸಣೆಗೆ ಒಳಪಡಿಸಲಾಗಿದ್ದು, 2,018 ಮಂದಿಗೆ ರೋಗ ಲಕ್ಷಣ ಕಂಡುಬಂದಿದೆ. ಇವರಲ್ಲಿ ಮೈಸೂರಿನಲ್ಲಿ 86, ಚಾಮರಾಜನಗರದಲ್ಲಿ 75 ಹಾಗೂ ಕೊಡಗು ಜಿಲ್ಲೆಯಲ್ಲಿ 31 ಮಂದಿಯಲ್ಲಿ ಈ ರೋಗವಿರುವುದು ದೃಢಪಟ್ಟಿದೆ. ಅವರಿಗೆ ನೆರವಾಗುವುದು ‘ಚಂದನ ಯೋಜನೆ’ಗೆ ಉದ್ದೇಶವಾಗಿದೆ.

ರೋಗಿಗಳಿಗೆ ಮುಂದಿನ 2 ವರ್ಷಗಳ ಅವಧಿಗೆ ಸಂಪೂರ್ಣ ತಪಾಸಣೆ, ತರಬೇತಿ, ಜಾಗೃತಿ, ಮಾದರಿ ಸಾರಿಗೆ ಮತ್ತು ಸಂಪರ್ಕ ಸೇವೆಗಳಿಗಾಗಿ ಐಐಎಸ್ಸಿ (ಭಾರತೀಯ ವಿಜ್ಞಾನ ಸಂಸ್ಥೆ)ಯು ಮೈಸೂರು, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳನ್ನು ದತ್ತು ತೆಗೆದುಕೊಂಡಿದ್ದು, ಈ ಸಂಬಂಧ ಆರೋಗ್ಯ ಇಲಾಖೆ ಜೊತೆ ಮಾಡಿಕೊಂಡಿರುವ ಒಪ್ಪಂದ ಪತ್ರವನ್ನು ವಿನಿಮಯ ಮಾಡಿಕೊಳ್ಳಲಾಯಿತು.

ಐಐಎಸ್ಸಿ ವಿಜ್ಞಾನಿ ಪ್ರೊ.ಸಾಯಿಶಿವ ಗೊರ್ತಿ ಅವರು ಅಭಿವೃದ್ಧಿಪಡಿಸಿರುವ ನವೀನ ಸಾಧನದಿಂದ ರಕ್ತದ ತಪಾಸಣೆ ನಡೆಸಲಾಗುವುದು. ಇದು, 15 ನಿಮಿಷಗಳಲ್ಲಿ ವರದಿ ನೀಡುತ್ತದೆ. ಅದು ರಾಷ್ಟ್ರೀಯ ಆರೋಗ್ಯ ಅಭಿಯಾನದ ಕಚೇರಿಗೆ ರವಾನೆಯಾಗುತ್ತದೆ. ಈ ಸಾಧನವನ್ನು ಹಾಡಿಗಳಿಗೇ ತೆಗೆದುಕೊಂಡು ಹೋಗಿ ಪರೀಕ್ಷೆ ಮಾಡಬಹುದಾಗಿದೆ. ಇದರಿಂದ ಅವರು ತಪಾಸಣೆಗಾಗಿ ತಾಲ್ಲೂಕು ಅಥವಾ ಜಿಲ್ಲಾಸ್ಪತ್ರೆಗೆ ಬರಬೇಕಿಲ್ಲ ಎಂದು ಮಾಹಿತಿ ನೀಡಲಾಯಿತು.

ಒಪ್ಪಂದ ಪತ್ರ ವಿನಿಮಯ:

ಈ ಯೋಜನೆಗೆ ಇಂಡಿಯನ್ ಆಯಿಲ್ ಕಾರ್ಪೊರೇಷನ್‌ (ಐಒಸಿ)ನವರು ಸಿಎಸ್‌ಆರ್‌ ನಿಧಿಯಲ್ಲಿ ಆರ್ಥಿಕ ನೆರವು ಒದಗಿಸಲು ಒಪ್ಪಂದ ಮಾಡಿಕೊಂಡಿದೆ. ಈ ಮೂರು ಜಿಲ್ಲೆಗಳಲ್ಲಿ 2.56 ಲಕ್ಷ ಮಂದಿ ಬುಡಕಟ್ಟು ಜನರನ್ನು ತಪಾಸಣೆಗೆ ಒಳಪಡಿಸಿ, ಚಿಕಿತ್ಸೆಗೆ ಜೋಡಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಎನ್ಎಚ್‌ಎಂ (ರಾಷ್ಟ್ರೀಯ ಆರೋಗ್ಯ ಅಭಿಯಾನ) ಅಡಿಯಲ್ಲೇ ಸಂಪೂರ್ಣವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಸಚಿವ ದಿನೇಶ್ ತಿಳಿಸಿದರು.

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ ಮಾತನಾಡಿ, ‘ಕಾಡಿನಲ್ಲೇ ಉಳಿದಿರುವ ಆದಿವಾಸಿಗಳಿಗೆ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಲು ಇರುವ ಅಂತರವನ್ನು ಕಡಿಮೆ ಮಾಡಬೇಕಾಗಿದೆ. ಈ ನಿಟ್ಟಿನಿಲ್ಲಿ ಅವರನ್ನು ನಿಯಮಿತವಾಗಿ ತಪಾಸಣೆಗೆ ಒಳಪಡಿಸುವುದು ಹಾಗೂ ಆರೋಗ್ಯ ಸೌಲಭ್ಯ ದೊರೆಯುವಂತೆ ಮಾಡುವುದು ಮುಖ್ಯವಾಗಿದೆ’ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ‘ಸಿಕಲ್‌ಸೆಲ್‌ ಅನೀಮಿಯಾ ಅನುವಂಶಿಕವಾಗಿ ಬರುವ ರಕ್ತ ಕಾಯಿಲೆ. ಬುಡಕಟ್ಟು ಜನರು ಮದುವೆಗೆ ಮುನ್ನ ಜೆನೆಟಿಕ್ ಕೌನ್ಸೆಲಿಂಗ್ ಮಾಡಿಸುವುದರಿಂದ, ಈ ರೋಗ ಹರಡುವುದನ್ನು ತಪ್ಪಿಸಬಹುದಾಗಿದೆ’ ಎಂದು ತಿಳಿಸಿದರು.

ಜೆಎಸ್‌ಎಸ್‌ ಆಸ್ಪತ್ರೆಯಿಂದ ರೂಪಿಸಿರುವ ‘ಅಂಬಾರಿ’ ಆನ್‌ಲೈನ್‌ ತರಬೇತಿ ಕೋರ್ಸ್‌ಗೆ ಚಾಲನೆ ನೀಡಲಾಯಿತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇವೆಗಳ ಇಲಾಖೆ ಅಭಿಯಾನ ನಿರ್ದೇಶಕ ಡಾ.ನವೀನ್‌ ಭಟ್ ‘ಚಂದನ ಯೋಜನೆ’ಯ ವಿವರ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಹರೀಶ್‌ಗೌಡ ಮಾತನಾಡಿದರು. ಜಿ.ಪಂ. ಸಿಇಒ ಕೆ.ಎಂ. ಗಾಯಿತ್ರಿ, ಆರೋಗ್ಯ ಇಲಾಖೆಯ ಸಹ ನಿರ್ದೇಶಕ ಡಾ.ಕೆ.ಎಚ್. ಪ್ರಸಾದ್, ರಕ್ತಕೋಶ ನಿಧಿಯ ಉಪ ನಿರ್ದೇಶಕಿ ಡಾ.ಎನ್. ಶಕೀಲಾ, ಐಒಸಿಎಲ್‌ ಸಿಜೆಎಂ ಬಾಲಕೃಷ್ಣ ನಾಯ್ಕ ಹಾಗೂ ಜಿಎಂ ಆರ್.ಎನ್. ದುಬೆ, ಡಿಎಚ್‌ಒ ಡಾ.ಪಿ.ಸಿ. ಕುಮಾರಸ್ವಾಮಿ ಪಾಲ್ಗೊಂಡಿದ್ದರು.

ನಿರ್ಮೂಲನೆಗೆ ಗುರಿ: ಸಚಿವ

‘ಕುಡುಗೋಲು ಕಣ ರಕ್ತಹೀನತೆ’ ಕಾಯಿಲೆಯು ಮೈಸೂರು, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳಲ್ಲಿ ಜಾಸ್ತಿ ಕಂಡುಬಂದಿದೆ. ಅನುವಂಶಿಕವಾದ ಈ ರೋಗವನ್ನು ಹೋಗಲಾಡಿಸಲು ಅವಕಾಶವಿದ್ದು, 2047ಕ್ಕೂ‌ ಮುಂಚೆಯೇ ನಿರ್ಮೂಲನೆಗೆ ಗುರಿ ಹೊಂದಲಾಗಿದೆ’ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

‘ಮುಂದಿನ‌ ಎರಡು ವರ್ಷಗಳಲ್ಲಿ ಹಾಡಿಗಳ ಜನರನ್ನು ತಪಾಸಣೆಗೆ ಒಳಪಡಿಸಲಾಗುವುದು. ಅವರಿಗೆ ನಿಯಮಿತವಾಗಿ ಚಿಕಿತ್ಸೆ ಸಿಗುವಂತೆ ಮಾಡಿ ಜೀವನದ ಗುಣಮಟ್ಟ ವೃದ್ಧಿಸಲು ಉದ್ದೇಶಿಸಲಾಗಿದೆ’ ಎಂದು ಹೇಳಿದರು.

‘ಅನಿಮಿಯಾ (ರಕ್ತಹೀನತೆ) ಮುಕ್ತ ಕರ್ನಾಟಕಕ್ಕಾಗಿ ರಾಜ್ಯದ ಎಲ್ಲ ಮಹಿಳೆಯರನ್ನೂ ತಪಾಸಣೆ ಮಾಡುತ್ತಿದ್ದೇವೆ. ಈ ಅಭಿಯಾನ ಚಾಲ್ತಿಯಲ್ಲಿದೆ. ಬಡ, ಮಧ್ಯಮ ವರ್ಗದವರು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಹೋದರೆ ಜೀವನ ದುಬಾರಿ ಆಗುತ್ತದೆ. ಇದನ್ನು ತ‍ಪ್ಪಿಸಲು, ಸರ್ಕಾರಿ ಆಸ್ಪತ್ರೆಗಳನ್ನು ಇನ್ನೂ ಉತ್ತಮ ಉತ್ತಮ‌ ದರ್ಜೆಗೆ ಏರಿಸಬೇಕಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT