ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ನಲ್ಲಿ ಲಿಂಗಾಯತ ಪ್ರಥಮ ಮಹಾಅಧಿವೇಶನ: ಮಹಾಸಭಾ ನಿರ್ಣಯ

Last Updated 17 ಡಿಸೆಂಬರ್ 2022, 14:14 IST
ಅಕ್ಷರ ಗಾತ್ರ

ಮೈಸೂರು: ಲಿಂಗಾಯತ ಸ್ವತಂತ್ರ ಧರ್ಮದ ಸಾಂವಿಧಾನಿಕ ಮಾನ್ಯತೆಗೆ ಆಗ್ರಹಿಸಿ ಬೀದರ್‌ನ ಬಸವಕಲ್ಯಾಣದಲ್ಲಿ ಜನವರಿ ಕೊನೆಯ ವಾರದಲ್ಲಿ ‘ರಾಷ್ಟ್ರೀಯ ಲಿಂಗಾಯತ ಪ್ರಥಮ ಮಹಾಅಧಿವೇಶನ’ ನಡೆಸಲು ಜಾಗತಿಕ ಲಿಂಗಾಯತ ಮಹಾಸಭಾ ನಿರ್ಧರಿಸಿದೆ.

ವಿವಿಧ ರಾಜ್ಯಗಳಿಂದ 2 ಲಕ್ಷಕ್ಕೂ ಹೆಚ್ಚು ಮಂದಿಯನ್ನು ಸೇರಿಸಲು ಮತ್ತು ಜ.12ರಿಂದ 14ರವರೆಗೆ 36ನೇ ಶರಣ ಮೇಳವನ್ನು ಕೂಡಲಸಂಗಮದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ.

ಇಲ್ಲಿನ ಹೊಸಮಠದಲ್ಲಿ ಶನಿವಾರ ನಡೆದ ಮಹಾಸಭಾದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು ಎಂದು ಮಹಾಸಭಾದ ಉಪಾಧ್ಯಕ್ಷ ಎನ್.ಕೆಂಪಗೌಡರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‌‘ಮಹಾಸಭಾದ ಪದಾಧಿಕಾರಿಗಳು ಹಾಗೂ ಜಿಲ್ಲಾ ಘಟಕದ ಅಧ್ಯಕ್ಷರು ಸೇರಿದಂತೆ 100 ಮಂದಿ ಪಾಲ್ಗೊಂಡಿದ್ದರು. ಲಿಂಗಾಯತರು ಹಾಗೂ ಲಿಂಗಾಯತ ಮಠಗಳು ಹೇಗಿರಬೇಕು ಎಂಬ ವಿಮರ್ಶೆಯೂ ನಡೆಯಿತು. ಬಸವ ತತ್ವಕ್ಕೆ ಬದ್ಧವಾಗಿರುವ ಮಠಾಧೀಶರು ಹಾಗೂ ರಾಜಕಾರಣಿಗಳನ್ನು ಬೆಂಬಲಿಸಲು ನಿರ್ಣಯಿಸಲಾಯಿತು. ಮಹಾಅಧಿವೇಶನವನ್ನು ಪಕ್ಷಾತೀತವಾಗಿ ನಡೆಸಲಾಗುವುದು’ ಎಂದರು.

‘ಸಮಾಜದ ಯಾರಾದರೂ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿದ್ದರೆ ಅವರು ಅಪರಾಧಿಯೋ, ನಿರಪರಾಧಿಯೋ ಎನ್ನುವುದನ್ನು ನ್ಯಾಯಾಲಯ ನಿರ್ಧರಿಸಲಿದೆ. ಮಹಾಸಭಾ ಮಧ್ಯಪ್ರವೇಶಿಸುವುದಿಲ್ಲ. ಲಿಂಗಾಯತ ಧರ್ಮದ ಹೋರಾಟಕ್ಕೆ ‌ಹಿನ್ನಡೆ ಉಂಟು ಮಾಡುವವರಿಗೆ ತಕ್ಕ ಉತ್ತರ ಕೊಡುತ್ತೇವೆ’ ಎಂದು ತಿಳಿಸಿದರು.

‘ನಾವು ಹಿಂದೂಗಳು. ಆದರೆ, ನಮ್ಮದು ಲಿಂಗಾಯತ ಧರ್ಮ. ವೀರಶೈವ ಎನ್ನುವುದು ಲಿಂಗಾಯತದ ಪಂಗಡ ಮಾತ್ರ. ಹಿಂದೂ ಧರ್ಮವೇ ಬೇರೆ’ ಎಂದು ಪ್ರತಿಪಾದಿಸಿದರು.

ಮಹಾಸಭಾದ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಮದಾರ ಮಾತನಾಡಿ, ‘ವಿರಕ್ತ ಮಠಾಧೀಶರ ಬಗ್ಗೆ ಕೆ‍ಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹಗುರವಾಗಿ ಮಾತನಾಡಿರುವುದು ಖಂಡನೀಯ. ಅವರಿಗೆ ಇತಿಹಾಸದ ಅರಿವಿಲ್ಲ. ಹಾನಗಲ್ ಕುಮಾರಸ್ವಾಮಿಗಳ ಮಠದ ಸಂಪ್ರದಾಯವೇ ವಿರಕ್ತ ಮಠದ್ದು. ಆ ಬಗ್ಗೆ ಅಭಿಮಾನ ಪಡುತ್ತೇವೆಯೇ ಹೊರತು ನಾಚಿಕೆ ಪಡುವುದಿಲ್ಲ’ ಎಂದು ತಿರುಗೇಟು ನೀಡಿದರು.

ಹೊಸಮಠದ ಅಧ್ಯಕ್ಷ ಚಿದಾನಂದ ಸ್ವಾಮೀಜಿ, ಪದಾಧಿಕಾರಿಗಳಾದ ಬಸವರಾಜ ರೊಟ್ಟಿ, ಶಂಕರ ಗುಡಸ್, ಮಹದೇವಪ್ಪ, ಬಸವರಾಜ ಧನ್ನೂರ ಇದ್ದರು.

ಶಿವಶಂಕರ‍ಪ್ಪಗೆ ಜಾಮದಾರ ಸವಾಲು
‘ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನನ್ನ ವಿರುದ್ಧ ಏಕವಚನದಲ್ಲಿ ಮಾತನಾಡಿರುವುದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ನಾನು ವೃತ್ತಿಜೀವನದಲ್ಲಿ ಭ್ರಷ್ಟಾಚಾರ ಮಾಡಿದ್ದನ್ನು ತೋರಿಸಿದರೆ ಅವರಿಗೆ ಗುಲಾಮನಾಗಿರುತ್ತೇನೆ’ ಎಂದು ಎಸ್.ಎಂ.ಜಾಮದಾರ ಸವಾಲೆಸೆದರು.

‘ಅವರ ಭ್ರಷ್ಟಾಚಾರವನ್ನು ಒಂದೊಂದಾಗಿ ಬಯಲಿಗೆ ಎಳೆಯುತ್ತೇನೆ. ನುಂಗಿ ನೀರು ಕುಡಿದಿರುವುದನ್ನೆಲ್ಲಾ ತಿಳಿಸುತ್ತೇನೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ರಾಜಕಾಲುವೆ ಒತ್ತುವರಿ ಮಾಡಿ ಅದರ ಮೇಲೆ ಆಸ್ಪತ್ರೆ ಕಟ್ಟಿದ್ದಾರೆ. ಇಂಥವುಗಳನ್ನು ಆಗಾಗ ಪತ್ರಿಕಾಗೋಷ್ಠಿ ನಡೆಸಿ ಜನರ ಮುಂದಿಡುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT