ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಗೌರಿ ಗಣೇಶ ಪ್ರತಿಷ್ಠಾಪನೆಗೆ ಸಜ್ಜು

ಮಾರುಕಟ್ಟೆಗಳಲ್ಲಿ ಖರೀದಿ ಸಂಭ್ರಮ; ಹೂ–ಹಣ್ಣು ಕೊಂಚ ದುಬಾರಿ
Published 17 ಸೆಪ್ಟೆಂಬರ್ 2023, 14:11 IST
Last Updated 17 ಸೆಪ್ಟೆಂಬರ್ 2023, 14:11 IST
ಅಕ್ಷರ ಗಾತ್ರ

ಮೈಸೂರು: ಗೌರಿ–ಗಣೇಶ ಹಬ್ಬದ ಮುನ್ನಾ ದಿನವಾದ ಭಾನುವಾರ ನಗರದ ಮಾರುಕಟ್ಟೆಗಳಲ್ಲಿ ಖರೀದಿ ಸಂಭ್ರಮ ಕಂಡುಬಂದಿತು. ಜನರು ಮೂರ್ತಿಗಳೊಟ್ಟಿಗೆ ಹೂ–ಹಣ್ಣು ಖರೀದಿಗೂ ಆಸಕ್ತಿ ತೋರಿದರು. ಸಾರ್ವಜನಿಕ ಸ್ಥಳಗಳಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಅಂತಿಮ ಹಂತದ ಸಿದ್ಧತೆ ನಡೆದಿತ್ತು.

ನಗರದ ಪ್ರಮುಖ ವೃತ್ತಗಳು, ವಾಣಿಜ್ಯ ಪ್ರದೇಶಗಳು ಭಾನುವಾರ ಗೌರಿ–ಗಣೇಶ ಮೂರ್ತಿಗಳಿಂದ ತುಂಬಿದ್ದವು. ನಾಲ್ಕಾರು ಅಡಿಗಳ ಎತ್ತರದವರೆಗಿನ, ರಂಗುರಂಗಿನ ಗಣೇಶನ ಮೂರ್ತಿಗಳು ಹಾಗೂ ಅದರ ಪಕ್ಕದಲ್ಲೇ ಪುಟ್ಟದಾದ ಗೌರಿ ಮೂರ್ತಿಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಪರಿಸರ ಸ್ನೇಹಿ, ಜೇಡಿಮಣ್ಣಿನ ಗಣೇಶನನ್ನು ಗ್ರಾಹಕರು ಖರೀದಿಸಿ ಹೊತ್ತೊಯ್ದರು. ದೇವರ ಮೂರ್ತಿಗಳ ಖರೀದಿಗೂ ಚೌಕಾಶಿ ತಪ್ಪಿರಲಿಲ್ಲ.

₹100ರ ಬೆಲೆಯ ಪುಟ್ಟ ಗಣಪನಿಂದ ಹಿಡಿದು ₹30 ಸಾವಿರದ ಗಣಪನವರೆಗೂ ನಾನಾ ಬೆಲೆಯ ಮೂರ್ತಿಗಳು ಮಾರಾಟವಾದವು. ಕೆಲವರು ಸಾಕಷ್ಟು ಮುಂಗಡವಾಗಿಯೇ ಹಣ ಕೊಟ್ಟು, ತಮ್ಮಿಷ್ಟದ ವಿನ್ಯಾಸದ ಮೂರ್ತಿಗಳನ್ನು ಕಾಯ್ದಿರಿಸಿದ್ದು, ಭಾನುವಾರ ಸಂಜೆ ಕೊಂಡೊಯ್ದರು. ಗಣೇಶನೊಟ್ಟಿಗೆ ಈಶ್ವರ, ಪಾರ್ವತಿಯ ಜೊತೆಗೆ ಪುನೀತ್‌ ರಾಜಕುಮಾರ್, ನರೇಂದ್ರ ಮೋದಿ ಮೊದಲಾದವರೂ ನಿಂತ ವಿನ್ಯಾಸದ ಮೂರ್ತಿಗಳು ಗಮನ ಸೆಳೆದವು. ಚಂದ್ರಯಾನದ ಯಶಸ್ಸಿನ ಜೊತೆ ಗಣಪನ ವಿನ್ಯಾಸವೂ ಗಮನ ಸೆಳೆಯಿತು.

ಸಾರ್ವಜನಿಕ ಸ್ಥಳಗಳಲ್ಲಿ ಭಾನುವಾರ ಸಂಜೆಯಿಂದಲೇ ಮೂರ್ತಿ ಪ್ರತಿಷ್ಠಾಪನೆಗೆ ಸಿದ್ಧತೆಗಳು ನಡೆದವು. ಬೃಹತ್‌ ಆದ ಶಾಮಿಯಾನ ಹಾಕಿ, ಅದರ ಮುಂಭಾಗ ತೆಂಗಿನ ಗರಿಗಳಿಂದ ಅಲಂಕರಿಸಿದ ಚಪ್ಪರ ನಿರ್ಮಿಸಲಾಯಿತು. ಅದರ ಸುತ್ತ ವಿದ್ಯುತ್‌ ದೀಪಗಳ ಅಲಂಕಾರವೂ ನಡೆದಿತ್ತು. ನಗರದ ಕೆ.ಜಿ. ಕೊಪ್ಪಲು ವೃತ್ತ, ಅಗ್ರಹಾರ, ಒಂಟಿಕೊಪ್ಪಲು ವೃತ್ತ, ಲಕ್ಷ್ಮಿಪುರಂನಲ್ಲಿನ ಮಾಧವ ಕೃಪ ಆವರಣ ಸೇರಿದಂತೆ ವಿವಿಧೆಡೆ ಸಿದ್ಧತೆ ಜೋರಾಗಿತ್ತು. ಕೆಲವೆಡೆ ರಸ್ತೆಗಳಿಗೂ ವಿದ್ಯುತ್‌ ದೀಪಗಳ ಅಲಂಕಾರ ಮಾಡಲಾಗಿತ್ತು.

ಮೊರಗಳಿಗೆ ಬೇಡಿಕೆ: ಗೌರಿ ಹಬ್ಬದಂದು ಬಾಗಿನ ನೀಡುವುದು ಸಂಪ್ರದಾಯ. ಇದಕ್ಕಾಗಿ ಬಿದಿರಿನಿಂದ ಹೆಣೆದ ಮೊರಗಳಿಗೆ ಬೇಡಿಕೆ ಕುದುರಿತ್ತು. ಬೊಂಬೂ ಬಜಾರ್ ರಸ್ತೆ ಹಾಗೂ ನಂಜುಮಳಿಗೆ ವೃತ್ತಗಳಲ್ಲಿ ಸಾಲಾಗಿ ಬಿದಿರಿನ ಮೊರಗಳನ್ನು ಮಾರಾಟಕ್ಕೆ ಇಡಲಾಗಿದ್ದು, ಗ್ರಾಹಕರು ಖರೀದಿಸಿದರು.

ಹೂ–ಹಣ್ಣು ಖರೀದಿ: ನಗರದ ದೇವರಾಜ ಮಾರುಕಟ್ಟೆ ಪ್ರಾಂಗಣ, ಚಿಕ್ಕಗಡಿಯಾರ ವೃತ್ತ ಪ್ರದೇಶಗಳು ಬೆಳಿಗ್ಗೆ ಗ್ರಾಹಕರಿಂದ ತುಂಬಿ ಹೋಗಿದ್ದವು. ಮೂರ್ತಿ ಪ್ರತಿಷ್ಠಾಪನೆ ಹಾಗೂ ಪೂಜೆಗೆ ಬೇಕಾದ ಸಾಮಗ್ರಿಗಳ ಖರೀದಿಗೆ ಸಂಭ್ರಮ ಕಂಡುಬಂದಿತು. ಮಧ್ಯಾಹ್ನದ ತರುವಾಯ ಮಳೆಯ ನಡುವೆಯೂ ಖರೀದಿ ಮುಂದುವರಿದಿತ್ತು.

ಹಬ್ಬದ ಹಿನ್ನೆಲೆಯಲ್ಲಿ ಹೂವುಗಳ ಬೆಲೆ ಕೊಂಚ ಏರಿಕೆ ಆಗಿತ್ತು. ಎರಡು ದಿನದ ಹಿಂದಷ್ಟೇ ಪ್ರತಿ ಮಾರಿಗೆ ₹20ರಂತೆ ಮಾರಾಟ ಆಗುತ್ತಿದ್ದ ಸೇವಂತಿಗೆ ಬೆಲೆ ಏರಿಸಿಕೊಂಡಿದ್ದು, ಪ್ರತಿ ಮಾರಿಗೆ ₹40ರಂತೆ ಹಾಗೂ ಪ್ರತಿ ಕೆ.ಜಿ.ಗೆ ₹150ರಂತೆ ಮಾರಾಟ ನಡೆಯಿತು. ಕನಕಾಂಬರ ಕೆ.ಜಿ.ಗೆ ಅರ್ಧದಷ್ಟು ಬೆಲೆ ಏರಿಸಿಕೊಂಡಿದ್ದು ₹800–1,000ರ ಸರಾಸರಿಯಲ್ಲಿ ಮಾರಾಟ ನಡೆಯಿತು. ಮಲ್ಲಿಗೆ ₹600–800, ಬಟನ್ ಗುಲಾಬಿ ₹200, ಸುಗಂಧರಾಜ ₹200ರ ದರವಿತ್ತು. ಇದಲ್ಲದೆ ಬಾಳೆಕಂದು ಜೋಡಿಗೆ ₹50–60, ಮಾವಿನ ತೋರಣ, ಗರಿಕೆ, ಬೇಲದ ಹಣ್ಣು, ಕಮಲ, ಎಕ್ಕದ ಹೂವಿನ ಹಾರ, ಬಿಲ್ವಪತ್ರೆ ಸಹ ಮಾರಾಟಕ್ಕೆ ಇದ್ದವು.

ಹಣ್ಣುಗಳ ಬೆಲೆಯಲ್ಲಿಯೂ ಕೊಂಚ ಏರಿಕೆ ಕಂಡುಬಂದಿತ್ತು. ಏಲಕ್ಕಿ ಬಾಳೆ ದುಬಾರಿಯಾಗಿಯೇ ಇದ್ದು, ಪ್ರತಿ ಕೆ.ಜಿ.ಗೆ ₹80ರಿಂದ ₹120ರವರೆಗೂ ಮಾರಾಟ ನಡೆಯಿತು. ಸೇಬು ₹150, ದಾಳಿಂಬೆ ₹100–120, ದ್ರಾಕ್ಷಿ ₹180–200, ಕಿತ್ತಳೆ–₹80, ಸೀತಾಫಲ ₹80–100ರ ಬೆಲೆಯಲ್ಲಿ ಮಾರಾಟವಾಯಿತು.

ಹಬ್ಬದ ಹಿನ್ನೆಲೆಯಲ್ಲಿ ತರಕಾರಿಗಳ ಬೆಲೆಯಲ್ಲಿ ಹೆಚ್ಚು ವ್ಯತ್ಯಾಸ ಆಗಿರಲಿಲ್ಲ. ಬೀನ್ಸ್ ಕೊಂಚ ಬೆಲೆ ಏರಿಸಿಕೊಂಡಿದ್ದು ಕೆ.ಜಿ.ಗೆ ₹40–50ರ ಸರಾಸರಿಯಲ್ಲಿ ಮಾರಾಟ ನಡೆಯಿತು. ಈರುಳ್ಳಿ ಕೊಂಚ ದುಬಾರಿ ಆಗಿತ್ತು. ಟೊಮೆಟೊ ಅಗ್ಗದ ದರದಲ್ಲಿಯೇ ಮಾರಾಟ ನಡೆಯಿತು.

ಒಂಟಿಕೊಪ್ಪಲು ವೃತ್ತದಲ್ಲಿ ಭಾನುವಾರ ಗ್ರಾಹಕರು ಗಣೇಶ ಮೂರ್ತಿಯನ್ನು ಖರೀದಿಸಿ ಕೊಂಡೊಯ್ದರು –ಪ್ರಜಾವಾಣಿ ಚಿತ್ರ
ಒಂಟಿಕೊಪ್ಪಲು ವೃತ್ತದಲ್ಲಿ ಭಾನುವಾರ ಗ್ರಾಹಕರು ಗಣೇಶ ಮೂರ್ತಿಯನ್ನು ಖರೀದಿಸಿ ಕೊಂಡೊಯ್ದರು –ಪ್ರಜಾವಾಣಿ ಚಿತ್ರ

ಸರ್ಕಾರದ ಕಟ್ಟುನಿಟ್ಟಿನ ಕ್ರಮದಿಂದ ಪಿಒಪಿ ಮೂರ್ತಿಗಳ ಮಾರಾಟ ತಗ್ಗಿದ್ದು ಮಣ್ಣಿನ ಮೂರ್ತಿಗಳ ಮಾರಾಟ ನಡೆದಿದೆ. ಇದರಿಂದ ಮೂರ್ತಿಗಳ ಬೆಲೆ ಹೆಚ್ಚಿದೆ ರವಿ ಮೂರ್ತಿ ಮಾರಾಟಗಾರ

ಹೂವು ಹಣ್ಣುಗಳ ಧಾರಣೆ (ಪ್ರತಿ ಕೆ.ಜಿಗೆ ₹ಗಳಲ್ಲಿ) ಕನಕಾಂಬರ;800–1000 ಮಲ್ಲಿಗೆ;600–800 ಸೇವಂತಿಗೆ;150 ಬಟನ್‌ ಗುಲಾಬಿ;200 ಸುಗಂಧರಾಜ;200 ಏಲಕ್ಕಿ ಬಾಳೆ;100–120 ಸೇಬು;150‌ ಸೀತಾಫಲ;80–100‌ ದಾಳಿಂಬೆ;100–120 ದ್ರಾಕ್ಷಿ;180–200 ಸೀಬೆ;80

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT