ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗೂಬಾಯಿ ಟ್ರಸ್ಟ್ ಮೈಸೂರು ಸಂಗೀತ ವಿವಿ ತೆಕ್ಕೆಗೆ

ಆಸ್ತಿ ಹಸ್ತಾಂತರ, ಕುಲಪತಿ ವಿವೇಚನಾ ಅಧಿಕಾರದೊಂದಿಗೆ ನಿರ್ವಹಿಸಲು ಆದೇಶ
Published 14 ಮಾರ್ಚ್ 2024, 4:44 IST
Last Updated 14 ಮಾರ್ಚ್ 2024, 4:44 IST
ಅಕ್ಷರ ಗಾತ್ರ

ಮೈಸೂರು: ಧಾರವಾಡ ಜಿಲ್ಲೆ, ಹುಬ್ಬಳ್ಳಿಯ ಉಣಕಲ್‌ನಲ್ಲಿರುವ ಡಾ.ಗಂಗೂಬಾಯಿ ಹಾನಗಲ್‌ ಗುರುಕುಲ ಟ್ರಸ್ಟ್‌ ಅನ್ನು ಮೈಸೂರಿನ ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಆಡಳಿತ ಕಾರ್ಯವ್ಯಾಪ್ತಿಗೆ ಹಸ್ತಾಂತರಿಸುವಂತೆ ಸರ್ಕಾರ ಈಚೆಗೆ ಆದೇಶ ಹೊರಡಿಸಿದೆ. ಇದರೊಂದಿಗೆ ಟ್ರಸ್ಟ್‌ ತನ್ನ ಹಿಡಿತವನ್ನು ಕಳೆದುಕೊಂಡಂತಾಗಲಿದೆ. ಎಲ್ಲವನ್ನೂ ಸಂಗೀತ ವಿ.ವಿಯೇ ನಿರ್ವಹಿಸಲಿದೆ.

ಟ್ರಸ್ಟ್‌ನ ಕಾರ್ಯಾಧ್ಯಕ್ಷರೂ ಆಗಿರುವ ಧಾರವಾಡ ಜಿಲ್ಲಾಧಿಕಾರಿ ಸಲ್ಲಿಸಿದ್ದ ಪ್ರಸ್ತಾವ ಆಧರಿಸಿ ಉನ್ನತ ಶಿಕ್ಷಣ ಇಲಾಖೆಯು ಫೆ.28ರಂದು ಆದೇಶ ಹೊರಡಿಸಿದೆ. ಆ ಮೂಲಕ, ಉತ್ತರ ಕರ್ನಾಟಕದಲ್ಲಿರುವ ಟ್ರಸ್ಟ್‌ ನಿರ್ವಹಣೆಯನ್ನು ದಕ್ಷಿಣ ಕರ್ನಾಟಕದಲ್ಲಿರುವ ವಿಶ್ವವಿದ್ಯಾಲಯಕ್ಕೆ ನೀಡಿದಂತಾಗಿದೆ.

‘ಟ್ರಸ್ಟ್‌ ನಡೆಸುತ್ತಿರುವ ಹಿಂದೂಸ್ಥಾನಿ ಸಂಗೀತ ಕೇಂದ್ರದಲ್ಲಿ ಕೇವಲ 31 ವಿದ್ಯಾರ್ಥಿಗಳಿದ್ದು, ಸಂಸ್ಥೆಯ ನಿರ್ವಹಣೆಗೆ ವಾರ್ಷಿಕ ₹ 2.13 ಕೋಟಿ ವೆಚ್ಚವಾಗುತ್ತಿರುವುದರಿಂದ ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಹೊರೆ ಉಂಟಾಗುತ್ತಿದೆ’ ಎಂಬ ಕಾರಣ ಹೇಳಲಾಗಿದೆ.

ಪ್ರತ್ಯೇಕತೆ ಅಗತ್ಯವಿಲ್ಲ: ಸಂಗೀತದ ಎಲ್ಲಾ ಪ್ರಾಕಾರಗಳು ಮತ್ತು ಪ್ರದರ್ಶಕ ಕಲೆಗಳ ಪ್ರೋತ್ಸಾಹಕ್ಕಾಗಿ ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಅಸ್ತಿತ್ವದಲ್ಲಿರುವುದರಿಂದ, ಟ್ರಸ್ಟ್‌ ಮೂಲಕ ಹಿಂದೂಸ್ಥಾನಿ ಸಂಗೀತ ಕೇಂದ್ರವನ್ನು ಪ್ರತ್ಯೇಕವಾಗಿ ಮುಂದುವರಿಸುವ ಅವಶ್ಯಕತೆ ಇಲ್ಲದಿರುವುದನ್ನು ಮನಗಂಡು ಆದೇಶ ಹೊರಡಿಸಲಾಗಿದೆ. ‘ಸಂಸ್ಥೆಯ ಎಲ್ಲ ಕಾರ್ಯಚಟುವಟಿಕೆ, ಚಿರ–ಸ್ಥಿರಾಸ್ತಿ ಮೊದಲಾದವುಗಳನ್ನು ಸಂಗೀತ ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಲು ಕ್ರಮ ವಹಿಸಿ’ ಎಂದು ಅಲ್ಲಿನ ಜಿಲ್ಲಾಧಿಕಾರಿಗೆ ಆದೇಶಿಸಲಾಗಿದೆ. ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

‘ಸಂಗೀತ ಕೇಂದ್ರವನ್ನಷ್ಟೇ ನಡೆಸಲು ಉದ್ದೇಶಿಸಿ ಸ್ಥಾಪನೆಯಾಗಿದ್ದಲ್ಲಿ ಹಾಗೂ ಸಂಸ್ಥೆಯಿಂದ ಬೇರೆ ಕಾರ್ಯಚಟುವಟಿಕೆಗಳು ಚಾಲನೆಯಲ್ಲಿಲ್ಲದಿದ್ದರೆ ಟ್ರಸ್ಟ್‌ ಅನ್ನು ನಿರಶನಗೊಳಿಸುವ ಬಗ್ಗೆ ಧಾರವಾಡ ಜಿಲ್ಲಾಧಿಕಾರಿ ಕ್ರಮ ವಹಿಸಬೇಕು, ಅಗತ್ಯವಿದ್ದರೆ ಪ್ರಸ್ತಾವ ಸಲ್ಲಿಸಬೇಕು’ ಸೂಚಿಸಲಾಗಿದೆ.

‘ವಿಶ್ವವಿದ್ಯಾಲಯದ ಅಧಿನಿಯಮದ ಪ್ರಕಾರ, ವಿವಿಧ ಕೋರ್ಸ್‌ಗಳನ್ನು ನಡೆಸಲು ಟ್ರಸ್ಟ್‌ ಜೊತೆಗೆ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಗುರುಕುಲ ಪದ್ಧತಿಯಲ್ಲಿ ತರಗತಿ ನಡೆಸಲು ಪಠ್ಯಕ್ರಮವನ್ನೂ ಸಿದ್ಧಪಡಿಸಲಾಗಿತ್ತು. ಅಲ್ಲಿನ 31 ಮಂದಿ ವಿದ್ಯಾರ್ಥಿಗಳು ಪರೀಕ್ಷೆಯನ್ನೇ ತೆಗೆದುಕೊಂಡಿರಲಿಲ್ಲ. ಈಗ ಸರ್ಕಾರದ ಆದೇಶದಂತೆ ವಿವಿಯ ಕಾರ್ಯವ್ಯಾಪ್ತಿಗೆ ಹಸ್ತಾಂತರಿಸಿಕೊಂಡು ಕಾನೂನುಬದ್ಧವಾಗಿ ಶಿಕ್ಷಣ ನೀಡಲು ಸಿದ್ಧರಿದ್ದೇವೆ’ ಎಂದು ಸಂಗೀತ ವಿವಿ ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ಪ್ರತಿಕ್ರಿಯಿಸಿದರು.

ಗುರುಕುಲ ಮಾದರಿಯ ಶಿಕ್ಷಣ ಕೇಂದ್ರವಿದು ಆರ್ಥಿಕ ಹೊರೆಯಾದ ಕಾರಣದಿಂದ ಕ್ರಮ

ಸ್ವತಂತ್ರ ನಿರ್ಣಯ ಕೈಗೊಳ್ಳುವಂತಿಲ್ಲ!

ಹಸ್ತಾಂತರ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. ಸಂಸ್ಥೆಯು ಎಲ್ಲ ಆಡಳಿತಾತ್ಮಕ ಶೈಕ್ಷಣಿಕ ಕಾರ್ಯಚಟುವಟಿಕೆ ಮತ್ತು ಹಣಕಾಸು ನಿರ್ವಹಣೆಗಳನ್ನು ಒಳಗೊಂಡಂತೆ ಎಲ್ಲ ಕಾರ್ಯಚಟುವಟಿಕೆಗಳನ್ನು ಸಂಗೀತ ವಿಶ್ವವಿದ್ಯಾಲಯದ ಕುಲಪತಿಯ ವಿವೇಚನಾ ಅಧಿಕಾರದೊಂದಿಗೆ ನಿರ್ವಹಿಸಬೇಕು. ವಿಶ್ವವಿದ್ಯಾಲಯದ ಗಮನಕ್ಕೆ ತಾರದೇ ನಿರ್ಣಯ ತೆಗೆದುಕೊಳ್ಳುವಂತಿಲ್ಲ. ತಾತ್ಕಾಲಿಕ ಹೊರಗುತ್ತಿಗೆ ಅಥವಾ ಕಾಯಂ ಸೇರಿದಂತೆ ಯಾವುದೇ ಹುದ್ದೆಗಳ ನೇಮಕಾತಿಗೆ ಸಂಗೀತ ವಿವಿಯ ಮೂಲಕವೇ ಪ್ರಸ್ತಾವ ಸಲ್ಲಿಸಬೇಕು. ಟ್ರಸ್ಟ್‌ಗೆ ಮಂಜೂರಾಗಿರುವ ಹುದ್ದೆಗಳನ್ನು ಮಾತ್ರ ಮುಂದುವರಿಸಿ ಅನಗತ್ಯವಾಗಿ ನೇಮಕವಾಗಿರುವ ತಾತ್ಕಾಲಿಕ ಹೆಚ್ಚುವರಿ ಹುದ್ದೆಗಳನ್ನು (ಸಿಬ್ಬಂದಿ) ಅವಶ್ಯವಿದ್ದಲ್ಲಿ ಮುಂದುವರಿಸಬೇಕು ಇಲ್ಲವಾದಲ್ಲಿ ಕೂಡಲೇ ಬಿಡುಗಡೆ ಮಾಡಬೇಕು.

ಆಡಿಟ್ ವರದಿ ಸಲ್ಲಿಕೆಗೆ ಸೂಚನೆ

ಟ್ರಸ್ಟ್‌ನ ಚರ ಹಾಗೂ ಸ್ಥಿರಾಸ್ತಿಗಳನ್ನು ಸಂಗೀತ ವಿವಿಗೆ ವರ್ಗಾಯಿಸಲಾಗಿದೆ. ಈ ಸಂಬಂಧ ಯಾವುದೇ ನಿರ್ಣಯ ಕೈಗೊಳ್ಳಲು ವಿಶ್ವವಿದ್ಯಾಲಯ ಕ್ರಮ ವಹಿಸಬೇಕು ಎಂದು ಸೂಚಿಸಲಾಗಿದೆ. ವಾರ್ಷಿಕ ವೆಚ್ಚಕ್ಕೆ ಸಂಬಂಧಿಸಿದ ಅನುದಾನದ ಕೋರಿಕೆಯ ಪ್ರಸ್ತಾವವನ್ನು ಸಂಗೀತ ವಿವಿ ಮೂಲಕವೇ ಸಲ್ಲಿಸಬೇಕು. ಸಂಸ್ಥೆಯ ಎಲ್ಲಾ ಕಾರ್ಯಚಟುವಟಿಕೆಗಳನ್ನು ವಿವಿಯ ಅಧಿನಿಯಮ 2009ರ ಅಡಿಯಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಸಂಸ್ಥೆ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ನೀಡಲಾದ ಅನುದಾನ ನಿಯಮಾನುಸಾರ ವೆಚ್ಚವಾಗಿರುವ ಬಗ್ಗೆ ಆಡಿಟ್ ವರದಿಯನ್ನು ಸಂಗೀತ ವಿವಿ ಕುಲಸಚಿವರಿಗೆ ಸಲ್ಲಿಸಬೇಕು ಎಂದು ಟ್ರಸ್ಟ್‌ಗೆ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT