ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಮೀನುಗಾರಿಕೆಗೆ ಗರ ಬಡಿದ ಬರ

ಮೀನಿನ ಉತ್ಪಾದನೆ ಇಳಿಮುಖ; ಮೀನು ಮರಿಗೂ ಬೇಡಿಕೆ ಕುಸಿತ
ಆರ್‌. ಜಿತೇಂದ್ರ
Published 7 ಮೇ 2024, 6:24 IST
Last Updated 7 ಮೇ 2024, 6:24 IST
ಅಕ್ಷರ ಗಾತ್ರ

ಮೈಸೂರು: ಈ ವರ್ಷ ಬರಗಾಲದಿಂದಾಗಿ ಜಿಲ್ಲೆಯ ಜಲಾಶಯಗಳ ಜೊತೆಗೆ ಬಹುತೇಕ ಕೆರೆಗಳು ಬರಿದಾಗಿದ್ದು, ಮೀನಿನ ಉತ್ಪಾದನೆ ಕುಸಿದಿದೆ. ಕೆರೆಗಳಲ್ಲಿ ನೀರಿಲ್ಲದ ಕಾರಣ ಮೀನು ಮರಿಗಳನ್ನೂ ಬಿಡದಂತಹ ಪರಿಸ್ಥಿತಿ ಇದ್ದು, ಮುಂದಿನ ವರ್ಷದ ಉತ್ಪಾದನೆಯೂ ಕುಸಿಯುವ ಆತಂಕವಿದೆ.

ಜಿಲ್ಲೆಯಲ್ಲಿ ಮೀನುಗಾರಿಕೆ ಇಲಾಖೆ ಅಧೀನದಲ್ಲಿ 97 ದೊಡ್ಡ ವಿಸ್ತೀರ್ಣದ ಕೆರೆಗಳಿವೆ. ಇದಲ್ಲದೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 1 ಸಾವಿರಕ್ಕೂ ಅಧಿಕ ಕೆರೆಗಳಿದ್ದು, ಇಲ್ಲಿ ನಿರಂತರವಾಗಿ ಮೀನಿನ ಉತ್ಪಾದನೆ ನಡೆಯುತ್ತಿದೆ. ವರ್ಷದಿಂದ ವರ್ಷಕ್ಕೆ ಉತ್ಪನ್ನದ ಪ್ರಮಾಣವೂ ಹೆಚ್ಚುತ್ತ ಬಂದಿದೆ.

2022–23ನೇ ಸಾಲಿನಲ್ಲಿ ಈ ಕೆರೆಗಳಲ್ಲಿ 2,416 ಟನ್‌ನಷ್ಟು ಮೀನಿನ ಉತ್ಪಾದನೆ ಆಗಿತ್ತು. ಆದರೆ, ಈ ವರ್ಷ ಮಳೆಯ ತೀವ್ರ ಕೊರತೆ ಕಾರಣಕ್ಕೆ ಉತ್ಪಾದನೆ ಮೇಲೆ ಪರಿಣಾಮ ಬೀರಿದ್ದು, ಕಳೆದ ವರ್ಷಕ್ಕಿಂತ ಹಲವು ಟನ್‌ನಷ್ಟು ಇಳುವರಿ ಕಡಿಮೆ ಆಗಿದೆ. ನೀರಿನ ಕೊರತೆ ಹಾಗೂ ಉಷ್ಣಾಂಶದ ಹೆಚ್ಚಳದ ಕಾರಣಕ್ಕೆ ಕೆರೆಯಲ್ಲಿನ ಮೀನುಗಳು ಸಾಯತೊಡಗಿವೆ.

ಮರಿಗೆ ಬೇಡಿಕೆ ಕುಸಿತ: ಮೀನುಗಾರಿಕೆ ಇಲಾಖೆಯು ಜಿಲ್ಲೆಯ ಕಬಿನಿ ಹಾಗೂ ನುಗು ಜಲಾಶಯಗಳಲ್ಲಿ ಮೀನು ಮರಿ ಉತ್ಪಾದನಾ ಕೇಂದ್ರಗಳನ್ನು ಹೊಂದಿದೆ. ಇಲ್ಲಿ ಸದ್ಯ 162 ಲಕ್ಷದಷ್ಟು ಮೀನು ಮರಿಗಳು ಬಿತ್ತನೆಗೆ ಸಿದ್ಧವಾಗಿವೆ. ಮಳೆ ಕೊರತೆಯಿಂದಾಗಿ ಮೀನು ಮರಿಗಳ ಉತ್ಪಾದನೆಯಲ್ಲೂ ಶೇ 30ರಷ್ಟು ಕೊರತೆ ಆಗಿದೆ.

ಸಾಮಾನ್ಯವಾಗಿ ಮೇ– ಜೂನ್‌ನಲ್ಲಿ ಕೆರೆಗಳಿಗೆ ಮೀನು ಮರಿಗಳನ್ನು ಬಿಡಲಾಗುತ್ತದೆ. ಈ ವರ್ಷ ಬಹುತೇಕ ಕೆರೆಗಳು ಬರಿದಾಗಿದ್ದು, ಎಲ್ಲಿಯೂ ಮರಿಗಳನ್ನು ಬಿಡುವಷ್ಟು ಪ್ರಮಾಣದಲ್ಲಿ ನೀರಿನ ಸಂಗ್ರಹವಿಲ್ಲ. ಮುಂದಿನ ಕೆಲವು ವಾರಗಳಲ್ಲಿ ಉತ್ತಮ ಮಳೆಯಾಗಿ ಅಗತ್ಯ ಪ್ರಮಾಣದಲ್ಲಿ ನೀರು ಸಂಗ್ರಹಗೊಂಡರೆ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಮೀನು ಬಿಡಲು ಸಾಧ್ಯ. ಮಳೆ ವಿಳಂಬ ಆದಷ್ಟೂ ಮೀನು ಉತ್ಪಾದನೆಯೂ ಕಡಿಮೆ ಆಗಲಿದೆ.

‘ಸಾಮಾನ್ಯವಾಗಿ ಮೇನಲ್ಲಿ ಮೀನಿನ ಮರಿಗಳಿಗೆ ಬೇಡಿಕೆ ಬರುತ್ತದೆ. ಆದರೆ, ಈ ವರ್ಷ ಇನ್ನೂ ಬೇಡಿಕೆ ಬಂದಿಲ್ಲ. ಕೆರೆಗಳ ಸ್ಥಿತಿ ಆಧರಿಸಿ ಮೀನು ಮರಿಗಳನ್ನು ಬಿಡಲು ಯೋಜಿಸಿದ್ದೇವೆ’ ಎನ್ನುತ್ತಾರೆ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಮಂಜುನಾಥ್‌.

ಮೀನುಗಾರಿಕೆ ಇಲಾಖೆ ಅಧೀನದಲ್ಲಿ 97 ದೊಡ್ಡ ಕೆರೆಗಳು 2022–23ನೇ ಸಾಲಿನಲ್ಲಿ 2,416 ಟನ್‌ ಮೀನು ಉತ್ಪಾದನೆ 162 ಲಕ್ಷ ಮೀನು ಮರಿಗಳು ಬಿತ್ತನೆಗೆ ಸಿದ್ಧ
ಕಳೆದ ವರ್ಷ ಜಿಲ್ಲೆಯಲ್ಲಿ 2416 ಟನ್ ಮೀನು ಉತ್ಪಾದನೆ ಆಗಿತ್ತು. ಈ ವರ್ಷ ಸ್ವಲ್ಪ ಕಡಿಮೆ ಆಗಿದೆ. ಸಕಾಲದಲ್ಲಿ ಮೀನು ಮರಿ ಬಿತ್ತನೆ ಆಗದಿದ್ದರೆ ಮುಂದಿನ ವರ್ಷ ಉತ್ಪಾದನೆ ಕುಸಿಯಲಿದೆ
ಮಂಜುನಾಥ್‌ ಉಪನಿರ್ದೇಶಕ ಮೀನುಗಾರಿಕೆ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT