ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಗಜಪಡೆಯ ಕ್ಯಾಪ್ಟನ್ ಹಾಗೂ ಅಂಬಾರಿ ಆನೆ ‘ಅಭಿಮನ್ಯು’ 600 ಕೆ.ಜಿ. ಬಾರ ಹೊತ್ತು ನಡೆಯುವ ಮೊದಲ ದಿನದ ತಾಲೀಮಿನಲ್ಲಿ ಯಶಸ್ವಿಯಾದ.
ಶುಕ್ರವಾರ ಮಧ್ಯಾಹ್ನ ಅಂಬಾವಿಲಾಸ ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ಮರಳಿನ ಮೂಟೆಯನ್ನು ಹೊತ್ತು ‘ರಾಜಪಥ’ದಲ್ಲಿ ಸಾಗುವ ಮೂಲಕ ಜನರ ಮನವನ್ನೂ ಅಭಿಮನ್ಯು ಗೆದ್ದನು. ಉಳಿದ ಆನೆಗಳು ಆತನ ಹಿಂದೆ ಸಾಲಾಗಿ ಕ್ರಮಿಸಿದವು.
ರಸ್ತೆಯುದ್ದಕ್ಕೂ ಬದಿಯಲ್ಲಿ ನಿಂತಿದ್ದ ನೂರಾರು ಮಂದಿ ಹಾಗೂ ದಾರಿಹೋಕರು ಆನೆಗಳು ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದುದ್ದನ್ನು ಕಣ್ತುಂಬಿಕೊಂಡರು. ಫೋಟೊ ತೆಗೆದುಕೊಂಡು ಸಂಭ್ರಮಿಸಿದರು. ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೊಲೀಸರು ಕೂಡ ಹೆಜ್ಜೆ ಹಾಕಿದರು. ಅಭಿಮನ್ಯು ಸೇರಿದಂತೆ ಗಜಪಡೆಯು ಬನ್ನಿಮಂಟಪದ ಪಂಜಿನ ಕವಾಯತು ಮೈದಾನವನ್ನು 1.05 ಗಂಟೆಯಲ್ಲಿ ತಲುಪಿದವು.
ಭಾರ ಹೊತ್ತು ನಡೆಯುವ ಪ್ರಮುಖ ತಾಲೀಮನ್ನು ಶುಕ್ರವಾರದಿಂದ ಆರಂಭಿಸಲಾಗಿದೆ. ಸೆ.1ರಂದು ‘ಗಜಪಯಣ’ದಲ್ಲಿ ವಿವಿಧ ಶಿಬಿರಗಳಿಂದ ಮೊದಲ ತಂಡದಲ್ಲಿ 9 ಆನೆಗಳನ್ನು ಕರೆತಂದು ಅಶೋಕಪುರಂನಲ್ಲಿರುವ ಅರಣ್ಯ ಭವನದಲ್ಲಿ ಆರೈಕೆ ಮಾಡಲಾಗಿತ್ತು. ಸೆ.5ರಂದು ‘ಅರ್ಜುನ’ ಹೊರತುಪಡಿಸಿ ಉಳಿದ ಆನೆಗಳು ಅರಮನೆ ಪ್ರವೇಶಿಸಿದ್ದವು. ಸೆ.7ರಿಂದ ಜಂಬೂಸವಾರಿ ಮಾರ್ಗದಲ್ಲಿ ನಡಿಗೆ ತಾಲೀಮು ಮಾತ್ರವೇ ನಡೆಸಲಾಗಿತ್ತು. ಶುಕ್ರವಾರದಿಂದ ಭಾರ ಹೊರಿಸುವ ತಾಲೀಮು ಶುರುವಾಗಿದೆ. ಅಂಬಾರಿ ಹೊರಲಿರುವ ಅಭಿಮನ್ಯು ಹಾಗೂ ಇತರ ಆನೆಗಳಿಗೂ ಭಾರ ಹೊರಿಸುವ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಪೂಜೆ, ಪುನಸ್ಕಾರ: ತಾಲೀಮಿಗೆ ಮುನ್ನ ಅರಮನೆ ಆವರಣದ ಕೋಡಿಸೋಮೇಶ್ವರ ದೇವಾಲಯ ಮುಂಭಾಗ ಪೂಜಾ ಕೈಂಕರ್ಯ ನೆರವೇರಿತು.
ಅರ್ಚಕ ಎಸ್.ವಿ.ಪ್ರಹ್ಲಾದ್ ರಾವ್ ‘ಅಭಿಮನ್ಯು’, ಕುಮ್ಕಿ ಆನೆಗಳಾದ ‘ವರಲಕ್ಷ್ಮಿ’, ‘ವಿಜಯಾ’ ಆನೆಗೆ ಕಾಲು ತೊಳೆದು ಅರಿಸಿನ, ಕುಂಕುಮ, ಗಂಧ ಇಟ್ಟು ಪೂಜೆ ಸಲ್ಲಿಸಿದರು. ನಂತರ ಎಲ್ಲ ಆನೆಗಳಿಗೂ ಪಂಚಫಲ ನೀಡಿ, ದೃಷ್ಟಿ ತೆಗೆದು ಆರತಿ ಬೆಳಗಲಾಯಿತು. ಸಿಸಿಎಫ್ ಮಾಲತಿ ಪ್ರಿಯಾ, ಆರ್‌ಎಫ್‌ಒ ಸಂತೋಷ್ ಹೂಗಾರ, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಪಶು ವೈದ್ಯ ಮುಜೀಬ್ ರೆಹಮಾನ್ ಆನೆಗಳಿಗೆ ಪುಷ್ಪಾರ್ಚನೆ ಮಾಡಿದರು. ಮಧ್ಯಾಹ್ನ 12.30ರಿಂದ 1ರವರೆಗೆ ಪೂಜಾ ಕಾರ್ಯ ನಡೆಯಿತು.
ಬಳಿಕ ಅಂಬಾರಿ ಆನೆ ಮೇಲೆ ಗಾದಿ, ನಮ್ದಾ ಕಟ್ಟಲಾಯಿತು. 200 ಕೆ.ಜಿ. ತೂಕದ ನಮ್ದಾ, ಗಾದಿಯನ್ನು ಅಭಿಮನ್ಯು ಮೇಲೆ ಕಟ್ಟಿದ ಬಳಿಕ 400 ಕೆ.ಜಿ. ತೂಕದ ಮರಳು ಮೂಟೆ ಹಾಕಲಾಯಿತು. ಕುಮ್ಕಿ ಆನೆಯೊಂದಿಗೆ ಚಿನ್ನದ ಅಂಬಾರಿ ಕಟ್ಟುವ ಕ್ರೇನ್ ಇರುವ ಸ್ಥಳಕ್ಕೆ ಕರೆದೊಯ್ದು ಸ್ಥಳ ಪರಿಚಯ ಮಾಡಿಕೊಡಲಾಯಿತು. ಬಳಿಕ ಮೆರವಣಿಗೆ ಸಾಗುವ ಮಾರ್ಗಕ್ಕೆ ಕರೆತರಲಾಯಿತು.
ಮಧ್ಯಾಹ್ನದ ವೇಳೆ ರಾಜಪಥದಲ್ಲಿ...
ಕೋಟೆ ಆಂಜನೇಯಸ್ವಾಮಿ ದೇವಾಲಯದ ಗೇಟ್‍ನಿಂದ ಮಧ್ಯಾಹ್ನ 2.01ಕ್ಕೆ ಹೊರ ಬಂದ ‘ಅಭಿಮನ್ಯು’ ನೇತೃತ್ವದ ಗಜಪಡೆ ಕೆ.ಆರ್.ವೃತ್ತ ಸಯ್ಯಾಜಿರಾವ್ ರಸ್ತೆ ಆರ್‌ಎಂಸಿ ಬಂಬೂಬಜಾರ್ ಹೈವೇ ವೃತ್ತದ ಮೂಲಕ ಬನ್ನಿಮಂಟಪದ ಪಂಜಿನ ಕವಾಯತು ಮೈದಾನವನ್ನು ಮಧ್ಯಾಹ್ನ 3.06ಕ್ಕೆ ಕ್ರಮಿಸಿತು. ಇದೇ ಮೊದಲಿಗೆ ಮಧ್ಯಾಹ್ನದ ವೇಳೆ ರಾಜಪಥದಲ್ಲಿ ಗಜಪಡೆಯ ತಾಲೀಮು ಕಂಡು ಜನರು ಪುಳಕಿತಗೊಂಡರು. ಮೊದಲ ತಂಡದ ಎಲ್ಲ 9 ಆನೆಗಳೂ ತಾಲೀಮಿನಲ್ಲಿ ಭಾಗಿಯಾದವು. ‘ಅಭಿಮನ್ಯು’ ಮೇಲೆ ಗಾದಿ ನಮ್ದಾ ತೊಟ್ಟಿಲು ಕಟ್ಟಿ ಅದರ ಮೇಲೆ ಮರಳಿನ ಮೂಟೆ ಇಡಲಾಗಿತ್ತು. ಕುಮ್ಕಿ ಆನೆಗಳಿಗೆ ಹಗುರವಾದ ಗಾದಿ ಹಾಗೂ ನಮ್ದಾ ಕಟ್ಟಲಾಗಿತ್ತು. ನಿಶಾನೆ ಆನೆಗಳಾದ ಅರ್ಜುನ ಧನಂಜಯ ಗೋಪಿ ಭೀಮಾ ಮಹೇಂದ್ರ ಹಾಗೂ ಕಂಜನ್ ಆನೆ ತಾಲೀಮಿನಲ್ಲಿ ಹೆಜ್ಜೆ ಹಾಕಿದವು. ಬೆಂಗಾವಲು ವಾಹನ ನಿಯೋಜಿಸಲಾಗಿತ್ತು.
45 ನಿಮಿಷದಲ್ಲೇ ವಾಪಸ್
ಪಂಜಿನ ಕವಾಯತು ಮೈದಾನ ತಲುಪಿದ ಬಳಿಕ ಅಭಿಮನ್ಯುವಿನ ಮೇಲೆ ಹಾಕಿದ್ದ ಮರಳಿನ ಮೂಟೆ ಕೆಳಗಿಳಿಸಲಾಯಿತು. ಆನೆಗಳಿಗೆ ನೀರು ಕುಡಿಸಿ ಕೆಲ ಕಾಲ ವಿಶ್ರಾಂತಿ ನೀಡಲಾಯಿತು. ಮಾವುತರು ಹಾಗೂ ಕಾವಾಡಿಗಳಿಗೆ ಊಟದ ವ್ಯವಸ್ಥೆ ಮಾಡಲಾಯಿತು. ವಿಶ್ರಾಂತಿ ಬಳಿಕ ಮರಳಿದ ಗಜಪಡೆ 45 ನಿಮಿಷದಲ್ಲೇ ಅರಮನೆ ಆವರಣ ಪ್ರವೇಶಿಸಿದವು. ಇದರೊಂದಿಗೆ ದಿನದ ತಾಲೀಮು ಮುಕ್ತಾಯಗೊಂಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.