ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನೆಗೆ ಶಂಕುಸ್ಥಾಪನೆ

Published 19 ಫೆಬ್ರುವರಿ 2024, 6:17 IST
Last Updated 19 ಫೆಬ್ರುವರಿ 2024, 6:17 IST
ಅಕ್ಷರ ಗಾತ್ರ

ಮೈಸೂರು: ಮೈಸೂರಿನವರೇ ಆದ ಮಾಜಿ ಮುಖ್ಯಮಂತ್ರಿ, ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರ ಡಿ.ದೇವರಾಜ ಅರಸು ಅವರ ಪ್ರತಿಮೆ ಸ್ಥಾಪಿಸಬೇಕೆಂಬ ಅಭಿಮಾನಿಗಳು–ಅನುಯಾಯಿಗಳ ಹಲವು ವರ್ಷಗಳ ಹೋರಾಟಕ್ಕೆ ಕೊನೆಗೂ ಸ್ಪಂದನೆ ದೊರೆತಿದೆ. ಕನಸು ನನಸಿನ ಮೊದಲ ಹೆಜ್ಜೆಯನ್ನು ಸರ್ಕಾರ ಇಟ್ಟಿದೆ.

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಇಲ್ಲಿನ ಸಿದ್ಧಾರ್ಥ ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯನ್ನೂ ಒಳಗೊಂಡಿರುವ ಜಿಲ್ಲಾಮಟ್ಟದ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ಪ್ರತಿಮೆ ಪ್ರತಿಷ್ಠಾಪನೆಗೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಲಾಯಿತು. ‘ಕರ್ನಾಟಕ ಸಂಭ್ರಮ–50’ರ ಸವಿನೆನಪಿನಲ್ಲಿ ಈ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.

ಸರಳ ಕಾರ್ಯಕ್ರಮದಲ್ಲಿ ಶಾಸಕ ತನ್ವೀರ್‌ ಸೇಠ್ ಹಾಗೂ ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಶಂಕುಸ್ಥಾಪನೆ ನೆರವೇರಿಸಿದರು. ಸರ್ವ ಧರ್ಮ ಸಂಪ್ರದಾಯದಂತೆ ನಡೆದದ್ದು ವಿಶೇಷವಾಗಿತ್ತು.

‘₹ 92 ಲಕ್ಷ ವೆಚ್ಚ’

ಇಲ್ಲಿ 12 ಅಡಿ ಎತ್ತರದ ಕಲ್ಲಿನ ಪ್ರತಿಮೆ ಪ್ರತಿಷ್ಠಾಪಿಸಲಾಗುವುದು. ಇದಕ್ಕಾಗಿ ಸರ್ಕಾರದಿಂದ ₹ 92 ಲಕ್ಷ ದೊರೆತಿದೆ. ಶಿಲ್ಪಿ ಸಹೋದರರಾದ ಅರುಣ್ ಯೋಗಿರಾಜ್‌ ಹಾಗೂ ಸೂರ್ಯಪ್ರಕಾಶ್ ಯೋಗಿರಾಜ್ ಪ್ರತಿಮೆ ಸಿದ್ಧಪಡಿಸಲಿದ್ದಾರೆ.

ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಗೈರು ಹಾಜರಾಗಿದ್ದರು. ಅವರು ಕಳುಹಿಸಿದ್ದ ಸಂದೇಶವನ್ನು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಓದಿದರು.

ತನ್ವೀರ್‌ ಸೇಠ್‌ ಮಾತನಾಡಿ, ‘ಅರಸು ಅವರು ಸಮ ಸಮಾಜದ ನಿರ್ಮಾಣಕ್ಕೆ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದರು. ಅವರ ಯೋಜನೆಗಳನ್ನು ಮುಂದುವರಿಸಿಕೊಂಡು ಹೋದರೆ ಗೌರವ ಸಲ್ಲಿಸಿದಂತಾಗುತ್ತದೆ’ ಎಂದರು.

‘ಅನಾವರಣವಾದರೂ ಅದ್ದೂರಿಯಾಗಿ ನಡೆಯಲಿ’

‘ಉಳುಮೆ ಮಾಡುತ್ತಿದ್ದ ಬಡ ರೈತರನ್ನು ‌ಒಡೆಯರನ್ನಾಗಿ ಮಾಡಿದವರು ಅರಸು. ನಗರದಲ್ಲಿ ಅವರ ಪ್ರತಿಮೆ ಪ್ರತಿಷ್ಠಾಪನೆಗಾಗಿ ಹಿಂದಿನಿಂದಲೂ ‌ಹೋರಾಟ ನಡೆಸುತ್ತಾ ಬಂದಿದ್ದೇವೆ. ಮಹಾರಾಣಿ ಕಾಲೇಜು ವೃತ್ತದಲ್ಲಿ ಆಗಬೇಕು ಎಂಬುದು ‌ನಮ್ಮ ಒತ್ತಾಯವಾಗಿತ್ತು.‌ ಸಾಕಷ್ಟು ತಡವಾಗಿಯಾದರೂ, ನಮ್ಮ ಸರ್ಕಾರದಿಂದಲೇ ಅನುಷ್ಠಾನ ಸಾಧ್ಯವಾಗುತ್ತಿದೆ’ ಎಂದು ಹೇಳಿದರು.

‘ಸಮ ಸಮಾಜದ ನಿರ್ಮಾಣ ಇಂದಿಗೂ ಸಾಧ್ಯವಾಗಿಲ್ಲ. ಜಾತಿ, ಧರ್ಮ, ಪ್ರಾಂತ್ಯದ ವಿಷಯದಲ್ಲಿ ಆಗುತ್ತಿರುವ ಸಂಘರ್ಷಗಳನ್ನು ನಿವಾರಿಸಬೇಕು. ಎಲ್ಲರೂ ನಿರ್ಭಯವಾಗಿ‌ ಜೀವನ ನಡೆಸುವ ವಾತಾವರಣ ನಿರ್ಮಿಸಬೇಕು. ದುಡಿಯುವ ಕೈಗಳಿಗೆ ಕೆಲಸ ಸಿಗಬೇಕಾಗಿದೆ’ ಎಂದು ಆಶಿಸಿದರು.

‘ಪ್ರತಿಮೆ ಪ್ರತಿಷ್ಠಾಪನೆ ಕಾರ್ಯಕ್ರಮ ನಾವು ನಿರೀಕ್ಷಿಸಿದಂತೆ ಆಗದಿರುವುದಕ್ಕೆ ವಿಷಾದವಿದೆ. ಅನಾವರಣ ಸಂದರ್ಭದಲ್ಲಾದರೂ ಸ್ಪಷ್ಟವಾದ ಕಾರ್ಯಕ್ರಮ ರೂಪಿಸಬೇಕು. ಅವರ ಆಡಳಿತ ಹಾಗೂ ಸಂವಿಧಾನದ ಬಗ್ಗೆ ಚರ್ಚೆ ನಡೆಯಬೇಕು. ಅದ್ದೂರಿಯಾಗಿ ಕಾರ್ಯಕ್ರಮ ಆಯೋಜಿಸಬೇಕು’ ಎಂದು ಒತ್ತಾಯಿಸಿದರು.

‘ನಮ್ಮನ್ನೆಲ್ಲ ಬೆಳೆಸಿದವರೇ ಅರಸು. ನನಗೆ 28ನೇ ವಯಸ್ಸಿನಲ್ಲೇ ಟಿಕೆಟ್ ಕೊಟ್ಟು ಕೆ.ಆರ್.ನಗರದಿಂದ ಆಯ್ಕೆಗೆ ಅವಕಾಶ ಕೊಟ್ಟರು.‌ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯಿಲಿ‌ ಮೊದಲಾದವರು ಕೂಡ ಅವರ ನೆರಳಿನಲ್ಲೇ ಬೆಳೆದವರು’ ಎಂದು ಎಚ್‌.ವಿಶ್ವನಾಥ್ ಸ್ಮರಿಸಿದರು.

‘ಸಾಮಾಜಿಕ ನ್ಯಾಯಕ್ಕೆ ಭೂಮಿಕೆ ಹಾಕಿದವರು ಅರಸು ಹಾಗೂ ಕಾಂಗ್ರೆಸ್. ಬರೋಬ್ಬರಿ 21 ಲಕ್ಷ ಎಕರೆ ಜಮೀನು ರೈತರಿಗೆ ದೊರೆಯುವಂತೆ ಮಾಡಿದರು. ಮಕ್ಕಳಿಗಾಗಿ ಹಾಸ್ಟೆಲ್ ಕಟ್ಟಿಸಿದರು.‌ ಹಾವನೂರು ವರದಿ ಮೂಲಕ ಒಕ್ಕಲಿಗರು, ಲಿಂಗಾಯತರು ಸೇರಿ ಎಲ್ಲರಿಗೂ ಮೀಸಲಾತಿ ನೀಡಿದ ಭೂಪ ಅವರು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ. ಗಾಯಿತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ. ಸುದರ್ಶನ್‌, ಅರಸು ಅವರ ಮೊಮ್ಮಗ ಹಾಗೂ ಕಾಂಗ್ರೆಸ್‌ ಮುಖಂಡ ಸೂರಜ್‌ ಹೆಗ್ಡೆ, ದೇವರಾಜ ಅರಸು ಪ್ರತಿಮೆ ಹೋರಾಟ ಸಮಿತಿಯ ಪದಾಧಿಕಾರಿಗಳಾದ ಡಾ.ವೈ.ಡಿ.ರಾಜಣ್ಣ, ಜಾಕೀರ್‌ ಹುಸೇನ್, ಎಂ. ಚಂದ್ರಶೇಖರ್‌, ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT