ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕರ್ನಾಟಕ ಸ್ಮಶಾನವಾಗುವುದು ತಪ್ಪಿಸಿದ ಪಂಚ ಗ್ಯಾರಂಟಿ: ಪುರುಷೋತ್ತಮ ಬಿಳಿಮಲೆ

Published : 28 ಸೆಪ್ಟೆಂಬರ್ 2024, 12:29 IST
Last Updated : 28 ಸೆಪ್ಟೆಂಬರ್ 2024, 12:29 IST
ಫಾಲೋ ಮಾಡಿ
Comments

ಮೈಸೂರು: ‘ಕರ್ನಾಟಕ ರಾಜ್ಯವು ಸ್ಮಶಾನ ಆಗುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿಗಳು ತಪ್ಪಿಸಿದವು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು.

ಮೈಸೂರು ವಿವಿ ಸಮಾಜಕಾರ್ಯ ಅಧ್ಯಯನ ವಿಭಾಗ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಮತ್ತು ಇನ್‌ಸ್ಟಿಟ್ಯೂಟ್‌ ಫಾರ್‌ ಸೋಷಿಯಲ್‌ ವರ್ಕರ್ಸ್‌ ಫಾರ್‌ ಆ್ಯಕ್ಷನ್‌ ರಿಸರ್ಚ್‌ ಸಹಯೋಗದಲ್ಲಿ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಶನಿವಾರ ನಡೆದ ಡಿ.ಶ್ರೀನಿವಾಸ ಮಣಗಳ್ಳಿ ಸಂಪಾದಿತ ‘ಗ್ಯಾರಂಟಿ ಯೋಜನೆಗಳು: ಬಡವರ ಸುರಕ್ಷತೆ ಮತ್ತು ಕಲ್ಯಾಣ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರಧಾನಿ ನರೇಂದ್ರ ಮೋದಿಯವರ ಆರ್ಥಿಕ ಚಿಂತನೆಯು ಕೋವಿಡ್ ಪೂರ್ವದಲ್ಲೇ ಭಾರತವನ್ನು ‌ನೆಲ ಕಚ್ಚುವಂತೆ ಮಾಡಿತ್ತು. ಅದನ್ನು ಅರ್ಥ ಮಾಡಿಕೊಳ್ಳದಿದ್ದರೆ ಗ್ಯಾರಂಟಿ ಯೋಜನೆಗಳ ಮಹತ್ವದ ಅರ್ಥ ಆಗುವುದಿಲ್ಲ’ ಎಂದು ಪ್ರತಿಪಾದಿಸಿದರು.

‘ಪಂಚ ಗ್ಯಾರಂಟಿ ಯೋಜನೆ ವಿರೋಧಿಸುವವರು ಅವನ್ನು ಜಾರಿಗೆ ತಂದ ಸಂದರ್ಭವನ್ನು ಅರ್ಥ ಮಾಡಿಕೊಳ್ಳಬೇಕು. ಕೊರೊನಾ ಪೂರ್ವದಲ್ಲಿ ಆರ್ಥಿಕತೆ ಪಥನಮುಖಿಯಾಗಿತ್ತು. ಆಗ ಜನರನ್ನು ಆರ್ಥಿಕವಾಗಿ ಮೇಲಿತ್ತಿದವರು ಸಿದ್ದರಾಮಯ್ಯ’ ಎಂದು ಶ್ಲಾಘಿಸಿದರು.

‘ಯೋಜನೆಗಳ ಲಾಭ ಪಡೆದವರು ಆ ಬಗ್ಗೆ ಮಾತನಾಡದಿರುವುದು ಅಪರಾಧ. ವಿದ್ಯಾವಂತರು ಆತ್ಮದ್ರೋಹದ ಮೌನವನ್ನು ಮುರಿಯಬೇಕು. ಇದನ್ನು ಮಾತನಾಡುವುದು ರಾಜಕೀಯವೇನಲ್ಲ’ ಎಂದರು.

‘ದೇಶವು ಅತ್ಯಂತ ಕಳಪೆಯಾದ ಆರ್ಥಿಕ ಅಧಃಪತನವನ್ನು 2018ರಿಂದ 2020ರವರೆಗೆ ಕಂಡಿತ್ತು. ಕೋವಿಡ್ ಸಾವುಗಳು ಅದನ್ನು ಮರೆಸಿದವು. ದೇವಸ್ಥಾನ ಮೊದಲಾದ ಅನ್ಯ ವಿಚಾರಗಳನ್ನು ಮುಂದು ಮಾಡಿ ಆರ್ಥಿಕ ಅಧಃಪತನವನ್ನು ಮರೆಮಾಚಲಾಯಿತು. ಕನ್ನಡ ಸಾಹಿತ್ಯ ಲೋಕವೂ ಕೊರೊನಾ ಸಂಕಷ್ಟವನ್ನು ಗಾಢವಾಗಿ ಕಟ್ಟಿಕೊಡಲಿಲ್ಲ’ ಎಂದು ವಿಶ್ಲೇಷಿಸಿದರು.

‘ಕೋವಿಡ್ ವೇಳೆ ಕೇಂದ್ರ ಘೋಷಿಸಿದ ₹ 29 ಲಕ್ಷ ಕೋಟಿ ಏನಾಯಿತೆಂದು ತಿಳಿಯಲು ಆರ್‌ಟಿಐ ಅಡಿ ಅರ್ಜಿ ಹಾಕಿದ್ದೆ. ಅದು ಆರ್‌ಟಿಐ ಅಡಿ ಬರುವುದಿಲ್ಲ ಎಂಬ ಉತ್ತರ ಬಂತು. ಆದರೆ, ಅಧಿಕಾರಿಗಳ ಪ್ರಕಾರ ಶೇ 10ರಷ್ಟು ಹಣವಷ್ಟೆ ಖರ್ಚಾಗಿದೆ.‌ ಆದರೆ, ಸಿದ್ದರಾಮಯ್ಯ ಸರ್ಕಾರದಲ್ಲಿ ಗ್ಯಾರಂಟಿ ಯೋಜನೆಯನ್ನೂ‌ ನೀಡಿದೆ, ಪಾರದರ್ಶಕವಾಗಿಯೂ ಇದೆ; ಎಷ್ಟು ಖರ್ಚಾಗುತ್ತಿದೆ ಎಂಬುದನ್ನೂ ತಿಳಿದುಕೊಳ್ಳಬಹುದಾಗಿದೆ’ ಎಂದು ಹೇಳಿದರು.

‘ಶಕ್ತಿ ಯೋಜನೆ ಅತಿ ದೊಡ್ಡ ಚಲನೆ. ಇಂತಹ ಚಲನೆಯನ್ನು ರಾಜ್ಯ ಹಿಂದೆಂದೂ ಕಂಡಿರಲಿಲ್ಲ. ಕುಸಿಯುತ್ತಿದ್ದ ರಾಜ್ಯಕ್ಕೆ ಚಲನೆ ನೀಡಿದವರು ಸಿದ್ದರಾಮಯ್ಯ. ಕರ್ನಾಟಕದ ಈ ಮಾದರಿಯನ್ನು ಹಲವು ರಾಜ್ಯಗಳು ಅನುಕರಿಸಿವೆ; ಮೋದಿಯೂ ಮಾಡಿದ್ದಾರೆ. ಪಂಚ ಗ್ಯಾರಂಟಿಗಳು ಭದ್ರವಾದ ತಳಹದಿಯ ಮೇಲೆ ನಾಡನ್ನು ನಿಲ್ಲಿಸಿವೆ’ ಎಂದು ಪ್ರತಿಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT