ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶಸ್ಸಿಗೆ ಪರಿಶ್ರಮದ ಹಾದಿಯಲ್ಲಿ ಸಾಗಿ: ಮೈಸೂರು DC ಕೆ.ವಿ.ರಾಜೇಂದ್ರ ಸಲಹೆ

ಕೆಎಎಸ್‌ ಹುದ್ದೆ ಆಕಾಂಕ್ಷಿಗಳ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಸಲಹೆ
Published 24 ಮಾರ್ಚ್ 2024, 15:55 IST
Last Updated 24 ಮಾರ್ಚ್ 2024, 15:55 IST
ಅಕ್ಷರ ಗಾತ್ರ

ಮೈಸೂರು: ‘ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಪರಿಶ್ರಮದ ಹಾದಿಯಲ್ಲಿ ಸಾಗಿದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು. 

ನಗರದ ಯುವರಾಜ ಕಾಲೇಜಿನಲ್ಲಿ ಮೈಸೂರು ವಿಶ್ವವಿದ್ಯಾಲಯ ವೃತ್ತಿ ಕೇಂದ್ರ, ಮೈಸೂರು ವಿಶ್ವವಿದ್ಯಾಲಯ ನೇಗಿಲಯೋಗಿ ವಿದ್ಯಾವರ್ಧಕ ಸ್ಪರ್ಧಾ ಕೇಂದ್ರ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಭಾನುವಾರ ನಡೆದ ‘ಕೆಎಎಸ್‌ ಹುದ್ದೆಯ ಆಕಾಂಕ್ಷಿಗಳಿಗೆ ಉಚಿತ ಕಾರ್ಯಾಗಾರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಬದುಕಿನಲ್ಲಿ ದೊಡ್ಡ ಕನಸು ಕಾಣಬೇಕು. ಅದರೊಂದಿಗೆ ಸ್ಪಷ್ಟವಾದ ಗುರಿ ಇಟ್ಟುಕೊಂಡು ಮುನ್ನಡೆದರೆ ಸಾಧನೆ ಕಷ್ಟದ ಕೆಲಸವಲ್ಲ. ಇದಕ್ಕೆ ನಿರಂತರ ಪ್ರಯತ್ನ ಬಹಳ ಮುಖ್ಯ’ ಎಂದರು. 

‘ಯಾವುದೇ ಪರೀಕ್ಷೆಯಾದರು ಅದಕ್ಕೆ ಪೂರ್ವ ಸಿದ್ಧತೆ ಅಗತ್ಯ. ಪರೀಕ್ಷೆ ಕೇವಲ ಒಂದು ದಿನದಲ್ಲ, ಪ್ರತಿ ನಿತ್ಯವೂ ಇರುತ್ತದೆ ಎಂಬ ಭಾವನೆ ಇರಬೇಕು. ಯಾವಾಗ, ಎಲ್ಲಿ ಕೊಟ್ಟರು ಬರೆಯುವೆ ಎನ್ನುವ ಮನೋಭಾವ ಬೆಳೆಸಿಕೊಳ್ಳಬೇಕು. ಆಗ ಗೆಲುವು ನಿಶ್ಚಿತ’ ಎಂದು ತಿಳಿಸಿದರು.

‘ಸ್ಪರ್ಧಾತ್ಮಕ ಪರೀಕ್ಷೆಗೆ ತಾಳ್ಮೆ ಬಹಳ ಮುಖ್ಯ. ಏಕಾಗ್ರತೆ, ಆತ್ಮವಿಶ್ವಾಸ, ದೃಢ ನಿರ್ಧಾರ, ಸಕಾರಾತ್ಮಕ ಆಲೋಚನೆ ಹೊಂದಬೇಕು. ಯಶಸ್ಸಿನ ಕಡೆಗೆ ಮಹತ್ವ ನೀಡಬೇಕು. ನಕಾರಾತ್ಮಕ ಯೋಚನೆಗಳಿಂದ ದೂರವಿರಬೇಕು. ನಮ್ಮ ಬಗ್ಗೆ ನಾವೇ ಕೀಳರಿಮೆ ಪಡಬಾರದು’ ಎಂದು ಕಿವಿಮಾತು ಹೇಳಿದರು.

‘ಜ್ಞಾನಾರ್ಜನೆಗಾಗಿ ಏನೇ ಕಷ್ಟ ಎದುರಾದರೂ ಅನುಭವಿಸಬೇಕು. ದಿನ ನಿತ್ಯ ನಿಯಮಿತವಾಗಿ ಓದಬೇಕು. 5ರಿಂದ 6 ಗಂಟೆಗಳವರೆಗೆ ಅಭ್ಯಾಸದಲ್ಲಿ ತೊಡಗಬೇಕು. ದಿನಪತ್ರಿಕೆ, ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು.  ಪ್ರಚಲಿತ ವಿದ್ಯಮಾನ, ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಬೇಕು, ಮನನ ಮಾಡಬೇಕು. ಸಿಕ್ಕ ಅವಕಾಶ ಸದುಯೋಗ ಪಡಿಸಿಕೊಂಡು ಮಾರ್ಗದರ್ಶನ ಪಡೆಯಬೇಕು. ಸ್ನೇಹಿತರೊಂದಿಗೆ ವಿಷಯಾಧಾರಿತ ಚರ್ಚೆಯಲ್ಲಿ ತೊಡಗಬೇಕು. ಇದರಿಂದ ಯುಪಿಎಸ್‌ಸಿ, ಕೆಎಎಸ್ ಹಾಗೂ ಇತರೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಲು ಸಹಾಯವಾಗುತ್ತದೆ’ ಎಂದು ಸಲಹೆ ನೀಡಿದರು.

ಮಹಾನಗರ ಪಾಲಿಕೆ ಆಯುಕ್ತೆ ಎನ್.ಎನ್.ಮಧು ಮಾತನಾಡಿ, ‘ವಿದ್ಯಾರ್ಥಿಗಳು ಉತ್ತಮ ಆಲೋಚನೆಗಳನ್ನು ಮೈಗೂಡಿಸಿಕೊಂಡು ಗುರಿ ಹೊಂದಿ ಮುಂದೆ ಸಾಗಿದರೆ ಯಶಸ್ಸು ಕಾಣಬಹುದು. ನಿಮ್ಮ ಸಾಮರ್ಥ್ಯದ ಮೇಲೆ ಭವಿಷ್ಯ ಅಡಗಿದೆ. ಇದನ್ನು ಅರಿತುಕೊಂಡು ಪರೀಕ್ಷೆ ಪೂರ್ವ ತಯಾರಿ ನಡೆಸಬೇಕು’ ಎಂದರು.

ಯುಸಿಎಚ್‌ ಸಂಯೋಜಕಿ ಪ್ರೊ.ಎಲ್‌.ಹಂಸವೇಣಿ, ಮೈಸೂರು ವಿಶ್ವವಿದ್ಯಾಲಯದ ಸ್ಪರ್ಧಾ ಕೇಂದ್ರದ ಸಂಯೋಜಕ ಸುರೇಶ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಬಿ.ರಂಗೇಗೌಡ, ಪಿ.ಎಂ.ಇ ಬೋರ್ಡ್ ನಿರ್ದೇಶಕ ಪ್ರೊ.ಎನ್ ನಾಗರಾಜ್, ಮೈಸೂರು ವಿಶ್ವವಿದ್ಯಾಲಯ ವೃತ್ತಿ ಕೇಂದ್ರದ ಸಂಚಾಲಕ ರವಿಕುಮಾರ್, ಪ್ರೊ.ದೇವಿಕಾ ಇದ್ದರು.

ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು
ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು

‘ಸಾಮಾಜಿಕ ಕಳಕಳಿ ಇರಲಿ’

‘ಮುಂಬರುವ ಚುನಾವಣೆಯಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ವಿದ್ಯಾರ್ಥಿ ಕಡ್ಡಾಯವಾಗಿ ಮತದಾನ ಮಾಡಬೇಕು. ಇದರಿಂದ ಉತ್ತಮ ನಾಯಕರು ಆಯ್ಕೆಯಾಗಿ ಸದೃಢ ಭಾರತದ ನಿರ್ಮಾಣ ಸಾಧ್ಯವಾಗುತ್ತದೆ. ಮತದಾರರ ಗುರುತಿನ ಚೀಟಿ ಹೊಂದಿರದವರು ಕೂಡಲೇ ನೋಂದಣಿ ಮಾಡಿಸಿಕೊಂಡು ಪಡೆಯಬೇಕು. ಈ ಮೂಲಕ ಪ್ರತಿಯೊಬ್ಬರು ಸಾಮಾಜಿಕ ಕಳಕಳಿ ಹೊಂದಬೇಕು’ ಎಂದು ಕೆ.ವಿ.ರಾಜೇಂದ್ರ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT